ಎಚ್‌.ಡಿ. ಕುಮಾರಸ್ವಾಮಿ ಬಂಧನ ಸದ್ಯ ಬೇಡ

7
ಜಂತಕಲ್‌ ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣ: ಹೈಕೋರ್ಟ್‌ನಿಂದ ಸೂಚನೆ

ಎಚ್‌.ಡಿ. ಕುಮಾರಸ್ವಾಮಿ ಬಂಧನ ಸದ್ಯ ಬೇಡ

Published:
Updated:
ಎಚ್‌.ಡಿ. ಕುಮಾರಸ್ವಾಮಿ ಬಂಧನ ಸದ್ಯ ಬೇಡ

ಬೆಂಗಳೂರು: ಜಂತಕಲ್‌ ಅಕ್ರಮ ಗಣಿಗಾರಿಕೆ ಪ್ರಕರಣದ ಮೂರನೇ ಆರೋಪಿ  ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೈಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.

ಕುಮಾರ ಸ್ವಾಮಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ನ್ಯಾಯಪೀಠ  ನಡೆಸಿತು.

‘ಇದೇ 20ರವರೆಗೂ ಕುಮಾರಸ್ವಾಮಿ ಅವರನ್ನು ಬಂಧಿಸಬಾರದು’ ಎಂದು ನಿರ್ದೇಶಿಸಿದ ನ್ಯಾಯಮೂರ್ತಿಗಳು,  ಎಸ್ಐಟಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದರು.

ವಿಚಾರಣೆ ವೇಳೆ ಕುಮಾರಸ್ವಾಮಿ ಅವರ ವಕೀಲ ಹಸ್ಮತ್‌ ಪಾಷಾ, ‘ಈಗಾಗಲೇ ಇಂತಹದೇ ಸ್ವರೂಪದ ಆರೋಪ ಇರುವ ಇನ್ನೆರಡು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅಧೀನ ನ್ಯಾಯಾಲಯ ಜಾಮೀನು ನೀಡಿದೆ. ಆದರೆ, ಎಸ್ಐಟಿ ದಾಖಲಿಸಿರುವ ಈ ಪ್ರಕರಣದಲ್ಲಿ ಮಾತ್ರ ಜಾಮೀನು ನಿರಾಕರಿಸಲಾಗಿದೆ. ಇದು ಕಾನೂನಿನ ದುರುಪಯೋಗ’ ಎಂದು ಆಕ್ಷೇಪಿಸಿದರು.

ಇದಕ್ಕೆ ರತ್ನಕಲಾ,  ‘ಎಸ್‌ಐಟಿ ಏನಾದರೂ ಹೇಳುವುದಿದೆಯೇ’ ಎಂದು ಪ್ರಾಸಿಕ್ಯೂಟರ್ ಪಿ.ಗೋವಿಂದನ್‌ ಅವರನ್ನು ಪ್ರಶ್ನಿಸಿದರು.

‘ಮಧ್ಯಂತರ ಜಾಮೀನು ನೀಡುವ ಬದಲಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನೇ ನಡೆಸಿ ಆದೇಶ ನೀಡಿ’ ಎಂದು ಗೋವಿಂದನ್‌ ಕೋರಿದರು.

ಆಗ ಪಾಷಾ, ‘ಹಾಗಾದರೆ ಅರ್ಜಿ ವಿಚಾರಣೆ ಪೂರ್ಣಗೊಳ್ಳುವತನಕ ಅರ್ಜಿದಾರರ ತಂಟೆಗೆ ಬರದಂತೆ ಎಸ್‌ಐಟಿಗೆ ತಾಕೀತು ಮಾಡಬೇಕು’ ಎಂದು ಕೋರಿದರು.

ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ದಾಖಲಿಸಿರುವ ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ.

***

‘ಅಂಥಾ ನೀಚ ಕೆಲಸ  ಮಾಡೊಲ್ಲ ಬಿಡಿ...’

‘ಕುಮಾರಸ್ವಾಮಿ ಅವರನ್ನು ಎಸ್‌ಐಟಿ ಬಂಧಿಸದಂತೆ ಆದೇಶಿಸಬೇಕು’ ಎಂದು ಹಸ್ಮತ್‌ ಪಾಷಾ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಕೋರಿಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರತ್ನಕಲಾ ಅವರು, ‘ಎಸ್‌ಐಟಿ ಅಂಥ ನೀಚ ಕೆಲಸ ಮಾಡೊಲ್ಲ ಬಿಡಿ ಪಾಷಾ’ ಎಂದು ಎರಡೆರಡು ಬಾರಿ ಹೇಳಿದರು.

ಆದರೆ ಪಾಷಾ ಇದಕ್ಕೆ ಜಗ್ಗಲಿಲ್ಲ. ‘ನಮ್ಮ ಅರ್ಜಿದಾರರನ್ನು ಬಂಧಿಸುವ ಭೀತಿ ಇದೆ. ಆದ್ದರಿಂದ ಇದನ್ನು ಆದೇಶದಲ್ಲಿ ಬರೆಸಬೇಕು’ ಎಂದು ಮನವಿ ಮಾಡಿದರು. ಅರ್ಜಿದಾರರ ಮನವಿಯನ್ನು  ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಬಂಧಿಸಬಾರದು ಎಂದು ಆದೇಶಿಸಿದರು.

***

ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಸಂಖ್ಯೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಒಬ್ಬ ರಾಜಕಾರಣಿ ಮೇಲೆ ನಡೆಸುತ್ತಿರುವ ದೌರ್ಜನ್ಯ.

ಹಸ್ಮತ್‌ ಪಾಷಾ, ಕುಮಾರಸ್ವಾಮಿ ಪರ ವಕೀಲ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry