ದೂರು ನೀಡಲು ಒಪ್ಪದ ಬಾಲಕಿ ತಾಯಿ!

7

ದೂರು ನೀಡಲು ಒಪ್ಪದ ಬಾಲಕಿ ತಾಯಿ!

Published:
Updated:
ದೂರು ನೀಡಲು ಒಪ್ಪದ ಬಾಲಕಿ ತಾಯಿ!

ಚಿಕ್ಕಬಳ್ಳಾಪುರ: ಅಕ್ಕನ ಗಂಡನ ತಮ್ಮನೊಂದಿಗೆ (ಚಿಕ್ಕ ಭಾವ) ಸ್ನೇಹ ಬೆಳೆಸಿದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭ ಧರಿಸಿದ ಪ್ರಕರಣ ಬಾಗೇಪಲ್ಲಿ ತಾಲ್ಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಆರು ತಿಂಗಳ ಗರ್ಭಿಣಿ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದುಂಬಾಲು ಬಿದ್ದರು ಕೂಡ, ನೊಂದ ಬಾಲಕಿಯ ತಾಯಿ ಮಾತ್ರ ಈವರೆಗೆ ಅತ್ಯಾಚಾರಿಯ ವಿರುದ್ಧ ದೂರು ದಾಖಲಿಸಲು ಮುಂದೆ ಬರುತ್ತಿಲ್ಲ!

‘ಬಾಲಕಿಯ ತಂದೆ ತೀರಿಕೊಂಡಿದ್ದಾರೆ. ಬಾಲಕಿಯ ತಾಯಿ ದೂರು ನೀಡಬೇಕಾಗಿದೆ. ಸುಮಾರು 20 ದಿನಗಳಿಂದ ಅನೇಕ ಬಾರಿ ಮನವಿ ಮಾಡಿಕೊಂಡರೂ ಅವರು ದೂರು ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಶೀಘ್ರದಲ್ಲಿ ನಾವೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಲು ನಿರ್ಧರಿಸಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ತಿಳಿಸಿದರು.

ಏನಿದು ಪ್ರಕರಣ?: ‘ನೊಂದ ಬಾಲಕಿ ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಬಾಲಕಿಯ ಅಕ್ಕನನ್ನು ನಲ್ಲಪ್ಪರೆಡ್ಡಿಪಲ್ಲಿಗೆ ಮದುವೆ ಮಾಡಿ ಕೊಡಲಾಗಿದೆ. ಅಕ್ಕನ ಮನೆಗೆ ಹೋಗಿ ಬಂದು ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕಿಗೆ ಬಾಗೇಪಲ್ಲಿಯಲ್ಲಿ ಬಿ.ಕಾಂ ಮೊದಲ ವರ್ಷದಲ್ಲಿ ಓದುತ್ತಿರುವ ಚಿಕ್ಕ ಭಾವನ ಜತೆ ಸಲುಗೆ ಬೆಳೆದಿದೆ. ಅದು ಬಳಿಕ ದೈಹಿಕ ಸಂಪರ್ಕದ ಹಂತಕ್ಕೆ ತಲುಪಿ, ಬಾಲಕಿ ಗರ್ಭ ಧರಿಸಿದ್ದಾಳೆ’ ಎಂದು ಹೇಳಿದರು. 

ಬಾಲಕಿಗೆ 5 ತಿಂಗಳು ತುಂಬುವ ಹೊತ್ತಿಗೆ ವಿಷಯ ತಿಳಿದ ಹುಡುಗಿಯ ಅತ್ತೆ (ಅತ್ಯಾಚಾರಿಯ ತಾಯಿ) ಆಕೆಯನ್ನು ಕಳೆದ ಮೇನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭಿಣಿಯಿಂದ ಕುಟುಂಬದ ಮಾಹಿತಿ ಕಲೆ ಹಾಕುವಾಗ ಬಾಲಕಿಯ ಸಂಶಯದ ನಡವಳಿಕೆ ಗಮನಿಸಿದ ವೈದ್ಯರು ಕೂಡಲೇ ಮಕ್ಕಳ ಸಹಾಯವಾಣಿ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸದ್ಯ ಬಾಲಕಿಗೆ ಚಿಕ್ಕಬಳ್ಳಾಪುರದಲ್ಲಿರುವ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 27 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ನಡೆಸಿದೆ. ಈ ವೇಳೆ ಸಮಿತಿ ಅಧ್ಯಕ್ಷ ಜಿ.ರಾಜಣ್ಣ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯ ತಾಯಿ ಮತ್ತು ಆಕೆಯ ದೊಡ್ಡ ಭಾವನಿಗೆ ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಆಗ ಒಪ್ಪಿಕೊಂಡು ಹೋದವರು ಈವರೆಗೆ ತಿರುಗಿ ಬಂದಿಲ್ಲ. ಜೂನ್‌ 9ಕ್ಕೆ ನಡೆದ ವಿಚಾರಣೆಗೆ ಕೂಡ ಇಬ್ಬರು ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಚಿಕ್ಕ ಅಳಿಯನ ವಿರುದ್ಧ ದೂರು ಕೊಟ್ಟರೆ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎನ್ನುವ ಭಯದಿಂದ ಬಾಲಕಿಯ ತಾಯಿ ದೂರು ನೀಡಲು ಮುಂದೆ ಬರುತ್ತಿಲ್ಲ. ಬದಲು ಗರ್ಭಿಣಿ ಬಾಲಕಿಯನ್ನು ಅತ್ಯಾಚಾರ ನಡೆಸಿದವನೊಂದಿಗೆ ಮದುವೆ ಮಾಡಿಸಿ ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಶಿಕ್ಷೆಯಾಗಲೇ ಬೇಕು: ‘ಇದು ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೊ)ಅಡಿ ಬರುವ ಪ್ರಕರಣವಾದ್ದರಿಂದ ಅತ್ಯಾಚಾರಿಯ ವಿರುದ್ಧ ದೂರು ದಾಖಲಿಸಿ ಪ್ರಕರಣ ಜರುಗಿಸಲೇ ಬೇಕಾಗಿದೆ. ಹೀಗಾಗಿ ಬಾಲಕಿಯನ್ನು ಪೋಷಕರೊಂದಿಗೆ ಕಳುಹಿಸಲು ಸಾಧ್ಯವಿಲ್ಲ.

ಬಾಲಕಿಯರ ಜೊತೆ ಒಪ್ಪಿತ ಲೈಂಗಿಕ ಕ್ರಿಯೆಯೂ ಅತ್ಯಾಚಾರಕ್ಕೆ ಸಮಾನ ಎಂದು ರಾಜ್ಯ ಹೈಕೋರ್ಟ್‌ ಇತ್ತೀಚೆಗಷ್ಟೇ ಮಹತ್ವದ ಆದೇಶ ನೀಡಿದೆ. 2007ರಲ್ಲಿ ಸುಪ್ರೀಂ ಕೋರ್ಟ್‌ ಕೂಡಾ ಪ್ರಕರಣವೊಂದರಲ್ಲಿ ಬಾಲಕಿ ಜೊತೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಅತ್ಯಾಚಾರ ಎಂದು ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಲೇ ಬೇಕು’ ಎನ್ನುತ್ತಾರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜಣ್ಣ.

‘ಹುಡುಗ ತನ್ನ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿಯೇ ಹೇಳಿಕೆ ನೀಡಿದ್ದಾಳೆ. ಈ ಹಿಂದೆ ಆರೋಪಿಯ ವಿರುದ್ಧ ದೂರು ದಾಖಲಿಸುವುದಾಗಿ ಒಪ್ಪಿಕೊಂಡಿದ್ದ ಆತನ ಅಣ್ಣ ಮತ್ತು ಬಾಲಕಿಯ ತಾಯಿ ಸ್ಥಳೀಯ ರಾಜಕಾರಣಿಗಳ ಮಾತು ಕೇಳಿ ದೂರು ನೀಡಲು ಮುಂದೆ ಬರುತ್ತಿಲ್ಲ. ಜೂನ್‌ 9ಕ್ಕೆ ನಿಗದಿಯಾಗಿದ್ದ ಸಮಿತಿಯ ವಿಚಾರಣೆಗೆ ಕೂಡ ಅವರು ಹಾಜರಾಗಿಲ್ಲ. ಹೀಗಾಗಿ ಇದೀಗ ನಾವೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಲು ಚಿಂತನೆ ನಡೆಸಿದ್ದೇವೆ’ ಎಂದು ತಿಳಿಸಿದರು.

ರಾಜಕಾರಣಿ ಒತ್ತಡ

ಈ ಪ್ರಕರಣ ಬಾಗೇಪಲ್ಲಿಯ ಪ್ರಭಾವಿ ರಾಜಕಾರಣಿಯೊಬ್ಬರು  ಇತ್ತೀಚೆಗಷ್ಟೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ‘ಹುಡುಗನ ವಿರುದ್ಧ ದೂರು ದಾಖಲಿಸಬಾರದು’ ಎಂದು ಒತ್ತಡ ಹೇರಿದ್ದಾರೆ. ‘ಬಾಲಕಿಯನ್ನು ಬಿಡುಗಡೆ ಮಾಡಿ. ಮದುವೆ ಮಾಡಿ ಸಮಸ್ಯೆ ಬಗೆಹರಿಸಿದರಾಯಿತು’ ಎಂದು ಹೇಳಿದ್ದಾರೆ. ಪ್ರಕರಣದ ಗಂಭೀರತೆ, ಕಾನೂನುಗಳ ಕುರಿತು ಅಧಿಕಾರಿಗಳು ಹೇಳುತ್ತಿದ್ದಂತೆ ಆ ರಾಜಕಾರಣಿ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.

* * 

ಅತ್ಯಾಚಾರಿಯ ವಿರುದ್ಧ ಬಾಗೇಪಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡುತ್ತೇನೆ

ಜಿ.ರಾಜಣ್ಣ

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry