ಅಡುಗೆ ಮಾಡಿ, ಪರೀಕ್ಷೆ ಪಾಸ್‌ ಮಾಡಿ

7
ವಿದ್ಯಾರ್ಥಿನಿಲಯಗಳ ಅಡುಗೆಯವರು, ಅಡುಗೆ ಸಹಾಯಕರ ಹುದ್ದೆಗಳಿಗೆ ಅರ್ಹತಾ ಪರೀಕ್ಷೆ

ಅಡುಗೆ ಮಾಡಿ, ಪರೀಕ್ಷೆ ಪಾಸ್‌ ಮಾಡಿ

Published:
Updated:
ಅಡುಗೆ ಮಾಡಿ, ಪರೀಕ್ಷೆ ಪಾಸ್‌ ಮಾಡಿ

ದಾವಣಗೆರೆ: ಉಪ್ಪಿಟ್ಟು ಮಾಡಲು ಬರುತ್ತಾ? ರಾಗಿ ಮುದ್ದೆ, ಸಾಂಬಾರು, ತಿಳಿಸಾರು, ಪಾಯಸ, ಪಲ್ಯ ತಯಾರಿಸುತ್ತೀರಾ? ಇಷ್ಟೆಲ್ಲಾ ಅಡುಗೆ ಮಾಡಲು ನಿಮಗೆ ಬರುವುದಾದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ನಡೆಯುವ ಪ್ರಾಯೋಗಿಕ ಅರ್ಹತಾ ಪರೀಕ್ಷೆ ಸುಲಭವಾಗಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪರೀಕ್ಷೆ ಇದೇ 28, 29ರಂದು ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಪರೀಕ್ಷೆ ಇದೇ 30ರಂದು ನಡೆಯಲಿದೆ. ಒಟ್ಟು 10 ಆಹಾರ ಪದಾರ್ಥಗಳಲ್ಲಿ ಯಾವುದಾದರೂ ಒಂದು ಪದಾರ್ಥವನ್ನು ತಯಾರಿಸಿದರೂ ಪರೀಕ್ಷೆಯಲ್ಲಿ ಉತ್ತೀರ್ಣರಾದಂತೆ; ಆಹಾರ ಪದಾರ್ಥವನ್ನು ತಯಾರಿಸಲು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಡುಗೆ ತಯಾರಿಗೆ ಅರ್ಧ ಗಂಟೆ ಸಮಯ ಅವಕಾಶವಿದೆ. ಆದರೆ, ಇದಕ್ಕೆ ಯಾವುದೇ ಅಂಕ ನೀಡುವುದಿಲ್ಲ. ಆಹಾರ ತಜ್ಞರು ಅಡುಗೆ ರುಚಿ ನೋಡಿ ಅರ್ಹತೆ ಪರೀಕ್ಷಿಸುತ್ತಾರೆ. ಅಡುಗೆ ತಯಾರಿ ಸಂಪೂರ್ಣ ಚಿತ್ರೀಕರಣ ಮಾಡಲಾಗುತ್ತದೆ.

ಇದು ನೇರ ನೇಮಕಾತಿ ಆಗಿರುವುದರಿಂದ ಯಾವುದೇ ಸಂದರ್ಶನ ಇರುವುದಿಲ್ಲ. ಅಡುಗೆ ತಯಾರಿಕೆಯ ಬಗ್ಗೆ ಸಾಮಾನ್ಯ ಜ್ಞಾನ ಇರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದಲೇ ಪ್ರಾಯೋಗಿಕ ಪರೀಕ್ಷೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮೆರಿಟ್‌ ಆಧಾರದ ಮೇಲೆ ಸರ್ಕಾರದ ಆದೇಶದಂತೆ ಹುದ್ದೆಗಳಿಗೆ 1:5 ಅನುಪಾತದಲ್ಲಿ ನಡೆಯಲಿದೆ.ಅರ್ಹ ಅಭ್ಯರ್ಥಿಗಳು http://davanagere.nic.in ವೆಬ್‌ಸೈಟ್‌ನಿಂದ ದಾಖಲಾತಿ ಪರಿಶೀಲನೆಗೆ ಸೂಚನಾ ಪತ್ರ ಡೌನ್‌ಲೋಡ್‌ ಮಾಡಿಕೊಂಡು ಮೂಲ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ನಮೂದಿಸಿರುವಂತೆ ಎರಡು ದೃಢೀಕೃತ ಪ್ರತಿಗಳೊಂದಿಗೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.ಸೂಚನಾ ಪತ್ರವನ್ನು ಅಭ್ಯರ್ಥಿಗಳಿಗೆ ಕಚೇರಿಯಿಂದ ಪ್ರತ್ಯೇಕವಾಗಿ ಕಳುಹಿಸುವುದಿಲ್ಲ. ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಇಂತಹ ಪ್ರಕರಣಗಳು ಕಂಡುಬಂದರೆ ದೂರವಾಣಿ ಸಂಖ್ಯೆ 08192–262973 ಹಾಗೂ 08192–231782 ಕಚೇರಿ ವೇಳೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರ ಹುದ್ದೆ 56, ಸಹಾಯಕರ ಹುದ್ದೆ 92. ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಡುಗೆ ಸಹಾಯಕರು 36, ಕಾವಲುಗಾರರು 34 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಎರಡೂ ಇಲಾಖೆಗಳ ಈ ಹುದ್ದೆಗಳಿಗೆ ಸುಮಾರು 10 ಸಾವಿರ ಅರ್ಜಿಗಳು ಬಂದಿದ್ದವು ಎಂದರು.8 ತಿಂಗಳ ಹಿಂದೆ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ ಆಗ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೊಂದು ಸುತ್ತೋಲೆ ಬಂದಿದ್ದು, ಇನ್ನೆರಡು ತಿಂಗಳ ಒಳಗೆ ಈ ಹುದ್ದೆ ಭರ್ತಿಗೆ ಸೂಚಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸೈಯದ್ ಮನ್ಸೂರ್‌, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಕುಮಾರ ಹನುಮಂತಪ್ಪ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry