ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಕೊಹ್ಲಿ ಬಳಗ ಲಗ್ಗೆ

ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶದ ಸವಾಲು ಮೆಟ್ಟಿ ನಿಂತ ಭಾರತ
Last Updated 15 ಜೂನ್ 2017, 20:22 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ನಿರೀಕ್ಷೆ ಹುಸಿಯಾಗಲಿಲ್ಲ. ಅಚ್ಚರಿಯ ಫಲಿತಾಂಶ ನೀಡುವ ತಂಡ ಎಂದು ಹೆಸರು ಗಳಿಸಿರುವ ಬಾಂಗ್ಲಾದೇಶದ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಭಾರತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಎಜ್‌ಬಾಸ್ಟನ್‌ನಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಮುಂದಿಟ್ಟ 265 ರನ್‌ಗಳ ಗುರಿಯನ್ನು ಹಾಲಿ ಚಾಂಪಿಯನ್ನರು 40.1 ಓವರ್‌ಗಳಲ್ಲಿ ದಾಟಿದರು.

ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶಿಖರ್‌ ಧವನ್‌ ಸೇರಿಸಿದ 87 ರನ್‌ ಮತ್ತು ಮುರಿಯದ ಎರಡನೇ ವಿಕೆಟ್‌ಗೆ 178 ರನ್‌ ಸೇರಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ ಆಟ ಭಾರತದ ಗೆಲುವನ್ನು ಸುಲಭವಾಗಿಸಿತು.

ಟೂರ್ನಿಯಲ್ಲಿ ಅತ್ಯುತ್ತಮ ಜೊತೆಯಾಟಗಳ ಮೂಲಕ ಭಾರತವನ್ನು ಸೆಮಿಫೈನಲ್‌ಗೆ ತಲುಪಿಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್‌ ಗುರುವಾರವೂ ಮಿಂಚಿದರು. ಶಿಖರ್‌ ಆರಂಭದಲ್ಲೇ ಸ್ಫೋಟಿಸಿದರು. ಎರಡನೇ ಓವರ್‌ನಲ್ಲಿ ಎರಡು ಬೌಂಡರಿ ಗಳಿಸಿದ ಅವರು ನಾಲ್ಕನೇ ಓವರ್‌ನಲ್ಲಿ ಚೆಂಡನ್ನು ಮೂರು ಬಾರಿ ಬೌಂಡರಿ ಗೆರೆ ದಾಟಿಸಿದರು. ಎಂಟನೇ ಓವರ್‌ನಲ್ಲಿ ಅವರ ಬ್ಯಾಟ್‌ನಿಂದ ಸಿಕ್ಸರ್ ಕೂಡ ಸಿಡಿಯಿತು. 10 ಓವರ್‌ಗಳ ಮುಕ್ತಾಯಕ್ಕೆ 63 ರನ್ ಸೇರಿಸಿದ ಭಾರತದ ಖಾತೆಗೆ 10 ಬೌಂಡರಿ ಮತ್ತು ಒಂದು ಸಿಕ್ಸರ್‌ ಸೇರಿತ್ತು.

34 ಎಸೆತಗಳಲ್ಲಿ 46 ರನ್‌ ಗಳಿಸಿದ ಶಿಖರ್ ಧವನ್‌ 15ನೇ ಓವರ್‌ನಲ್ಲಿ ಮಷ್ರಫೆ ಮೊರ್ತಜಾ ಅವರ ಎಸೆತದಲ್ಲಿ ಔಟಾದರು. ನಂತರ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ರೋಮಾಂಚಕಾರಿ ಇನಿಂಗ್ಸ್‌ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನಾಯಕ ಕ್ರೀಸ್‌ಗೆ ಬಂದ ನಂತರದ ಮೊದಲ ಓವರ್‌ನಲ್ಲಿ ಎರಡು ಬೌಂಡರಿ ಸಿಡಿಸಿದ ರೋಹಿತ್ ಶರ್ಮಾ ರನ್‌ ಗಳಿಕೆಗೆ ವೇಗ ತುಂಬಿದರು. 23ನೇ ಓವರ್‌ನಲ್ಲಿ ವಿರಾಟ್‌ ಮೂರು ಬೌಂಡರಿ ಚಚ್ಚಿದರು.

ಮುಸ್ತಫಿಜುರ್ ರಹಮಾನ್ ಹಾಕಿದ 33ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನ 11ನೇ ಶತಕ ಪೂರೈಸಿದರು. ಈ ನಡುವೆ ಕೊಹ್ಲಿಯೂ ತಮ್ಮ ಅರ್ಧಶತಕ ಪೂರೈಸಿದರು. 41ನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವಿರಾಟ್ ಕೊಹ್ಲಿ ಜಯದ ಸಂಭ್ರಮದಲ್ಲಿ ತೇಲಿದರು.

ತಮೀಮ್‌, ಮುಷ್ಫಿಕುರ್‌ ಅರ್ಧಶತಕ: ಟಾಸ್‌ ಗೆದ್ದು ಬಾಂಗ್ಲಾದೇಶವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ವಿರಾಟ್‌ ಕೊಹ್ಲಿ ಮೊದಲ ಓವರ್‌ನಲ್ಲೇ ಫಲ ಕಂಡರು. ಭುವನೇಶ್ವರ್‌ ಕುಮಾರ್ ಹಾಕಿದ ಎಸೆತದಲ್ಲಿ ಸೌಮ್ಯ ಸರ್ಕಾರ್‌ ಬೌಲ್ಡ್ ಆಗಿ ಮರಳಿದರು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲರಾಗಿದ್ದ ಸರ್ಕಾರ್‌ ಸುಲಭವಾಗಿ ವಿಕೆಟ್ ಒಪ್ಪಿಸಿದರು. ಆಗ ತಂಡದ ಖಾತೆಯಲ್ಲಿದ್ದದ್ದು ಕೇವಲ ಒಂದು ರನ್‌ ಮಾತ್ರ.

ಟೂರ್ನಿಯಲ್ಲಿ ಉತ್ತಮ ರನ್ ಸರಾಸರಿ ಹೊಂದಿರುವ ತಮೀಮ್ ಇಕ್ಬಾಲ್‌ ಅವರ ಜೊತೆಗೂಡಿದ ಶಬ್ಬೀರ್‌ ರಹಮಾನ್‌ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸಮರ್ಥ ಉತ್ತರ ನೀಡಿದರು. ಜಸ್‌ಪ್ರೀತ್ ಬೂಮ್ರಾ ಹಾಕಿದ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಗಳಿಸಿದರು. ಮೂರನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಎರಡು ಬಾರಿ ಬೌಂಡರಿಗೆ ಅಟ್ಟಿದರು. ನಾಲ್ಕನೇ ಓವರ್‌ನಲ್ಲಿ ತಮೀಮ್ ಇಕ್ಬಾಲ್ ಕೂಡ ಬೌಂಡರಿ ಗಳಿಸಿದರು. ಆದರೆ ತಂಡದ ಮೊತ್ತ 31 ಆದಾಗ ಇವರ ಜೊತೆಯಾಟಕ್ಕೆ ಭುವನೇಶ್ವರ್‌ ಕುಮಾರ್‌ ಕೊನೆ ಹಾಡಿದರು. ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಜಡೇಜ ಪಡೆದ ಕ್ಯಾಚ್‌ಗೆ ಶಬ್ಬೀರ್ ರಹಮಾನ್ ಬಲಿಯಾದರು.

ಈ ಹಂತದಲ್ಲಿ ಬಾಂಗ್ಲಾದೇಶದ ಇನಿಂಗ್ಸ್‌ಗೆ ಬೌಲರ್‌ಗಳು ಬೇಗನೇ ಅಂತ್ಯ ಹಾಡುವರು ಎಂಬ ನಿರೀಕ್ಷೆ ಮೂಡಿತು. ಆದರೆ ತಮೀಮ್ ಇಕ್ಬಾಲ್‌ ಮತ್ತು ವಿಕೆಟ್ ಕೀಪರ್‌ ಮುಷ್ಫಿಕುರ್ ರಹೀಮ್‌ ಬೌಲರ್‌ಗಳಿಗೆ ತಲೆನೋವಾದರು. 123 ರನ್‌ಗಳ ಜೊತೆಯಾಟವಾಡಿದ ಇವರಿಬ್ಬರು ತಂಡವನ್ನು 150ರ ಗಡಿ ದಾಟಿಸಿದರು. ಎದುರಿಸಿದ ಆರನೇ ಎಸೆತದಲ್ಲಿ ಸ್ಫೋಟಿಸಲು ಆರಂಭಿಸಿದ ಮುಷ್ಫಿಕುರ್‌ ನಿರಂತರ ಮೂರು ಬೌಂಡರಿ ಗಳಿಸಿ ಮಿಂಚಿದರು. ಮತ್ತೊಂದೆಡೆ ತಮೀಮ್ ಇಕ್ಬಾಲ್‌ ತಾಳ್ಮೆಯಿಂದ  ರನ್‌ ಗಳಿಸಿದರು.

ಕಳಪೆ ಎಸೆತಗಳನ್ನು ದಂಡಿಸಿದರು. ಪಾಂಡ್ಯ ಹಾಕಿದ 17ನೇ ಓವರ್‌ನಲ್ಲಿ ಮುನ್ನುಗ್ಗಿ ಸಿಕ್ಸರ್ ಸಿಡಿಸಿದರು. 19ನೇ ಓವರ್‌ನಲ್ಲಿ ಜಡೇಜ ಎಸೆತದಲ್ಲಿ ಬೌಂಡರಿ ಸಿಡಿಸಿ ಅರ್ಧಶತಕ ಪೂರೈಸಿದರು. ರವಿಚಂದ್ರನ್ ಅಶ್ವಿನ್‌ 22ನೇ ಓವರ್‌ನಲ್ಲಿ ನಿರಂತರ ಮೂರು ಬೌಂಡರಿ ಬಿಟ್ಟುಕೊಟ್ಟರು. 27ನೇ ಓವರ್‌ನಲ್ಲಿ ಮುಷ್ಫಿಕುರ್ ಕೂಡ ಅರ್ಧಶತಕ ಪೂರೈಸಿದರು. ಮುಂದಿನ ಓವರ್‌ನಲ್ಲಿ ಕೇದಾರ್‌ ಜಾದವ್‌ಗೆ ತಮೀಮ್‌ ಇಕ್ಬಾಲ್‌ ವಿಕೆಟ್ ಒಪ್ಪಿಸಿದರು.
ನಂತರ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಬಾಂಗ್ಲಾದೇಶ 40 ಓವರ್‌ಗಳಲ್ಲಿ 200 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯ 10 ಓವರ್‌ಗಳನ್ನು ಹಂಚಿಕೊಂಡ ಭುವನೇಶ್ವರ್‌ ಕುಮಾರ್‌, ಬೂಮ್ರಾ ಮತ್ತು ಅಶ್ವಿನ್‌ ಎದುರಾಳಿಗಳಿಗೆ ಕೇವಲ 57 ರನ್‌ ಮಾತ್ರ ಬಿಟ್ಟುಕೊಟ್ಟರು.

18ರಂದು ಫೈನಲ್‌: ಟೂರ್ನಿಯ ಫೈನಲ್ ಪಂದ್ಯ ಜೂನ್ 18ರಂದು ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಲಿವೆ. ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು.

ಸ್ಕೋರ್‌ಕಾರ್ಡ್‌
ಬಾಂಗ್ಲಾದೇಶ  7 ಕ್ಕೆ 264   (50  ಓವರ್‌ಗಳಲ್ಲಿ)

ತಮೀಮ್‌ ಇಕ್ಬಾಲ್‌ ಬಿ ಕೇದಾರ್‌ ಜಾದವ್‌  70
ಸೌಮ್ಯ ಸರ್ಕಾರ್‌ ಬಿ ಭುವನೇಶ್ವರ್‌ ಕುಮಾರ್‌  0
ಸಬ್ಬೀರ್‌ ರಹಮಾನ್‌ ಸಿ ರವೀಂದ್ರ ಜಡೇಜ ಬಿ ಭುವನೇಶ್ವರ್‌  19
ಮುಷ್ಫಿಕುರ್ ರಹೀಮ್‌ ಸಿ ಕೊಹ್ಲಿ ಬಿ ಕೇದಾರ್ ಜಾಧವ್‌  61
ಶಕೀಬ್ ಅಲ್ ಹಸನ್‌ ಸಿ ದೋನಿ ಬಿ ರವೀಂದ್ರ ಜಡೇಜ  15
ಮಹಮ್ಮದುಲ್ಲಾ ಬಿ ಬೂಮ್ರಾ  21
ಮೊಸಾಡೆಕ್ ಹೊಸೈನ್‌ ಸಿ ಮತ್ತು ಬಿ ಬೂಮ್ರಾ  15
ಮಷ್ರಫೆ ಮೊರ್ತಜಾ ಔಟಾಗದೆ  30
ತಸ್ಕಿನ್ ಅಹಮ್ಮದ್‌ ಔಟಾಗದೆ  11
ಇತರೆ: (ಲೆಗ್‌ಬೈ 8, ವೈಡ್‌ 7, ನೋಬಾಲ್‌ 2, ಡಂಡ 5 ) 22
ವಿಕೆಟ್‌ ಪತನ: 1–1 (ಸೌಮ್ಯ ಸರ್ಕಾರ್‌, 0.6), 31–2 (ಶಬ್ಬೀರ್ ರಹಮಾನ್‌, 6.5), 154–3 (ತಮೀಮ್ ಇಕ್ಬಾಲ್‌, 27.6),
177–4 (ಶಕೀಬ್ ಅಲ್‌ ಹಸನ್‌, 34.2), 179–5 (ಮುಷ್ಫಿಕುರ್ ರಹೀಮ್‌, 35.2), 218–6 (ಮೊಸಾಡೆಕ್ ಹೊಸೈನ್‌, 42.3), 229–7 (ಮಹಮ್ಮದುಲ್ಲಾ, 44.6).
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 10–1–53–2 (ವೈಡ್‌1) ಜಸ್‌ಪ್ರೀತ್ ಬೂಮ್ರಾ 10–1–40–2, ರವಿಚಂದ್ರನ್ ಅಶ್ವಿನ್‌ 10–0–54–0 (ವೈಡ್‌3)
ಹಾರ್ದಿಕ್ ಪಾಂಡ್ಯ 4–0–34–0 (ನೋಬಾಲ್‌ 2, ವೈಡ್‌ 2), ರವೀಂದ್ರ ಜಡೇಜ 10–0–48–1, ಕೇದಾರ್ ಜಾಧವ್‌ 6–0–22–2 (ವೈಡ್‌ 1)

ಭಾರತ  1ಕ್ಕೆ  265   (40.1  ಓವರ್‌ಗಳಲ್ಲಿ)
ರೋಹಿತ್ ಶರ್ಮಾ ಔಟಾಗದೆ  123
ಶಿಖರ್‌ ಧವನ್‌ ಸಿ ಮೊಸಾಡೆಕ್‌, ಬಿ ಮೊರ್ತಜಾ  46
ವಿರಾಟ್ ಕೊಹ್ಲಿ ಔಟಾಗದೆ  96
ಇತರೆ:   00
ವಿಕೆಟ್‌ ಪತನ:   1–87 (ಶಿಖರ್ ಧವನ್‌, 14.4)

ಬೌಲಿಂಗ್‌: ಮಷ್ರಫೆ ಮೊರ್ತಜಾ 8–0–29–1, ಮುಸ್ತಫಿಜುರ್ ರಹಮಾನ್‌ 6–0–53–0, ಟಸ್ಕಿನ್ ಅಹಮ್ಮದ್‌ 7–0–49–0, ರುಬೆಲ್‌ ಹೊಸೈನ್‌  6–0–46–0
ಶಕೀಬ್ ಅಲ್ ಹಸನ್‌ 9–0–54–0, ಮೊಸಾಡೆಕ್ ಹೊಸೈನ್‌ 2–0–13–0
ಮಹಮ್ಮದುಲ್ಲಾ 1–0–10–0, ಶಬ್ಬೀರ್ ರಹಮಾನ್‌ 1.1–0–11–0

ಫಲಿತಾಂಶ: ಭಾರತಕ್ಕೆ ಒಂಬತ್ತು ವಿಕೆಟ್‌ಗಳ ಜಯ; ಫೈನಲ್‌ಗೆ ಪ್ರವೇಶ
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ (ಭಾರತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT