ಪ್ರತಿಭೆಯ ಸಸಿಗಳಿಗೆ ನೀರೆರೆದ ಜಿಲ್ಲಾಡಳಿತ

7
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಿಗೆ ನಗದು ಪುರಸ್ಕಾರ

ಪ್ರತಿಭೆಯ ಸಸಿಗಳಿಗೆ ನೀರೆರೆದ ಜಿಲ್ಲಾಡಳಿತ

Published:
Updated:
ಪ್ರತಿಭೆಯ ಸಸಿಗಳಿಗೆ ನೀರೆರೆದ ಜಿಲ್ಲಾಡಳಿತ

ಬೆಳಗಾವಿ: ಬಡತನದಲ್ಲಿಯೇ ಓದಿ ಮುಂದೆ ಬಂದ ಪ್ರತಿಭಾವಂತರ ಅಪೂರ್ವ ಸಮ್ಮಿಲನ. ಪುರಸ್ಕರಿಸುವ ಮೂಲಕ ಪ್ರೋತ್ಸಾಹ. ಮನತುಂಬಿದ ಹಾರೈಕೆಗಳು. ಬೆಳೆಯುವ ಸಿರಿಗಳಿಗೆ ಸ್ಫೂರ್ತಿ ತುಂಬಿದ ಸಾಧಕರ ಮಾತುಗಳು. ಸಾಧನೆಗೆ ಚಪ್ಪಾಳೆ–ಅಭಿನಂದನೆಯ ಉಡುಗೊರೆಗಳು. ಪೋಷಕರು, ಶಿಕ್ಷಕರು ಹಾಗೂ ಸಮಾರಂಭ ಆಯೋಜಿಸಿದ್ದ ಅಧಿಕಾರಿಗಳಿಗೆ ಸಾರ್ಥಕ ಭಾವ.–ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಬುಧವಾರ ಕಂಡುಬಂದ ಭಾವನಾತ್ಮಕ ಸನ್ನಿವೇಶಗಳು ಸಾಧನೆಗೆ ಸ್ಫೂರ್ತಿ ತುಂಬುವಲ್ಲಿ ಅಕ್ಷರಶಃ ಯಶಸ್ವಿಯಾದವು.ಸಮಾಜ ಕಲ್ಯಾಣ ಇಲಾಖೆಯ ವಸತಿಶಾಲೆಗಳ 180, ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ಗಳ 245 ಮಕ್ಕಳು, 118 ಅನಾಥ ಮಕ್ಕಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬ್ಲಾಕ್‌ಗೆ ಪ್ರಥಮ ಸ್ಥಾನ ಪಡೆದ 23 ವಿದ್ಯಾರ್ಥಿಗಳು, ಅತಿಹೆಚ್ಚು ಅಂಕ ಗಳಿಸಿದ ಪೊಲೀಸರ 6  ಮಕ್ಕಳು ಸೇರಿ 572 ವಿದ್ಯಾರ್ಥಿಗಳಿಗೆ ತಲಾ ₹ 10ಸಾವಿರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾದ 39 ಹಾಗೂ ಯುಪಿಎಸ್‌ಸಿಯಲ್ಲಿ ರ್‌್ಯಾಂಕ್‌ ಗಳಿಸಿದ ಜಿಲ್ಲೆಯ ಇಬ್ಬರನ್ನು ಸತ್ಕರಿಸಲಾಯಿತು.ಜಿಲ್ಲಾಧಿಕಾರಿ ಎನ್‌. ಜಯರಾಮ್‌ ನೇತೃತ್ವದಲ್ಲಿ ಜಿಲ್ಲಾಡಳಿತವು, ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ 3 ವರ್ಷಗಳಿಂದಲೂ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಬಾರಿಯೂ ಅದ್ಧೂರಿಯಾಗಿ ನಡೆದ ಕಾರ್ಯಕ್ರಮಕ್ಕೆ  ಶ್ಲಾಘನೆಯ ಸುರಿಮಳೆಯೇ ಆಯಿತು. ಗಣ್ಯರು, ಸ್ವಾಮೀಜಿಗಳು ಜಿಲ್ಲಾಡಳಿತದ ಮಾದರಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಪ್ಪ, ಅಣ್ಣಗೆ ಸಲ್ಲಬೇಕು: ‘ಅಣ್ಣ ಸಾಲಿ ಬಿಟ್ಟು ನನಗ್ ಸಾಲಿ ಕಲಿಸಿದ... ಅದಕ್ ನಾನು ಇವತ್ತು ನಿಮ್ಮ ಮುಂದೆ ನಿಂತು ಸನ್ಮಾನ ಸ್ವೀಕರಿಸುತ್ತಿದ್ದೇನೆ. ಈ ಸನ್ಮಾನ ತಂದೆ ಹಾಗೂ ಅಣ್ಣನಿಗೆ ಸಲ್ಲಬೇಕು. ನನಗಾಗಿ ಅವರು ತ್ಯಾಗ ಮಾಡಿದ್ದಾರೆ’ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಚಿಕ್ಕೋಡಿ ತಾಲ್ಲೂಕಿನ ಲಕ್ಕಪ್ಪ ಹನಮಣ್ಣವರ ಹೇಳಿದಾಗ ಚಪ್ಪಾಳೆಗಳ ಮಳೆಯಾಯಿತು.‘ಬಿಸಿಎಂ ಹಾಸ್ಟೆಲ್‌ನಲ್ಲಿ ಓದಿದವನು ನಾನು. ಹಾಸ್ಟೆಲ್‌ ಪರಿಶೀಲನೆಗೆಂದು ಬಂದಿದ್ದ ಹಾಗೂ ನಮ್ಮ ಗ್ರಾಮಕ್ಕೆ ಭೇಟಿ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ನಾನೇಕೆ ಜಿಲ್ಲಾಧಿಕಾರಿ ಆಗಬಾರದು ಎಂಬ ಆಸೆ ಹುಟ್ಟಿಸಿದರು. ಆಸೆ ಇರಬೇಕು; ಅದಕ್ಕೆ ತಕ್ಕಂತೆಯೇ ಕಷ್ಟಪಡಬೇಕು. ಆಗ ಆಸೆ–ಕಷ್ಟ ವ್ಯರ್ಥವಾಗುವುದಿಲ್ಲ. ಪೂರಕವಾಗಿ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.ಅಭಿನಂದನಾ ಭಾಷಣ ಮಾಡಿದ ಹಿರಿಯ ಪತ್ರಕರ್ತ ಸರಜೂ ಕಾಟ್ಕರ್, ‘ವಿದ್ಯಾರ್ಥಿಗಳು ಏನೇ ಸಾಧನೆ ಮಾಡಿದರೂ ನೆಲಮೂಲ ಮರೆಯಬಾರದು. ಜನಮುಖಿ ಕೆಲಸ ಮಾಡಬೇಕು. ಮಾದರಿಯಾದ ಈ ಕಾರ್ಯಕ್ರಮ ಜಯರಾಮ್‌ ವರ್ಗಾವಣೆ ನಂತರ ನಿಲ್ಲಬಾರದು’ ಎಂದು ಆಶಿಸಿದರು.ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡಿದ ಸಾವಿತ್ರಿಬಾಯಿ ಫುಲೆ ಸ್ಮರಿಸಿದ ಅವರು, ‘ಐಎಎಸ್ ಪರೀಕ್ಷೆಯಲ್ಲಿ ಕೆ.ಆರ್‌. ನಂದಿನಿ ದೇಶಕ್ಕೆ ಮೊದಲ ಸ್ಥಾನ ಗಳಿಸಲು ಕಾರಣವಾದ ಶಕ್ತಿ ಸಾವಿತ್ರಿಬಾಯಿ ಫುಲೆ’ ಎಂದು ಬಣ್ಣಿಸಿದರು.ಮುಂದುವರಿಸುತ್ತೇವೆ ಎಂದ ಸಂಸದ: ಸಂಸದ ಸುರೇಶ ಅಂಗಡಿ ಮಾತನಾಡಿ, ‘ಶಿಕ್ಷಣ ಪಡೆದು ಸರ್ಕಾರಿ ನೌಕರಿಗೆ ಸೀಮಿತಗೊಳ್ಳದೇ ಇತರರಿಗೆ ಉದ್ಯೋಗ ನೀಡುವ  ಉದ್ಯಮಿಗಳಾಗಿ ಬೆಳೆಯ ಬೇಕು. ಅಂಕಗಳಿಂದಲೇ ಭವಿಷ್ಯ ನಿರ್ಧಾರವಾಗುವುದಿಲ್ಲ. ಜ್ಞಾನ ಸಂಪಾದಿಸಬೇಕು. ಐಎಎಸ್‌, ಕೆಎಎಸ್‌ ಮಾತ್ರವೇ ಅಲ್ಲ; ಬೇರೆ ಅವಕಾಶಗಳು ಬಹಳಷ್ಟಿವೆ’ ಎಂದು ತಿಳಿಸಿದರು.‘ಜಯರಾಮ್‌ ವರ್ಗವಾದ ನಂತರ ನಾನು ಹಾಗೂ ಶಾಸಕ ಸತೀಶ ಜಾರಕಿಹೊಳಿ ಸೇರಿ ಈ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಮುಂದುವರಿಸುತ್ತೇವೆ’ ಎಂದು ಭರವಸೆ ನೀಡಿದರು.‘ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಬಹಳಷ್ಟು ಸೌಲಭ್ಯ ದೊರೆಯುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕ ಗಳಿಸಿದವರನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಪುರಸ್ಕಾರ ಪಡೆದವರು ಈ ಸುವರ್ಣ ವಿಧಾನಸೌಧಕ್ಕೆ ಮುಖ್ಯಮಂತ್ರಿ, ಸಚಿವ, ಶಾಸಕ ಅಥವಾ ಅಧಿಕಾರಿಯಾಗಿ ಬರಬೇಕು. ಅರ್ಜಿದಾರರಾಗಿ ಬರಬಾರದು. ಅರ್ಜಿದಾರರ ಸಮಸ್ಯೆಗಳಿಗೆ ಮಿಡಿಯುವ ಅಧಿಕಾರಿಗಳಾಗಬೇಕು’ ಎಂದು ಕಿವಿಮಾತು ಹೇಳಿದರು.ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ, ‘ಶಿಕ್ಷಣಕ್ಕಾಗಿ ಡಾ.ಬಿ.ಆರ್‌. ಅಂಬೇಡ್ಕರ್ ಪಟ್ಟ ಕಷ್ಟ ಹಾಗೂ ಡಾ.ಅಬ್ದುಲ್ ಕಲಾಂ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು’ ಎಂದರು.ದೊಡ್ಡ ಸಂಸ್ಕೃತಿ ಬಿತ್ತಿದ್ದಾರೆ: ಸಾನ್ನಿಧ್ಯ ವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ, ‘ಹಿಂದುಳಿದವರು ಶಿಕ್ಷಣ ಪಡೆಯುವುದೇ ಅಸಾಧ್ಯವಾಗಿದ್ದ ಭಾರತದಲ್ಲಿ ಕಷ್ಪಪಟ್ಟು ಕಲಿತ ಡಾ.ಬಿ.ಆರ್‌. ಅಂಬೇಡ್ಕರ್ ನೀಡಿದ ಸಂವಿಧಾನದಿಂದಲೇ ಭಾರತ ಸುಭದ್ರವಾಗಿದೆ. ಎಲ್ಲರಿಗೂ ಸಮಾನ ಅವಕಾಶ ದೊರಕಿದೆ. ಉನ್ನತ ಹುದ್ದೆಗಳಿಗೆ ಹೋದವರು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಸಮಾಜದ ಋಣ ತೀರಿಸಬೇಕು’ ಎಂದು ನುಡಿದರು.‘ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಇಲ್ಲಿನ ಡಿಸಿ ಜಯರಾಮ್‌ ದೊಡ್ಡ ಸಂಸ್ಕೃತಿಯನ್ನೇ ಬಿತ್ತಿದ್ದಾರೆ. ದೇಶದ ಭರವಸೆಯಾದ ಮಕ್ಕಳನ್ನು ಪ್ರೋತ್ಸಾಹಿಸುವುದು ದೊಡ್ಡ ಕೆಲಸ’ ಎಂದು ಶ್ಲಾಘಿಸಿದರು.ಯುಪಿಎಸ್‌ಸಿ ಪರೀಕ್ಷೆ ಟಾಪರ್‌ ಕೆ.ಆರ್‌. ನಂದಿನಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್, ದಂಡು ಮಂಡಳಿ ಸಿಇಒ ಹರ್ಷ, ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ನಗರಪಾಲಿಕೆ ಆಯುಕ್ತ ಶಶಿಧರ ಕುರೇರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸ್ವಾಗತಿಸಿದರು. ಎಸ್ಪಿ ಬಿ.ಆರ್. ರವಿಕಾಂತೇಗೌಡ ವಂದಿಸಿದರು.

*

ಸಮಾಜದ ಸಂಪನ್ಮೂಲ ಬಳಸಿಕೊಂಡು ಮುಂದೆ ಬಂದವರು ಸ್ವಾರ್ಥಿಗಳಾಗಬಾರದು. ಇತರರ ನೋವಿಗೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

ಎನ್‌. ಜಯರಾಮ್‌,

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry