ಜಂಟಿ ಗೃಹಸಾಲದ ಲಾಭ ಲೆಕ್ಕ

7

ಜಂಟಿ ಗೃಹಸಾಲದ ಲಾಭ ಲೆಕ್ಕ

Published:
Updated:
ಜಂಟಿ ಗೃಹಸಾಲದ ಲಾಭ ಲೆಕ್ಕ

ಜಂಟಿಯಾಗಿ ಗೃಹಸಾಲಕ್ಕೆ ಮುಂದಾದರೆ ಸಾಕಷ್ಟು ಲಾಭಗಳು. ಜಂಟಿ ಗೃಹ ಸಾಲವು ನಿಮ್ಮ ಗೃಹ ಸಾಲದ ಅರ್ಜಿಯಲ್ಲಿ ಸಹ-ಅರ್ಜಿದಾರ ಅಥವಾ ಸಹ-ಸಾಲಗಾರನನ್ನು ಸೇರಿಸುವುದಾಗಿದೆ.

ಅದಕ್ಕೂ ಮುನ್ನ ಯಾರ ಜೊತೆಗೆ ನೀವು ಜಂಟಿ ಸಾಲಕ್ಕೆ ಮುಂದಾಗಬಹುದು, ಅದಕ್ಕಿರುವ ನಿಯಮಗಳೇನು, ಇರಬೇಕಾದ ಅರ್ಹತೆಗಳೇನು, ಲಾಭಗಳೇನು ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ.

ಸಹ ಅರ್ಜಿದಾರ

ಸಹ ಅರ್ಜಿದಾರ ಅಥವಾ ಸಹ ಸಾಲಗಾರ ಆಗುವವರು ಪೋಷಕರು, ದಂಪತಿ ಅಥವಾ ಒಡಹುಟ್ಟಿದವರು ಆಗಿರಬೇಕು. ಹೀಗೆ ಸಹ ಸಾಲಗಾರರಾಗುವವರು ಸಹ ಮಾಲೀಕರೂ ಆಗಿರಬೇಕು.

ಸಾಮಾನ್ಯವಾಗಿ ಗೃಹ ಸಾಲಗಳಿಗೆ ಒದಗಿಸಬೇಕಾದ ದಾಖಲೆಗಳನ್ನೆಲ್ಲ ಇಲ್ಲಿಯೂ ಒದಗಿಸಬೇಕಾಗುತ್ತದೆ. ಅರ್ಜಿದಾರ ಮತ್ತು ಸಹ ಅರ್ಜಿದಾರ ಇಬ್ಬರ ದಾಖಲೆಗಳನ್ನೂ ನೀಡಬೇಕಾಗುತ್ತದೆ.

ಸಾಲದ ಅರ್ಹತೆ: ಹೌದು, ಜಂಟಿ ಗೃಹ ಸಾಲವನ್ನು ಆಯ್ದುಕೊಂಡರೆ ನಿಮ್ಮ ಸಾಲದ ಮೊತ್ತ ಹೆಚ್ಚುತ್ತದೆ ಎನ್ನುವುದು ನಿಜ. ಎಷ್ಟು ಹೆಚ್ಚುತ್ತದೆ ಎನ್ನುವುದು ನಿಮ್ಮ ಮನೆ, ಇಬ್ಬರ ವೇತನ ಹಾಗೂ ನಿಮ್ಮ ವಯೋಮಾನವನ್ನು ಅವಲಂಬಿಸುತ್ತದೆ.

ಇಷ್ಟಾದರೂ ಜಂಟಿಸಾಲವನ್ನು ಮರುಪಾವತಿಸಲು ಇಬ್ಬರೂ ಜವಾಬ್ದಾರರಾಗಿರುವ ಕಾರಣ ಹೆಚ್ಚಿನ ಮೊತ್ತದ ಸಾಲ ಸಿಗುತ್ತದೆ. ಇಬ್ಬರೂ ಪಾವತಿಸುವ ಕಾರಣ ಮರುಪಾವತಿ ಸಾಮರ್ಥ್ಯವೂ ಸಹಜವಾಗಿಯೇ ಹೆಚ್ಚು ಇರುತ್ತದೆ.

ತೆರಿಗೆ ಲಾಭಗಳು

ಮನೆ ಮಾಡಿಕೊಳ್ಳುವುದರ ಹಿಂದಿರುವ ಮತ್ತೊಂದು ಆಸಕ್ತಿಕರ ಸಂಗತಿ ಎಂದರೆ ತೆರಿಗೆ ಉಳಿತಾಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಜಂಟಿ ಗೃಹಸಾಲದ ಮೂಲಕ ಇಬ್ಬರೂ ತೆರಿಗೆ ಕಾಯ್ದೆಯ ಲಾಭಗಳನ್ನು ಪಡೆದುಕೊಳ್ಳಬಹುದು.

ಪ್ರಸ್ತುತ ಆದಾಯ ತೆರಿಗೆ ನಿಯಮಗಳ ಪ್ರಕಾರ, ಸಾಲದ ಅರ್ಜಿದಾರ ಹಾಗೂ ಸಹ–ಅರ್ಜಿದಾರ ಇಬ್ಬರೂ 80c (ಪ್ರಮುಖ ಮರುಪಾವತಿ ಮೊತ್ತ) ಮತ್ತು 24 ಡಿ (ಬಡ್ಡಿ ಪಾವತಿ) ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಗಳನ್ನು  ಪಡೆಯಬಹುದು.

80ಸಿ ವಿಭಾಗದಡಿ ₹ 1.5 ಲಕ್ಷ ಹಾಗೂ 24ಡಿ ವಿಭಾಗದಡಿ ₹ 2 ಲಕ್ಷದವರೆಗೆ ತೆರಿಗೆ ಕಡಿತ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಆದರೆ ಜಂಟಿ ಗೃಹ ಸಾಲದ ಮೂಲಕ ಆದಾಯ ತೆರಿಗೆ ಲಾಭಗಳನ್ನು ಪಡೆಯಲು, ಸಾಲಗಾರ ಹಾಗೂ ಸಹ-ಸಾಲಗಾರ ಇಬ್ಬರೂ ಆಸ್ತಿಯ ಮಾಲೀಕರಾಗಿರಬೇಕು. ಒಬ್ಬರು ಸಹ ಸಾಲಗಾರರಾಗಿದ್ದೂ, ಆಸ್ತಿಯ ಸಹ ಮಾಲೀಕರಾಗಿಲ್ಲದೇ ಇದ್ದಲ್ಲಿ, ಅವರು ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲಾಗದು.

ಮರುಪಾವತಿ ಪ್ರಕ್ರಿಯೆ: ತೆಗೆದುಕೊಂಡ ಜಂಟಿ ಗೃಹ ಸಾಲವನ್ನು ಮರುಪಾವತಿಸುವುದು ಸಾಲಗಾರ ಮತ್ತು ಸಹ ಸಾಲಗಾರ ಇಬ್ಬರ ಜವಾಬ್ದಾರಿಯೂ ಆಗಿರುತ್ತದೆ. ಆದರೆ ಇಎಂಐಗಳನ್ನು ಅವರಲ್ಲಿ ಇಬ್ಬರೂ ಸಮನಾದ ಮಾಸಿಕ ಕಂತುಗಳಲ್ಲಿ  ಪಾವತಿಸಬಹುದು. ಅದಕ್ಕಾಗಿ ಜಂಟಿ ಖಾತೆ ತೆರೆಯಬಹುದು ಅಥವಾ ಇಬ್ಬರಲ್ಲಿ ಯಾರಾದರೂ ಒಬ್ಬರು ಕಂತುಗಳನ್ನು ತುಂಬಬಹುದು. ಇದಕ್ಕಾಗಿ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ಗೃಹ ಸಾಲಗಳಿಗೆ ಹೋಲಿಸಿದರೆ ಜಂಟಿ ಗೃಹ ಸಾಲಗಳು ಖಂಡಿತವಾಗಿ ಲಾಭದಾಯಕ.

ಒಂದು ವೇಳೆ ನೀವು ಮನೆ ಸಾಲದ ಬಗ್ಗೆ ಯೋಜಿಸುತ್ತಿದ್ದೀರಿ ಎಂದಾದರೆ  ಜಂಟಿ ಗೃಹ ಸಾಲವನ್ನು ಪಡೆಯಲು ನಿಮ್ಮ ರಕ್ತ ಸಂಬಂಧಿಗಳೊಂದಿಗೆ ಚರ್ಚಿಸಬಹುದು. ಆದರೆ ಇಎಂಐ ತುಂಬುವ ಬಗ್ಗೆ ಹಾಗೂ ಮನೆಯ ಒಡೆತನದ ಬಗ್ಗೆ ಸ್ಪಷ್ಟವಾದ ನಿಲುವುಗಳಿರಬೇಕು. ಇಎಂಐ ತುಂಬಲು ಒಬ್ಬರು ವಿಫಲರಾದರೆ ಮತ್ತೊಬ್ಬರು ಅದರ ಸಂಪೂರ್ಣ ಹೊಣೆಗಾರರಾಗುತ್ತಾರೆ. ಒಂದು ವೇಳೆ ಸಾಲ ಮರುಪಾವತಿಯಲ್ಲಿ ವೈಫಲ್ಯ ಅಥವಾ ವಿಳಂಬ ಉಂಟಾದರೆ ಸಾಲಗಾರ ಮತ್ತು ಸಹ ಸಾಲಗಾರ ಇಬ್ಬರ ವಿರುದ್ಧವೂ ಬ್ಯಾಂಕ್‌ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ.

**

ಮುಖ್ಯಾಂಶಗಳು

*
ಸಹ ಅರ್ಜಿದಾರರು ವಿವಾಹಿತ ಸಂಗಾತಿಗಳಾಗಿರಲಿ, ಪೋಷಕರು ಅಥವಾ ಒಡಹುಟ್ಟಿದವರಾಗಿರಲಿ, ಆಸ್ತಿಯ ಸಹ ಮಾಲೀಕತ್ವವು ಕಡ್ಡಾಯವಾಗಿರುತ್ತದೆ.

* ತಂದೆ–ಮಗ ಅಥವಾ ತಂದೆ–ಅವಿವಾಹಿತ ಮಗಳು ಸಾಲದ ಅರ್ಜಿದಾರರಾದಲ್ಲಿ, ಬ್ಯಾಂಕುಗಳು ಆಸ್ತಿಯ ಪ್ರಾಥಮಿಕ ಮಾಲೀಕತ್ವ ಹೊಂದುವಂತೆ ಮಗ ಅಥವಾ ಮಗಳಿಗೆ ಸೂಚಿಸುತ್ತವೆ.

* ಸಹೋದರರು ಸಾಲದ ಅರ್ಜಿದಾರರಾದಲ್ಲಿ, ಇಬ್ಬರೂ ಆಸ್ತಿಯ ಸಹ ಮಾಲೀಕರಾಗುವಂತೆ ಬ್ಯಾಂಕುಗಳು ಸಲಹೆ ನೀಡುತ್ತವೆ.

**

ಪತಿ–ಪತ್ನಿ ಇಬ್ಬರಲ್ಲಿ ಯಾರ ಆದಾಯ ಹೆಚ್ಚಿರುತ್ತದೆಯೊ ಅವರು ಸಂಪೂರ್ಣ ತೆರಿಗೆ ಲಾಭಗಳನ್ನು ಪಡೆಯುವುದು ಸೂಕ್ತ. ಒಂದು ವೇಳೆ ಇಬ್ಬರಿಗೂ ಸಮಾನ ಆದಾಯವಿದ್ದಲ್ಲಿ ಇಬ್ಬರೂ ತೆರಿಗೆ ಲಾಭಗಳನ್ನು ಪಡೆಯಬಹುದು.

–ಪ್ರಮೋದ್‌ ಹೆಗಡೆ,

ತೆರಿಗೆ ಸಲಹೆಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry