ಹಾವೇರಿ: ಮುಂಗಾರಿನಲ್ಲೂ ನೀರಿಗೆ ತತ್ವಾರ

7
ಕರುಣಿಸದ ವರುಣ, ತುಂಬದ ವರದೆ, ತುಂಗಭದ್ರೆಯಲ್ಲಿ ಮರಳು ಅಕ್ರಮ ಗಣಿಗಾರಿಕೆಗಳ ಹೊಂಡ

ಹಾವೇರಿ: ಮುಂಗಾರಿನಲ್ಲೂ ನೀರಿಗೆ ತತ್ವಾರ

Published:
Updated:
ಹಾವೇರಿ: ಮುಂಗಾರಿನಲ್ಲೂ ನೀರಿಗೆ ತತ್ವಾರ

ಹಾವೇರಿ: ‘ಬರ’ದಿಂದ ಬಳಲಿದ ಹಾವೇರಿಯಲ್ಲಿ ಮುಂಗಾರಿನಲ್ಲೂ ನೀರಿನ ಬವಣೆ ತಪ್ಪಿಲ್ಲ. ನಗರಕ್ಕೆ ನೀರು ಪೂರೈಸಲು ನಗರಸಭೆ ಹರಸಾಹಸ ಪಡುವಂತಾಗಿದೆ.

ಡಿಸೆಂಬರ್‌ನಿಂದಲೇ ನಗರದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ನಗರದ ಆರು ಕರೆಗಳೂ ಬತ್ತಿ ಹೋಗಿತ್ತು. ಕೊಳವೆಬಾವಿಗಳೂ ಕೈಕೊಟ್ಟಿದ್ದವು. ಆದರೆ, ಮುಂಗಾರಿನಲ್ಲಿ ನೀರಿನ ಬವಣೆ ನೀಗುವ ನಿರೀಕ್ಷೆ ಮೂಡಿತ್ತು. ಆದರೆ, ಈ ತನಕ ನಿರೀಕ್ಷಿತ ಮಳೆ ಸುರಿದಿಲ್ಲ. ಇದರಿಂದ, ತುಂಗಭದ್ರಾ ನದಿಯಲ್ಲೇ 10 ದಿನಗಳಿಂದ ನೀರಿನ ಕೊರತೆ ಕಾಡುತ್ತಿದೆ.

ನದಿಯಿಂದ ನಗರಕ್ಕೆ ನೀರು ಪೂರೈಸುವ ಕೆಂಚಾರಗಟ್ಟಿಯ ಜಾಕ್‌ವೆಲ್‌ನ ಇನ್‌ಟೇಕ್ ವಾಲ್‌ಗೆ ನೀರು ಬರುತ್ತಿಲ್ಲ. ಜಾಕ್‌ವೆಲ್‌ಗೆ ನೀರು ಹಾಯಿಸಲು ನಗರಸಭೆ ಸಾಹಸ ಪಡುತ್ತಿದೆ.

ಕೆಂಚಾರಗಟ್ಟಿಯ ಮರಳಿನ ಬ್ಯಾರೇಜಿನಲ್ಲಿ ಸಂಗ್ರಹವಿರುವ ನೀರನ್ನು ಎಂಟು ಪಂಪ್‌ಗಳ ಮೂಲಕ ಇನ್‌ಟೇಕ್‌ ವಾಲ್‌ಗೆ ಹಾಯಿಸಲಾಗುತ್ತಿದೆ. ಅಲ್ಲಿಂದ, ಪಂಪ್‌ಹೌಸ್ ಮೂಲಕ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ.

ಹರಿಯದ ವರದೆ: ‘ಕಾರಹುಣ್ಣಿಮೆಗೆ ವರದೆ ತುಂಬೆಲ್ಲ ನೀರು’ ಎಂಬುದು ಜನರ ನಂಬಿಕೆ. ಜೂನ್‌ ಆರಂಭದಲ್ಲಿ ಬರುವ ‘ಕಾರಹುಣ್ಣಿಮೆ’ಯ ವೇಳೆಗೆ ಮುಂಗಾರು ಆರಂಭಗೊಂಡು ವರದಾ ತುಂಬಿ ಹರಿಯುತ್ತದೆ. ಆದರೆ, ಈ ಬಾರಿ ವರದಾ ನದಿಯಲ್ಲೂ ನೀರಿಲ್ಲ. ಇದರಿಂದ ಕರ್ಜಗಿಯಿಂದ ನೀರು ಪೂರೈಕೆ ಇನ್ನೂ ಸಾಧ್ಯವಾಗಿಲ್ಲ’ ಎನ್ನುತ್ತಾರೆ ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ.

‘ಸದ್ಯ ತುಂಗಭದ್ರಾ ನದಿಯ ನೀರನ್ನು ಆಶ್ರಯಿಸಲಾಗಿದೆ. ಆದರೆ, ಹರಿವು ಇಲ್ಲದ ಕಾರಣ  ಮರಳಿನ ಬ್ಯಾರೇಜ್ ಉಳಿಸಿಕೊಳ್ಳಲಾಗಿದೆ’ ಎನ್ನುತ್ತಾರೆ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗಂಗಾಧರ್‌.

ನೀರು ಬರಲಿದೆ: ‘ಜಿಲ್ಲೆಯ ಕೆರೆಗಳು ಬತ್ತಿ ಹೋಗಿವೆ. ನೆಲ ಶುಷ್ಕಗೊಂಡಿದೆ. ಮಳೆ ಸುರಿದರೂ, ಆರಂಭದಲ್ಲಿ ನೀರು ಇಂಗಿ, ಶೇ 25ರಷ್ಟು ಮಾತ್ರ ಹರಿಯುತ್ತದೆ. ಕೆರೆಗಳು, ಹಳ್ಳಗಳು ತುಂಬಿದ ಬಳಿಕವೇ ನದಿಗೆ ನೀರು ಸೇರಲು ಸಾಧ್ಯ’ ಎನ್ನುತ್ತಾರೆ ಅವರು.

‘ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಸುರಿಯದಿದ್ದರೂ, ಭದ್ರಾ ಜಲಾಶಯ ಹಾಗೂ ತುಂಗಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯಾಗಿದೆ. ಈ ನೀರು ಹರಿದು ಬಂದರೆ, ಜಾಕ್‌ವೆಲ್‌ಗೆ ತಲುಪಬಹುದು’ ಎನ್ನುತ್ತಾರೆ ನಗರಾಭಿವೃದ್ಧಿ ಕೋಶದ ಅಧಿಕಾರಿ ವಾಸಣ್ಣ.

‘ಮುಂಗಾರಿನ ಕಾರಣ ನದಿ ತೀರದಲ್ಲಿ ವಿದ್ಯುತ್ ಚಾಲಿತ ಪಂಪ್‌ಗಳನ್ನು ಇರಿಸುವುದೂ ಅಪಾಯ. ಆದರೂ, ಅನಿವಾರ್ಯ. ನಗರಸಭೆಗೆ ಹೊಸ ಪಂಪ್‌ ಖರೀದಿಗೆ ₹ 30 ಲಕ್ಷದ ಪ್ರಸ್ತಾವನೆ ಕಳುಹಿಸಲಾಗಿತ್ತು. ಈ ಪಂಪ್‌ ಬಂದರೆ, ನೀರು ಪೂರೈಕೆ ವೇಗಗೊಳ್ಳಬಹುದು’ ಎನ್ನುತ್ತಾರೆ ಸದಸ್ಯ ಗಣೇಶ ಬಿಷ್ಟಣ್ಣನವರ.

‘ಭದ್ರಾ ಜಲಾಶಯದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಇನ್ನೂ ಕೆಲದಿನ ಮಳೆ ಬಾರದಿದ್ದರೆ, ತುಂಗಾ ಅಣೆಕಟ್ಟೆಯಿಂದ ನೀರು ಪಡೆಯುವುದೇ ಪರಿಹಾರ’ ಎನ್ನುತ್ತಾರೆ ಅವರು. ಜಿಲ್ಲೆಯಲ್ಲಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದ ಪರಿಣಾಮ, ಅಲ್ಪಸ್ವಲ್ಪ ನೀರೂ ಹರಿದು ಬರುತ್ತಿಲ್ಲ ಎನ್ನಲಾಗಿದೆ.

ಶೇ 40 ಸೋರಿಕೆ

‘ನಗರದ ಪ್ರತಿನಿತ್ಯ ಬೇಡಿಕೆಯ 70 ಎಂ.ಎಲ್.ಡಿ ನೀರನ್ನು ಕೆಂಚಾರಗಟ್ಟಿಯಿಂದ ಪೂರೈಕೆ ಮಾಡಲಾಗುತ್ತಿದೆ. ಆದರೆ, ಕಾಮಗಾರಿಗಳು, ಹಳೇ ಪೈಪ್‌ಲೈನ್, ಪೈಪ್‌ಲೈನ್‌ ಅಕ್ರಮ ಸಂಪರ್ಕ, ಅಕ್ರಮ ನಳ ಮತ್ತಿತರ ಕಾರಣದಿಂದ ಶೇ 40ರಷ್ಟು ಸೋರಿಕೆ ಆಗುತ್ತಿದೆ. ಇದರಿಂದ ನೀರು ವಿತರಣೆಯಲ್ಲಿ ಸಮಸ್ಯೆ ಎದುರಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

*

ನದಿಯಲ್ಲಿ ನೀರಿನ ಕೊರತೆಯಿದ್ದರೂ, ಹೆಚ್ಚುವರಿ ಪಂಪ್‌ಸೆಟ್ ಬಳಕೆಯ ಮೂಲಕ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

-ಬಸವರಾಜ ಸೋಮಣ್ಣನವರ,

ಪೌರಾಯುಕ್ತರು (ಪ್ರಭಾರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry