ಜಿಜೆಎಂ ಕಚೇರಿ ಮೇಲೆ ದಾಳಿ: ಶಸ್ತ್ರಾಸ್ತ್ರ ವಶ

7
ಡಾರ್ಜಿಲಿಂಗ್‌ನಲ್ಲಿ ಹಿಂಸಾಚಾರ: ಗೂರ್ಖಾಲ್ಯಾಂಡ್‌ ಪ್ರತ್ಯೇಕ ರಾಜ್ಯ ಹೋರಾಟ ಬಿರುಸು

ಜಿಜೆಎಂ ಕಚೇರಿ ಮೇಲೆ ದಾಳಿ: ಶಸ್ತ್ರಾಸ್ತ್ರ ವಶ

Published:
Updated:
ಜಿಜೆಎಂ ಕಚೇರಿ ಮೇಲೆ ದಾಳಿ: ಶಸ್ತ್ರಾಸ್ತ್ರ ವಶ

ಡಾರ್ಜಿಲಿಂಗ್‌ (ಪಶ್ಚಿಮ ಬಂಗಾಳ):  ಪ್ರತ್ಯೇಕ ಗೂರ್ಖಾಲ್ಯಾಂಡ್‌ ರಾಜ್ಯ ರಚನೆ ನಿಟ್ಟಿನಲ್ಲಿ ಹೋರಾಟ ತೀವ್ರಗೊಂಡಿದ್ದು, ಡಾರ್ಜಿಲಿಂಗ್‌ ಗುರುವಾರ  ರಣರಂಗವಾಯಿತು. ಗೂರ್ಖಾ ಜನಮುಕ್ತಿ ಮೋರ್ಚಾದ (ಜಿಜೆಎಂ) ಮುಖ್ಯಸ್ಥ ಬಿಮಲ್‌ ಗುರುಂಗ್‌ ಅವರಿಗೆ ಸೇರಿದ ಕಟ್ಟಡಗಳ ಮೇಲೆ ದಾಳಿ ನಡೆಸಿದ ಪೊಲೀಸರು 300ರಿಂದ 400ಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಸ್ಫೋಟಕ, ಬಿಲ್ಲು, ಬಾಣಗಳು ಸೇರಿವೆ.

ಡಾರ್ಜಿಲಿಂಗ್‌ನ ಸಿಂಗ್‌ಮಾರಿ ಹಾಗೂ ಪಟ್ಲೆಬಾಸ್‌ ಪ್ರದೇಶದಲ್ಲಿ ಸಂಘಟನೆಗೆ ಸೇರಿದ ಕಚೇರಿ ಮತ್ತು ಇತರ ಕಟ್ಟಡಗಳ ಮೇಲೆ ನಡೆಸಿದ ದಾಳಿಯಲ್ಲಿ  ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೂರ್ಖಾಲ್ಯಾಂಡ್‌ ಪ್ರತ್ಯೇಕ ರಾಜ್ಯ ನಿರ್ಮಾಣವಾಗುವ ತನಕವೂ ಗುರುವಾರದಿಂದಲೇ ಅನಿರ್ದಿಷ್ಟಾವಧಿ ಬಂದ್‌ ನಡೆಸುವುದಾಗಿ ಜಿಜೆಎಂ ಮುಖ್ಯಸ್ಥ ಗುರುಂಗ್‌ ತಿಳಿಸಿದ್ದರು.  ಇದಾದ ಬಳಿಕ ಅವರಿಗೆ ಸಂಬಂಧಿಸಿದ ಹಲವು ಕಟ್ಟಡಗಳ ಮೇಲೆ ಈ ದಾಳಿ ನಡೆಸಲಾಗಿದೆ.

ಬಂದ್‌ಗೆ ಕರೆಕೊಟ್ಟಿರುವ ಕಾರಣ ದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ವಾದ ಡಾರ್ಜಿಲಿಂಗ್‌ಗೆ ಭೇಟಿ ನೀಡದಂತೆ ಅವರು ಪ್ರವಾಸಿಗರಿಗೆ ಮನವಿ ಮಾಡಿದ್ದರು.

‘ಖಚಿತ ಮಾಹಿತಿ ಮೇರೆಗೆ ಗುರುಂಗ್‌ ಹಾಗೂ ಜಿಜೆಎಂ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಮುಂದುವರಿದಿದ್ದು, ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು. ಆದರೆ ಗುರುಂಗ್‌ ನಿವಾಸದ ಮೇಲೆ ಯಾವುದೇ ದಾಳಿ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೊಲೀಸರು – ಪ್ರತಿಭಟನಕಾರರ ನಡುವೆ ಸಂಘರ್ಷ:  ಪೊಲೀಸರ ದಾಳಿ ಬೆನ್ನಲ್ಲೇ, ಸಂಘಟನೆಯ ಕಾರ್ಯಕರ್ತರು ಪೊಲೀಸರನ್ನು ಗುರಿಯಾಗಿರಿಸಿ ಕಲ್ಲು ತೂರಾಟ ನಡೆಸಿ, ಪೆಟ್ರೋಲ್‌ ಬಾಂಬ್‌ ಎಸೆದರು. ಈ ವೇಳೆ ಪೊಲೀಸರು ಪ್ರತಿಭಟನಕಾರರ ಮೇಲೆ ಅಶ್ರುವಾಯು ಸಿಡಿಸಿದರು.

ರಾಜಕೀಯ ಪ್ರೇರಿತ: ‘ರಾಜ್ಯ ಸರ್ಕಾರವು ಸಂಘಟನೆ ಹಾಗೂ  ನಾಯಕರ ವಿರುದ್ಧ ರಾಜಕೀಯ ಪ್ರೇರಿತ  ದ್ವೇಷ ಸಾಧಿಸುತ್ತಿದೆ’ ಎಂದು ಜಿಜೆಎಂನ ಪ್ರಧಾನ ಕಾರ್ಯದರ್ಶಿ ರೋಷನ್‌ ಗಿರಿ ಆರೋಪಿಸಿದ್ದಾರೆ.

ಪೊಲೀಸರು ಹಾಗೂ ರಾಜ್ಯ ಸರ್ಕಾರವು ನಮ್ಮನ್ನು ಪ್ರಚೋದಿಸುತ್ತಿದೆ. ನಮ್ಮ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.

‘ಶಸ್ತ್ರಾಸ್ತ್ರಗಳು ಸಂಸ್ಕೃತಿಯ ಪ್ರತೀಕ’:   ಪೊಲೀಸರು ದಾಳಿ ವೇಳೆ ಏನು ಸಿಕ್ಕಿದೆ?  ಕುಕ್ರಿ ನಮ್ಮ ಸಂಸ್ಕೃತಿಯ ಪ್ರತೀಕ. ಅದನ್ನು ಇಟ್ಟುಕೊಂಡರೆ, ಯಾರಿಗೂ ಹಾನಿಯಾಗುವುದಿಲ್ಲ. ಬಿಲ್ಲು ಮತ್ತು ಬಾಣಗಳು ನಮ್ಮ ಸಂಸ್ಕೃತಿಯ ಭಾಗವಾಗಿದೆ’ ಎಂದು ರೋಷನ್‌  ಅವರು ಸಮರ್ಥಿಸಿಕೊಂಡರು.

***

ವರದಿ ಪಡೆದ ಕೇಂದ್ರ

ಡಾರ್ಜಿಲಿಂಗ್‌ನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯನ್ನು  ತಿಳಿಗೊಳಿಸಲು ರಾಜ್ಯದ ಪೊಲೀಸರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 600 ಅರೆಸೇನಾಪಡೆ ಸಿಬ್ಬಂದಿಯನ್ನು ಕಳುಹಿಸಿದೆ. ಅಲ್ಲದೇ ಜಿಲ್ಲೆಯಲ್ಲಿನ ಸದ್ಯದ ಪರಿಸ್ಥಿತಿ ಕುರಿತಂತೆ ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry