ಶಂಕರಮೂರ್ತಿ ಸ್ಥಾನ ಭದ್ರ

7
ಕುರ್ಚಿ ಉಳಿಸಿದ 1 ಮತ

ಶಂಕರಮೂರ್ತಿ ಸ್ಥಾನ ಭದ್ರ

Published:
Updated:
ಶಂಕರಮೂರ್ತಿ ಸ್ಥಾನ ಭದ್ರ

ಬೆಂಗಳೂರು: ಎರಡು ವಾರಗಳಿಂದ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ  ಗುರುವಾರ ಸೋಲುಂಟಾಯಿತು. ಇದರಿಂದಾಗಿ ಕಾಂಗ್ರೆಸ್‌ ಮುಖಭಂಗ ಅನುಭವಿಸಿತು.ನಿರ್ಣಯದ ಪರವಾಗಿ 36 ಮತ್ತು ವಿರುದ್ಧ 37 ಸದಸ್ಯರು ಮತ ಚಲಾಯಿಸಿದರು. ‘ಬಹುಮತದಿಂದ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ’ ಎಂದು ಉಪಸಭಾಪತಿಮರಿತಿಬ್ಬೇಗೌಡ ಪ್ರಕಟಿಸಿದರು.ಬಿಜೆಪಿಯ 23, ಜೆಡಿಎಸ್‌ನ 12 (ಉಪಸಭಾಪತಿ ಬಿಟ್ಟು) ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬೆಂಬಲದಿಂದ ಶಂಕರಮೂರ್ತಿ ಗೆಲುವಿನ ನಗೆ ಬೀರಿದರು.

ಮತದಾನಕ್ಕೆ ಮುನ್ನ ನಿರ್ಣಯ ಮಂಡಿಸಿದ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ  ಸಭಾಪತಿ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಲು ಮುಂದಾದರು. ಇದನ್ನು ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. ಎಲ್ಲ ಆರೋಪಗಳನ್ನು ಉಪಸಭಾಪತಿ ಮರಿತಿಬ್ಬೇಗೌಡ ಕಡತದಿಂದ ತೆಗೆಸಿ ಹಾಕಿದರು. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ  ನಡೆದು ಕಾವೇರಿದ ವಾತಾವರಣ ಸೃಷ್ಟಿ ಆಯಿತು.ಉಪಸಭಾಪತಿಯ ಎಚ್ಚರಿಕೆ ಮಾತಿಗೂ ಜಗ್ಗದ ಉಗ್ರಪ್ಪ ಅವರ  ಬಗ್ಗೆ  ಬಿಜೆಪಿಯ ಕೆ.ಬಿ.ಶಾಣಪ್ಪ ಮತ್ತು ರಾಮಚಂದ್ರಗೌಡ ಆಕ್ರೋಶ ವ್ಯಕ್ತಪಡಿಸಿದರು. ಎಚ್‌.ಎಂ.ರೇವಣ್ಣ ಅವರನ್ನು ಬಿಟ್ಟು  ಬೇರೆ ಕಾಂಗ್ರೆಸ್ ಸದಸ್ಯರು ಉಗ್ರಪ್ಪ ಅವರ ನೆರವಿಗೆ ಧಾವಿಸಲಿಲ್ಲ.‘ಸದನದಲ್ಲಿ ಯಾವುದೇ ಸದಸ್ಯರ ವಿರುದ್ಧ ಆರೋಪ ಮಾಡುವ ಮೊದಲು ನೋಟಿಸ್‌ ಕೊಡಬೇಕು. ಅದರಲ್ಲಿ ನಿರ್ದಿಷ್ಟ ಆರೋಪಗಳನ್ನು ಉಲ್ಲೇಖಿಸಬೇಕು. ಈಗ ಕೊಟ್ಟಿರುವ ನೋಟಿಸ್‌ನಲ್ಲಿ ಯಾವುದೇ ಆರೋಪಗಳು ಇಲ್ಲದಿರುವುದರಿಂದ ಚರ್ಚೆಗೆ ಅವಕಾಶ ನೀಡದೆ ನಿರ್ಣಯವನ್ನು ನೇರವಾಗಿ ಮತಕ್ಕೆ ಹಾಕಬೇಕು’ ಎಂದು  ಶಾಣಪ್ಪ ಆಗ್ರಹಿಸಿದರು.ಉಗ್ರಪ್ಪ ಅವರು ಪುಂಖಾನುಪುಂಖವಾಗಿ ಆರೋಪಗಳ ಪಟ್ಟಿ ಮಾಡುತ್ತಿದ್ದಂತೆ, ಕೆರಳಿದ  ಮರಿತಿಬ್ಬೇಗೌಡ, ‘ಈ ಸಂದರ್ಭದಲ್ಲಿ ಯಾವುದೇ ದಾಖಲೆಗಳು ಇಲ್ಲದೆ ಗೌರವಾನ್ವಿತ ಹುದ್ದೆಯಲ್ಲಿರುವವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಇಂತಹ ನಡವಳಿಕೆಗೆ  ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.‘ನೋಟಿಸ್‌ನಲ್ಲಿ ಆರೋಪಗಳನ್ನು ಉಲ್ಲೇಖಿಸದಿದ್ದರೂ ಸದನದಲ್ಲಿ ಅವುಗಳನ್ನು ಪ್ರಸ್ತಾಪಿಸಲು ಸಂವಿಧಾನ ಅವಕಾಶ ನೀಡಿದೆ’ ಎಂದು ಉಗ್ರಪ್ಪ ಸಂವಿಧಾನವನ್ನು ಉಲ್ಲೇಖಿಸುತ್ತಾ ವಾದಿಸಿದರು.

ಅದಕ್ಕೆ ತಿರುಗೇಟು ನೀಡಿದ ಮರಿತಿಬ್ಬೇಗೌಡ ‘ಸಂವಿಧಾನದ 307 ನೇ ನಿಯಮ ಓದಿ’ ಎಂದು ತಾಕೀತು ಮಾಡಿ ಉಗ್ರಪ್ಪ ಅವರಿಂದ ಓದಿಸಿದರು.

‘ನೀವು ಕಾನೂನು ಪಂಡಿತರು ಸರಿಯಾಗಿ ಓದಬೇಕು.  ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡುವಾಗ ಯಾವ ನಿಯಮಗಳನ್ನು  ಪಾಲಿಸಬೇಕು ಎಂಬುದು ಅದರಲ್ಲಿ ಇದೆ. ಅದು  ಅರ್ಥ ಆಗುವುದಿಲ್ಲವೇ. ನಿಮ್ಮ ಆರೋಪಗಳಿಗೆ ಪುರಾವೆಗಳನ್ನು ನೀಡಿ’ ಎಂದು ಉಪಸಭಾಪತಿ ಗುಡುಗಿದರು.

‘ಸಭಾಪತಿ ಶಂಕರಮೂರ್ತಿ ಶಿಷ್ಟಾಚಾರ ಪಾಲಿಸುತ್ತಿಲ್ಲ, ಸ್ವಜನ ಪಕ್ಷ ಪಾತ ಮಾಡಿದ್ದಾರೆ. ಮತೀಯ ಶಕ್ತಿಗಳನ್ನು ಪ್ರತಿನಿಧಿಸುವ ಪಕ್ಷಕ್ಕೆ ಸೇರಿದವರು. ಕಚೇರಿಗಳಲ್ಲಿ ಅಂಬೇಡ್ಕರ್‌ ಫೊಟೋ­ಗಳನ್ನು ಹಾಕಲು ಅವಕಾಶ ನೀಡು­ವುದಿಲ್ಲ’ ಎಂದು ಉಗ್ರಪ್ಪ ಅವಿಶ್ವಾಸ ನಿರ್ಣಯಕ್ಕೆ ಕಾರಣಗಳನ್ನು  ನೀಡಿದರು.

ಆರೋಪಕ್ಕೆ ಉತ್ತರಿಸಿದ ಶಂಕರಮೂರ್ತಿ, ‘ಈ  ಸದನದ ಇಬ್ಬರು ಸಭಾ ನಾಯಕರು, ನಾನು ಸದನವನ್ನು ಹೇಗೆ ನಡೆಸಿಕೊಂಡು ಬಂದಿದ್ದೇನೆ ಎಂದು  ತಿಳಿಸಿದ್ದಾರೆ.ಸಭಾಪತಿ ಸ್ಥಾನಕ್ಕೆ ಗೌರವ ತರುವಂತೆ ನಡೆದುಕೊಂಡಿರುವುದಾಗಿ ಅವರು ಸದನದಲ್ಲಿ  ಮೆಚ್ಚುಗೆಯ ಮಾತು ಹೇಳಿರುವುದು ದಾಖಲಾಗಿದೆ. ನನ್ನ ವಿರುದ್ಧ ಮಾಡಿರುವ ಆರ್ಥಿಕ ಆರೋಪಗಳು  ಹಸಿ ಸುಳ್ಳು. ನನ್ನ ಸಭಾಪತಿ ಜೀವನ ತೆರೆದಿಟ್ಟ ಪುಸ್ತಕ. ಆದ್ದರಿಂದ ಆರೋಪಗಳು ಉತ್ತರಿಸಲು ಅರ್ಹವಲ್ಲ. ಸಭಾಪತಿ ಸ್ಥಾನದ ಗೌರವ ಉಳಿಸಲು ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ’  ಎಂದು ಹೇಳಿದರು.ಮತ ಎಣಿಕೆ ಬಳಿಕ ನಿರ್ಣಯ ಬಿದ್ದು ಹೋಯಿತು ಎಂದು ಉಪ ಸಭಾಪತಿ ಪ್ರಕಟಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಅನಂತರ ಶಂಕರಮೂರ್ತಿ, ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಜೊತೆಗೂಡಿ  ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದರು.ಕಾಂಗ್ರೆಸ್‌ ಸಮಯ ಸಾಧಕ: ಎಚ್‌ಡಿಕೆ: ‘ಕಾಂಗ್ರೆಸ್‌ನವರು ಅವಿಶ್ವಾಸ ನಿರ್ಣಯದ ನೋಟಿಸ್‌ ಕೊಡುವ  ಮೊದಲು ನಮ್ಮನ್ನು ಕೇಳಿಲ್ಲ.   ಶಂಕರಮೂರ್ತಿ ಅವರನ್ನು ಸಭಾಪತಿ ಮಾಡುವಾಗ ಪೂರ್ಣ ಅವಧಿ ಮುಗಿಯುವತನಕ ಇರುತ್ತಾರೆ ಎಂದು ತಿಳಿಸಿದ್ದೆವು. ಆ ಮಾತಿಗೆ ಬದ್ಧವಾಗಿ ನಡೆದುಕೊಂಡಿದ್ದೇವೆ’ ಎಂದು ಕುಮಾರಸ್ವಾಮಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

‘ಕೆಪಿಸಿಸಿ ಅಧ್ಯಕ್ಷರು ಬುಧವಾರ ರಾತ್ರಿ ನನ್ನನ್ನು ಸಂಪರ್ಕಿಸಿ ಉಪಸಭಾಪತಿ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದರು. ಇಂದು ಬೆಳಿಗ್ಗೆ ಮಾತನಾಡಿ ಸಭಾಪತಿ ಸ್ಥಾನ ನೀಡುತ್ತೇವೆ ಬೆಂಬಲಿಸಿ ಎಂದು ಮನವಿ ಮಾಡಿದರು. ಇದು ಕಾಂಗ್ರೆಸ್‌ನ ಸಮಯ ಸಾಧಕತನಕ್ಕೆ ಸಾಕ್ಷಿ’ ಎಂದು ಹೇಳಿದರು.ಉಗ್ರಪ್ಪ ಕೊಟ್ಟ ಕಾರಣಗಳು:

* ಸಂತಾಪ ಸೂಚಿಸುವ ಸಂದರ್ಭದಲ್ಲಿ ಎಲ್ಲರಿಗೂ ಅವಕಾಶ ನೀಡುವುದಿಲ್ಲ.

* ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷಪಾತ ಮಾಡುವುದಲ್ಲದೇ, ಒಂದು ಪಕ್ಷದ ಪರವಾಗಿ ವರ್ತಿಸುತ್ತಾರೆ.

* ವಿಮಲಾಗೌಡ ನಿಧನಕ್ಕೆ  ಸಂತಾಪ ಸೂಚಿಸುವಾಗ ಶಂಕರಮೂರ್ತಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

* ಸಭಾಪತಿ ಕಚೇರಿಯಲ್ಲಿ ಮುಖ್ಯಮಂತ್ರಿ ಫೋಟೊ ಹಾಕಿಲ್ಲ. ಆರ್‌ಎಸ್‌ಎಸ್‌ ಮುಖಂಡರ ಫೋಟೊ ಹಾಕಿದ್ದಾರೆ.ಮತದಾನ ಪ್ರಕ್ರಿಯೆ ಹೇಗೆ?

ಮೊದಲಿಗೆ ಅವಿಶ್ವಾಸ ನಿರ್ಣಯದ ಪರವಾಗಿ ಇರುವವರು, ನಂತರ ವಿರುದ್ಧ ಇರುವವರನ್ನು ನಿಲ್ಲಲು ಹೇಳಲಾಯಿತು. ಪ್ರತಿ  ಸಾಲಿನ ಸದಸ್ಯರು ಎದ್ದುನಿಂತಾಗ ಸಂಖ್ಯೆ ಎಣಿಕೆ ಮಾಡಲಾಯಿತು.

*

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೆಸ್‌ ಮುಖಭಂಗ ಮಾಡಿಕೊಂಡಿದೆ.

–ಕೆ.ಎಸ್‌.ಈಶ್ವರಪ್ಪ,

ವಿರೋಧ ಪಕ್ಷ ನಾಯಕ

*

ನನ್ನ ವಿರುದ್ಧ ಬೇಜವಾಬ್ದಾರಿ ಆರೋಪ ಮಾಡಲಾಗಿದೆ. ಅದಕ್ಕೆ ಉತ್ತರಿಸುವುದಿಲ್ಲ. ಕೊಚ್ಚೆ ಮೇಲೆ ಕಲ್ಲು ಹಾಕುವುದಿಲ್ಲ.

– ಡಿ.ಎಚ್‌.ಶಂಕರಮೂರ್ತಿ,

ಸಭಾಪತಿ

*

ಜೆಡಿಎಸ್‌ನವರು ನಮ್ಮ ಜತೆ ಬರ್ತಾರೆ ಅಂದುಕೊಂಡಿದ್ದೆ. ಆದರೆ, ಕೋಮುವಾದಿಗಳ ಜತೆ ಕೈಜೋಡಿಸಿದರು. ಈ ಸೋಲು ಹಿನ್ನಡೆಯಲ್ಲ.

– ಸಿದ್ದರಾಮಯ್ಯ,

ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry