ಜಿಎಸ್‌ಟಿ ಮಸೂದೆಗೆ ವಿಧಾನಸಭೆ ಒಪ್ಪಿಗೆ

7

ಜಿಎಸ್‌ಟಿ ಮಸೂದೆಗೆ ವಿಧಾನಸಭೆ ಒಪ್ಪಿಗೆ

Published:
Updated:
ಜಿಎಸ್‌ಟಿ ಮಸೂದೆಗೆ ವಿಧಾನಸಭೆ ಒಪ್ಪಿಗೆ

ಬೆಂಗಳೂರು: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಮಸೂದೆ– 2017ಕ್ಕೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.ಮಸೂದೆ ಮಂಡಿಸಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕಾಯ್ದೆಗೆ ಪೂರಕವಾಗಿ ಈ ಮಸೂದೆ ಮಂಡಿಸಲಾಗಿದೆ. ಈ ವಿಷಯದಲ್ಲಿ ನಮಗೆ ಸೀಮಿತವಾದ ಅಧಿಕಾರವಿದೆ. ಇಲ್ಲಿ ನಡೆಯುವ ಚರ್ಚೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ವ್ಯಕ್ತವಾದ  ಅಭಿಪ್ರಾಯಗಳನ್ನು ಜಿಎಸ್‌ಟಿ ಮಂಡಳಿ ಗಮನಕ್ಕೆ ತರಲಾಗುವುದು’ ಎಂದರು.ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಜಿಎಸ್‌ಟಿ ಕುರಿತಂತೆ ವರ್ತಕರಲ್ಲಿ ಮತ್ತು ಗ್ರಾಹಕರಲ್ಲಿ ಇನ್ನೂ ಗೊಂದಲಗಳಿವೆ. ರಾಜ್ಯದಲ್ಲಿ 6 ಲಕ್ಷ ವರ್ತಕರಿದ್ದಾರೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯವಿದೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಸ್ಥಳೀಯ ಮಟ್ಟದಲ್ಲಿ ಮಾಡಬೇಕು’ ಎಂದರು.‘ಜಿಎಸ್‌ಟಿಯಿಂದ ಉತ್ಪಾದಕರಿಗೆ ಹೆಚ್ಚಿನ ಲಾಭ ಆಗಲಿದೆ. ಈ ಲಾಭ ಗ್ರಾಹಕರಿಗೆ ಸಿಗಬೇಕು. ಜೂನ್‌ 31ರಂದು ಬಾಕಿ ಉಳಿದ ದಾಸ್ತಾನನ್ನು ಜುಲೈ 1ರಿಂದ ಜಿಎಸ್‌ಟಿ ಅನುಷ್ಠಾನ ಜಾರಿಯಾಗುತ್ತಿರುವುದರಿಂದ ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವರ್ತಕರಲ್ಲಿ ಸ್ಪಷ್ಟತೆ ಇಲ್ಲ’ ಎಂದೂ ಅವರು  ಈ ವೇಳೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ‘ಜಿಎಸ್‌ಟಿ ನೋಂದಣಿ ನಮ್ಮ ರಾಜ್ಯದಲ್ಲಿ ಶೇ 90ರಷ್ಟು ಪೂರ್ಣಗೊಂಡಿದ್ದು,  ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿದ ಪೂರ್ವ ಸಿದ್ಧತೆ ಮಾಡಿಕೊಳ್ಳುವಲ್ಲಿಯೂ ಮುಂದಿದ್ದೇವೆ. ವರ್ತಕರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಸ್ಪಷ್ಟಪಡಿಸಿದರು.‘2011ರಲ್ಲಿ ಯುಪಿಎ ಸರ್ಕಾರ ಜಿಎಸ್‌ಟಿ ಜಾರಿಗೆ ಮುಂದಾದಾಗ ಅಂದು ಬಿಜೆಪಿ ಅಧಿಕಾರದಲ್ಲಿದ್ದ ಕೆಲವು ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿದ್ದವು. ಪರಿಣಾಮವಾಗಿ ಕಾಯ್ದೆ ಜಾರಿಗೆ ಏಳು ವರ್ಷ ವಿಳಂಬವಾಗಿದೆ. ನಾವು ವಿರೋಧ ಪಕ್ಷದಲ್ಲಿದ್ದರೂ ಅದನ್ನು ಬೆಂಬಲಿಸಿದ್ದೇವೆ. ಜಿಎಸ್‌ಟಿ ಮಂಡಳಿಯಲ್ಲೂ ಆಕ್ಷೇಪ ವ್ಯಕ್ತಪಡಿಸಿಲ್ಲ’ ಎಂದರು.‘ಜಿಎಸ್‌ಟಿಯಲ್ಲಿ ಒಣ ದ್ರಾಕ್ಷಿಗೆ ಶೇ 5 ತೆರಿಗೆ ವಿಧಿಸಲಾಗಿದೆ. ಇದರಿಂದ ದ್ರಾಕ್ಷಿ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ ಅದಕ್ಕೆ ತೆರಿಗೆ ವಿಧಿಸಬಾರದು’ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಕಾಂಗ್ರೆಸ್ಸಿನ ಶಿವಾನಂದ ಪಾಟೀಲ ಆಗ್ರಹಿಸಿದರು.‘ಜಿಎಸ್‌ಟಿ ಯುಪಿಎ ಕೂಸು. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಈಗ ಯೂ ಟರ್ನ್‌ ತೆಗೆದುಕೊಂಡಿದೆ. ಆದರೆ, ನಮ್ಮ ನಿಲುವಿನಲ್ಲಿ ಬದಲಾವಣೆ ಆಗಿಲ್ಲ. ತೆರಿಗೆ ಸರಳೀಕರಣ ವಿಷಯದಲ್ಲಿ ರಾಜ್ಯ ಸರ್ಕಾರದ ನಡೆಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.ರಾಜ್ಯದ  ನಿರ್ಧಾರಕ್ಕೆ

ಕರ್ನಾಟಕ ಮಾರಾಟಗಳ ತೆರಿಗೆ (ತಿದ್ದುಪಡಿ) ಮಸೂದೆಗೂ ವಿಧಾನ ಸಭೆ ಒಪ್ಪಿಗೆ ಸೂಚಿಸಿತು. ಪೆಟ್ರೋಲ್‌, ಹೈ ಸ್ಪೀಡ್‌ ಡೀಸೆಲ್‌, ವೈಮಾನಿಕ ಟರ್ಬೈನ್‌ ಇಂಧನ, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಮೇಲಿನ ತೆರಿಗೆಯನ್ನು ಜಿಎಸ್‌ಟಿ ಮಂಡಳಿ ನಿರ್ಧರಿಸುವ ದಿನದವರೆಗೆ  ರಾಜ್ಯ ಸರ್ಕಾರವೇ ವಿಧಿಸಲು ಈ ಮಸೂದೆಯಡಿ ಅವಕಾಶ ಒದಗಿಸಲಾಗಿದೆ.ಭಾನುವಾರ ಜಿಎಸ್‌ಟಿ ಸಭೆ

ನವದೆಹಲಿ (ಪಿಟಿಐ):
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಇದೇ 18ರಂದು (ಭಾನುವಾರ) ಸಭೆ ಸೇರಿ ಲಾಟರಿ ಮೇಲಿನ ತೆರಿಗೆ ದರ ಅಂತಿಮಗೊಳಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry