ಕಾಫಿನಾಡಲ್ಲಿ ಹೆಚ್ಚಿದ ಪ್ರವಾಸಿಗರ ಕಲರವ

7

ಕಾಫಿನಾಡಲ್ಲಿ ಹೆಚ್ಚಿದ ಪ್ರವಾಸಿಗರ ಕಲರವ

Published:
Updated:
ಕಾಫಿನಾಡಲ್ಲಿ ಹೆಚ್ಚಿದ ಪ್ರವಾಸಿಗರ ಕಲರವ

ಚಿಕ್ಕಮಗಳೂರು:  ಕಾಫಿ ಜಿಲ್ಲೆಯ ಸೊಬಗಿಗೆ ಮನಸೋಲದವರೇ ಇಲ್ಲ, ಇಲ್ಲಿನ ಪ್ರವಾಸಿತಾಣಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ಸಂದಣಿ ಹೆಚ್ಚುತ್ತಿದೆ. 

ಹಿತಕರ ವಾತಾವರಣ, ಮನಮೋಹಕ ಜಲಪಾತಗಳು, ಗಿರಿಶ್ರೇಣಿಯ ಪ್ರಕೃತಿ ಸೊಬಗು, ಪ್ರಸಿದ್ಧ ದೇಗುಲಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ರಜಾ ದಿನಗಳನ್ನು ಉಲ್ಲಾಸದಿಂದ ಕಳೆಯಲು ಸಾಫ್ಟ್‌ವೇರ್‌ ಎಂಜಿನಿಯರುಗಳು, ಕಂಪೆನಿಗಳ ಉದ್ಯೋಗಿಗಳು, ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಪ್ರವಾಸಿ ತಾಣಗಳ ಕಡೆಗೆ ಮುಖ ಮಾಡುತ್ತಾರೆ.

ವಾರಾಂತ್ಯದ ದಿನಗಳಲ್ಲಿ ವಸತಿ ಗೃಹಗಳು, ಹೋಂ ಸ್ಟೆಗಳು ಪ್ರವಾಸಿಗರಿಂದ ಗಿಜಿಗುಡುತ್ತವೆ. ಕಾಂಕ್ರಿಟ್‌ ಕಾಡಿನಿಂದ ಹೊರಬಂದು ಬೆಟ್ಟ, ಹಸಿರು, ಮಳೆ, ಚಳಿ, ಜಲಪಾತ, ವನ್ಯಜೀವಿ ಸಂಕುಲಗಳ ಕಲರವವನ್ನು ಸವಿದು ತೆರಳುತ್ತಾರೆ.

ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕೆಮ್ಮಣ್ಣು ಗುಂಡಿ ಕಲ್ಲತ್ತಿ ಮತ್ತು ಹೆಬ್ಬೆ ಜಲಪಾತ, ಶೃಂಗೇರಿ, ಹೊರನಾಡು, ಅಮೃತಾಪುರ ಹಿರೇಮಗಳೂರು, ಬೆಳವಾಡಿ, ಕುದುರೆಮುಖ ಮೊದಲಾದವು ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ. ಪ್ರವಾಸಿಗರ ಪಾಲಿಗೆ ಈ ಜಿಲ್ಲೆಯು ಸ್ವರ್ಗವಾಗಿ ಪರಿಣಮಿಸಿದೆ.

2015ರಲ್ಲಿ 79,477,20 ಪ್ರವಾಸಿಗರು, 2016ರಲ್ಲಿ 83,29,207 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌ ಮೊದಲಾದ ದೇಶಗಳು, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮೊದಲಾದ ರಾಜ್ಯಗಳಿಂದಲೂ ಪ್ರವಾಸಿಗರು ದಂಡು ಹರಿದು ಬರುತ್ತಿದೆ. 2015ರಲ್ಲಿ 2,462 ಹಾಗೂ 2016ರಲ್ಲಿ 1,843 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 

ಮಳ್ಳಯ್ಯನಗಿರಿಗೆ ಮಂಗಳವಾರ ಬಂದಿದ್ದ ಬೆಂಗಳೂರಿನ ಹೈಕೋರ್ಟ್‌ ವಕೀಲ ರಮೇಶ್‌ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ‘ವರ್ಷದಲ್ಲಿ ಒಮ್ಮೆಯಾದರೂ ಬರುತ್ತೇವೆ. ಸ್ನೇಹಿತರ ಬರ್ತ್‌ಡೇ, ವಿವಾಹ ವಾರ್ಷಿಕೋತ್ಸವಗಳನ್ನು ಇಲ್ಲಿ ಆಚರಿಸಿ ಸಂಭ್ರಮಪಡುತ್ತವೆ. ಇಲ್ಲಿಗೆ ಬಂದರೆ ಮನಸ್ಸಿಗೆ ಆಹ್ಲಾದ ಸಿಗುತ್ತದೆ’ ಎಂದರು.

‘ವಾರಾಂತ್ಯದ ದಿನಗಳಲ್ಲಿ ಗೆಳತಿಯರೆಲ್ಲ ಪ್ರವಾಸಿ ಸ್ಥಳಗಳಿಗೆ ಟ್ರಿಪ್‌ ತೆರಳುತ್ತೇವೆ. ಇಲ್ಲಿನ ಬೆಟ್ಟಗಳು, ಹಸಿರು ವನರಾಶಿ ಎಲ್ಲರನ್ನೂ ಆಕರ್ಷಿಸುತ್ತವೆ. ಈ ಊರಿನ ಕಾಫಿ ಸ್ವಾದ ಮರೆಯುವಂತಿಲ್ಲ. ಬೆಟ್ಟಗಳಲ್ಲಿ ತಿರುಗುವುದು ಖುಷಿ ಕೊಡುತ್ತದೆ’ ಎಂದು ಶಿವಮೊಗ್ಗದ ಜೆಎನ್‌ಎನ್‌ಸಿಇ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಹೇಳಿದರು.

‘ಪ್ರವಾಸಿ ತಾಣಗಳು ಇಲ್ಲಿ ಎಲ್ಲವೂ ಚೆನ್ನಾಗಿವೆ. ಆದರೆ, ರಸ್ತೆಗಳು ಹದಗೆಟ್ಟಿವೆ. ಬಾಬಾಬುಡನ್‌ಗಿರಿ ರಸ್ತೆ ಬಹಳ ಹದಗೆಟ್ಟಿದೆ. ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಇಲ್ಲಿ ಹರಸಾಹಸ ಪಡಬೇಕು. ರಸ್ತೆಗಳ ರಿಪೇರಿಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಉದ್ಯಮಿ ಮಹೇಶ್‌ ಹೇಳಿದರು.

‘ವಾರಾಂತ್ಯದ ದಿನಗಳಲ್ಲಿ ವಸತಿಗೃಹಗಳಲ್ಲಿ ಕೊಠಡಿಗಳೆಲ್ಲವೂ ಭರ್ತಿಯಾಗುತ್ತವೆ. ಹೋಟೆಲ್‌ಗಳಲ್ಲಿ ವ್ಯಾಪಾರ ಚೆನ್ನಾಗಿ ಆಗುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಕೆ.ಎನ್‌.ರಾಜಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry