ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಪ್ರಯಾಣ ದರ ಶೇ 10 ಹೆಚ್ಚಳಕ್ಕೆ ಸಿದ್ಧತೆ

Last Updated 15 ಜೂನ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಮೊದಲ ಹಂತದ  ಎಲ್ಲಾ ಮಾರ್ಗಗಳು ಭಾನುವಾರದಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿವೆ. ಅದರ ಜೊತೆಗೆ ಪ್ರಯಾಣದರವನ್ನು ಶೇಕಡಾ 10ರಷ್ಟು ಹೆಚ್ಚಿಸುವುದಕ್ಕೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಿದ್ಧತೆ ನಡೆಸಿದೆ.

‘ಮೆಟ್ರೊ ಕಾರ್ಯಾಚರಣೆಯಿಂದ ಇದುವರೆಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸುವ ಸಲುವಾಗಿ ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ ಶೇ 10ರಷ್ಟು ದರ ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

‘ಸೂಕ್ತ ಸಮಯದಲ್ಲೇ ಪ್ರಯಾಣದರ ಪರಿಷ್ಕರಣೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಇದು ಹೊರೆಯಾಗದು’  ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘2011ರಲ್ಲಿ ನಿಗದಿಪಡಿಸಿರುವ ದರವೇ ಈಗಲೂ ಚಾಲ್ತಿಯಲ್ಲಿದೆ. ಈ ಅವಧಿಯಲ್ಲಿ ಕಾರ್ಯಾಚರಣೆ ವೆಚ್ಚದಲ್ಲಿ ಭಾರಿ ಹೆಚ್ಚಳ ಆಗಿದೆ. ರಾಜ್ಯ ಸರ್ಕಾರ ವರ್ಷಕ್ಕೆ ₹ 276 ಕೋಟಿಯಷ್ಟು ನಷ್ಟವನ್ನು  ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರಯಾಣದರ ಹೆಚ್ಚಳ ಅನಿವಾರ್ಯ’ ಎಂದು ಅವರು ವಿವರಿಸಿದರು.

ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಪ್ರಯಾಣದರ ₹ 60 ಇರಲಿದೆ. ಆರಂಭದ ಕೆಲವು ನಿಲ್ದಾಣಗಳ ದರದಲ್ಲಿ ₹ 2 ರಿಂದ ₹ 5ರಷ್ಟು ಹೆಚ್ಚಳ ಆಗಲಿದೆ. 
‘ದರ ಹೆಚ್ಚಳದ ಬಳಿಕವೂ ನಿಗಮ ಲಾಭ ಗಳಿಸದು. ಈ ಉದ್ದೇಶವೂ ನಮ್ಮದಲ್ಲ. ವಾರ್ಷಿಕ ನಷ್ಟದ ಪ್ರಮಾಣವನ್ನು ₹ 276 ಕೋಟಿಯಿಂದ ₹ 150 ಕೋಟಿಗೆ ತಗ್ಗಿಸುವುದಷ್ಟೇ ನಮ್ಮ ಗುರಿ’ ಎಂದರು.

‘ಮೆಟ್ರೊ ಕಾಮಗಾರಿಗಾಗಿ ಖಾಸಗಿ ಹಣಕಾಸು ಸಂಸ್ಥೆಗಳಿಂದಲೂ ಸಾಲ ಪಡೆಯಲಾಗಿದೆ. ಎರಡನೇ ಹಂತಕ್ಕೂ ಹಣ ಹೊಂದಿಸಬೇಕಾಗಿದೆ. ಭೂಸ್ವಾಧೀನದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುವುದಿಲ್ಲ. ಹಾಗಾಗಿ ಮೆಟ್ರೊವನ್ನು ಲಾಭದ ಹಾದಿಗೆ ತರಲು ರಾಜ್ಯ ಸರ್ಕಾರವೇ ದಾರಿ ಕಂಡುಕೊಳ್ಳಬೇಕು’ ಎಂದು ಅವರು ತಿಳಿಸಿದರು.


ಪ್ರಯಾಣ ದರ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ, ‘ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದರು.

‘2011ರಿಂದ 2017ರ ಮಾರ್ಚ್‌ವರೆಗೆ ನಿಗಮವು ₹ 340 ಕೋಟಿ ನಷ್ಟ ಅನುಭವಿಸಿದೆ. ಸದ್ಯ ನಮ್ಮ ನಿತ್ಯದ ಸರಾಸರಿ ಆದಾಯ ₹ 35 ಲಕ್ಷ. ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾದ ಬಳಿಕ ಪ್ರತಿದಿನ ಸುಮಾರು 5 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಲಿದ್ದಾರೆ. ಆಗ ದೈನಂದಿನ ಗಳಿಕೆ ₹1 ಕೋಟಿಗೆ ಏರಲಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಂಚಾರ ಇಲ್ಲ
ರಾಜಾಜಿನಗರ ನಿಲ್ದಾಣದಿಂದ ಸಂಪಿಗೆ ರಸ್ತೆ ನಿಲ್ದಾಣದ ವರೆಗೆ ಶುಕ್ರವಾರ ಹಾಗೂ ಶನಿವಾರ ಮೆಟ್ರೊ ವಾಣಿಜ್ಯ ಸಂಚಾರ ಇರುವುದಿಲ್ಲ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT