‘ಸಿಲಿಕಾನ್ ಸಿಟಿ’ಯ ತಳಮಳಗಳು

7

‘ಸಿಲಿಕಾನ್ ಸಿಟಿ’ಯ ತಳಮಳಗಳು

Published:
Updated:
‘ಸಿಲಿಕಾನ್ ಸಿಟಿ’ಯ ತಳಮಳಗಳು

‘ನಮಸ್ತೆ ಮೇಡಂ’ ಚಿತ್ರದ ಬಳಿಕ ನಟ ಶ್ರೀನಗರ ಕಿಟ್ಟಿ ಅವರು ಮೂರ್ನಾಲ್ಕು ಸಿನಿಮಾಗಳಲ್ಲಿ ಅತಿಥಿಯಾಗಿ ಬಂದು ಹೋಗಿದ್ದರು. ಅವರು ನಾಯಕನಟರಾಗಿ ಅಭಿನಯಿಸಿದ ಚಿತ್ರಗಳು ತೆರೆಕಂಡಿರಲಿಲ್ಲ.

ಈಗ ಮೂರು ವರ್ಷದ ನಂತರ ನಾಯಕನಟರಾಗಿ ‘ಸಿಲಿಕಾನ್‌ ಸಿಟಿ’ಯ ಮೂಲಕ ಜನರಿಗೆ ರೊಮ್ಯಾಂಟಿಕ್, ಆ್ಯಕ್ಷನ್ ಹಾಗೂ ಥ್ರಿಲ್ಲರ್ ಕಥೆ ಹೇಳಲು ಬರುತ್ತಿದ್ದಾರೆ.

ಕಳೆದ ವರ್ಷ ತಮಿಳಿನಲ್ಲಿ ‘ಮೆಟ್ರೊ’ ಸಿನಿಮಾ ತೆರೆಕಂಡು ಸೂಪರ್‌ ಹಿಟ್‌ ಆಗಿತ್ತು. ಇದರ ಕನ್ನಡ ಅವತರಣಿಕೆಯೇ ‘ಸಿಲಿಕಾನ್ ಸಿಟಿ’.

ಪ್ರಸ್ತುತ ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆದಿದೆ. ಜತೆಗೆ, ಬೆಳೆಯುತ್ತಲೂ ಇದೆ. ಉದ್ಯಾನ ನಗರಿ, ಸಿಲಿಕಾನ್‌ ಸಿಟಿ, ಮೆಟ್ರೊ ನಗರಿ... ಎಂಬ ಪರ್ಯಾಯ ಹೆಸರುಗಳನ್ನು ಮುಡಿಗೆ ಅಂಟಿಸಿಕೊಂಡಿದೆ.

ರಾಜಧಾನಿ ಬೆಳೆದಂತೆಲ್ಲಾ ಕೌಟುಂಬಿಕ ಮೌಲ್ಯಗಳು ನೇಪಥ್ಯಕ್ಕೆ ಸರಿಯುತ್ತಿವೆ. ಬಾಂಧವ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಬದಲಾವಣೆಯ ಅಬ್ಬರದಲ್ಲಿ ಮಾನವೀಯ ಮೌಲ್ಯಗಳು ಎಲ್ಲಿ ಕಳೆದು ಹೋಗುತ್ತಿವೆ? ಇದನ್ನು ಬಗೆಹರಿಸುವುದು ಹೇಗೆ? ಪೋಷಕರ ನಿರೀಕ್ಷೆಯನ್ನು ಮಗ ತಲುಪದೇ ಇದ್ದಾಗ ಸಂಭವಿಸುವ ಅನಾಹುತಗಳೇನು? ಎಂಬ ಅಂಶಗಳೇ ‘ಸಿಲಿಕಾನ್‌ ಸಿಟಿ’ ಚಿತ್ರದ ಕಥೆಯ ಸಾರ.

* ‘ಸಿಲಿಕಾನ್‌ ಸಿಟಿ’ಯ ವಿಶೇಷತೆ ಏನು?

ನಮ್ಮದು ಸುಖೀ ಕುಟುಂಬದ ಪರಿಕಲ್ಪನೆ. ಗಂಡ, ಹೆಂಡತಿ, ಇಬ್ಬರು ಮಕ್ಕಳು ಇದ್ದರೆ ಬದುಕು ಸುಂದರವೆಂದು ಭಾವಿಸುತ್ತೇವೆ. ಇಂತಹ ಕುಟುಂಬ ಐಷಾರಾಮಿ ಜೀವನಕ್ಕೆ ಆಸೆಪಟ್ಟರೆ ಪ್ರಲೋಭನೆಗೆ ಒಳಗಾಗ­ಬೇಕಾಗುತ್ತದೆ. ಆಗ ಮನೆಯವರು ತೊಂದರೆಗೆ ಸಿಲುಕು­ತ್ತಾರೆ. ತಂದೆ, ತಾಯಿ ಕೂಡ ಸಂಕಷ್ಟದ ಸುಳಿಗೆ ಸಿಲುಕುವುದು ಸಹಜ. ಇದರಿಂದ ಪೋಷಕರು ಅನುಭವಿಸುವ ತಲ್ಲಣ­ಗಳು, ಸಮಾಜದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ, ಅದರಿಂದ ಪಾರಾಗುವ ಬಗೆಯನ್ನು ಸಿನಿಮಾ ಕಟ್ಟಿಕೊಡುತ್ತದೆ.

* ‘ಮೆಟ್ರೊ’ ಚಿತ್ರದ ಕಥೆಯನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆಯೇ?

ತಮಿಳು ಚಿತ್ರ ‘ಮೆಟ್ರೊ’ದಲ್ಲಿ ಕ್ರೈಂ ವಿಜೃಂಭಿಸಿದೆ. ಇದನ್ನು ಯಥಾವತ್ತಾಗಿ ಕನ್ನಡಕ್ಕೆ ರಿಮೇಕ್‌ ಮಾಡಿಲ್ಲ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಮಾರ್ಪಾಡು ಮಾಡಿಕೊಳ್ಳಲಾಗಿದೆ. ಪ್ರೀತಿಯ ಅಂಶಗಳು ಈ ಸಿನಿಮಾದಲ್ಲಿ ಹದವಾಗಿ ಬೆರೆತಿವೆ. ತಂದೆ, ತಾಯಿಯ ವಾತ್ಸಲ್ಯವೂ ಅಡಕವಾಗಿದೆ. ತಮಿಳಿನ ಕಚ್ಚಾ ಕಥೆಗೆ ಪಾಲಿಶ್ ಮಾಡಿದ್ದೇವೆ.

* ಈ ಪಾತ್ರಕ್ಕಾಗಿ  ನಡೆಸಿದ ತಯಾರಿ ಹೇಗಿತ್ತು?

ಈ ಚಿತ್ರದಲ್ಲಿ ನನ್ನದು ಸಾಮಾನ್ಯ ಮನುಷ್ಯನ ಪಾತ್ರ. ಹೆಚ್ಚಿನ ಸಿದ್ಧತೆಯ ಅಗತ್ಯವಿರಲಿಲ್ಲ. ಇದು ಮಧ್ಯಮ ವರ್ಗದ ಕುಟುಂಬವೊಂದರ ಕಥೆ. ಮೃದುವಾದ ಪಾತ್ರ. ಹಾಗಾಗಿ, ಹೆಚ್ಚಿನ ಕಸರತ್ತು ಮಾಡಿಲ್ಲ. ಆರಾಮವಾಗಿದ್ದ ವ್ಯಕ್ತಿಯೊಬ್ಬನ ಜೀವನದಲ್ಲಿ ದೊಡ್ಡ ಆಘಾತ ಸಂಭವಿಸುತ್ತದೆ. ಆಗ ಅವನು ಸಾಕಷ್ಟು ಒತ್ತಡಕ್ಕೆ ಸಿಲುಕುತ್ತಾನೆ. ಕೊನೆಗೆ, ಅಲ್ಲಿಂದ ಹೊರಬರುತ್ತಾನೆ. ಪ್ರತೀಕಾರವನ್ನು ಹೇಗೆ ತೀರಿಸಿಕೊಳ್ಳುತ್ತಾನೆ ಎಂಬ ‘ಮೈಂಡ್‌ ಗೇಮ್‌’ ಸಿನಿಮಾದಲ್ಲಿದೆ.

* ಯುವಜನರಿಗೆ ಸಿನಿಮಾದಲ್ಲಿ ಸಂದೇಶಗಳಿವೆಯೇ?

ಯುವಜನರು ಐಷಾರಾಮಿ ಜೀವನಕ್ಕೆ ಜೋತು ಬೀಳುವುದು ಸಹಜ. ಇದಕ್ಕಾಗಿ ಅಡ್ಡದಾರಿ ಹಿಡಿಯುತ್ತಾರೆ. ಯುವಜನರು ಏನು ಮಾಡಬಾರದು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದೇವೆ. ಎಲ್ಲರ ಮನಸ್ಸಿಗೆ ಹತ್ತಿರವಾಗುವಂತೆ ಚಿತ್ರ ನಿರ್ಮಾಣ ಆಗಿದೆ.

* ದೀರ್ಘಕಾಲದ ವಿರಾಮಕ್ಕೆ ಕಾರಣವೇನು?

ನಾನು ಅಭಿನಯಿಸಿದ ಮೂರ್ನಾಲ್ಕು ಸಿನಿಮಾಗಳು ತೆರೆಗೆ ಬಂದಿಲ್ಲ. ಕೆಲವು ಚಿತ್ರಗಳ ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಕೇಂದ್ರ ಸರ್ಕಾರದ ಗರಿಷ್ಠ ಮುಖಬೆಲೆ ನೋಟು ರದ್ದತಿ ಆದೇಶದ ಬಿಸಿಯು ಸಿನಿಮಾಕ್ಕೆ ತಟ್ಟಿತು. ‘ಅನಾರ್ಕಲಿ’ ಸಿನಿಮಾದ ಚಿತ್ರೀಕರಣ ಬಾಕಿ ಉಳಿದಿದೆ. ಸಾಧುಕೋಕಿಲ ಅವರು  ಶೀಘ್ರವೇ ಬಾಕಿ ಉಳಿದಿರುವ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ.

* ನಿಮ್ಮ ಮುಂದಿನ ಸಿನಿಮಾಗಳು ಯಾವುವು?

‘ಮೋಡ ಕವಿದ ವಾತಾವರಣ’ ಸಿನಿಮಾದ ಸ್ಕ್ರಿಪ್ಟ್‌ ಕೆಲಸ ನಡೆಯುತ್ತಿದೆ. ಆಗಸ್ಟ್‌ನಲ್ಲಿ ಈ ಚಿತ್ರ ಸೆಟ್ಟೇರಲಿದೆ. ಇದಕ್ಕಾಗಿ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry