ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮಾರಾಟ ನಿಷೇಧ ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್

Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮಾಂಸಕ್ಕಾಗಿ ಗೋ ಹತ್ಯೆ ಮಾಡುವವರು ಜಾನುವಾರು ಸಂತೆಯಲ್ಲಿ ಜಾನುವಾರು ಖರೀದಿ ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಿ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಕೇಂದ್ರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎರಡು ಅರ್ಜಿಗಳ ವಿಚಾ ರಣೆಯನ್ನು ಆರಂಭಿಸಿರುವ ರಜಾ ಕಾಲದ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಆರ್. ಕೆ. ಅಗರ್‌ವಾಲ್ ಮತ್ತು ಎಸ್. ಕೆ. ಕೌಲ್  ಅವರು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿಪಡಿಸಲಾಗಿದೆ.

ದೇಶದಾದ್ಯಂತ ಜಾನುವಾರು ವ್ಯಾಪಾರವನ್ನು  ನಿಯಂತ್ರಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ. ಎಸ್. ನರಸಿಂಹನ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಮದ್ರಾಸ್ ಹೈಕೋರ್ಟ್ ಈಗಾಗಲೇ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ವಿಚಾರವನ್ನು ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಸಂವಿಧಾನ ನಾಗರಿಕರಿಗೆ ನೀಡಿರುವ ಧಾರ್ಮಿಕ ಹಕ್ಕು, ಆಹಾರದ ಖಾಸಗಿತನ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳಿಗೆ ಕೇಂದ್ರದ ಅಧಿಸೂಚನೆಯಿಂದ ಅಡ್ಡಿಯಾಗಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಹೈದರಾಬಾದ್‌ನ ಮೊಹಮದ್ ಅಬ್ದುಲ್ ಫಾಹೀಮ್ ವಾದವಾಗಿದೆ.

ಕೇಂದ್ರದ ಅಧಿಸೂಚನೆಯು ಮಾಂಸದ ವ್ಯಾಪಾರಿಗಳ ಜೀವನ ನಿರ್ವಹಣೆಗೆ ಅಡ್ಡಿ ಉಂಟು ಮಾಡುವುದರಿಂದ ಅದನ್ನು ಜಾರಿ ಮಾಡುವುದಿಲ್ಲ ಎಂದು ಕೇರಳ, ಪಶ್ಚಿಮಬಂಗಾಳ, ತ್ರಿಪುರಾ ಮತ್ತು ಕರ್ನಾಟಕ ಸರ್ಕಾರಗಳು ಹೇಳಿವೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಪ್ರಾಣಿಗಳನ್ನು ಬಲಿ ಕೊಡುವುದು ಅಥವಾ ಮಾಂಸ ಸೇವಿಸುವುದು ಕೆಲವು ಪಂಗಡಗಳ ಧಾರ್ಮಿಕ ಆಚರಣೆ. ಇಂತಹ ಆಚರಣೆಯನ್ನು ಕಾನೂನು ಅಥವಾ ಕಾರ್ಯಾಂಗದ ಆದೇಶದ ಮೂಲಕ ತಡೆಯುವುದು ಸಂವಿಧಾನದ ವಿಧಿ 29ರ ಆಶಯಕ್ಕೆ ವಿರುದ್ಧವಾದು ಎಂಬುದು ಅರ್ಜಿದಾರರ ವಾದವಾಗಿದೆ.

ರೈತರು ಮತ್ತು ಮಾಂಸದ ವ್ಯಾಪಾರಿಗಳಿಗೆ ಗೋ ರಕ್ಷಕರು ಇನ್ನಷ್ಟು ಕಿರುಕುಳ ನೀಡಲು ಕೇಂದ್ರದ ಅಧಿಸೂಚನೆ ಕುಮ್ಮಕ್ಕು ನೀಡಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT