ತುಂಬಿ ಹರಿಯುವ ಶೌಚಗುಂಡಿ: ದುರ್ನಾತ

7

ತುಂಬಿ ಹರಿಯುವ ಶೌಚಗುಂಡಿ: ದುರ್ನಾತ

Published:
Updated:
ತುಂಬಿ ಹರಿಯುವ ಶೌಚಗುಂಡಿ: ದುರ್ನಾತ

ಗುಬ್ಬಿ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿ ತುಂಬಿ ಹರಿದು, ದುರ್ನಾತ ಬೀರುತ್ತಿದೆ. ವಾಸನೆ ತಡೆಯಲಾರದೇ ಪ್ರಯಾಣಿಕರು ಸಂಕಷ್ಟ ಪಟ್ಟರೂ ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ನಿಲ್ದಾಣದಲ್ಲಿರುವ ಶೌಚ ಗುಂಡಿ ತುಂಬಿ ಒಂದು ವಾರ ಕಳೆದಿದೆ. ಹಲವರು ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ ಎಂದು ಸ್ಥಳೀಯರು ದೂರಿದರು.

ನಿಲ್ದಾಣದಲ್ಲಿ ನಿತ್ಯ 5 ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 200ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಓಡಾಡುತ್ತಿವೆ. ನಿಲ್ದಾಣದಲ್ಲಿರುವ ಶೌಚಾಲಯವೇ ಇವರೆಲ್ಲರ ಶೌಚಕ್ರಿಯೆ ಪೂರೈಸಬೇಕಾಗಿದೆ. ಬೇರೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಶೌಚಾಲಯದಲ್ಲಿ ನೀರಿನ ಸೌಲಭ್ಯವಿಲ್ಲ. ಇದರ ಜೊತೆಗೆ ತುಂಬಿದ ಶೌಚಗುಂಡಿಯ ವಾಸನೆಯೂ ಸೇರಿ ಸಾರ್ವಜನಿಕರು ಶೌಚಾಲಯದ ಸನಿಹವನ್ನೂ ಸುಳಿಯದಂತೆ ಮಾಡಿದೆ.

ತುಮಕೂರು, ಶಿವಮೊಗ್ಗ, ತಿಪಟೂರು, ಹೊಸದುರ್ಗ ಭಾಗಕ್ಕೆ ತೆರಳುವ ಪ್ರಯಾಣಿಕರು ಬಸ್‌ಗಾಗಿ ಕಾಯಲು ಶೌಚಾಲಯದ ಪಕ್ಕದಲ್ಲಿಯೇ ಕುಳಿತುಕೊಳ್ಳಬೇಕು. ದುರ್ವಾಸನೆ ಮತ್ತು ಕೊಳಕು ವಾತಾವರಣದಿಂದ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದ್ದು, ಹಲವು ರೋಗಗಳ ಬಾಧೆಗೂ ಕಾರಣವಾಗುತ್ತಿದೆ ಎಂಬುದು ಪ್ರಯಾಣಿಕರಾದ ಕೆ.ಜಿ. ವಿಶ್ವನಾಥ ಮತ್ತು ರತ್ನಮ್ಮ ಅವರ ದೂರು.

ಖಾಸಗಿ ಮತ್ತು ಸರ್ಕಾರಿ ಬಸ್ ಪ್ರಯಾಣಿಕರು, ನಿರ್ವಾಹಕರು, ಚಾಲಕರು ಇಲ್ಲಿನ ಶೌಚಾಲಯವನ್ನೇ ಬಳಸುತ್ತಾರೆ. ಆದರೆ ನಿರ್ವಹಣೆ ಇಲ್ಲದ ಶೌಚಾಲಯ ನೋಡಿ ಬಯಲನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ. ರಾತ್ರಿ ತಂಗುವ ಸರ್ಕಾರಿ ಬಸ್‌ ಚಾಲಕರು, ನಿರ್ವಾಹಕರು ಹದಗೆಟ್ಟ ಶೌಚಾಲಯದ ಬಗ್ಗೆ ದೂರು ನೀಡಿದರೆ, ಮೇಲಧಿಕಾರಿಗಳು ಕಿರಿಕಿರಿ ಮಾಡುವರು ಎಂಬ ಭೀತಿಯಿಂದ ಮೌನವಾಗಿದ್ದಾರೆ.

* * 

ಇಲ್ಲಿನ ಶೌಚಾಯದ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳಿಂದ ಅನುಮತಿ ಸಿಕ್ಕ ತಕ್ಷಣ ದುರಸ್ತಿ ಮಾಡಿಸಲಾಗುವುದು

ಕೆಂಪರಾಜು, ಸಂಚಾರ ನಿಯಂತ್ರಣಾಧಿಕಾರಿ. ಗುಬ್ಬಿ ಬಸ್ ನಿಲ್ದಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry