ಬಾರದ ಮಳೆ, ಬಾಡಿದ ಬೆಳೆ, ರೈತನಿಗೆ ಹೊರೆ

7
ಹೊಸದುರ್ಗ: ಮಳೆಗಾಗಿ ರೈತರ ಪ್ರಾರ್ಥನೆ

ಬಾರದ ಮಳೆ, ಬಾಡಿದ ಬೆಳೆ, ರೈತನಿಗೆ ಹೊರೆ

Published:
Updated:
ಬಾರದ ಮಳೆ, ಬಾಡಿದ ಬೆಳೆ, ರೈತನಿಗೆ ಹೊರೆ

ಹೊಸದುರ್ಗ: ಸುಮಾರು 20 ದಿನಗಳಿಂದ ಮಳೆ ಬಾರದಿರುವುದರಿಂದ ಒಂದೂವರೆ ತಿಂಗಳ ಹಿಂದೆ ಬಿತ್ತನೆಯಾಗಿದ್ದ ಮುಂಗಾರು ಬೆಳೆ ತಾಲ್ಲೂಕಿನ ಕೆಲವೆಡೆ ಬಾಡುತ್ತಿವೆ.ಕಳೆದ ಒಂದು ವಾರದಿಂದ ಭಾರಿ ಮಳೆ ಬರುತ್ತದೆ ಏನೋ ಎನ್ನುವಷ್ಟು ದೊಡ್ಡ ಪ್ರಮಾಣದ ಮೋಡಗಳು ಆಗಸದಲ್ಲಿ ಹರಿದಾಡುತ್ತಿವೆ. ಆದರೆ ವರುಣರಾಯ ಇಳೆಗೆ ಇಳಿಯುತ್ತಿಲ್ಲ. ಅನ್ನದಾತರು ಆಗಸದಲ್ಲಿ ದಟ್ಟೈಸಿರುವ ಮೋಡಗಳನ್ನು ಕಂಡು ಎಲ್ಲಿ ಓಡುವಿರಿ ಮೋಡಗಳೆ ನಿಲ್ಲಿ, ನಾಲ್ಕು ಹನಿಯ ಚೆಲ್ಲಿ ಎಂದು ಪ್ರಾರ್ಥಿಸುವಂತಾಗಿದೆ. ಇದರಿಂದ ಮುಂಗಾರು ಸಾವೆ, ಎಳ್ಳು, ಹೆಸರು ಬೆಳೆಗಳು ಬಾಡುತ್ತಿವೆ. ವಾರದೊಳಗೆ ಮಳೆ ಬಾರದಿದಲ್ಲಿ ಬೆಳೆ ಒಣಗುವ ಆತಂಕ ರೈತರನ್ನು ಕಾಡುತ್ತಿದೆ.‘ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಈ ಬಾರಿ ಮುಂಗಾರು ತಾಲ್ಲೂಕಿನ ಕೆಲವೆಡೆ ಸಕಾಲಕ್ಕೆ ಬಂದು ರೈತರಲ್ಲಿ ಹರ್ಷವನ್ನುಂಟು ಮಾಡಿತ್ತು. ಇದರಿಂದ ಕಷ್ಟದ ನಡುವೆಯೂ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿ ಮುಂಗಾರು ಬಿತ್ತನೆ ಮಾಡಿದ್ದೆವು. ಹೆಸರು ಕಾಳು ಬೆಳೆ ಹೂವಿನ ಹಂತದಲ್ಲಿ ಇರುವಾಗ ಮಳೆ ಕೈಕೊಟ್ಟಿದೆ. ಮಳೆರಾಯ ಬರೆಯ ಮೇಲೆ ಬರೆ ಎಳೆದು ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎನ್ನುತ್ತಾರೆ ರೈತ ಹನುಮಂತಪ್ಪ.ತಾಲ್ಲೂಕಿನಲ್ಲಿ  ಈ ಬಾರಿ 55,560 ಹೆಕ್ಟೇರ್‌ ಮುಂಗಾರು ಬಿತ್ತನೆ ಗುರಿಯಿದೆ.  ಆದರೆ ಮಳೆಯ ಅಭಾವದಿಂದ ಕೇವಲ 6,504 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಸಾವೆ, ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಮತ್ತಿತರ ಬೀಜಗಳನ್ನು  ಮುಂಗಾರು ಬಿತ್ತನೆ ಮಾಡಲು ಹಸನುಗೊಳಿಸಿರುವ ಹೊಲಗಳು ಖಾಲಿ ಇವೆ. ಬಿತ್ತನೆಗಾಗಿ ರೈತರು ಮಳೆಗೆ ಕಾಯುತ್ತಿದ್ದಾರೆ.

– ಎಸ್‌.ಸುರೇಶ್‌

ಬಿತ್ತನೆಯ ವಿವರ

ತಾಲ್ಲೂಕಿನಲ್ಲಿ ಹೆಸರು 2,266 ಹೆಕ್ಟೇರ್‌, ಮುಂಗಾರು ಸಾವೆ 3,120, ತೊಗರಿ 125, ಹತ್ತಿ 400, ಅಲಸಂದೆ 52, ಶೇಂಗಾ 395, ಎಳ್ಳು 22, ಹರಳು 34, ನವಣೆ 60 ಹೆಕ್ಟೇರ್‌ ಸೇರಿದಂತೆ ಒಟ್ಟು 6,504 ಹೆಕ್ಟೇರ್‌ ಬಿತ್ತನೆಯಾಗಿದೆ. ಎಳ್ಳು, ಹೆಸರು, ಸಾವೆ ಬಿತ್ತನೆ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ.

ಹೋಬಳಿವಾರು ಮಳೆ ಮಾಹಿತಿ

ವಾಡಿಕೆಯಂತೆ ಕಸಬಾ 153 ಮಿ.ಮೀ ಮಳೆ ಆಗಬೇಕಿತ್ತು. 103 ಮಿ.ಮೀ ಆಗಿದೆ. ಮಾಡದಕೆರೆ 153 ಮಿ.ಮೀಗೆ 116 ಮಿ.ಮೀ ಮಳೆಯಾಗಿದೆ. ಮತ್ತೋಡು 143 ಮಿ.ಮೀ ಮಳೆ ಬರಬೇಕಿತ್ತು. ಆದರೆ 199 ಮಿ.ಮೀ ಆಗಿದೆ. ಶ್ರೀರಾಂಪುರ 134 ಮಿ.ಮೀಗೆ 130 ಮಿ.ಮೀ ಮಳೆಯಾಗಿದೆ. ಮಳೆ ಬಂದಿರುವುದರಲ್ಲಿ ಶ್ರೀರಾಂಪುರಕ್ಕೆ ಹೆಚ್ಚು, ಕಸಬಾಕ್ಕೆ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

* ಕೈಕೊಟ್ಟ ಮಳೆ, ಸಂಕಷ್ಟಕ್ಕೆ ಸಿಲುಕಿದ ರೈತರು.

* ಮುಂಗಾರು ಬಿತ್ತನೆ ಕುಸಿತ.

*ಹಸನಾಗಿದ್ದ ಹೊಲಗಳು ಖಾಲಿ, ಖಾಲಿ.

ಮಳೆ ವಿವರ

*147 ಮಿ.ಮೀ ಜನವರಿಯಿಂದ ಜೂನ್‌ 14ಕ್ಕೆ ಬರಬೇಕಾದ ಮಳೆ.

*116 ಮಿ.ಮೀ ಇಲ್ಲಿವರೆಗೆ ಬಿದ್ದಿರುವ ಮಳೆ.

*31ಮಿ.ಮೀ ಕೊರತೆಯಾದ ಸರಾಸರಿ ಮಳೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry