ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಪ್ರದೇಶದಲ್ಲೇ ಹೆಚ್ಚು ರೈತರ ಆತ್ಮಹತ್ಯೆ

* ಮೂರು ವರ್ಷಗಳಿಂದ ಬರ * ಖಾಲಿಯಾದ ಕನ್ನಂಬಾಡಿ * ತಮಿಳುನಾಡಿಗೆ ಹರಿದ ನೀರು
Last Updated 15 ಜೂನ್ 2017, 10:05 IST
ಅಕ್ಷರ ಗಾತ್ರ

ಮಂಡ್ಯ: ರೈತರ ಆತ್ಮಹತ್ಯೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಶೇ 60ರಷ್ಟು ನೀರಾವರಿಗೆ ಒಳಪಟ್ಟಿರುವ ಮಂಡ್ಯ, ಮದ್ದೂರು, ಮಳವಳ್ಳಿ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರು ರೈತರಲ್ಲಿ ನಾಲ್ವರು ಮದ್ದೂರು ತಾಲ್ಲೂಕಿಗೆ ಸೇರಿದ್ದಾರೆ. ಮೂರು ವರ್ಷಗಳಿಂದ ಮದ್ದೂರು ತಾಲ್ಲೂಕಿನಲ್ಲಿ 57 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ತಾಲ್ಲೂಕಿನಲ್ಲಿ 36 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಮಳವಳ್ಳಿ ತಾಲ್ಲೂಕಿನಲ್ಲಿ 20 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮದ್ದೂರು ತಾಲ್ಲೂಕಿನಲ್ಲಿ ಕಬ್ಬು, ತೆಂಗು, ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಪಕ್ಕದ ರಾಮನಗರದಲ್ಲಿ ರೇಷ್ಮೆ ಮಾರುಕಟ್ಟೆ ಇರುವುದರಿಂದ ಇಲ್ಲಿಯ ರೈತರು ರೇಷ್ಮೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ತವರು. ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ.

ಕಾವೇರಿ ಹಾಗೂ ಶಿಂಷಾ ನದಿಯಿಂದ ತಾಲ್ಲೂಕು ನೀರಾವರಿಗೆ ಒಳಪಡುತ್ತದೆ. ಇಷ್ಟೆಲ್ಲ ಅನುಕೂಲತೆಗಳಿದ್ದರೂ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಕೆಆರ್‌ಎಸ್‌ನಲ್ಲಿ ನೀರಿಲ್ಲ ಎಂದರೆ ನಾವು ಬೆಳೆ ಬೆಳೆಯಲು ಸಾಧ್ಯವೇ ಇಲ್ಲ. ಮದ್ದೂರು ತಾಲ್ಲೂಕಿನಲ್ಲಿ ಕೊಪ್ಪ ಹಾಗೂ ಆತಗೂರು ಹೋಬಳಿಗಳಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಜಿಲ್ಲೆಯ ಗಡಿಯಾದ ಕಾರಣ ಅಲ್ಲಿಯವರೆಗೆ ವಿ.ಸಿ ನಾಲೆಯ ನೀರು ಹತ್ತುವುದಿಲ್ಲ. ಶಿಂಷಾ ನದಿಯ ನೀರೂ ಅಲ್ಲಿಗೆ ಬರುವುದಿಲ್ಲ. ಎಲ್ಲ ಏತ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಕಳಪೆ ಕಾಮಗಾರಿಯಿಂದ ಪೈಪ್‌ಗಳು ಒಡೆದು ಹೋಗಿವೆ. ಬರಗಾಲದ ಛಾಯೆ ಇಲ್ಲಿರುವಷ್ಟು ಮತ್ತೆಲ್ಲೂ ಇಲ್ಲ’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೋಣಸಾಲೆ ನರಸರಾಜು ಹೇಳಿದರು.

ಮಂಡ್ಯದಲ್ಲಿ 36 ರೈತರ ಸಾವು: ಮೂರು ವರ್ಷಗಳಿಂದ ಕಾಡಿದ ಬರಕ್ಕೆ ಮಂಡ್ಯ ತಾಲ್ಲೂಕಿನಲ್ಲಿ 36 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶವಾದ ಮಂಡ್ಯ ತಾಲ್ಲೂಕಿನಲ್ಲೇ ಇಷ್ಟೊಂದು ರೈತರ ಆತ್ಮಹತ್ಯೆ ನಡೆದಿದೆ.

‘ಮೈಷುಗರ್‌ ಕಾರ್ಖಾನೆ ನಿಂತು ಹೋಗಿದ್ದೇ ಮಂಡ್ಯ ತಾಲ್ಲೂಕಿನ ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣ. ಅಲ್ಲದೆ, ತಾಲ್ಲೂಕು ಆಡಳಿತವು ಬೆಳೆ ವಿಮೆ, ಸಾಲ ಯೋಜನೆಗಳ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ನೀಡಿಲಿಲ್ಲ. ಹೀಗಾಗಿ, ಕೈಸಾಲ ಮಾಡಿಕೊಂಡಿದ್ದ ರೈತರು ಆತ್ಮಹತ್ಯೆ ಹಾದಿ ಹಿಡಿದರು’ ಎಂದು ರೈತ ಸಂಘದ ಮುಖಂಡ ಹನಿಯಂಬಾಡಿ ನಾಗರಾಜ ತಿಳಿಸಿದರು.

144 ರೈತರ ಆತ್ಮಹತ್ಯೆ: ಮೂರು ವರ್ಷಗಳಿಂದ ಮಂಡ್ಯ, ಮದ್ದೂರು, ಮಳ್ಳವಳ್ಳಿ ತಾಲ್ಲೂಕು ಒಳಗೊಂಡ ಉಪವಿಭಾಗದಲ್ಲಿ ಒಟ್ಟು 100 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀರಂಗಪಟ್ಟಣ ಪಾಂಡವಪುರ, ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕುಗಳನ್ನೊಳಗೊಂಡ ಪಾಂಡವ ಪುರ ಉಪವಿಭಾಗದಲ್ಲಿ 44 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಂಡವಪುರ ತಾಲ್ಲೂಕಿನಲ್ಲಿ 11 ರೈತರು, ಮಳೆಯಾಶ್ರಿತ ಪ್ರದೇಶ ವಾಗಿರುವ ನಾಗಮಂಗಲ ತಾಲ್ಲೂಕಿನಲ್ಲಿ 7 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 23 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ನೀರಿನಿಂದ ಹೊರಕ್ಕೆ ಬಿದ್ದು ಒದ್ದಾಡುವ ಮೀನಿನ ಸ್ಥಿತಿ ಜಿಲ್ಲೆಯ ರೈತರಿಗೆ ಬಂದೊದಗಿದೆ. ಕನ್ನಂಬಾಡಿ ಕಟ್ಟೆ ಜಿಲ್ಲೆಯ ಜೀವನಾಡಿ. ಆದರೆ, ಜಲಾಶಯ ಮೂರು ವರ್ಷಗಳಿಂದ ಖಾಲಿಯಾದ ಕಾರಣ ರೈತರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ಕನ್ನಂಬಾಡಿ ಬಿಟ್ಟು ಬೇರೆ ಜಲಮೂಲಗಳನ್ನು ಯೋಚಿಸಿಯೇ ಇಲ್ಲ. ಹೀಗಾಗಿ, ಈ ಸ್ಥಿತಿ ಬಂದಿದೆ. ಸರ್ಕಾರ ಶೇ 60ರಷ್ಟು ನೀರನ್ನು ತಮಿಳುನಾಡಿಗೆ ಹರಿಸಿದೆ. ಹೀಗಾಗಿ, ನಮ್ಮ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಹೇಳಿದರು.

ಜಿಲ್ಲೆ ರೈತರ ಆತ್ಮಹತ್ಯೆಯ ಅಂಕಿ ಅಂಶ
ಮೂರು ವರ್ಷಗಳಿಂದ ಮದ್ದೂರು ತಾಲ್ಲೂಕಿನಲ್ಲಿ 57 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ತಾಲ್ಲೂಕಿನಲ್ಲಿ 36 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಮಳವಳ್ಳಿ ತಾಲ್ಲೂಕಿನಲ್ಲಿ 20 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾಂಡವಪುರ ತಾಲ್ಲೂಕಿನಲ್ಲಿ 11 ರೈತರು, ಮಳೆಯಾಶ್ರಿತ ಪ್ರದೇಶ ವಾಗಿರುವ ನಾಗಮಂಗಲ ತಾಲ್ಲೂಕಿನಲ್ಲಿ 7 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ.

₹ 6.90 ಕೋಟಿ ಪರಿಹಾರ
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ವನ್ನು ಸರ್ಕಾರ ನೀಡುತ್ತಿದೆ. 2015–16ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ 92 ರೈತ ಕುಟುಂಬ ಗಳಿಗೆ ₹ 4.50 ಕೋಟಿ ಪರಿಹಾರ ವಿತರಣೆ ಮಾಡಿದೆ. 2016–17ನೇ ಸಾಲಿನಲ್ಲಿ 46 ರೈತ ಕುಟುಂಬಗಳಿಗೆ  ₹ 2.30 ಕೋಟಿ ಪರಿಹಾರ ನೀಡಲಾಗಿದೆ. 2017–18 ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ 6 ರೈತ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಿಲ್ಲ.

* 202 –2015ರಿಂದ ವರದಿಯಾದ ಪ್ರಕರಣಗಳು
* 144– ಆತ್ಮಹತ್ಯೆ ಸಾಬೀತಾದ ಪ್ರಕರಣಗಳು
* ₹ 6.9– ಕೋಟಿ ಪರಿಹಾರ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT