ನೀರಿನ ಪ್ರವಾಹಕ್ಕೆ ಹೆಬ್ಬಾಳ ಸಂಪರ್ಕ ಸ್ಥಗಿತ

7
ಹೇರೂರ ಬೆಣ್ಣೆತೊರಾ ಜಲಾಶಯಕ್ಕೆ ಹರಿದುಬಂದ 1.57ಟಿಎಂಸಿ ಅಡಿ ಹೊಸ ನೀರು

ನೀರಿನ ಪ್ರವಾಹಕ್ಕೆ ಹೆಬ್ಬಾಳ ಸಂಪರ್ಕ ಸ್ಥಗಿತ

Published:
Updated:
ನೀರಿನ ಪ್ರವಾಹಕ್ಕೆ ಹೆಬ್ಬಾಳ ಸಂಪರ್ಕ ಸ್ಥಗಿತ

ಕಾಳಗಿ: ‘ಪ್ರತಿವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಹೊರಬಿಡಲಾಗುತ್ತಿದ್ದ ಬೆಣ್ಣೆ ತೊರಾ ಜಲಾಶಯದ ನೀರು ಈ ವರ್ಷ ಮುಂಗಾರು ಆರಂಭದಲ್ಲೇ ಹೊರ ಬಿಡ ಲಾಗಿದೆ. ಮಹಾರಾಷ್ಟ್ರ ಹಾಗೂ ಸುತ್ತಲಿನ ಇತರೆಡೆ ಉತ್ತಮ ಮಳೆ ಆಗಿದ್ದರಿಂದ ಜಲಾಶಯಕ್ಕೆ 1.57 ಟಿಎಂಸಿ ಅಡಿ ಹೊಸ ನೀರು ಹರಿದು ಬಂದಿರುವುದೇ ಇದಕ್ಕೆ ಮುಖ್ಯಕಾರಣ’ ಎಂದು ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದ್ದಾರೆ.

ಪರಿಣಾಮ ಜಲಾಶಯದ ಕೆಳ ಭಾಗದ ಹೆಬ್ಬಾಳ ರಸ್ತೆ ಸೇತುವೆ ಎರಡು ದಿನಗಳಿಂದ ಮುಳುಗಡೆಯಾಗಿ ಕಾಳಗಿ–ಹೆಬ್ಬಾಳ ಸಂಚಾರ ಮಾರ್ಗ ಸ್ಥಗಿತಗೊಂಡಿದೆ.

ಇದರಿಂದ ಕಡಿಮೆ ಅಂತರದಲ್ಲಿ ಕಲಬುರ್ಗಿ ಓಡಾಡುವ ಹೆಬ್ಬಾಳ, ಚಿಂಚೋಳಿ ಎಚ್., ಹುಳಗೇರಾ, ಕಂದ ಗೂಳ, ಗೋಟೂರ ಹಾಗೂ ಸುತ್ತಲಿನ ತಾಂಡಾಗಳ ಜನರು ಪರದಾಡುತ್ತಿದ್ದಾರೆ.

‘ಈ ಮೊದಲಿದ್ದ 437.06 ಮೀಟರ್ ಜಲಾಶಯದ ನೀರಿನ ಮಟ್ಟ ಮಂಗಳವಾರ 438.89 ಮೀಟರ್‌ಗೆ ಏರಿಕೆಯಾಗಿ 6016 ಕ್ಯೂಸೆಕ್ಸ್ ಒಳಹರಿವು ಇತ್ತು. ಅಂದು 3442ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ. ಆದರೆ ಬುಧವಾರ ಹೊರಗಿನ ನೀರು ಬಂದಿಲ್ಲವಾದ್ದರಿಂದ ಒಳ ಮತ್ತು ಹೊರ ಹರಿವು ಸಮಪ್ರಮಾಣದಲ್ಲಿದ್ದು, 1480ಕ್ಯೂಸೆಕ್ಸ್ ನೀರು ಹರಿ ಬಿಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಕಂಗಲಾದ ರೈತರು: ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಉಂಟಾದ ಬೆಣ್ಣೆತೊರಾ ನೀರಿನ ಭೀಕರ ಪ್ರವಾಹಕ್ಕೆ ಸಾವಿರಾರು ಹೊಲ, ಮನೆಗಳು ಸಿಲುಕಿ ಜನರು ಅಪಾರ ನಷ್ಟ ಅನುಭವಿಸಿದ್ದಾರೆ. ಸಾರ್ವಜನಿಕ ರಸ್ತೆ, ಸೇತುವೆಗಳು ಕಿತ್ತು ಹೋಗಿವೆ.

ಮುಖ್ಯಮಂತ್ರಿ ಸೇರಿದಂತೆ ಸಚಿವರ ಹಾಗೂ ಅಧಿಕಾರಿಗಳ ದಂಡು ಬಂದುನೋಡಿ ಹೋಗಿಯು ಆಗಿದೆ. ಆದರೆ ಮನೆಗಳು ಹಾಳಾಗಿದಕ್ಕೆ ಕೆಲವರಿಗೆ ತಲಾ ರೂ.3,800 ಪರಿಹಾರ ನೀಡಿದ್ದು ಬಿಟ್ಟರೆ ಬೆಳೆ ಹಾಳಾದ ಯಾರೊಬ್ಬ ರೈತನಿಗೆ ಇನ್ನುವರೆಗೂ ಪರಿಹಾರ ವಿತರಿಸಿರುವುದಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಒಬ್ಬರ ಮೇಲೆ ಒಬ್ಬರು ಹಾಕುತ್ತಾರೆ.

ಹೆಚ್ಚಿಗೆ ಕೇಳಲು ಹೋದರೆ ಬೆಂಗಳೂರಿನಿಂದ ಆನ್‌ಲೈನ್ ಮೂಲಕ ಬರಬೇಕು ಎನ್ನುತ್ತಾರೆ. ಪರಿಹಾರ ವಿತರಣೆಗೆ ಒಂದುವರ್ಷದ ಕಾಲಾವಕಾಶ ಬೇಕಾಗುವುದೇ ಎಂದು ರೈತ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಶಿವಗೋಳ ಪ್ರಶ್ನಿಸಿದ್ದಾರೆ.

ಭಯಭೀತಿಯಲ್ಲಿ ಗ್ರಾಮಸ್ಥರು: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಂಡಿದ್ದ ಜಲಾಶಯದ ನೀರಿನ ಭೀಕರ ಪ್ರವಾಹ ಈ ವರ್ಷ ಮುಂಗಾರು ಆರಂಭದಲ್ಲೇ ಮರುಕಳಿಸಬಹುದಾ ಎಂಬ ಚಿಂತೆ ಕೆಳಭಾಗದ ಗ್ರಾಮಸ್ಥರಲ್ಲಿ ಕಾಡಲು ಶುರುಮಾಡಿದೆ.

ಇದರಿಂದಾಗಿ ಶೆಳ್ಳಗಿ, ತೊಂಚಿ, ಕಮಕನೂರ, ಹೆಬ್ಬಾಳ, ಗೋಟೂರ, ಕಣಸೂರ, ಚಿಂಚೋಳಿ ಎಚ್, ಮಲಘಾಣ, ಡೊಣ್ಣೂರ, ಕಲಗುರ್ತಿ, ಅರಜಂಬಗಾ, ತೆಂಗಳಿ, ತೊನಸನಹಳ್ಳಿ, ಮಲಕೂಡ ನಿವಾಸಿಗಳು ತಮ್ಮ ಜಾನುವಾರುಗಳೊಂದಿಗೆ ಬೇರೆಡೆ ತಾತ್ಕಾಲಿಕವಾಗಿ ಸಾಗಲು ಚಿಂತನೆ ನಡೆಸಿದ್ದಾರೆ.

ಮಳೆ ಪ್ರಮಾಣ: ಜೂನ್ ಆರಂಭದಿಂದ ಇಲ್ಲಿವರೆಗೂ 172.6ಮಿ.ಮೀ ಮಳೆಯಾಗಿದೆ. ಆದರೆ ಬೀಜ ಪಡೆಯುವ ರೈತರ ಸಂಖ್ಯೆ ಇಳಿಮುಖವಾಗಿದೆ ಎಂದು ಕೃಷಿ ಅಧಿಕಾರಿ ರುಚಿ ಕೆಂಗಾಪುರ ಹೇಳಿದ್ದಾರೆ.

2,881 ಕ್ಯೂಸೆಕ್ ನೀರು ಬಿಡುಗಡೆ, ಹಳೆ ಹೆಬ್ಬಾಳ ಸೇತುವೆ ಮುಳುಗಡೆ

ಕಲಬುರ್ಗಿ:
ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಹೆಬ್ಬಾಳ ಸಮೀಪದ ಬೆಣ್ಣೆತೊರಾ ಜಲಾಶಯದಿಂದ ಬುಧವಾರ 2,881 ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಇದರಿಂದಾಗಿ ಹಳೆ ಹೆಬ್ಬಾಳ ನೆಲಮಟ್ಟದ ಸೇತುವೆ ಮುಳುಗಡೆಯಾಗಿದೆ.

ಸೇತುವೆ ಮುಳುಗಡೆಯಿಂದ ಹಳೆ ಹೆಬ್ಬಾಳ ಮತ್ತು ಚಿಂಚೋಳಿ (ಎಚ್), ಕುಳಗೇರಾ, ಕಂದಗೂಳ, ಗೋಟೂರ ಹಾಗೂ ಕಾಳಗಿ ಮಧ್ಯದ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಗ್ರಾಮಸ್ಥರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.

ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆ ಯಾಗುತ್ತಿದೆ. ಜಲಾಶಯದ ಒಳ ಹರಿವು 1,632 ಕ್ಯೂಸೆಕ್ ಇದ್ದು, ನಾಲ್ಕು ಗೇಟ್‌ಗಳಿಂದ ನೀರು ಹರಿ ಬಿಡಲಾಗುತ್ತಿದೆ.ಜಲಾಶಯದ ಗರಿಷ್ಠ ಮಟ್ಟ 438.89 ಮೀ. ಇದ್ದು, ಸದ್ಯ 438.73 ಮೀ. ನೀರು ಸಂಗ್ರಹ ಇದೆ.

*

ರೈತರಿಗೆ ಬೆಳೆ ಹಾನಿಯಾದ ಪರಿಹಾರ ಈವರೆಗೆ  ದೊರೆತಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಬೆಂಗಳೂರಿನಿಂದ ಆನ್‌ಲೈನ್ ಮೂಲಕ ಬರುತ್ತದೆ ಎನ್ನುತ್ತಾರೆ.

-ಮಲ್ಲಿಕಾರ್ಜುನ ಶಿವಗೋಳ,

ಮಾಜಿ ಸದಸ್ಯ, ತಾಲ್ಲೂಕು ಪಂಚಾಯಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry