ಆಸ್ಪತ್ರೆಯಿಂದ ಪರಾರಿ: ಮತ್ತೆ ಪ್ರತ್ಯಕ್ಷ

7
‘ಪ್ರಹಸನ’ಕ್ಕೆ ಎಸ್‌ಐ ಸೇರಿ ಮೂವರ ಅಮಾನತು

ಆಸ್ಪತ್ರೆಯಿಂದ ಪರಾರಿ: ಮತ್ತೆ ಪ್ರತ್ಯಕ್ಷ

Published:
Updated:
ಆಸ್ಪತ್ರೆಯಿಂದ ಪರಾರಿ: ಮತ್ತೆ ಪ್ರತ್ಯಕ್ಷ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ರತ್ನಾಕರ ಶೆಟ್ಟಿ, ಆಸ್ಪತ್ರೆಯಿಂದ ಬುಧವಾರ ರಾತ್ರಿ ಪರಾರಿಯಾಗಿ, ಪೊಲೀಸರ ಅಮಾನತಿನ ನಂತರ ಮತ್ತೆ ಆಸ್ಪತ್ರೆಯಲ್ಲಿ ಗುರುವಾರ ಪ್ರತ್ಯಕ್ಷವಾಗಿದ್ದಾರೆ.ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಅಧ್ಯಕ್ಷರೂ ಆಗಿರುವ ರತ್ನಾಕರ ಶೆಟ್ಟಿ, ಪೊಲೀಸ್ ಕಾವಲಿನ ನಡುವೆಯೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು.ಇದರಿಂದಾಗಿ ಕರ್ತವ್ಯ ಲೋಪದ ಆರೋಪದಲ್ಲಿ ಪುತ್ತೂರು ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಓಮನಾ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶ ಹೊರಬೀಳುತ್ತಿದ್ದಂತೆಯೇ ಗುರುವಾರ ಮಧ್ಯಾಹ್ನದ ವೇಳೆಗೆ ರತ್ನಾಕರ ಶೆಟ್ಟಿ ಮತ್ತೆ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾದರು.ಪರಾರಿ ಅಲ್ಲ: ‘ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ರತ್ನಾಕರ ಶೆಟ್ಟಿ ಪರಾರಿಯಾಗುವ ಪ್ರಶ್ನೆಯೇ ಇಲ್ಲ. ಎದೆನೋವು ಕಾಣಿಸಿಕೊಂಡಿದ್ದರಿಂದ ನಾನೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆ’ ಎಂದು ಪುತ್ತೂರಿನ ಆದರ್ಶ ಆಸ್ಪತ್ರೆ ವೈದ್ಯ ಡಾ. ಪ್ರಸಾದ್ ಭಂಡಾರಿ ಸ್ಪಷ್ಟಪಡಿಸಿದರು.‘ರಾತ್ರಿ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯಂತೆ ನನ್ನ ಕಾರಿನಲ್ಲಿ ಚಾಲಕ ಜಗದೀಶ್ ಸಹಾಯದಿಂದ ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಎದೆನೋವು ಕಡಿಮೆಯಾಗಿದ್ದರಿಂದ ವೈದ್ಯರ ಸಲಹೆ ಪಡೆದು ಮತ್ತೆ ಪುತ್ತೂರಿನ ಆಸ್ಪತ್ರೆಗೆ ಬಂದು ದಾಖಲಾಗಿದ್ದೇನೆ’ ಎಂದು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ರತ್ನಾಕರ ಶೆಟ್ಟಿ ತಿಳಿಸಿದ್ದಾರೆ.ಪಿಎಸ್ಐ ಅಸ್ವಸ್ಥ

ಅಮಾನತು ಆದೇಶ ಪ್ರಕಟವಾದ ಬೆನ್ನಲ್ಲೇ ಪುತ್ತೂರು ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಓಮನಾ ಅಸ್ವಸ್ಥಗೊಂಡಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ರಕ್ತದೊತ್ತಡ ಏರುಪೇರಾಗಿದ್ದರಿಂದ ಅಸ್ವಸ್ಥ ಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry