ನಂದಿನಿಗೆ ಪ್ರೇರಣೆಯಾಗಿದ್ದ ರಾಜ್‌ ಗೀತೆ

7
ಯುಪಿಎಸ್‌ಸಿ ಪರೀಕ್ಷೆ ಕಬ್ಬಿಣಡ ಕಡಲೆಯಲ್ಲ– ಪ್ರಥಮ ರ್‍ಯಾಂಕ್‌ ಗಳಿಸಿದ ಸಾಧಕಿಯ ಅಭಿಮತ

ನಂದಿನಿಗೆ ಪ್ರೇರಣೆಯಾಗಿದ್ದ ರಾಜ್‌ ಗೀತೆ

Published:
Updated:
ನಂದಿನಿಗೆ ಪ್ರೇರಣೆಯಾಗಿದ್ದ ರಾಜ್‌ ಗೀತೆ

ಬೆಳಗಾವಿ: ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದು, ಕೆಚ್ಚೆದೆ ಇರಬೇಕೆಂದೆಂದು... ಚಲನಚಿತ್ರಗೀತೆಯಲ್ಲಿದ್ದ ತತ್ವ ನನಗೆ ಚಿಕ್ಕಂದಿನಿಂದಲೂ ಆದರ್ಶವಾಗಿತ್ತು’ ಎಂದು 2016ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ಗಳಿಸಿದ ಕನ್ನಡತಿ ಕೆ.ಆರ್‌. ನಂದಿನಿ ಹೇಳಿದರು.

ಹೋದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಜಿಲ್ಲಾಡಳಿತದಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ‘ಜಾಣೆ–ಜಾಣೆಯರಿಗೆ ಅಭಿನಂದನೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯುಪಿಎಸ್‌ಸಿ ಪರೀಕ್ಷೆ ಕಬ್ಬಿಣಡ ಕಡಲೆ ಎನ್ನುವ ಮನೋಭಾವ ಬೇಡ. ನಮ್ಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯಿಂದ, ಇದು ಕಷ್ಟದ ಪರೀಕ್ಷೆ ಎನಿಸಬಹುದಷ್ಟೆ. ಅಂತೆಯೇ ಇಂಗ್ಲಿಷ್‌ ಕಲಿತಿರಬೇಕು ಎನ್ನುವುದು ಕೂಡ ತಪ್ಪು ಕಲ್ಪನೆ. ಅವರವರ ಮಾತೃಭಾಷೆಯಲ್ಲಿಯೇ ಈ ಪರೀಕ್ಷೆ ಎದುರಿಸಬಹುದು’ ಎಂದು ತಿಳಿಸಿದರು.

ಸಾಲ ಮರುಪಾವತಿಸಿ: ‘ಶಿಕ್ಷಣ ದೊಡ್ಡ ಶಕ್ತಿ. ಅದು ನಮಗೆ ಸಮಾಜ ಕೊಟ್ಟಿರುವ ಸಾಲ. ಅದನ್ನು ಸೇವೆ ಮೂಲಕ ಮರುಪಾವತಿಸಬೇಕು. ಶೇ 100ರಷ್ಟು ಪರಿಶ್ರಮ ಹಾಕಿದರೆ, ಪ್ರೀತಿಯಿಂದ ಮತ್ತು ಮನಸಾರೆ ಕೆಲಸ ಮಾಡಿದರೆ ಅದು ನಮ್ಮ ಜೀವನ ವಿಧಾನವೇ ಆಗಿ ಹೋಗುತ್ತದೆ. ಯಾವುದೂ ಕಷ್ಟ ಎನಿಸುವುದಿಲ್ಲ’ ಎಂದ ಅವರು, ‘ದುಡಿಮೆಯ ನಂಬಿ ಬದುಕು, ಅದರಲಿ ದೇವರ ಹುಡುಕು, ನಮ್ಮ ಬಾಳಲಿ ಬರುವುದು ಬೆಳಕು’ ಎಂದು ಮತ್ತೆ ವರನಟ ರಾಜ್‌ ಕುಮಾರ್‌ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರದ ಹಾಡನ್ನು ನೆನೆದರು.

‘ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ನನ್ನನ್ನು ಸನ್ಮಾನಿಸಲಾಗಿತ್ತು. ಆಗ ದೊರೆತ ಪ್ರೇರಣೆಯಿಂದ ಸಾಧಿಸಲು ಸಾಧ್ಯವಾಯಿತು’ ಎಂದರು.

‘ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಿಗಿಂತ ಸ್ಫೂರ್ತಿದಾಯಕ ವ್ಯಕ್ತಿತ್ವ ಇನ್ನೊಂದಿಲ್ಲ. ಅಂಥ ಕಷ್ಟದ ಸನ್ನಿವೇಶಗಳನ್ನು ಅವರು ಎದುರಿಸಿ ಮೇಲೆ ಬಂದಿದ್ದಾರೆ. ನನ್ನ ಪೋಷಕರು ಶಿಕ್ಷಕರಾಗಿದ್ದರು. ನನಗೆ ದಾರಿ ತೋರಿದರು. ಹೀಗಾಗಿ ನನ್ನದು ದೊಡ್ಡ ಸಾಧನೆಯೇನಲ್ಲ. ದೂರಶಿಕ್ಷಣದ ಮೂಲಕವೇ ಓದಿ ಪದವಿ ಪಡೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅವರ ಮಾತೃಭಾಷೆ ತೆಲುಗಿನಲ್ಲಿಯೇ ಬರೆದು 3ನೇ ರ‍್ಯಾಂಕ್‌ ಪಡೆದ ಹೈದರಾಬಾದ್‌ನ ಅಭ್ಯರ್ಥಿ, ನಮ್ಮವರೇ ಆದ ಅಂಧ ಪ್ರತಿಭೆ ಕೆಂಪಹೊನ್ನಯ್ಯ ನಿಜವಾದ ಸಾಧಕರು’ ಎಂದು ಶ್ಲಾಘಿಸಿದರು.

ಮಹಿಳಾ ಶಿಕ್ಷಣ ಹೆಚ್ಚಲಿ: ‘ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದವರಲ್ಲಿ ಬಾಲಕಿಯರೇ ಹೆಚ್ಚು ಎಂದು ಪತ್ರಿಕೆಗಳಲ್ಲಿ ಓದುತ್ತೇವೆ. ಆದರೆ, ಉನ್ನತ ಶಿಕ್ಷಣದ ಹಂತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಯುಪಿಎಸ್‌ಸಿಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 20ರಷ್ಟು ಮಾತ್ರವೇ ಇದೆ. ಹೀಗಾಗಿ, ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಪೋಷಕರು ಮಾಡಬೇಕು. ಮಹಿಳೆಯರು ಸಾಧಿಸುವುದಕ್ಕೆ ಪೂರಕ ವಾತಾವರಣವಿದೆ. ಇದನ್ನು ಬಳಸಿ ಕೊಳ್ಳಬೇಕು. ದೊಡ್ಡ ಗುರಿ ಇಟ್ಟುಕೊಳ್ಳ ಬೇಕು’ ಎಂದು ಸಲಹೆ ನೀಡಿದರು.

‘ಯಾವುದೇ ಕಲಸಕ್ಕೆ ಸೇರಿದಾಗ ಬುನಾದಿ ತರಬೇತಿ ನೀಡುತ್ತಾರೆ. ಬೆಳಗಾವಿ ಜಿಲ್ಲಾಡಳಿತವು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬುನಾದಿ ತರಬೇತಿ ಯಂತೆಯೇ ಆಯಿತು’ ಎಂದು ಅನಿಸಿಕೆ ಹಂಚಿಕೊಂಡರು.

ಎಂ.ಇ.ಎಸ್. ನವರು ವಿಘ್ನ ಸಂತೋಷಿಗಳು–  ಟೀಕೆ

ಬೆಳಗಾವಿ:
‘ಎಂ.ಇ.ಎಸ್‌ನವರು ವಿಘ್ನ ಸಂತೋಷಿಗಳು’ ಎಂದು ಗದಗದ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಇಲ್ಲಿ ಟೀಕಿಸಿದರು.

ಇಲ್ಲಿನ ಸುವರ್ಣಸೌಧ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ‘ಜಾಣ–ಜಾಣೆಯರಿಗೆ ಅಭಿನಂದನೆ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು (ಎಂ.ಇ.ಎಸ್‌) ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿಗಳು ಗಟ್ಟಿಯಾಗಿದ್ದರೆ ಎಂ.ಇ.ಎಸ್‌ ಆಟ ನಡೆಯುವುದಿಲ್ಲ ಎನ್ನುವುದಕ್ಕೆ ಜಿಲ್ಲಾಧಿಕಾರಿ ಎನ್‌. ಜಯರಾಮ್‌ ನಿದರ್ಶನವಾಗಿದ್ದಾರೆ. ಅವರು ಆಗಾಗ ಪಾಠ ಕಲಿಸುತ್ತಿದ್ದು, ಒಳ್ಳೆಯವರಿಗೆ ಒಳ್ಳೆಯವರಾಗಿ ಕೆಟ್ಟವರಿಗೆ ಕೆಟ್ಟವರಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮ ನೆಲದ ಅನ್ನ ತಿಂದು ನಾಡಿಗೆ ಧಿಕ್ಕಾರ ಕೂಗುವವರ ಹಾಗೂ ರಾಜ್ಯೋತ್ಸವ ಬಹಿಷ್ಕರಿಸಿ ಕರಾಳ ದಿನಾಚರಣೆಯಲ್ಲಿ ಭಾಗ ವಹಿಸುವ ಜನಪ್ರತಿನಿಧಿಗಳ ಸದಸ್ಯತ್ವ ರದ್ದುಪಡಿಸಲು ಸರ್ಕಾರ ಮುಂದಾ ಗಿರುವುದು ಸರಿಯಾಗಿದೆ’ ಎಂದರು.

‘ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು (ಜ.3) ಶಿಕ್ಷಕರ ದಿನವನ್ನಾಗಿ ಆಚರಿಸಬೇಕು’ ಎಂದು ಅವರು ಸರ್ಕಾರಕ್ಕೆ ಆಗ್ರಹಿಸಿದರು.

*

ನಾನು ಮಾಡಿರುವ ಸಾಧನೆ ಅತ್ಯಲ್ಪವೇ. ಬಡತನ ಮೆಟ್ಟಿ ನಿಂತು ಮೇಲೆ ಬಂದವರದೇ ನಿಜವಾದ ಸಾಧನೆ. ಅಂಥವರು ನನಗೂ ಸ್ಫೂರ್ತಿ.

-ಕೆ.ಆರ್‌. ನಂದಿನಿ,

ಯುಪಿಎಸ್‌ಸಿ  ಪರೀಕ್ಷೆ  ಟಾಪರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry