ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಲ್ಲಿ ನೀರಿನ ಲೋಕ ಅನಾವರಣ

Last Updated 15 ಜೂನ್ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವೇಶದಲ್ಲಿ ಎದುರಾಗುವ ಚಿಕ್ಕ ಸೇತುವೆ. ಅದರ ಮೇಲೆ ಜಲಚರಗಳ ಚಿತ್ರಗಳಿರುವ ಬಣ್ಣಗಳ ಹಾಸು. ಬದಿಯಲ್ಲಿ ಸಾವಿರ ಲೀಟರ್‌ ಅಳತೆಯ ಮಾಪಕ, ಹಾಗೆ ಮುಂದುವರಿದರೆ ಎದುರಾಗುವುದು ಕಲಾಕೃತಿಗಳ ಅಂಗಳ.

ಇಲ್ಲಿ ನೀರಿನ ಮಹತ್ವ ಅರ್ಥೈಸಿಕೊಡುವ ಚಿತ್ರಕಲೆ, ಛಾಯಾಚಿತ್ರ, ಸಾಕ್ಷ್ಯಚಿತ್ರ ಮತ್ತು ಕಲಾಕೃತಿಗಳನ್ನು ನೀವು ಕಾಣಬಹುದು. ವೆಂಕಟಪ್ಪ ಆರ್ಟ್‌ ಗ್ಯಾಲರಿ ವೇದಿಕೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಮುಂಗಾರು ಸಂಭ್ರಮ–ನೀರು’ ಕಲಾಪ್ರದರ್ಶನದಲ್ಲಿ ಕಂಡ ಚಿತ್ರಣವಿದು.

ನೀರು ಮನುಷ್ಯನ ಬಳಕೆಗೆ ಮಾತ್ರವಲ್ಲ, ಮನರಂಜನೆ, ವಿದ್ಯುಚ್ಛಕ್ತಿ, ಜಲಚರಗಳಿಗೆ ಆಸರೆ ಸೇರಿದಂತೆ ಪರಿಸರದ ಸಮತೋಲನಕ್ಕೆ ಹೇಗೆ ಸಹಕಾರಿಯಾಗಿದೆ ಎಂಬುದನ್ನು ಅವನೀತ್‌ ಸಿಂಗ್‌ ಅವರ ಕಲಾರಚನೆ ನಿಮಗೆ ತಿಳಿಸುತ್ತದೆ.

ಅದರ ಬದಿಯಲ್ಲಿ ಪ್ರದರ್ಶಿತವಾಗುತ್ತಿರುವ ಸ್ಮೃತಿ ಮೆಹ್ರಾ ತಯಾರಿಸಿರುವ ‘ತಡೆ’ ಎಂಬ ಸಾಕ್ಷ್ಯಚಿತ್ರ ಗಣೇಶ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವಿಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ತಿಳಿಹೇಳುತ್ತದೆ.

ಇಲ್ಲಿರುವ ನಳ, ಅದರ ಕೆಳಗಿನ ತಾಮ್ರದ ಬಿಂದಿಗೆ, ಲೋಟಗಳು ನೀರು ತುಂಬುವ ಸ್ಥಳದಲ್ಲಿ ಹೆಂಗಳೆಯರ ಹರಟೆ ನೆನಪಿಸುತ್ತವೆ. ಚಾವಣಿಗೆ ಜೋತುಬಿದ್ದಿರುವ ಚಾಪೆಯಲ್ಲಿ ಮೂಡಿಸಿರುವ ಜನಪದದ ಸಾಲುಗಳು, ಆಧುನಿಕ ಕವಿತೆಗಳು ಮತ್ತು ವಚನಗಳಲ್ಲೂ ನೀರಿನ ವರ್ಣನೆಯೇ ಇದೆ.

ಕೆರೆಗಳ ದುಸ್ಥಿತಿ ಕುರಿತು ಬೆಳಕು ಚೆಲ್ಲಲು  ಕಲಾವಿದೆ ಡಿಂಪಲ್‌ ಷಾ ಅವರು ತ್ಯಾಜ್ಯ ನೀರಿನಿಂದ ರೂಪಿಸಿರುವ ಕಲಾಕೃತಿ ಗಮನ ಸೆಳೆಯುತ್ತದೆ.

ಗ್ಯಾಲರಿಯ ಪ್ರಾಂಗಣದಲ್ಲಿ ಅಳವಡಿಸಿರುವ ಸಾವಿರ ಲೀಟರ್‌ ಅಳತೆಯ ಮಾಪಕ ನೀರಿನ ವ್ಯಾಪಾರ ಹಾಗೂ ಜಲವನ್ನು ಮಿತವಾಗಿ ಬಳಸಬೇಕು ಎಂಬ ಸಂದೇಶ ನೀಡುತ್ತದೆ.  ಜೂನ್‌ 21ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಅಲಕಾ ರಾವ್‌, ಬಾಲಾಜಿ, ಜಿ.ಎಸ್.ಭವಾನಿ, ಆರ್.ದೀಪಕ್‌, ಕಪಿಲ್‌, ಡಿ.ಎಸ್‌.ಲೊಲಾಸೂರಿ, ಮೀರಾ, ಪರಮೇಶ್‌, ಶರ್ಮಿಳಾ ಅವರ ಕಲಾಕೃತಿಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT