ಹಳ್ಳಿಗಳ ಎಲ್ಲ ಪರಿಶಿಷ್ಟರಿಗೂ ಸೂರಿದೆ!

7
ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯ 575 ಮನೆಗಳು ವಾಪಸ್

ಹಳ್ಳಿಗಳ ಎಲ್ಲ ಪರಿಶಿಷ್ಟರಿಗೂ ಸೂರಿದೆ!

Published:
Updated:
ಹಳ್ಳಿಗಳ ಎಲ್ಲ ಪರಿಶಿಷ್ಟರಿಗೂ ಸೂರಿದೆ!

ಶಿವಮೊಗ್ಗ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜಿಲ್ಲೆಯ ಎಲ್ಲ ಪರಿಶಿಷ್ಟ ಜಾತಿ, ಪಂಗಡದವರೂ ಸ್ವಂತ ಸೂರು ಹೊಂದಿದ್ದಾರೆ. ಹಾಗಾಗಿ, ಕೇಂದ್ರ ಸರ್ಕಾರದ ಆಶ್ರಯ ಯೋಜನೆಗೆ ಫಲಾನುಭವಿಗಳೇ ಇಲ್ಲ!ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆ ಅಡಿ ಪರಿಶಿಷ್ಟ ಜಾತಿ, ಪಂಗಡದ ಜನರು ಸ್ವಂತ ಮನೆಗಳನ್ನು ಕಟ್ಟಿಕೊಳ್ಳಲು 2016–17ನೇ ಸಾಲಿನಲ್ಲಿ ಜಿಲ್ಲೆಗೆ 900 ಮನೆಗಳು ಮಂಜೂರಾಗಿದ್ದವು.ಜಿಲ್ಲಾ ಪಂಚಾಯ್ತಿ ಈ ಯೋಜನೆ ಅಡಿ ಫಲಾನುಭವಿಗಳ ಆಯ್ಕೆ ಮಾಡಲು ಆಯಾ ಗ್ರಾಮ ಪಂಚಾಯ್ತಿಗಳಿಗೆ ಜವಾಬ್ದಾರಿ ನೀಡಿತ್ತು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಗ್ರಾಮಗಳ ಸರ್ವೆ ಕಾರ್ಯ ನಡೆಸಿ, ಪಟ್ಟಿ ಸಿದ್ಧಪಡಿಸಿದ್ದರು. ಆದರೆ, ಆ ಪಟ್ಟಿಯಲ್ಲಿದ್ದ ಫಲಾನುಭವಿಗಳ ಸಂಖ್ಯೆ ಮಂಜೂರಾದ ಮನೆಗಳಿಗಿಂತಲೂ ಕಡಿಮೆ ಇತ್ತು. ಕಾರಣ ಮನೆಗಳ ಆವಶ್ಯಕತೆ ಇರುವ ಪರಿಶಿಷ್ಟ ಜಾತಿ, ಪಂಗಡದ ಜನರು ಇಲ್ಲದೇ ಇರುವುದು.ಜಿಲ್ಲೆಗೆ ಮಂಜೂರಾದ 900 ಮನೆಗಳಲ್ಲಿ ಫಲಾನುಭವಿಗಳು ದೊರೆತಿದ್ದು ಕೇವಲ 325 ಮಾತ್ರ. ಉಳಿದ 575 ಮನೆಗಳಿಗೆ ಫಲಾನುಭವಿಗಳಿಲ್ಲ ಎಂದು ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ.ಶಿಕಾರಿಪುರ 240, ಭದ್ರಾವತಿ 109, ಶಿವಮೊಗ್ಗ ತಾಲ್ಲೂಕಿನಲ್ಲಿ 96, ಸಾಗರ 49, ತೀರ್ಥಹಳ್ಳಿ 35, ಸೊರಬ 26, ಹೊಸನಗರ ತಾಲ್ಲೂಕಿನಲ್ಲಿ 20 ಮನೆಗಳಿಗೆ ಫಲಾನುಭವಿಗಳು ದೊರೆ ತಿಲ್ಲ. ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಫಲಾನುಭವಿಗಳು ದೊರೆತಿದ್ದಾರೆ.

 

‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳು ದೊರೆಯದೇ ಇದ್ದಾಗ ಗ್ರಾಮ ಪಂಚಾಯ್ತಿಗಳ ನಡುವೆ ಬದಲಿಸಿಕೊಳ್ಳಲು ಸೂಚಿಸಲಾಗಿತ್ತು. ನಂತರ ಅಗತ್ಯ ಇರುವ ತಾಲ್ಲೂಕುಗಳಿಗೆ ನೀಡಲು ಆದೇಶಿಸಲಾಗಿತ್ತು. ಕೊನೆಗೆ ಎಲ್ಲ ತಾಲ್ಲೂಕುಗಳಲ್ಲೂ ಫಲಾನುಭವಿ ಗಳ ಕೊರತೆ ಎದುರಾಗಿದೆ. ಹಾಗಾಗಿ, ಅನಿವಾರ್ಯವಾಗಿ 575 ಮನೆಗಳನ್ನು ವಾಪಸ್ ಕಳುಹಿಸಲಾಗಿದೆ’ ಎಂದು ವಿವರ ನೀಡುತ್ತಾರೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಕೇಶ್‌ಕುಮಾರ್.ಎಲ್ಲರಿಗೂ ಮನೆ ಇದೆ ಎಂದೇ ಅರ್ಥವಲ್ಲ: ಜಿಲ್ಲೆಯ ಪರಿಶಿಷ್ಟರಿಗೆ ಮಂಜೂರಾದ ಮನೆಗಳಿಗೆ ಫಲಾನುಭಗಳೇ ಸಿಗಲಿಲ್ಲ ಎಂದ ತಕ್ಷಣ ಎಲ್ಲರಿಗೂ ಮನೆಗಳು ಇವೆ ಎಂದು ಅರ್ಥವಲ್ಲ. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು. 2011ರ ಸಾಮಾಜಿಕ, ಆರ್ಥಿಕ ಜನ ಗಣತಿ ಆಧಾರದ ಮೇಲೆ ಫಲಾನುಭವಿ ಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಮನೆ ಪಡೆಯುವ ಫಲಾನುಭವಿಗಳು ಸ್ವಂತ ನಿವೇಶನ ಹೊಂದಿರಬೇಕು. ಬಿಪಿಎಲ್‌ ಕಾರ್ಡ್ ಇರಬೇಕು. ಕುಟುಂಬದ ವಾರ್ಷಿಕ ಆದಾಯ ₹ 35 ಸಾವಿರ ಮೀರಿರಬಾರದು. ಆದರೆ, ಹಲವು ಕುಟುಂಬಗಳಿಗೆ ಮನೆಯ ಅಗತ್ಯವಿ ದ್ದರೂ, ನಿವೇಶನ ಇಲ್ಲದ ಕಾರಣ ಆಯ್ಕೆ ಸಾಧ್ಯವಾಗಿಲ್ಲ’ ಎನ್ನುವುದು ಆಶ್ರಯ ಯೋಜನೆ ಅಧಿಕಾರಿಗಳ ವಿಶ್ಲೇಷಣೆ.

ಪಂಚಾಯ್ತಿ ವ್ಯಾಪ್ತಿಯಲ್ಲಿ ಹಲವು ವಸತಿ ಯೋಜನೆಗಳಿವೆ. ಕೆಲವು ವಸತಿ ಯೋಜನೆಗಳಲ್ಲಿ ನಿವೇಶನವನ್ನೂ ಸರ್ಕಾರವೇ ಗುರುತಿಸಿ, ಫಲಾನುಭವಿ ಗಳಿಗೆ ಮನೆ ಕಟ್ಟಿಕೊಡುತ್ತದೆ. ಆದರೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ ಯಲ್ಲಿ ಸರ್ಕಾರ ನೀಡುವುದು ಕೇವಲ ₹ 1.20 ಲಕ್ಷ ಮಾತ್ರ. ಉಳಿದ ಹಣ ಫಲಾನುಭವಿಗಳೇ  ಭರಿಸಬೇಕು.

ಪರಿಶಿಷ್ಟ ಜಾತಿ, ಪಂಗಡದ ಬಹುತೇಕ ಬಡವರಿಗೆ ಅಷ್ಟೊಂದು ಹಣ ಭರಿಸುವ ಶಕ್ತಿ ಇಲ್ಲ. ಹಾಗಾಗಿ, ಯೋಜನೆಯ ಲಾಭ ಪಡೆಯಲು ಹಿಂದೇಟು ಹಾಕುತ್ತಾರೆ’ ಎಂದು ಮಾಹಿತಿ ಬಿಚ್ಚಿಟ್ಟರು ಫಲಾನುಭವಿ ರಾಜಾನಾಯ್ಕ.ಒಟ್ಟಿನಲ್ಲಿ ಜಿಲ್ಲೆಯ ಪರಿಶಿಷ್ಟರಿಗೆ ಆಶ್ರಯ ಕಲ್ಪಿಸಲು ಮಂಜೂರಾದ ಅನುದಾನದಲ್ಲಿ ₹ 6.90 ಕೋಟಿ ಸರ್ಕಾರಕ್ಕೆ ವಾಪಸ್‌ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry