ರೈಲ್ವೆ ಗೇಟ್‌ ಸಮಸ್ಯೆಗೆ ತಿಂಗಳಲ್ಲೇ ಉತ್ತರ

7
6ನೇ ತರಗತಿಯ ಬಾಲಕಿಯ ಪತ್ರಕ್ಕೆ ಪ್ರಧಾನಿ ಸ್ಪಂದನೆ

ರೈಲ್ವೆ ಗೇಟ್‌ ಸಮಸ್ಯೆಗೆ ತಿಂಗಳಲ್ಲೇ ಉತ್ತರ

Published:
Updated:
ರೈಲ್ವೆ ಗೇಟ್‌ ಸಮಸ್ಯೆಗೆ ತಿಂಗಳಲ್ಲೇ ಉತ್ತರ

ಮೂಲ್ಕಿ: ಇಲ್ಲಿನ ಕಿನ್ನಿಗೋಳಿ ಬಳಿಯ ಶಾರದಾ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿ ಧೃತಿ, ಹಳೆಯಂಗಡಿ ಬಳಿಯ ರೈಲ್ವೆ ಗೇಟ್‌ ಸಮಸ್ಯೆಯ ಬಗ್ಗೆ ವಿಸ್ತೃತವಾದ ಪತ್ರವೊಂದನ್ನು ಪ್ರಧಾನಿ ನರೇಂದ್ರ ಮೋದಿಗೆ ಬರೆದಿದ್ದು, ಇದೀಗ ರೈಲ್ವೆ ಅಧಿಕಾರಿಗಳಿಂದ ಉತ್ತರ ಬಂದಿದೆ.

ಪ್ರಧಾನ ಮಂತ್ರಿ ಕಚೇರಿಯಿಂದ ಧೃತಿಯ ತಂದೆ ರಮೇಶ್ ಕುಲಾಲ್‌ಗೆ ಕರೆ ಬಂದಿದ್ದು, ಈ ಬಗ್ಗೆ ವಿಚಾರಿಸಿ, ರೈಲ್ವೆ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಲ್ಲದೇ ಈ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿತ್ತು. ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಯೂ ಸಹ ದೂರವಾಣಿ ಮೂಲಕ ರಮೇಶ್ ಕುಲಾಲ್ ಅವರನ್ನು ಸಂಪರ್ಕಿಸಿದೆ.

ಈ ರೈಲ್ವೆ ಗೇಟ್‌ನ ಸಂಪೂರ್ಣ ಮಾಹಿತಿ ಪಡೆದು, ಈ ಬಗ್ಗೆ ಕೊರಿಯರ್ ಮೂಲಕ ಧೃತಿಯ ಹೆಸರಿಗೆ ಇಲಾಖೆ ಪತ್ರ ಬರೆದಿದೆ. ಈ ಗೇಟ್‌ನ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಜಮೀನಿನ ಸಮಸ್ಯೆಯ ಬಗ್ಗೆ ಇಲಾಖೆ ಉಲ್ಲೇಖಿಸಿದ್ದು, ಶಾಸಕರು ಮತ್ತು ಸಂಸದರು ಈ ಮೇಲ್ಸೇತುವೆ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

‘ಕಿನ್ನಿಗೋಳಿಯಿಂದ ಸುರತ್ಕಲ್‌ ಮತ್ತು ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಧೃತಿ ಇಂದಿರಾನಗರ ರೈಲ್ವೆ ಸಮಸ್ಯೆ ಬಗ್ಗೆ ಅರಿತಿದ್ದಳು. ಒಂದು ದಿನ ಇದೇ ಮಾರ್ಗವಾಗಿ ಸಂಚರಿಸುವಾಗ ರೈಲ್ವೆ ಗೇಟ್ ಹಾಕಲಾಗಿತ್ತು. ವಾಹನಗಳ ಸರದಿ ಹೆಚ್ಚಾದರೂ, ರೈಲು ಬಾರದ ಕಾರಣ ರೈಲ್ವೆ ಗೇಟ್ ತೆರೆಯಲಿಲ್ಲ. ಬಾಲಕಿ ಪ್ರಯಾಣಿಸುತ್ತಿದ್ದ ಬಸ್‌ನ ಸಮೀಪದಲ್ಲೇ ಆಂಬುಲೆನ್ಸ್ ಒಂದು ನಿಂತಿದ್ದು, ಗರ್ಭಿಣಿ ಹೆರಿಗೆ ನೋವಿನಿಂದ ಬಳಲುತ್ತಿದ್ದಳು.

ಘಟನೆ ಬಗ್ಗೆ ನನ್ನ ಬಳಿ ಕೇಳಿ ತಿಳಿದ ಧೃತಿ, ಈ ಬಗ್ಗೆ ಆರಂಭದಲ್ಲಿ ಪೊಲೀಸ್‌ನವರಿಗೆ ದೂರು ನೀಡುವ ಎಂದು ಹೇಳಿಕೊಂಡಿದ್ದಳು. ಕೊನೆಗೆ ಅಲ್ಲಿ ದೂರು ನೀಡಲು ಸಾಧ್ಯವಿಲ್ಲ ಎಂದು ತಿಳಿದಾಗ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಲು ನಿರ್ಧರಿಸಿದಳು. ನಾವೆಲ್ಲ ಆಕೆಗೆ ಸಹಾಯ ಮಾಡಿದ್ದೇವೆ’ ಎಂದು ಆಕೆಯ ತಂದೆ ರಮೇಶ್ ಕುಲಾಲ್ ತಿಳಿಸಿದರು.

ಪ್ರತಿಭಾನ್ವಿತೆ ಧೃತಿ

ಪುತ್ತೂರು ನಿವಾಸಿಯಾದ ರಮೇಶ್ ಕುಲಾಲ್– ಕುಸುಮ ದಂಪತಿಯ ಎರಡು ಹೆಣ್ಣು ಮಕ್ಕಳಲ್ಲಿ ಧೃತಿ ಮೊದಲನೇಯವಳು. ಸದ್ಯ ಕಿನ್ನಿಗೋಳಿ ಸಮೀಪದ ಶಿಮಂತೂರು ಶಾರದಾ ಇಂಗ್ಲಿಷ್‌ ಮೀಡಿಯಂ ಶಾಲೆಯಲ್ಲಿ ಆರನೇ ತರಗತಿ ಕಲಿಯುತ್ತಿದ್ದಾಳೆ.

‘ಶಾಲೆಯಲ್ಲಿಯೂ ಬಹುಮುಖ ಪ್ರತಿಭೆಯಾಗಿದ್ದು, ಕರಾಟೆ  ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ಶೋಭಾಳನ್ನು ಸೋಲಿಸಿ, ಚಿನ್ನದ ಪದಕ ಪಡೆದು ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಳು.

ಈ ತಿಂಗಳ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ನಡೆಯುವ ಅಂತರ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ. ಈ ವರ್ಷ ಮಲೇಷ್ಯಾದಲ್ಲಿ ನಡೆಯಲಿರುವ ಕರಾಟೆ ಸ್ಪರ್ಧೆಗೂ ಆಯ್ಕೆಯಾಗಿದ್ದಾಳೆ’ ಎಂದು ಆಕೆಯ ಕರಾಟೆ ಶಿಕ್ಷಕ ನಾಗರಾಜ ಕುಲಾಲ್ ತಿಳಿಸಿದ್ದಾರೆ.

*

ಜಮೀನಿನ ಸಮಸ್ಯೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪತ್ರ ಬರೆಯುತ್ತೇನೆ. ಸಮಸ್ಯೆಯನ್ನು ಕೂಡಲೆ ಪರಿಹರಿಸಲು ಪ್ರಯತ್ನ ನಡೆಸುತ್ತೇನೆ.

-ಧೃತಿ,

ಪ್ರಧಾನಿಗೆ ಪತ್ರ ಬರೆದ ಬಾಲಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry