ಎರಡನೇ ಸುತ್ತಿಗೆ ರಾಮಕುಮಾರ್

7
ಸಿಟ್ಟಾ ಡಿ ಕಾಲ್ಟಾನಿಸೆಟ್ಟಾ ಚಾಲೆಂಜರ್‌ ಟೆನಿಸ್‌

ಎರಡನೇ ಸುತ್ತಿಗೆ ರಾಮಕುಮಾರ್

Published:
Updated:
ಎರಡನೇ ಸುತ್ತಿಗೆ ರಾಮಕುಮಾರ್

ನವದೆಹಲಿ: ಅಮೋಘ ಆಟ ಆಡಿದ ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಇಟಲಿಯಲ್ಲಿ ನಡೆಯುತ್ತಿರುವ ಸಿಟ್ಟಾ ಡಿ ಕಾಲ್ಟಾನಿಸೆಟ್ಟಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ರಾಮಕುಮಾರ್‌ 6–2, 4–6, 7–6ರಲ್ಲಿ ಆಸ್ಟ್ರಿಯಾದ ಸೆಬಾಸ್ಟಿ ಯನ್‌ ಆಫ್ನರ್‌ ಅವರನ್ನು ಪರಾಭವ ಗೊಳಿಸಿದರು.

ಡೇವಿಸ್‌ ಕಪ್‌ನಲ್ಲಿ ಆಡಿದ ಅನುಭವ ಹೊಂದಿರುವ  ರಾಮಕುಮಾರ್‌ ಅವರು ಮೊದಲ ಸೆಟ್‌ನಲ್ಲಿ ಆಕ್ರಮಣಕಾರಿ ಆಟ ಆಡಿ ಗಮನ ಸೆಳೆದರು. ಶರವೇಗದ ಸರ್ವ್‌ಗಳನ್ನು ಸಿಡಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಆದರೆ ಎರಡನೇ ಸೆಟ್‌ನಲ್ಲಿ ಆಸ್ಟ್ರಿಯಾದ ಆಟಗಾರ ಸೆಬಾಸ್ಟಿಯನ್‌ ತಿರುಗೇಟು ನೀಡಿದರು. ಎದುರಾಳಿಯ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳಿಗೆ ರಾಮಕುಮಾರ್‌ ನಿರುತ್ತರರಾದರು.

ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಸೆಟ್‌  ಕುತೂಹಲ ಕೆರಳಿಸಿತ್ತು. ಉಭಯ ಆಟಗಾರರು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿಗೆ ಅಣಿಯಾದರು. 12ನೇ ಗೇಮ್‌ಗಳವರೆಗೆ ಇಬ್ಬರೂ ತಮ್ಮ ತಮ್ಮ ಸರ್ವ್‌ ಉಳಿಸಿಕೊಂಡರು. ಹೀಗಾಗಿ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ಈ ಹಂತದಲ್ಲಿ  ಒತ್ತಡ ಮೀರಿ ನಿಂತ ರಾಮಕುಮಾರ್‌ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ರಾಮಕುಮಾರ್‌ ಅವರು ಕಜಕಸ್ತಾನದ ಆಟಗಾರ, ವಿಶ್ವ ಕ್ರಮಾಂಕಪಟ್ಟಿಯಲ್ಲಿ 126ನೇ ಸ್ಥಾನ ಹೊಂದಿರುವ ಮಿಖಾಯಿಲ್‌ ಕುಕುಸ್ಕಿನ್‌ ವಿರುದ್ಧ ಆಡಲಿದ್ದಾರೆ.

ಪೇಸ್‌ ಜೋಡಿಗೆ ನಿರಾಸೆ: ನೆದರ್ಲೆಂಡ್ಸ್‌ನಲ್ಲಿ ನಡೆದ ಎಟಿಪಿ 250 ರಿಕಾಹ್‌ ಓಪನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಲಿಯಾಂಡರ್‌ ಪೇಸ್‌ ಮತ್ತು ಅಮೆರಿಕಾದ ಸ್ಕಾಟ್‌ ಲಿಪ್ಸಿಕಿ ಅವರು ಪರಾಭವಗೊಂಡಿದ್ದಾರೆ.  ಡಬಲ್ಸ್‌ ವಿಭಾ ಗದ ಹೋರಾಟದಲ್ಲಿ ಪೇಸ್‌ ಮತ್ತು ಸ್ಕಾಟ್‌ 4–6, 4–6ರ ರಲ್ಲಿ ಎರಡನೇ ಶ್ರೇಯಾಂಕದ ರಾವೆನ್‌ ಕ್ಲಾಸೆನ್‌ ಮತ್ತು ರಾಜೀವ್‌ ರಾಮ್‌ ವಿರುದ್ಧ ಸೋತರು.

ಡಬಲ್ಸ್‌ ವಿಭಾಗದ ಇನ್ನೊಂದು ಪಂದ್ಯದಲ್ಲಿ ದಿವಿಜ್‌ ಶರಣ್‌ ಮತ್ತು ಪುರವ ರಾಜ 3–6, 4–6ರಲ್ಲಿ ಆ್ಯಂಡ್ರೆ ಸಾ ಮತ್ತು ಮೈಕಲ್‌ ವೀನಸ್‌ ವಿರುದ್ಧ ನಿರಾಸೆ ಕಂಡರು. ಲಿಬ್ಸನ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ಪ್ರಜ್ಞೇಶ್‌ ಗುಣೇಶ್ವರನ್‌ 5–7, 4–6ರ ನೇರ ಸೆಟ್‌ಗಳಿಂದ ಜೊವಾವೊ ಡಾಮಿಂಗೆಸ್‌ ಎದುರು ಸೋಲು ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry