ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಟ್ಲೆಂಡ್‌ ಎದುರು ಭಾರತ ಜಯಭೇರಿ

ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಪಂದ್ಯ : ಎರಡು ಗೋಲು ಗಳಿಸಿದ ರಮಣದೀಪ್‌ ಸಿಂಗ್‌
Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್‌:  ಭಾರತ ತಂಡ ದವರು ಇಲ್ಲಿ ನಡೆಯುತ್ತಿರುವ ಹಾಕಿ ವಿಶ್ವ ಲೀಗ್‌ ಸೆಮಿ ಫೈನಲ್‌್ಸ ಹಂತದ ತಮ್ಮ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದರು. ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು 4–1 ಗೋಲುಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಸೋಲಿಸಿದರು.

ಪಂದ್ಯದ ಆರಂಭ ಕ್ಷಣಗಳಲ್ಲಿ ಮೇಲುಗೈ ಸಾಧಿಸಿದ್ದ ಸ್ಕಾಟ್ಲೆಂಡ್‌ ತಂಡ ಆರನೇ ನಿಮಿಷದಲ್ಲಿಯೇ ನಾಯಕ ಕ್ರಿಸ್‌್ ಗ್ರಾಸಿಕ್‌ ತಂದಿತ್ತ ಗೋಲಿನ ನೆರವಿನಿಂದ 1–0 ಗೋಲಿನ ಮುನ್ನಡೆ ಗಳಿಸಿತು. ಆ ನಿಮಿಷಗಳಲ್ಲಿ ಭಾರತದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಚೇತರಿಕೆಯ ಆಟವಾಡಿದ ಆಟಗಾರರು ನಂತರದ ನಿಮಿಷಗಳಲ್ಲಿ ಸ್ಕಾಟ್ಲೆಂಡ್‌ ಎದುರು ಗಮನ ಸೆಳೆದರು.

ಮೂರನೇ ಕ್ವಾರ್ಟರ್‌ನಲ್ಲಿಯೇ  ಭಾರತ ಎಲ್ಲಾ ನಾಲ್ಕೂ ಗೋಲುಗಳನ್ನು ಗಳಿಸಿದ್ದೊಂದು ವಿಶೇಷವೇ ಆಗಿದೆ. ಬಿ ಗುಂಪಿನ ಈ ಪಂದ್ಯದಲ್ಲಿ ರಮಣದೀಪ್‌ ಸಿಂಗ್‌ 31ನೇ ಮತ್ತು 34ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಆಕಾಶ್‌ ದೀಪ್‌ ಸಿಂಗ್‌ 40ನೇ ನಿಮಿಷದಲ್ಲಿ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ 42ನೇ ನಿಮಿಷದಲ್ಲಿ ತಲಾ ಒಂದು ಗೋಲು ತಂದಿತ್ತರು.

ಮೊದಲ ಕ್ವಾರ್ಟರ್‌ನಲ್ಲಿ ಸ್ಕಾಟ್ಲೆಂಡ್‌ ಆಕ್ರಮಣಕಾರಿಯಾಗಿ ಆಡಿದರು. ಆ ತಂಡದ ಆಟಗಾರರ ಅತ್ಯುತ್ತಮ ತಂತ್ರದ ಎದುರು ಪರದಾಡಿದ ಭಾರತದ ಆಟಗಾರರು ರಕ್ಷಣಾ ಆಟಕ್ಕೇ ಹೆಚ್ಚು ಒತ್ತು ನೀಡಿದರು. ಈ ನಡುವೆಯೂ ಭಾರತದ ಫಾರ್ವರ್ಡ್‌ ಆಟಗಾರರ ಕೆಲವು ಪರಿಣಾಮಕಾರಿ ದಾಳಿಯನ್ನು ಸಮರ್ಥವಾಗಿ ಅಡ್ಡಗಟ್ಟಿದ ಗೋಲ್‌ಕೀಪರ್‌ ಥಾಮಸ್‌ ಅಲೆಗ್ಸಾಂಡರ್‌ ಮಿಂಚಿದರು.

ಆರನೇ ನಿಮಿಷದಲ್ಲಿ ಭಾರತದ ಆವರಣದಲ್ಲಿ ಕೆನ್ನಿ ಬೇನ್‌ ನೀಡಿದ ಚೆಂಡನ್ನು ಗ್ರಾಸಿಕ್‌ ಕರಾರುವಾಕ್ಕಾಗಿ ಗುರಿ ಇಟ್ಟು ಕಳಿಸಿದಾಗ, ಗೋಡೆಯಂತೆ ನಿಂತಿದ್ದ ವಿಕಾಸ್‌ ದಹಿಯಾ ಗಲಿಬಿಲಿ ಗೊಂಡರು. ಚೆಂಡು ಗೋಲು ಪೆಟ್ಟಿಗೆಯೊಳಗೆ ಸೇರಿತು. ಎರಡನೇ ಕ್ವಾರ್ಟರ್‌್ ನಲ್ಲಿ ಎರಡೂ ತಂಡಗಳಿಂದ ನೀರಸ ಆಟ ಕಂಡು ಬಂದಿತು. ಚೆಂಡು ಹೆಚ್ಚು ಹೊತ್ತು ಮಿಡ್‌ಫೀಲ್ಡ್‌ನಲ್ಲೇ ಇತ್ತು. ರೋಚಕ ಆಕ್ರಮಣಕಾರಿ ತಂತ್ರಗಳು ಕಂಡು ಬರಲಿಲ್ಲ. ಭಾರತದ ಆಟಗಾರರಂತೂ ಜಾಗರೂಕತೆಯ ಆಟಕ್ಕೇ ಹೆಚ್ಚು ಒತ್ತು ನೀಡಿದ್ದರು. ಆದರೆ ಭಾರತದ ಲೆಕ್ಕಾಚಾರದ ದಾಳಿ ಯಶಸ್ಸು ಗಳಿಸಲಿಲ್ಲ. ಗೋಲುಗಳ ಅಂತರ ಸಮಗೊಳ್ಳಲಿಲ್ಲ.

ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರರೇ ವಿಜೃಂಭಿಸಿದರು. ಸರ್ದಾರ್‌ಸಿಂಗ್‌ ಅವರಂತೂ ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದರು. ಮಧ್ಯಂತರಕ್ಕೆ ಹತ್ತು ನಿಮಿಷಗಳಿದ್ದಾಗ ಕೋಚ್‌ ರೋಲೆಂಟ್‌ ಓಲ್ಟಮಸ್‌ ತಮ್ಮ ಆಟಗಾರರಿಗೆ ಕೆಲವು ಸೂಚನೆಗಳನ್ನು ನೀಡಿ ಹೊಸ ಯೋಜನೆಯಂತೆ ಆಡಲು ಸಲಹೆ ನೀಡಿದರು. ಅದು ಫಲ ನೀಡಿತು. 31ನೇ ನಿಮಿಷದಲ್ಲಿ ರಮಣದೀಪ್‌ ಏಕಾಏಕಿ ದಾಳಿಗಿಳಿದು ರಕ್ಷಣಾ ಆಟಗಾರ ವಿಲಿ ಮಾರ್ಷಲ್‌ ಅವರನ್ನು ಬಲು ಚಾಣಾಕ್ಷ್ಯತನದಿಂದ ವಂಚಿಸಿ ಗೋಲು ಗಳಿಸಿ ಅಂತರವನ್ನು ಸಮಗೊಳಿಸಿದರು.

ಇದಾಗಿ ಮೂರನೇ ನಿಮಿಷದಲ್ಲಿ ಎಸ್‌.ವಿ.ಸುನಿಲ್‌ ನೀಡಿದ ಚೆಂಡನ್ನು ರಮಣದೀಪ್‌ ಮತ್ತೊಮ್ಮೆ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು. 40ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಮೂರನೇ ಗೋಲು ಗಳಿಸುವಲ್ಲಿ ನಾಯಕ ಮನ್‌ಪ್ರೀತ್‌ ಸಿಂಗ್‌ ಮುಖ್ಯ ಪಾತ್ರ ವಹಿಸಿದ್ದರು. 42ನೇ ನಿಮಿಷದಲ್ಲಿ ಭಾರತದ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಎದುರಾಳಿ ರಕ್ಷಣಾ ಆಟಗಾರನೊಬ್ಬ ‘ಫೌಲ್‌’ ಮಾಡಿದ್ದ. ಈ ಕುರಿತು ವಿಡಿಯೋ ವಿಶ್ಲೇಷಣೆಯ ಫಲಿತಾಂಶಕ್ಕಾಗಿ ಎಸ್‌.ವಿ.ಸುನಿಲ್‌ ಮನವಿ ಮಾಡಿದರು.

ಭಾರತದ ಪರವೇ ತೀರ್ಪು ಬಂದಿತು. ಈ ಅವಕಾಶದಲ್ಲಿ ಡ್ರ್ಯಾಗ್‌ ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಹೊಡೆದ ಚೆಂಡು ಗುರಿ ಮುಟ್ಟಿತು. ಭಾರತ 4–1 ಗೋಲುಗಳ ಮುನ್ನಡೆ ಪಡೆಯಿತು. ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ರಕ್ಷಣಾತ್ಮಕವಾಗಿ ಆಡಿತು. ಸತತ ದಾಳಿಗಿಳಿದ ಸ್ಕಾಟ್ಲೆಂಡ್‌ ಆಟಗಾರರ  ಗೋಲು ಗಳಿಸುವ ಅನೇಕ ಯತ್ನಗಳನ್ನು ಗೋಲ್‌ಕೀಪರ್‌ ಆಕಾಶ್‌ ಚಿಕ್ಟೆ ವಿಫಲಗೊಳಿಸಿದರು. ಭಾರತ ಬಿ ಗುಂಪಿನ ತನ್ನ ಮುಂದಿನ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT