ಬದುಕು ಬದಲಿಸಿದ ‘ಜ್ಯೂಲಿ’ ಸಿನಿಮಾ!

7
ಬೀಳ್ಕೊಡುಗೆ ಸಮಾರಂಭದಲ್ಲಿ ಗುಟ್ಟು ಬಿಚ್ಚಿಟ್ಟ ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲಗೌಡ

ಬದುಕು ಬದಲಿಸಿದ ‘ಜ್ಯೂಲಿ’ ಸಿನಿಮಾ!

Published:
Updated:
ಬದುಕು ಬದಲಿಸಿದ ‘ಜ್ಯೂಲಿ’ ಸಿನಿಮಾ!

ಬೆಂಗಳೂರು: ಆವೊತ್ತು ನಾನು ವಿ.ವಿ.ಪುರಂ ಕಾನೂನು ಕಾಲೇಜಿನ ಕ್ಲರ್ಕ್‌ ಹನುಮಂತೇಗೌಡನಿಗೆ ಕುಡಿಸಿದ ಒಂದು ಬಿಯರ್‌ ಮತ್ತು ಟಾಕೀಸಿಗೆ ಕರೆದುಕೊಂಡು ಹೋಗಿ ತೋರಿಸಿದ ‘ಜ್ಯೂಲಿ’ ಸಿನಿಮಾ ನನ್ನ ಬದುಕನ್ನೇ ಬದಲಿಸಿತು...

ಕರ್ನಾಟಕ ಹೈಕೋರ್ಟ್‌ನಲ್ಲಿ 10 ವರ್ಷ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ಗುರುವಾರ ನಿವೃತ್ತಿಯಾದ ಎ.ಎನ್‌.ವೇಣುಗೋಪಾಲಗೌಡ ಅವರು ಬೆಂಗಳೂರು ವಕೀಲರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ, ‘ನಾನು ಹೇಗೆ ಕಾನೂನು ವಿದ್ಯಾರ್ಥಿ ಯಾದೆ ’ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ವೇಣುಗೋಪಾಲಗೌಡರು ಹೇಳಿದ್ದು: ಕೋಲಾರ ಜಿಲ್ಲೆಯ ಹಿಂದುಳಿದ ಮುಳಬಾಗಿಲು ತಾಲ್ಲೂಕಿನ ಅಂಬ್ಲಿಕಲ್‌ನಂತಹ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ಬಾಲ್ಯದಲ್ಲಿ ಬಡತನ, ಕಷ್ಟ, ಹಸಿವು ಏನೆಂದು ಅನುಭವಿಸಿದನು. ಎಸ್ಸೆಸ್ಸೆಲ್ಸಿವರೆಗೂ ಚಪ್ಪಲಿಯನ್ನೇ ಮೆಟ್ಟಿರಲಿಲ್ಲ. ತುಂಬಾ ಕಷ್ಟಪಟ್ಟು ಬಿಎಸ್‌ಸಿ ಮುಗಿಸಿ ಸ್ನಾತಕೋತ್ತರ ಪದವಿ ಸೇರಲು ಪ್ರಯತ್ನಿಸಿದೆ. ಸೀಟು ಸಿಗಲಿಲ್ಲ.

ಹಿತೈಷಿಗಳ ಸಲಹೆ ಮೇರೆಗೆ ಕಾನೂನು ಪದವಿ ಸೇರಲು ವಿ.ವಿ.ಪುರಂ ಕಾಲೇಜಿಗೆ ಹೋದೆ. ಆದರೆ, ಅಷ್ಟರಲ್ಲಾಗಲೇ ಆ ಶೈಕ್ಷಣಿಕ ವರ್ಷದ ಪ್ರವೇಶಾತಿ ಮುಗಿದು ಹೋಗಿತ್ತು. ಏನು ಮಾಡುವುದೆಂದು ತೋಚದೆ ಸಪ್ಪೆ ಮೋರೆ ಹಾಕಿಕೊಂಡು ನಿಂತಿದ್ದೆ. ಆಗ ಕಾಲೇಜಿನ ಕ್ಲರ್ಕ್‌ ಹನುಮಂತೇಗೌಡ ನನ್ನನ್ನು ಕರೆದು ವಿಚಾರಿಸಿದ. ಸೀಟು ಕೊಡಿಸುತ್ತೇನೆ. ಒಂದಷ್ಟು ಖರ್ಚು ಮಾಡಬೇಕು ಎಂದ!

ಏನು ಖರ್ಚು ಮಾಡಬೇಕು ಎಂದು   ಕೇಳಿದ್ದಕ್ಕೆ, ‘ಜ್ಯೂಲಿ’ ಸಿನಿಮಾ ತೋರಿಸಬೇಕು ಹಾಗೂ ಸೆವೆನ್‌ ಸ್ಟಾರ್‌ ಬಾರ್‌ನಲ್ಲಿ ಒಂದು ಬಿಯರ್‌ ಕುಡಿಸಬೇಕು ಎಂದ..!!

ಸೀಟು ಸಿಗುವ ಖುಷಿಯಲ್ಲಿ ಒಪ್ಪಿಕೊಂಡೆ. ಕಾಲೇಜಿನಲ್ಲಿ ಪ್ರವೇಶ ಲಭ್ಯವಾಯಿತು. ಇಲ್ಲದೇ ಹೋಗಿದ್ದರೆ ನನ್ನ ಭವಿಷ್ಯ ಇನ್ನೇನು ಆಗುತ್ತಿತ್ತೊ ಗೊತ್ತಿರಲಿಲ್ಲ ಎಂದು ತಮ್ಮ ಇಡೀ ಬದುಕನ್ನು ಬಿಚ್ಚಿಟ್ಟರು.

ಕೊರತೆ: ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಮಾತನಾಡಿ, ‘ವೇಣುಗೋಪಾಲಗೌಡರ ನಿವೃತ್ತಿಯಿಂದ ಹೈಕೋರ್ಟ್‌ ಮತ್ತೊಬ್ಬ ಸಮರ್ಥ ನ್ಯಾಯಮೂರ್ತಿಯ ಕೊರತೆ ಅನುಭವಿಸುವಂತಾಗಿದೆ’ ಎಂದರು.

***

ಸಂಖ್ಯೆ 29ಕ್ಕೆ ಇಳಿಕೆ

ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62. ಆದರೆ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ 30.  ವೇಣುಗೋಪಾಲಗೌಡ ಅವರ ನಿವೃತ್ತಿಯಿಂದಾಗಿ ಈ ಸಂಖ್ಯೆ ಈಗ 29ಕ್ಕೆ ಇಳಿದಿದೆ.

ಮುಂದಿನ ತಿಂಗಳ 19ರಂದು ನ್ಯಾಯಮೂರ್ತಿ ಬಿ.ಮನೋಹರ ಮತ್ತು ಇದೇ ವರ್ಷದ ಆಗಸ್ಟ್‌ 23ರಂದು ಅಶೋಕ ಬಿ.ಹಿಂಚಿಗೇರಿ ನಿವೃತ್ತಿ ಆಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry