ಒನ್ಸ್ ಮೋರ್ ಕೌರವನ ಕಲರವ

7

ಒನ್ಸ್ ಮೋರ್ ಕೌರವನ ಕಲರವ

Published:
Updated:
ಒನ್ಸ್ ಮೋರ್ ಕೌರವನ ಕಲರವ

‘ಗನ್ ಮೇಲೆ ಪಾರಿವಾಳ ಕೂರಿಸುವುದು ಅತಿವಿರಳ. ಅದೇ ಈ ಚಿತ್ರದ ವಿಶೇಷ. ಪಕ್ಕಾ ಕಮರ್ಷಿಯಲ್‌ ಸಿನಿಮಾವನ್ನು ಹಾಸ್ಯಮಯವಾಗಿ ಹೇಳಿದ್ದೇನೆ. ಇದು ಹಳೆಯ ‘ಕೌರವ’ನನ್ನು ನೆನಪಿಸುವುದಿಲ್ಲ’ ಎನ್ನುತ್ತಾ ಮಾತಿಗಿಳಿದರು ನಿರ್ದೇಶಕ ಎಸ್‌. ಮಹೇಂದರ್.

‘ಒನ್ಸ್ ಮೋರ್‌ ಕೌರವ’ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಖುಷಿ ಅವರಲ್ಲಿ ಎದ್ದುಕಾಣುತ್ತಿತ್ತು.

ಚಿತ್ರ ಸಂಗೀತಮಯವಾಗಿದೆ. ಏಳು ಹಾಡುಗಳಿವೆ. ಸದ್ಯಕ್ಕೆ ಆರು ಹಾಡುಗಳು ಮಾತ್ರವೇ ಧ್ವನಿಸುರಳಿಯಲ್ಲಿವೆ. ಒಂದು ಹಾಡು ಚಿತ್ರದೊಂದಿಗೆ ಬೆಸೆದಿದೆ. ಹಾಗಾಗಿ, ಅದನ್ನು ಕೇಳಿಸುತ್ತಿಲ್ಲ ಎಂದ ಅವರು ಗುಟ್ಟು ಬಿಟ್ಟುಕೊಡಲಿಲ್ಲ.

‘ಟೈರ್‌, ಪಂಚ್ಚರ್‌, ಕುರ್ಚಿಯಂತಹ ಕ್ಲೀಷೆಯಾದ ಪದ ಬಳಸಿ ಹಾಡು ರಚಿಸುವ ಅವಕಾಶ ನನಗೆ ಒದಗಿಬಂದಿಲ್ಲ. ಭಾವನೆಗಳನ್ನು ಪೋಣಿಸುವುದಷ್ಟೇ ನನ್ನ ಕೆಲಸ. ಸೊಗಡಿನ ಪದಗಳು ಈ ಹಾಡುಗಳಲ್ಲಿ ಮಿಳಿತವಾಗಿವೆ’ ಎಂದರು ಕೆ. ಕಲ್ಯಾಣ್‌.

‘ವಿಶ್ವಾಸ ಇದ್ದವರು ನಿರ್ದೇಶಕರಾಗುತ್ತಾರೆ. ಆತ್ಮವಿಶ್ವಾಸ ಇದ್ದವರು ನಿರ್ಮಾಪಕರಾಗುತ್ತಾರೆ. ಹಾಡುಗಳಲ್ಲಿ ಒಂದೂ ಪದವನ್ನು ತೆಗೆದುಹಾಕಿಲ್ಲ’ ಎಂದ ಅವರ ಮಾತಿನಲ್ಲಿ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎನ್ನುವ ವಿಶ್ವಾಸವಿತ್ತು.

(ನರೇಶ್‌ಗೌಡ, ಎಸ್‌. ಮಹೇಂದರ್‌, ಶ್ರೀಧರ್‌ ವಿ. ಸಂಭ್ರಮ್‌)

‘ಮಹಾಕಾಳಿ’ ಸಿನಿಮಾದಲ್ಲಿ ಅಭಿನಯಿಸಿದ್ದ ನರೇಶ್‌ಗೌಡ ಈ ಸಿನಿಮಾದ ನಾಯಕ.  ಅವರೇ ಚಿತ್ರದ ನಿರ್ಮಾಪಕ. ಚಿತ್ರೀಕರಣದ ಆರಂಭದಿಂದಲೂ ಇದ್ದ ಆತಂಕ ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿಯೂ ಕಾಣುತ್ತಿತ್ತು.

ಹಳೆಯ ಕೌರವನ ಗೆಟಪ್‌ನಲ್ಲಿಯೇ ಅವರು ಕಾಣುತ್ತಿದ್ದರು. ಇದಕ್ಕೆ ಕಾರಣವನ್ನೂ ನೀಡಿದರು. ‘ಒಮ್ಮೆ ಮೀಸೆ ತೆಗೆದು ಹೊರಗೆ ಹೋಗಿದ್ದೆ. ಯಾರೊಬ್ಬರೂ ಗುರುತಿಸಲಿಲ್ಲ. ಮೀಸೆ ಬಿಟ್ಟ ನಂತರ ಮತ್ತೆ ಗುರುತಿಸಿದರು’ ಎಂದಾಗ ಮೀಸೆಯ ಹಿಂದಿನ ಗುಟ್ಟು ಬಯಲಾಯಿತು.

‘ಸಿನಿಮಾ ಮಾಡೋಣವೆಂದು ಇಬ್ಬರು ಕೈಕೊಟ್ಟರು. ಕೊನೆಗೆ, ಮಹೇಂದರ್‌ ಅವರೊಂದಿಗೆ ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎಂದರು ನರೇಶ್‌ಗೌಡ.

‘ಚಿತ್ರದಲ್ಲಿ ನನ್ನದು ಪೊಲೀಸ್‌ ಅಧಿಕಾರಿ ಪಾತ್ರ. ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಬಿಸಿಯೂ ನಮ್ಮ ಚಿತ್ರಕ್ಕೆ ತಟ್ಟಿತ್ತು. ಒಂದೆಡೆ ಅಭಿನಯ; ಮತ್ತೊಂದೆಡೆ ಹಣ ಹೊಂದಿಸುವ ಸಂದಿಗ್ಧತೆಗೆ ಸಿಲುಕಿದ್ದೆ. ಆ ವೇಳೆ ನಿರ್ದೇಶಕರೊಂದಿಗೆ ಜಗಳವಾಡಿದ್ದೂ ಇದೆ’ ಎಂದು ತಮ್ಮ ಕೋಪದ ಹಿಂದಿನ ಸತ್ಯ ಬಿಚ್ಚಿಟ್ಟರು.

‘ಹಣಕ್ಕಾಗಿ ಈ ಸಿನಿಮಾ ಮಾಡುತ್ತಿಲ್ಲ. ಜನರಿಗೆ ಒಳ್ಳೆಯ ಚಿತ್ರ ನೀಡುತ್ತಿದ್ದೇನೆ ಎಂಬ ಖುಷಿ ಇದೆ. ಚಿತ್ರ ಗೆಲ್ಲಲಿ ಅಥವಾ ಸೋತರೂ ಚಿಂತೆಯಿಲ್ಲ. ನಾವೆಲ್ಲ ಒಟ್ಟಾಗಿ ಇರೋಣ’ ಎಂದು ಹೇಳುವುದನ್ನು ಮರೆಯಲಿಲ್ಲ.

ನಾಯಕಿ ಆರ್‌. ಅನೂಷಾ, ‘ನನಗೆ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದು ಖುಷಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ನಟ ದರ್ಶನ್‌ ಧ್ವನಿಸುರಳಿ ಬಿಡುಗಡೆ ಮಾಡಿದರು. ಮೈಸೂರು, ಚಾಮರಾಜನಗರದ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರ ಮುಂದಿನ ತಿಂಗಳು ತೆರೆಗೆ ಬರಲು ಸಿದ್ಧವಾಗಿದೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನೀಡಿದ್ದಾರೆ. ಎ.ವಿ. ಕೃಷ್ಣಕುಮಾರ್‌(ಕೆಕೆ) ಅವರ ಛಾಯಾಗ್ರಹಣವಿದೆ. ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry