ಜಿಂಕೆ ಹಾವಳಿಗೆ ಕೃಷಿ ಬಿಟ್ಟ ರೈತರು

7
ಮಧುಗಿರಿ ತಾಲ್ಲೂಕಿನ ಜಯಮಂಗಲಿ ಕೃಷ್ಣ ಮೃಗ ವನ್ಯ ಧಾಮದ ಸುತ್ತ ಬೀಳು ಬಿದ್ದ ಹೊಲಗಳು

ಜಿಂಕೆ ಹಾವಳಿಗೆ ಕೃಷಿ ಬಿಟ್ಟ ರೈತರು

Published:
Updated:
ಜಿಂಕೆ ಹಾವಳಿಗೆ ಕೃಷಿ ಬಿಟ್ಟ ರೈತರು

ತುಮಕೂರು: ಮಧುಗಿರಿ ತಾಲ್ಲೂಕಿನ ಜಯಮಂಗಲಿ ಕೃಷ್ಣ ಮೃಗ ವನ್ಯಧಾಮದ ಸುತ್ತಲಿನ ಹಳ್ಳಿಗಳಲ್ಲಿ ಬಿತ್ತನೆ ಆರಂಭಕ್ಕೆ ಸಾಕಾಗುವಷ್ಟು ಮಳೆ ಬಿದ್ದರೂ ರೈತರು ಕೃಷಿ ಚಟುವಟಿಕೆ ಆರಂಭಿಸುವುದಿಲ್ಲ. ಇಲ್ಲಿನ ರೈತರಿಗೆ ಜಿಂಕೆಗಳು ತಲೆನೋವಾಗಿವೆ. ಸಾವಿರಾರು ಎಕರೆ ಜಮೀನು ಬೀಳು ಬಿದ್ದಿದೆ.



‘ಸ್ವಲ್ಪ ಬೆಳೆ ಇಟ್ಟರೂ ಜಿಂಕೆಗಳು ಲಗ್ಗೆ ಇಡುತ್ತವೆ. ಬಿತ್ತಿದ ಬೀಜ, ಬೆಳೆಯಾಗಿ ನಮಗೆ ಸಿಕ್ಕುವುದಿಲ್ಲ. ಕೆಲವು ವೇಳೆ ಚಿಗುರನ್ನೇ ತಿಂದಿರುತ್ತವೆ. ಬೇಸಾಯವೇ ಕಷ್ಟ’ ಎಂದು ವನ್ಯಧಾಮದ ಸುತ್ತಲಿನ ಹಳ್ಳಿಗಳ ಜನರು ಬೇಸರ ವ್ಯಕ್ತಪಡಿಸುವರು.



‘ಕಾಡಿನಲ್ಲಿ ಆಹಾರ ದೊರೆಯದೆ ಜಿಂಕೆಗಳು ಲಗ್ಗೆ ಇಡುತ್ತವೆ ಎನ್ನುವುದು ಒಂದು ವಾದವಾದರೆ, ಅರಣ್ಯದ ಸುತ್ತ ತಂತಿಬೇಲಿ ನಿರ್ಮಿಸದ ಕಾರಣ ಈ ತೊಂದರೆ ಎದುರಿಸಬೇಕಾಗಿದೆ’ ಎನ್ನುತ್ತಾರೆ ರೈತರು.



ಆರಂಭದಲ್ಲಿ ಪೂರ್ಣ ರಾತ್ರಿ ರೈತರು ಬೆಳೆಗೆ ಕಾವಲು ಇರಬೇಕಾದ ಪರಿಸ್ಥಿತಿ ಇತ್ತು. ಡಬ್ಬ ಬಡಿದು, ಪಟಾಕಿ ಸಿಡಿಸಿ ಶಬ್ದ ಮಾಡಿ ಗುಂಪು ಗುಂಪಾಗಿ ನುಗ್ಗುತ್ತಿದ್ದ ಜಿಂಕೆಗಳನ್ನು ರೈತರು ಬೆದರಿಸುತ್ತಿದ್ದರು. ದಿನ ಕಳೆದಂತೆ ಈ ಯಾವ ಬೆದರಿಕೆಗಳಿಗೂ ಜಿಂಕೆಗಳು ಜಗ್ಗದೆ ಬೆಳೆಗಳನ್ನು ಮೇಯ್ದವು. ಯಾವಾಗ ಈ ಕಾಟ ತೀವ್ರವಾಯಿತೋ ರೈತರ ಹೊಲಗಳು ಖಾಲಿ ಬಿದ್ದವು.



ಜಿಂಕೆ ಕಾಟದಿಂದ ಬೇಸತ್ತ ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರೂ ಈ ಕೂಗು ಅರಣ್ಯರೋದನವೇ ಆಗಿದೆ. ಬೆಳೆನಷ್ಟಕ್ಕೆ ಪರಿಹಾರವಾಗಿ ರೈತರಿಗೆ ಎಕರೆಗೆ ₹ 500, 600 ನೀಡಿ ಸ್ಥಳೀಯ ಆಡಳಿತ ಕೈ ತೊಳೆದುಕೊಳ್ಳುತ್ತಿದೆ. ಈ ಬಗ್ಗೆಯೂ ರೈತರು ಅಸಮಾಧಾನ ಹೊರಹಾಕುವರು. ಆಹಾರ ಅರಸಿ ಗ್ರಾಮಗಳಿಗೆ ಬಂದ ಜಿಂಕೆಗಳ ಮೇಲೆ ನಾಯಿಗಳು ದಾಳಿ ನಡೆಸಿದ ನಿದರ್ಶನಗಳು ಅಲ್ಲೊಂದು ಇಲ್ಲೊಂದು ವರದಿಯಾಗಿವೆ.



ಪರ್ಯಾಯ ಕೆಲಸಕ್ಕೆ ಹುಡುಕಾಟ: ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನುವುದು ಅರಿವಾಗಿ ರೈತರು ಪರ್ಯಾಯ ಕೆಲಸಗಳಿಗೆ ಮುಂದಾಗಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರದ ಕೈಗಾರಿಕಾ ಪ್ರದೇಶದಲ್ಲಿ ಜನರು ಕೂಲಿ ಅರಸಿದ್ದಾರೆ. ಗೌರಿಬಿದನೂರು, ಮಧುಗಿರಿ, ದೊಡ್ಡಬಳ್ಳಾಪುರ, ತುಮಕೂರಿನ ಗಾರ್ಮೆಂಟ್ ಕಾರ್ಖಾನೆಗಳ ವಾಹನಗಳು ಹಳ್ಳಿಗಳನ್ನು ಪ್ರವೇಶಿಸಿವೆ. ಕೃಷಿ ನಂಬಿದ್ದ ಜನರಿಗೆ ಗಾರ್ಮೆಂಟ್ ಕೆಲಸಗಳೇ ಜೀವನಾಧಾರ.



ಜಮೀನುಗಳನ್ನು ಪಾಳುಬಿಟ್ಟ ಕಾರಣ ಕೆಲವು ಕಡೆ ಸೀಮೆಜಾಲಿ ಅವ್ಯಾಹತವಾಗಿ ಬೆಳೆದಿದೆ. ಈ ಸೀಮೆಜಾಲಿ ಕಡಿದು ಸೌದೆಯಾಗಿ ಮಾರಾಟ ಮಾಡಿಯೂ ಜೀವನ ನಡೆಸುತ್ತಿದ್ದಾರೆ. ಒಂದು ಟನ್ ಸೌದೆಗೆ ₹ 1600 ಬೆಲೆ ಇದೆ.



‘ಬೇಸಾಯ ಅಂದರೆ ಸಂಕಷ್ಟ. ಮೂರೂವರೆ ಎಕರೆಯಲ್ಲಿ ಶೇಂಗಾ ಬೆಳೆಯುತ್ತಿದ್ದೇವೆ. ಜಿಂಕೆಗಳು ರಾತ್ರಿ ಏಳೂವರೆ ಎಂಟಕ್ಕೆ ಹೊಲಗಳ ಸಮೀಪ ಬರುತ್ತಿದ್ದವು. ಕಾನೂನು ಭಯ ಒಂದು ಕಡೆಯಾದರೆ ದನಕರುಗಳನ್ನು ಸಾಕುವ ನಮಗೆ ಮನುಷ್ಯತ್ವವೂ ಇದೆ. ನಾವು ಎಷ್ಟು ಕಾದರೂ ಬೆಳೆ ರಕ್ಷಣೆ ಸಾಧ್ಯವಾಗಲಿಲ್ಲ. ಎಂಟು ವರುಷದಿಂದ ಕೃಷಿಯನ್ನೇ ನಿಲ್ಲಿಸಿದ್ದೇನೆ’ ಎನ್ನುತ್ತಾರೆ ವೀರನಾಗನಹಳ್ಳಿ ರೈತ ಲಕ್ಷ್ಮಿಪತಿ.



‘ಬೆಳೆ ನಷ್ಟಕ್ಕೆ ಪರಿಹಾರ ಎಂದು ಕಳೆದ ವರ್ಷ ₹ 600 ನೀಡಿದ್ದರು. ಅರ್ಜಿ ಕೊಡುವುದಕ್ಕೇ ಅಷ್ಟು ಹಣ ಖರ್ಚಾಗುತ್ತದೆ. ವನ್ಯಧಾಮ ಸ್ಥಳಾಂತರಿಸಿ, ಇಲ್ಲವೆ ಸೂಕ್ತ ಬಂದೋಬಸ್ತ್ ಮಾಡಿ ಎಂದು ಪ್ರತಿಭಟನೆ ಸಹ ನಡೆಸಿದ್ದೆವು. ಸೂಕ್ತ ಬೆಳೆ ನಷ್ಟ ಪರಿಹಾರವೂ ಇಲ್ಲ, ಕಾಟವೂ ತಪ್ಪಿಲ್ಲ’ ಎದು ಆಕ್ರೋಶ ವ್ಯಕ್ತಪಡಿಸುವರು.



‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಇಟ್ಟರೆ ಮೊಳೆಕೆ ಬಂದ ದಿನದಿಂದಲೇ ಜಿಂಕೆಗಳ ಕಾಟ ಪ್ರಾರಂಭವಾಗುತ್ತದೆ. ಚಿಗುರು ಮೂಡುವ ವೇಳೆ 50–100 ಜಿಂಕೆಗಳು ಗುಂಪಾಗಿ ಬರುತ್ತವೆ. ಬೆಳೆ ರಕ್ಷಣೆಗಾಗಿಯೇ ಇಡೀ ದಿನ ಕಾಯಲು ಸಾಧ್ಯವೇ? ಕೃಷಿಯನ್ನೇ ಕೈ ಬಿಟ್ಟಿದ್ದೇವೆ. ಎಚ್ಚರವಹಿಸಿ, ರೈತರ ಬೆಳೆ ಕಾಪಾಡಿ ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರುವರು ಮೈದನಹಳ್ಳಿ ಗ್ರಾಮದ ರೈತ ಎಂ.ಎನ್.ಜಗನ್ನಾಥ್.

ಅರಣ್ಯಾಧಾರಿತ ಕೃಷಿ ನಡೆಸಿ

‘ಹಲಸು, ಮಾವು, ನೆಲ್ಲಿ, ಸಪೋಟ, ಹತ್ತಿ ಹಣ್ಣಿನ ಮರಗಳನ್ನು ಅರಣ್ಯದ ಸುತ್ತ ಬೆಳೆಸಿದರೆ ಪ್ರಾಣಿಗಳಿಗೆ ಆಹಾರ ಒದಗಿಸಿದಂತಾಗುತ್ತದೆ. ಈ ಅರಣ್ಯಾಧಾರಿತ ಕೃಷಿಯನ್ನು ಅರಣ್ಯ ಇಲಾಖೆ ಮಾಡಿದರೆ ಮಾತ್ರ ಇಲ್ಲಿನ ರೈತರು ನೆಮ್ಮದಿಯಿಂದ ಕೃಷಿ  ನಡೆಸಬಹುದು’ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ತಿಳಿಸಿದರು.

‘ಬೆಳೆ ಬೆಳೆಯದ ಕಾರಣ ಪ್ರತಿ ವರ್ಷ ಐದಾರು ಕೋಟಿ ರೂಪಾಯಿ ರೈತರಿಗೆ ನಷ್ಟವಾಗುತ್ತದೆ. ಅರಣ್ಯ ಭೂಮಿಯೇ ಸಾವಿರಾರು ಎಕರೆ ಇದೆ. ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಅರಣ್ಯ ಭೂಮಿಯಲ್ಲಿ ಒಂದು ನೂರು ಎಕರೆಯನ್ನು ಬೆಳೆ ಬೆಳೆಯಲು ಮೀಸಲಿಟ್ಟರೆ ಸಾಕು ಪ್ರಾಣಿಗಳಿಗೆ ಆಹಾರವಾಗುತ್ತವೆ. ರೈತರ ಜಮೀನುಗಳಿಗೆ ಜಿಂಕೆಗಳು ನುಗ್ಗುವುದಿಲ್ಲ. ಕೇಂದ್ರ ಸರ್ಕಾರದ ಸಾಮಾಜಿಕ ಅರಣ್ಯ ವ್ಯಾಪ್ತಿಗೆ ವನ್ಯಧಾಮ ಸೇರಿಸಿದರೆ ಅನುದಾನವೂ ದೊರೆಯುತ್ತದೆ’ ಎಂದು ವಿವರಿಸುವರು.

ಬಾಧಿತ ಗ್ರಾಮಗಳು

ಹೊಸಹಳ್ಳಿ, ಮೈದನಹಳ್ಳಿ, ವೀರನಾಗೇನಹಳ್ಳಿ, ಕಾಳೇನಹಳ್ಳಿ, ಗೋವಿಂದನಹಳ್ಳಿ, ತಾಳಕೆರೆ, ಕೋಡ್ಲಾಪುರ, ಬಡಕನಹಳ್ಳಿ, ಬೀರನಹಳ್ಳಿ, ಸಿಂಚೇನಹಳ್ಳಿ, ಗಿರೇಗೌಡನಹಳ್ಳಿ, ಯರಗುಂಟೆ, ದಾದಗಾನಹಳ್ಳಿ, ತಿಪ್ಪಾಪುರ, ಯಲಕೋರು, ಅಡವಿ ನಾಗೇನಹಳ್ಳಿಯ ಬಹುತೇಕ ರೈತರು ವ್ಯಕ್ತಪಡಿಸುವರು. ಐಡಿಹಳ್ಳಿ, ಪುರವರ ಮತ್ತು ಕೊಡಿಗೇನಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಈ ಗ್ರಾಮಗಳು ಇವೆ.

ಕುರಿಗಾಹಿಗಳಿಗೆ ಅನುಕೂಲ

ಹೊಲಗಳು ಬೀಳು ಬಿದ್ದಿರುವುದು ಕುರಿಗಾಹಿಗಳಿಗೆ ಅನುಕೂಲವಾಗಿದೆ. ಸುತ್ತಲಿನ ಹಲವು ಹಳ್ಳಿಗಳು ಸೇರಿದಂತೆ ದೂರದ ಊರಿನ ಕುರಿಗಾಹಿಗಳೂ ಇಲ್ಲಿಗೆ ಮೇವು ಅರಸಿ ಬರುತ್ತಾರೆ. ಹೊಲಗಳಲ್ಲಿ ಸಮೃದ್ಧವಾಗಿ ಚಿಗುರಿರುವ ಗರಿಕೆ ಆಹಾರವಾಗುತ್ತದೆ. ಇದು ಪ್ರತಿ ವರ್ಷ ಕಂಡು ಬರುವ ಚಿತ್ರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry