ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾಗಿರುವ ಆತ್ಮಹತ್ಯೆಗಳು

ತ್ರಿಕೋನ ಪ್ರೇಮ ಕಾರಣವೇ...? ಅತ್ಯಾಚಾರಕ್ಕೆ ಯತ್ನಿಸಿದ ಆಘಾತವೇ..?
Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಸೌಂದರ್ಯತಜ್ಞೆ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಅವರ ಸಾವಿನ ಪ್ರಕರಣ ಹೊಸತಿರುವು ಪಡೆದುಕೊಂಡಿದ್ದು, ಈ ಪ್ರಕರಣಗಳು ಒಂದಕ್ಕೊಂದು ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಷೇಕ್‌ಪೇಟದ ‘ಆರ್‌ಕೆ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತೆ  ಅರಸುಮಿಲ್ಲಿ ವಿಜಯಲಕ್ಷ್ಮಿ ಅಲಿಯಾಸ್‌ ಶಿರೀಶಾ ಹಾಗೂ ಈ ಸ್ಥಳದಿಂದ 100 ಕಿಲೋ ಮೀಟರ್‌ ದೂರ ಇರುವ ಕುಕನೂರುಪಲ್ಲಿಯ ಪ್ರಭಾಕರ್‌ ರೆಡ್ಡಿ ಅವರು ಒಂದೇ ದಿನ (ಜೂನ್‌ 14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರು ನೇಣುಬಿಗಿದುಕೊಂಡಿದ್ದರೆ, ಪ್ರಭಾಕರ್‌ ಅವರು ತಮ್ಮದೇ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ.

ಹಲವು ಅನುಮಾನಕ್ಕೆ ಕಾರಣ: ವಿಜಯಲಕ್ಷ್ಮಿ ಅವರ ಆತ್ಮಹತ್ಯೆ ಸುದ್ದಿ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅದಾಗಲೇ ಅವರ ಮೃತದೇಹವನ್ನು ಮಂಚದ ಮೇಲೆ ಇರಿಸಲಾಗಿತ್ತು. ಇವರು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಟುಡಿಯೊದ ಮಾಲೀಕ ವಲ್ಲಭನೇನಿ ರಾಜೀವ್‌ ಹೇಳಿದ್ದಾರೆ (ಆದರೆ ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದ ಮೇಲೆ ಕೆಲವು ಕಡೆ ಗಾಯಗಳಾಗಿರುವುದು ತಿಳಿದುಬಂದಿದೆ). ಇದನ್ನು ‘ಅನುಮಾನಾಸ್ಪದ ಸಾವು’ ಎಂದು ಪೊಲೀಸರು ಪ್ರಕರಣ ದಾಖಲುಮಾಡಿಕೊಂಡಿದ್ದಾರೆ.

ಈ ಆತ್ಮಹತ್ಯೆ ಸುದ್ದಿ ತಿಳಿಯುತ್ತಲೇ ಅತ್ತ ಪ್ರಭಾಕರ್‌ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ವಿಚಿತ್ರ ಎಂದರೆ ವರ್ಷದ ಹಿಂದೆ ಇದೇ ಕೋಣೆಯಲ್ಲಿ ಆಗ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದ ರಾಮಕೃಷ್ಣ ರೆಡ್ಡಿ ಅವರೂ ಇದೇ ರೀತಿ ಸಾವನ್ನಪ್ಪಿದ್ದರು).

ಪ್ರಭಾಕರ್‌ ಅವರ ಮೊಬೈಲ್‌ ಅನ್ನು ಪೊಲೀಸರು ಪರಿಶೀಲಿಸಿದಾಗ ಆರ್‌.ಕೆ ಸ್ಟುಡಿಯೊ ಮಾಲೀಕ ರಾಜೀವ್‌ ಜೊತೆ ಹಿಂದಿನ ದಿನ ಮಾತನಾಡಿದ್ದು  ಅವರಿಗೆ ತಿಳಿದಿದೆ. ಆಮೇಲೆ ವಿಚಾರಣೆ ಕೈಗೊಂಡಾಗ  ವಿಜಯಲಕ್ಷ್ಮಿ, ರಾಜೀವ, ಅವರ ಭಾವಿ ಪತ್ನಿ ತೇಜಸ್ವಿನಿ ಹಾಗೂ ಸ್ನೇಹಿತ ಶ್ರವಣ್‌ ಅವರು ಹಿಂದಿನ ದಿನ ಪ್ರಭಾಕರ ಅವರ ನಿವಾಸದಲ್ಲಿ ಒಟ್ಟಿಗೇ ಸೇರಿದ್ದು ತಿಳಿದಿದೆ.

ಪೊಲೀಸರು ಇನ್ನಷ್ಟು ವಿಚಾರಣೆ ನಡೆಸಿದಾಗ ವಿವಾಹಿತೆಯಾಗಿದ್ದರೂ ವಿಜಯಲಕ್ಷ್ಮಿ ಅವರು  ರಾಜೀವ್‌ ಅವರನ್ನು ಪ್ರೀತಿಸುತ್ತಿರುವ ವಿಷಯ ತಿಳಿದಿದೆ. ಆದ್ದರಿಂದ ಅವರಿಗೆ ರಾಜೀವ್‌ ಅವರು ಮದುವೆಯಾಗುವುದು ಇಷ್ಟವಿರಲಿಲ್ಲ.  ರಾಜೀವ್‌, ಅವರ ಭಾವಿ ಪತ್ನಿ ಹಾಗೂ   ವಿಜಯಲಕ್ಷ್ಮಿ ಅವರ ನಡುವೆ ವಾಗ್ವಿವಾದ ನಡೆದಾಗ ಶ್ರವಣ್‌ ಅವರು ಈ ಗೊಂದಲವನ್ನು ಪ್ರಭಾಕರ್‌ ಅವರ ಮೂಲಕ ಬಗೆಹರಿಸುವುದಾಗಿ ಹೇಳಿದ್ದರು. ಇದಕ್ಕೆ ಪ್ರಭಾಕರ್‌ ಒಪ್ಪಿದ್ದರು.

ಆದರೆ ಒಂದು ಹಂತದಲ್ಲಿ ಪ್ರಭಾಕರ್‌ ಅವರೇ ವಿಜಯಲಕ್ಷ್ಮಿ ಅವರ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದರು ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ. ಅವರಿಂದ ತಪ್ಪಿಸಿಕೊಂಡು ಬಂದ ವಿಜಯಲಕ್ಷ್ಮಿ  ಸ್ಟುಡಿಯೊಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಪೊಲೀಸರು. ಈ ವಿಷಯ ತಿಳಿಯುತ್ತಲೇ ಪ್ರಭಾಕರ್‌ ಅವರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಅವರ ಶಂಕೆ.

ಮೇಲಧಿಕಾರಿಗಳ ಕಿರುಕುಳದಿಂದ ಪ್ರಭಾಕರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಅವರ ಪೋಷಕರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಹಾಗೂ ಶ್ರವಣ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT