ವೈದ್ಯಕೀಯ ಕಾಲೇಜಿನ ಜಾಗಕ್ಕೆ ಕಂಟಕ

7
ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಜನಾಧಿಕಾರ ಸಂಘರ್ಷ ಪರಿಷತ್‌

ವೈದ್ಯಕೀಯ ಕಾಲೇಜಿನ ಜಾಗಕ್ಕೆ ಕಂಟಕ

Published:
Updated:
ವೈದ್ಯಕೀಯ ಕಾಲೇಜಿನ ಜಾಗಕ್ಕೆ ಕಂಟಕ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಸಬಾ ಹೋಬಳಿಯ ಅಣಕನೂರು ಗ್ರಾಮದ ಸರ್ವೆ ನಂಬರ್ 109ರಲ್ಲಿರುವ ಅಮಾನಿ ಗೋಪಾಲಕೃಷ್ಣ ಕೆರೆ ಪ್ರದೇಶದಲ್ಲಿ ವೈದ್ಯ ಕೀಯ ಕಾಲೇಜಿಗೆ 22 ಎಕರೆ ಮಂ ಜೂರು ಮಾಡಿರುವ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ. ಕಾಲೇಜಿನ ಜಾಗಕ್ಕೆ ಇದೀಗ ಸುಲಭದಲ್ಲಿ ನಿವಾರಿಸಿಕೊಳ್ಳಲಾಗದ ವಿಘ್ನ ಎದುರಾಗಿದೆ.ಕೆರೆ ಜಾಗವನ್ನು ಕಾನೂನು ಬಾಹಿರವಾಗಿ ಅನ್ಯ ಉದ್ದೇಶಕ್ಕೆ ಮಂಜೂರು ಮಾಡಿರುವ ಕ್ರಮ ಪ್ರಶ್ನಿಸಿ ಪರಿಷತ್ತಿನ ರಾಜ್ಯ ಸಮಿತಿಯ ಸದಸ್ಯ, ಬೆಂಗಳೂರಿನ ಬಾಣಸವಾಡಿ ನಿವಾಸಿ ಬಿ.ಎಸ್.ನಾರಾಯಣ ಅವರು ಆರು ತಿಂಗಳ ಹಿಂದೆಯೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.ಉಪ ಲೋಕಾಯುಕ್ತ ಸುಭಾಷ್ ಅಡಿ ಅವರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಭೂ ದಾಖಲೆ ಇಲಾಖೆ ಉಪನಿರ್ದೇಶಕರು, ಜಿಲ್ಲಾಧಿಕಾರಿ ಅವರು ವಿಚಾರಣೆಗಾಗಿ ಹಲವು ಬಾರಿ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.‘ಜಲಮೂಲಗಳಾದ ಕೆರೆಗಳ ಜಾಗ ವನ್ನು ಅನ್ಯ ಉದ್ದೇಶಕ್ಕೆ ಬಳಕೆಗೆ ನೀಡ ಕೂಡದು ಎಂದು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸ್ಪಷ್ಟ ಆದೇಶ ನೀಡಿವೆ. ಆದ್ದರಿಂದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಉದ್ಯಾನ ಮತ್ತು ವೈದ್ಯಕೀಯ ಕಾಲೇಜು ನಿರ್ಮಾ ಣಕ್ಕೆ ಮಾಡಿರುವ ಭೂ ಮಂಜೂರಾತಿ ರದ್ದುಪಡಿಸಿ, ಕೆರೆ ಪುನಶ್ಚೇತನಗೊಳಿಸ ಬೇಕು ಎನ್ನುವುದು ನಮ್ಮ ಒತ್ತಾಯ’ ಎನ್ನುತ್ತಾರೆ ಬಿ.ಎಸ್.ನಾರಾಯಣ.‘ಭೂ ಕಂದಾಯ ಕಾಯ್ದೆ 1971ರ ಪ್ರಕಾರ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶಗಳಾದ ರಸ್ತೆ, ಸಂಚಾರಕ್ಕೆ ಅಗತ್ಯವಾದ ಮಾರ್ಗ ನಿರ್ಮಾಣ ಕೆಲಸಗಳಿಗಾಗಿ ಕೆರೆಗಳ ಜಾಗ ಬಳಕೆ ಮಾಡಿಕೊಳ್ಳಬಹುದೇ ಹೊರತು ಡಿನೋಟಿಫಿಕೇಷನ್ ಮಾಡಿ ಕಟ್ಟಡ ನಿರ್ಮಿಸಲು ಮಂಜೂರು ಮಾಡುವ ಅವಕಾಶವಿಲ್ಲ’ ಎಂದರು.‘2009ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅನ್ವರ್ ಪಾಷಾ ಅವರು ಕಾನೂನು ಬಾಹಿರವಾಗಿ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ 70 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿ ಯಾಗಿದ್ದ ಡಾ.ಎಂ.ವೆಂಕಟೇಶ್ ಅವರು ಅದರಲ್ಲಿ 22 ಎಕರೆ ಜಾಗವನ್ನು ವೈದ್ಯಕೀಯ ಕಾಲೇಜಿಗೆ ಮಂಜೂರು ಮಾಡಿದ್ದಾರೆ.

 ಒಟ್ಟಾರೆ ಈ ಜಾಗವನ್ನು ಸರ್ಕಾರಿ ಖರಾಬ್‌ ಎನ್ನುವ ಬದಲು ನೀರು ಮುಳುಗಡೆ ಪ್ರದೇಶ ಎಂದು ತೋರಿಸಿದ್ದಾರೆ. ನೀರು ಮುಳುಗಡೆ ಪ್ರದೇಶ ಎಂದರೆ ಕೆರೆ ಅಂತಲೇ ಅರ್ಥ. ಇದೇ ಮಾತನ್ನು ಉಪ ಲೋಕಾಯುಕ್ತರು ಕೂಡ ಹೇಳಿದ್ದಾರೆ’ ಎಂದು ತಿಳಿಸಿದರು.

‘ನೀರು ಮುಳುಗಡೆ ಪ್ರದೇಶ ಎಂದರೆ ಏನು ಎಂಬುದು ಅಧಿಕಾರಿಗಳೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕಂದಾಯ ಇಲಾಖೆ ಕಾಯ್ದೆ ಪ್ರಕಾರ ಆ ಜಾಗವನ್ನು ನೀವು ಸರ್ಕಾರಿ ಖರಾಬ್‌ ಎಂದು ಪರಿಗಣಿಸುತ್ತಿರೋ ಅಥವಾ ಕೆರೆ ಎಂದು ಹೇಳುತ್ತಿರೋ ಎಂದು ಉಪ ಲೋಕಾಯುಕ್ತರು ಕೇಳಿದರೆ ಯಾವೊಬ್ಬ ಅಧಿಕಾರಿ ಕೂಡ ಉತ್ತರವೇ ನೀಡಲಿಲ್ಲ’ ಎಂದು ಹೇಳಿದರು.‘ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಗೆ ಈಗಾಗಲೇ ಡಾ.ಎಂ. ವೆಂಕ ಟೇಶ್, ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರು ಹಾಜರಾಗಿ ತಾವು ಕೆರೆಯ ಜಾಗ ಮಂಜೂರು ಮಾಡಿಲ್ಲ ಎಂದು ಹೇಳಿ ದ್ದಾರೆ. ಹೀಗಾಗಿ ಇದೀಗ ಅನ್ವರ್ ಪಾಷಾ ಅವರು ವಿಚಾರಣೆಗೆ ಹಾಜರಾಗ ಬೇಕಿದೆ. ನಮಗೆ ಈಗಾಗಲೇ ಅರ್ಧ ನ್ಯಾಯ ಸಿಕ್ಕಂತಾಗಿದೆ. ಪೂರ್ಣ ನ್ಯಾಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಾಯಲ್ಲೇ ಕಾಮಗಾರಿ!: ಜಿಲ್ಲಾ ಉಸ್ತು ವಾರಿ ಸಚಿವರು, ಶಾಸಕರು ಕಳೆದ ಮೂರು ವರ್ಷಗಳಿಂದ ಶೀಘ್ರದಲ್ಲಿಯೇ ವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿಕೆಗಳ ನೀಡುತ್ತಲೇ ಅಧಿಕಾರಾವಧಿಯ ಕೊನೆಯ ಹಂತ ತಲುಪಿದ್ದಾರೆ.ಇತ್ತೀಚೆಗಷ್ಟೇ ಶಾಸಕ ಡಾ.ಕೆ.ಸುಧಾಕರ್ ಅವರು ಮುಂಬರುವ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಕೂಡ ಘೋಷಿಸಿದ್ದಾರೆ. ವಾಸ್ತವ ಸ್ಥಿತಿ ಮಾತ್ರ ಭಿನ್ನವಾಗಿದೆ. ಶೀಘ್ರದಲ್ಲಿ ಕಾಲೇಜು ಕಟ್ಟಡದ ಕಾಮಗಾರಿ ಆರಂಭವಾಗುವ ಸಾಧ್ಯತೆಯೇ ಇಲ್ಲ. ಲೋಕಾಯುಕ್ತ ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಕಾಲೇಜು ಜಾಗದ ಭವಿಷ್ಯ ನಿರ್ಧಾರವಾಗಬೇಕಿದೆ.

ನ್ಯಾಯಾಲಯದ ತೀರ್ಪಿಗೆ ಬದ್ಧ

‘ಪ್ರಕರಣದ ವಿಚಾರಣೆ ನಡೆಯುತ್ತಿದೆ. ಉಪ ಲೋಕಾಯುಕ್ತರು ದಾಖಲೆಗಳನ್ನು ಕೇಳಿದ್ದರು. ಅವುಗಳನ್ನು ನಾವು ಒದಗಿಸಿದ್ದೇವೆ. ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧರಾ ಗುತ್ತೇವೆ’ ಎಂದು ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಹೇಳಿದರು.‘ನಾವು ತಪ್ಪು ಮಾಡಿಲ್ಲ. ಭೂ ಮಂಜೂರಾತಿ ಪ್ರಕ್ರಿಯೆ ಎಲ್ಲವೂ ಕ್ರಮಬದ್ಧವಾಗಿದೆ’ ಎಂದು ಭೂದಾಖಲೆ ಇಲಾಖೆ ಉಪ ನಿರ್ದೇಶಕ ಅಜ್ಜಪ್ಪ ತಿಳಿಸಿದರು.‘ಸುಪ್ರೀಂ ಕೋರ್ಟ್‌, ಎನ್‌ಜಿಟಿ ಆದೇಶಗಳ ಮಾರ್ಗಸೂಚಿಗಳ ಅನ್ವಯ ಇದು ಉಲ್ಲಂಘನೆಯಲ್ಲವೆ’ ಎಂಬ ಪ್ರಶ್ನೆಗೆ ‘ಲೋಕಾಯುಕ್ತ ನ್ಯಾಯಾಲಯ ನಮಗೆ ಕೆಲಸ ಮುಂದುವರಿಸುವಂತೆ ಈವರೆಗೆ ಹೇಳಿಲ್ಲ. ನ್ಯಾಯಾಲಯ ನೀಡುವ ಆದೇಶವನ್ನು ನಾವು ಪಾಲಿಸು ತ್ತೇವೆ’ ಎಂದಷ್ಟೇ ಉತ್ತರಿಸಿದರು.

ಜಿಲ್ಲಾಡಳಿತದ ವಾದವೇನು?

‘2007ರ ಡಿಸೆಂಬರ್ 10 ರಂದು ರಾಜ್ಯ ಸರ್ಕಾರ ಅಮಾನಿ ಗೋಪಾಲಕೃಷ್ಣ ಕೆರೆ ಅಂಗಳದಲ್ಲಿ ರೈಲ್ವೆ ಹಳಿ ಸಮೀಪ ಜಿಲ್ಲಾ ಕಚೇರಿ ನಿರ್ಮಾಣಕ್ಕಾಗಿ 70 ಎಕರೆ ಜಾಗ ನೀಡಿ ಅಧಿಸೂಚನೆ ಹೊರಡಿಸಿತ್ತು. ಆದರೆ ಆ ಜಾಗ ಜಿಲ್ಲಾ ಕಚೇರಿ ಸಂಕೀರ್ಣ ನಿರ್ಮಿಸಲು ಯೋಗ್ಯವಲ್ಲ ಎಂದು ಗೃಹ ಮಂಡಳಿ ಮುಖ್ಯ ಎಂಜಿನಿಯರ್‌ ಅವರು 2009ರ ಸೆಪ್ಟೆಂಬರ್ 29 ರಂದು ವರದಿ ನೀಡಿದ್ದರು. ಆ ಕಾರಣದಿಂದ ಪಟ್ರೇನಹಳ್ಳಿ ಗ್ರಾಮದ ಸರ್ವೆ ನಂಬರ್ 158ರಲ್ಲಿದ್ದ ತೋಟಗಾರಿಕೆ ಇಲಾಖೆಗೆ ಸೇರಿದ 10 ಎಕರೆ 20 ಗುಂಟೆ ಜಾಗ ಮತ್ತು ಅದಕ್ಕೆ ಹೊಂದಿಕೊಂಡಿದ್ದ 11 ಎಕರೆ ಖಾಸಗಿ ಜಮೀನು ಸೇರಿದಂತೆ 21 ಎಕರೆ 20 ಗುಂಟೆ ಪಡೆದುಕೊಳ್ಳಲಾಗಿತ್ತು.

ಇದಕ್ಕೆ ಪರ್ಯಾಯವಾಗಿ ಅಣಕನೂರು ಬಳಿ ಕೆರೆ ಅಂಗಳದಲ್ಲಿ ಗುರುತಿಸಿದ್ದ 70 ಎಕರೆ ಜಾಗವನ್ನು ಸಸ್ಯೋದ್ಯಾನ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯವರಿಗೆ ವರ್ಗಾಯಿಸುವಂತೆ ಸರ್ಕಾರ ಆದೇಶಿಸಿತ್ತು.  2015ರ ಆಗಸ್ಟ್‌ 14 ರಂದು ಆರೋಗ್ಯ ಸಚಿವರು ಪತ್ರ ಬರೆದು ಬಟಾನಿಕಲ್‌ ಉದ್ಯಾನಕ್ಕೆ ಮೀಸಲಿಟ್ಟ 70 ಎಕರೆ ಪೈಕಿ ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಜಾಗ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು.ಜಿಲ್ಲಾ ಶಸ್ತ್ರಚಿಕಿತ್ಸಕರ ಕೋರಿಕೆಯಂತೆ ಉದ್ಯಾನಕ್ಕೆ ಮೀಸಲಿಟ್ಟ 70 ಎಕರೆ ಭೂಮಿಯಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ, ವಸತಿ ಗೃಹಗಳ ನಿರ್ಮಾಣಕ್ಕೆ ಅಗತ್ಯವಾದ 22 ಎಕರೆ ಜಮೀನನ್ನು ಸರ್ಕಾರದ ಆದೇಶದಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಪ್ರಕಾರ ಉಚಿತವಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಮಂಜೂರು ಮಾಡಲಾಗಿದೆ. 

ಈ ಹಿಂದೆ ಮಂಜೂರಾದ ಭೂಮಿಯಲ್ಲೇ ಕಾಲೇಜಿಗೆ ಜಾಗ ನೀಡಿರುವುದರಿಂದ ಕೆರೆ ಅಂಗಳ ಪ್ರದೇಶವನ್ನು ಬದಲಾ ಯಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ನಮ್ಮಿಂದ ಲೋಪವಾಗಿಲ್ಲ ಆದ್ದರಿಂದ ಪ್ರಕರಣ ಮುಕ್ತಾಯಗೊಳಿಸಿ’ ಎಂದು ಜಿಲ್ಲಾಧಿಕಾರಿ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

*

ಅಮಾನಿ ಗೋಪಾಲಕೃಷ್ಣ ಕೆರೆ ಜಾಗ ಅನ್ಯ ಉದ್ದೇಶಕ್ಕೆ ಬಳಕೆ ನೀಡಲು ಬರುವುದಿಲ್ಲ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ 2009ರಲ್ಲಿಯೇ ಹೇಳಿದೆ. ಆದರೂ ನೀಡಲಾಗಿದೆ.

–ಬಿ.ಎಸ್.ನಾರಾಯಣ,

ದೂರುದಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry