ನಕಲಿ ಆಧಾರ್ ಸೃಷ್ಟಿ ಮೂವರು ನೌಕರರ ಸೆರೆ

7

ನಕಲಿ ಆಧಾರ್ ಸೃಷ್ಟಿ ಮೂವರು ನೌಕರರ ಸೆರೆ

Published:
Updated:
ನಕಲಿ ಆಧಾರ್ ಸೃಷ್ಟಿ ಮೂವರು ನೌಕರರ ಸೆರೆ

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ  ಆಧಾರ್ ಕೇಂದ್ರದ ಮೂವರು ನೌಕರರು ಯಲಹಂಕ ಉಪನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯಲಹಂಕ ಉಪನಗರ 1ನೇ ಹಂತದಲ್ಲಿರುವ ಆಧಾರ್ ಕೇಂದ್ರದ ನೌಕರರಾದ ಮೋಹನ್‌ಕುಮಾರ್, ಪ್ರದೀಪ್ ಕುಮಾರ್ ಹಾಗೂ ಶ್ರೀನಿವಾಸ್ ಎಂ.ರಾಥೋಡ್ ಎಂಬುವರನ್ನು ಬಂಧಿಸಿದ್ದೇವೆ. ತಮ್ಮನ್ನು ಗೆಜೆಟೆಡ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಶಿಕ್ಷಣ ಇಲಾಖೆಯ ನಿವೃತ್ತ ನೌಕರ ದೇವರಾಜ್ ಹಾಗೂ ಆಧಾರ್ ಕೇಂದ್ರದ ಮತ್ತೊಬ್ಬ ಉದ್ಯೋಗಿ ಮೇಘಾ ದತ್ತ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

‘ಸೂಕ್ತ ದಾಖಲೆಗಳು ಇಲ್ಲದಿದ್ದರೂ, ₹ 1,000 ಕೊಟ್ಟರೆ ಆಧಾರ್ ಕಾರ್ಡ್ ಮಾಡಿಕೊಡುತ್ತೇವೆ’ ಎಂದು ಸ್ಥಳೀಯರಿಗೆ ಹೇಳಿದ್ದ ಆರೋಪಿಗಳು, ಈವರೆಗೆ ನೂರಕ್ಕೂ ಹೆಚ್ಚು ಮಂದಿಗೆ ಆಧಾರ್ ವಿತರಿಸಿದ್ದಾರೆ. ಅವರಿಗೆಲ್ಲ ದೇವರಾಜ್ ಗೆಜೆಟೆಡ್ ಅಧಿಕಾರಿಯ ಸೋಗಿನಲ್ಲಿ ಸಹಿ ಮಾಡಿಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪಾಕಿಸ್ತಾನ ಪ್ರಜೆಗಳು ನಕಲಿ ದಾಖಲೆ ಸಲ್ಲಿಸಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ ಸಂಗತಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಆ ನಂತರ ಎಚ್ಚೆತ್ತುಕೊಂಡಿದ್ದ ಯುಐಎ ಅಧಿಕಾರಿಗಳು, ಎಲ್ಲ ಕೇಂದ್ರಗಳ ಕಾರ್ಯವೈಖರಿ ಮೇಲೂ ನಿಗಾ ವಹಿಸಿದ್ದರು. ಈ ಕೇಂದ್ರದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಯುಐಎ ಬೆಂಗಳೂರು ಘಟಕದ ಉಪ ನಿರ್ದೇಶಕ ಅಶೋಕ್ ಲೆನಿನ್, ಬುಧವಾರ ಯಲಹಂಕ ಉಪನಗರ ಠಾಣೆಗೆ ದೂರು ಕೊಟ್ಟಿದ್ದರು.

ದೂರಿನ ಅನ್ವಯ ನಕಲಿ ದಾಖಲೆ ಸೃಷ್ಟಿ (467, 468), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು (471) ಹಾಗೂ ಆಧಾರ್ ಕಾಯ್ದೆ ಸೆಕ್ಷನ್ 34 ಮತ್ತು 42ರ ಅಡಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಸಂಜೆಯೇ ಆ ಕೇಂದ್ರದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry