ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳುವ ಶಾಲೆ, ಕ್ಲಸ್ಟರ್‌ ಕೇಂದ್ರ ಗೋದಾಮು!

ನಗರದ ಕೇಂದ್ರಸ್ಥಾನದಲ್ಲಿರುವ ‘ಬುನಾದಿ ಶಾಲೆ’ಯ ಅತಂತ್ರ ಸ್ಥಿತಿ, ಮುಚ್ಚಿದ ವಿಜ್ಞಾನ ಪ್ರಯೋಗಾಲಯ
Last Updated 15 ಜೂನ್ 2017, 9:51 IST
ಅಕ್ಷರ ಗಾತ್ರ

ಬಳ್ಳಾರಿ: ಐದೂವರೆ ದಶಕಗಳ ಹಿಂದೆ (1965) ಸ್ಥಾಪನೆಯಾದ ಈ ಸರ್ಕಾರಿ ಪ್ರಾಥಮಿಕ ಶಾಲೆಯು ನಗರದಲ್ಲಿ ಸಾರ್ವಜನಿಕ ಶಿಕ್ಷಣಕ್ಕೆ ಬುನಾದಿಯಾದ ಶಾಲೆಗಳ ಪೈಕಿ ಒಂದು. ಈಗ ಅದರ ಬುನಾದಿಯೇ ಅಲುಗಾಡುತ್ತಿದೆ. ಗೋಡೆ ಗಳು ಕುಸಿಯುವಂತಿವೆ. ಅಲ್ಲಿಯೇ 1ರಿಂದ 4ನೇ ತರಗತಿಗಳು ನಡೆಯುತ್ತಿವೆ.

ಈ ಶಾಲೆ ಇರುವುದು ನಗರದ ಕನಕ ದುರ್ಗಮ್ಮ ಗುಡಿ ವೃತ್ತದಲ್ಲಿ. ಇಲ್ಲಿಯೇ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಇದೆ. ಅಂಗನವಾಡಿ ಕೇಂದ್ರವಿದೆ. ಕ್ಲಸ್ಟರ್‌ ಸಂಪನ್ಮೂಲ ಕೇಂದ್ರವೂ ಇದೆ.

ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯನ್ನು ಹೊರತುಪಡಿಸಿದರೆ ಉಳಿದವು ಇರಬೇಕಾದ ರೀತಿಯಲ್ಲಿ ಇಲ್ಲ. ಮಾದರಿ ಶೈಕ್ಷಣಿಕ ಸಂಕೀರ್ಣವಾಗ ಬೇಕಾಗಿದ್ದ ಈ ಸ್ಥಳವು ಕಳಪೆ ನಿರ್ವಹಣೆಯಿಂದ ಮಂಕಾಗಿ ಕಾಣುತ್ತದೆ.

ಶಿಥಿಲ ಕೊಠಡಿಗಳು: ಕಿರಿಯ ಪ್ರಾಥಮಿಕ ಕೊಠಡಿಗಳಿರುವ ಕಟ್ಟಡ ಬಳಕೆಗೆ ಯೋಗ್ಯವಲ್ಲ ಎಂದು ಹಿಂದಿನ ವರ್ಷವೇ ಮುಖ್ಯಶಿಕ್ಷಕರು ಶಿಕ್ಷಣ ಇಲಾಖೆಗೆ ಮತ್ತು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ. ಸ್ಥಳ ಪರಿಶೀಲನೆಯೂ ನಡೆದಿದೆ.

‘ಕಟ್ಟಡ ಕೆಡವಲಾಗುವುದು ಎಂದು ಎಂಜಿನಿಯರ್‌ಗಳು ಕೆಲವು ತಿಂಗಳ ಹಿಂದೆ ಬಂದು ತಿಳಿಸಿ ಹೋಗಿದ್ದಾರೆ. ಇದುವರೆಗೂ ಕೆಡವಿಲ್ಲ. ಅಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ’ ಎಂದು ಮುಖ್ಯಶಿಕ್ಷಕಿ ಕೆ.ರತ್ನಮ್ಮ ತಿಳಿಸಿದರು.

ಶಾಲೆಗೆ ಬುಧವಾರ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕಟ್ಟಡದ ಹಿಂಭಾಗದಲ್ಲೇ ಪ್ರೌಢಶಾಲೆಯ ಶೌಚಾಲಯಗಳಿಂದ ದುರ್ನಾತ ಬರುತ್ತದೆ. ಹೀಗಾಗಿ ವಿಜ್ಞಾನ ಪ್ರಯೋಗಾಲಯವನ್ನು ಮುಚ್ಚಲಾಗಿದೆ’ ಎಂದರು.

ದುರ್ವಾಸನೆ: ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದ ಪಕ್ಕದಲ್ಲೇ ಇರುವ ಅಂಗನವಾಡಿ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಇಲ್ಲ. ಸ್ವಚ್ಛ ಗಾಳಿ–ಬೆಳಕು ಇಲ್ಲ. ಶೌಚಾಲಯದ ದುರ್ವಾಸನೆ ನಡುವೆಯೇ ಮಕ್ಕಳು ದಿನದೂಡುತ್ತಿದ್ದಾರೆ.

‘ಸೊಳ್ಳೆಗಳು ಮಕ್ಕಳನ್ನು ಕಚ್ಚುವುದರಿಂದ ಕಿಟಕಿಗಳನ್ನು ಬಂದ್‌ ಮಾಡಲಾಗಿದೆ’ ಎಂದು ಕಾರ್ಯಕರ್ತೆಯು ತಿಳಿಸಿದರು. ಒಳಗೆ ಬೆಳಕಿಲ್ಲದ ಕಾರಣ, ಅಂಗನ ವಾಡಿಗಳ ಮೇಲ್ವಿಚಾರಕಿ ಮಹಾಲಕ್ಷ್ಮಿ ಅವರು ಅಂಗನವಾಡಿಯ ಹೊಸ್ತಿಲೊಳಗೆ ಕುಳಿತು ಚಟುವಟಿಕೆಗಳ ವರದಿಯನ್ನು ಸಿದ್ಧಪಡಿಸುತ್ತಿದ್ದರು.

ಗೋದಾಮಾದ ಕ್ಲಸ್ಟರ್‌ ಕೇಂದ್ರ!: ಕಪ್ಪಗಲ್ಲು ರಸ್ತೆ ಕ್ಲಸ್ಟರ್‌ ಕೇಂದ್ರವನ್ನು ಶಾಲೆ ಯ ಶೌಚಾಲಯ ನಿರ್ಮಾಣ ಸಾಮಗ್ರಿಗಳ ಗೋದಾಮನ್ನಾಗಿ ಪರಿವರ್ತಿಸಲಾಗಿದೆ. ಅದಕ್ಕೂ ಮುನ್ನ ಅಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬಿಸಿಯೂಟ ಬಡಿಸಲಾಗುತ್ತಿತ್ತು. ಈ ಚಟುವಟಿಕೆ ಬಿಟ್ಟರೆ, ಕ್ಲಸ್ಟರ್‌ ಮಟ್ಟದ ಯಾವುದೇ ಚಟುವಟಿಕೆಯೂ ಇಲ್ಲಿ ನಡೆಯುತ್ತಿಲ್ಲ ಎಂದು ಶಿಕ್ಷಕರು ತಿಳಿಸಿದರು.

ಎರಡು ತಿಂಗಳಾದರೂ ಪೂರ್ಣವಾಗಿಲ್ಲ
ಕಿರಿಯ ಪ್ರಾಥಮಿಕ ಶಾಲೆಗೆಂದು ಶೌಚಾಲಯ ನಿರ್ಮಾಣ ಕಾರ್ಯ ಎರಡು ತಿಂಗಳ ಹಿಂದೆ ಶಾಲೆಯ ಮೂಲೆಯಲ್ಲಿ ಆರಂಭವಾಗಿದ್ದು ಇದುವರೆಗೂ ಪೂರ್ಣಗೊಂಡಿಲ್ಲ. ‘ಗುತ್ತಿಗೆದಾರರು ಕೆಲವು ದಿನಗಳ ಹಿಂದೆ ಮರಳನ್ನು ಸುರಿದು ಹೋಗಿದ್ದಾರೆ. ಮತ್ತೆ ಯಾವಾಗ ಬರುವರೋ ತಿಳಿದಿಲ್ಲ’ ಎಂದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ರತ್ನಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

2007ರಲ್ಲಿ ಪ್ರೌಢಶಾಲೆ ಆರಂಭ ವಾದ ಬಳಿಕ, ಬಾಲಕ–ಬಾಲಕಿಯರ ನಾಲ್ಕು ಶೌಚಾಲಯಗಳನ್ನು ಅಕ್ಕ–ಪಕ್ಕ ನಿರ್ಮಿಸಲಾಗಿದೆ! ‘ಬಾಲಕರು ಹಾಗೂ ಬಾಲಕಿಯ ರನ್ನು ಒಂದೇ ಕಡೆ ಶೌಚಾಲಯಗಳಿಗೆ ಕಳಿಸಬಾ ರದು ಎಂದು ನಾಲ್ಕು ಶೌಚಾಲಯ ಗಳನ್ನು ಬಾಲಕಿಯರಿಗೇ ಮೀಸಲಿಡ ಲಾಗಿದೆ. ಬಾಲಕರು ಪ್ರಾಥಮಿಕ ಶಾಲೆಯ ಶೌಚಾಲಯ ವನ್ನು ಬಳಸು ತ್ತಿದ್ದಾರೆ’ ಎಂದು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಜಿ.ಎಚ್‌.ಚಿಟ್ಟಿ ತಿಳಿಸಿದರು.

ದಾಖಲಾತಿ ಹೆಚ್ಚು: ಕೊಠಡಿ ಕಡಿಮೆ!
ಸರ್ಕಾರಿ ಪ್ರೌಢಶಾಲೆಯ ಪರಿಸ್ಥಿತಿ ಭಿನ್ನವಾಗಿ ಕಂಡುಬರುತ್ತದೆ. ಇರುವ ಏಳು ಕೊಠಡಿಗಳ ಪೈಕಿ ಮೂರನ್ನು ತರಗತಿ ಗಳಿಗೆ ಬಳಸಲಾಗುತ್ತಿದೆ. ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ನಿರೀಕ್ಷೆ ಇದ್ದರೂ ಕೊಠಡಿಗಳ ಕೊರತೆಯ ಸಮಸ್ಯೆ ಯು ಶಿಕ್ಷಕ ರನ್ನು ಹೆದರಿಸುತ್ತಿದೆ! ಮಳೆ ನೀರು ನಿಲ್ಲುವುದು ಹಲವು ವರ್ಷಗಳಿಂದ ಇರುವ ಸಮಸ್ಯೆ. ಅದನ್ನು ಪರಿಹರಿಸಬೇಕು ಎಂದು ಕೋರಿ ಸಲ್ಲಿಸಿದ ಮನವಿಗಳಿಂದ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕಿ.

'ತೃಪ್ತಿದಾಯಕವಾಗಿಲ್ಲ'
ಪ್ರಾಥಮಿಕ ಶಾಲೆಯ ವಾತಾವರಣವು ತೃಪ್ತಿದಾಯಕವಾಗಿಲ್ಲ. ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆಯಾಗಿದೆ. ಹಳೇ ಕಟ್ಟಡವನ್ನು ಬಳಸದೇ ಇರಲು ಸೂಚಿಸಲಾಗಿತ್ತು. ಪೂರ್ವ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
–ಎ.ಶ್ರೀಧರನ್‌, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT