ಎಂಎಲ್‌ಸಿಗಳ ಖರೀದಿಗೆ ಸಿಎಂ ಯತ್ನ; ಬಿಎಸ್‌ವೈ

7

ಎಂಎಲ್‌ಸಿಗಳ ಖರೀದಿಗೆ ಸಿಎಂ ಯತ್ನ; ಬಿಎಸ್‌ವೈ

Published:
Updated:
ಎಂಎಲ್‌ಸಿಗಳ ಖರೀದಿಗೆ ಸಿಎಂ ಯತ್ನ; ಬಿಎಸ್‌ವೈ

ಶ್ರೀರಂಗಪಟ್ಟಣ:  ‘ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರನ್ನು ಕೆಳಗಿಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಎಲ್‌ಸಿಗಳನ್ನು ಖರೀದಿಸಲು ಯತ್ನಿಸಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು. ಇಲ್ಲಿನ ಖಾಸಗಿ ಬಸ್‌ ನಿಲ್ದಾಣದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಧಾನ ಪರಿಷತ್‌ನ ಹಾಲಿ ಸಭಾಪತಿಯನ್ನು ಪದಚ್ಯುತಗೊಳಿಸಲು ನಡೆಸಿದ ಕುತಂತ್ರದಿಂದ ಸಿದ್ದರಾಮಯ್ಯ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ಸೋಲಿನಿಂದ ನಾಡಿನ ಜನರ ಎದುರು ಅವರಿಗೆ ಅವಮಾನವಾಗಿದೆ. ಮುಖ್ಯಮಂತ್ರಿಯಾದವರು ಇಂತಹ ಪ್ರಯತ್ನಕ್ಕೆ ಮುಂದಾಗಬಾರದಿತ್ತು’ ಎಂದು ಹೇಳಿದರು.

‘2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಮೂರರಿಂದ ನಾಲ್ಕು ಶಾಸಕರನ್ನು ಆಯ್ಕೆ ಮಾಡುವ ಪ್ರಯತ್ನ ನಡೆದಿದೆ. ಜುಲೈನಲ್ಲಿ ಮಂಡ್ಯದಲ್ಲಿ 10 ಸಾವಿರ ಜನರನ್ನು ಸೇರಿಸಿ ಎಸ್‌.ಎಂ.ಕೃಷ್ಣ ಸಾರಥ್ಯದಲ್ಲಿ ಸಮಾವೇಶ ಆಯೋಜಿಸಲಾಗುವುದು. ಜಿಲ್ಲೆಯ ಅನ್ಯ ಪಕ್ಷಗಳ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರಲು ಉತ್ಸುಕರಾಗಿದ್ದು, ಪಕ್ಷದಿಂದ ಎರಡು–ಮೂರು ಬಾರಿ ಸಮೀಕ್ಷೆ ನಡೆಸಿ ಗೆಲ್ಲುವ ವ್ಯಕ್ತಿಯನ್ನು ಗುರುತಿಸಿ ಟಿಕೆಟ್‌ ನೀಡಲಾಗುವುದು’ ಎಂದರು.

‘ಪಟ್ಟಣದಲ್ಲಿ ಬಿಜೆಪಿ ಸಮಾವೇಶ ನಡೆಸಲು ಅನುಮತಿ ಕೋರಿದಾಗ ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ. ಖಾಕಿ ಬಟ್ಟೆಯವರಿಗೆ ಇಂತಹ ನಡವಳಿಕೆ ಶೋಭೆ ತರುವುದಿಲ್ಲ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ತೊಂದರೆ ನೀಡುವ ಅಧಿಕಾರಿಗಳ ಪಟ್ಟಿ ಮಾಡಲಾಗುತ್ತಿದೆ. ಕಾಲ ಬಂದಾಗ ಅವರಿಗೆ ಸೂಕ್ತ ಜಾಗ ತೋರಿಸುತ್ತೇವೆ’ ಎಂದು ಗಡಸು ದನಿಯಲ್ಲಿ ಎಚ್ಚರಿಸಿದರು.

ತಮ್ಮ ಭಾಷಣದ ಉದ್ದಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಜೆಡಿಎಸ್‌ ಮತ್ತು ಆ ಪಕ್ಷದ ವರಿಷ್ಠರ ಬಗ್ಗೆ ತುಟಿ ಬಿಚ್ಚಲಿಲ್ಲ. ಬಿಜೆಪಿ ಕ್ಷೇತ್ರಾಧ್ಯಕ್ಷ ಟಿ.ಶ್ರೀಧರ್‌, ಮಾಜಿ ಸಂಸದೆ ತೇಜಸ್ವಿನಿ ರಮೇಶ್‌ ಮಾತನಾಡಿದರು. ಹಿಂದುಳಿದ ವರ್ಗದ ರಾಜ್ಯ ಘಟಕದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ಎಸ್‌ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್‌.ವೀರಯ್ಯ, ಮಾಜಿ ಸಚಿವ ಬಿ.ಸೋಮಶೇಖರ್‌, ಐಎಎಸ್‌ ನಿವೃತ್ತ ಅಧಿಕಾರಿ ಕೆ.ಶಿವರಾಂ, ಅಬ್ದುಲ್‌ ಅಜೀಂ, ಮಾಜಿ ಎಂಎಲ್ಸಿಗಳಾದ ಎಚ್‌.ಹೊನ್ನಪ್ಪ, ಅಶ್ವತ್ಥನಾರಾಯಣ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗಣ್ಣಗೌಡ, ಕೆ.ಬಲರಾಂ, ಎಸ್‌.ದೇವರಾಜು, ರಾಜೂಗೌಡ, ಜಿ.ಉಮಾಶಂಕರ್‌, ಟೌನ್‌ ಅಧ್ಯಕ್ಷ ಪುಟ್ಟರಾಮು  ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಒಂದು ತಾಸು ಸುರಿದ ಮಳೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿತ್ತು.

‘ಕೇಂದ್ರದ ಅನುದಾನ ಬಳಸಿಕೊಳ್ಳಲು ವಿಫಲ’

ಕೊಪ್ಪ: ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದರೂ ಅವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸಮೀಪದ ಕೊತ್ತನಹಳ್ಳಿ ಗ್ರಾಮದ ದಲಿತ ಮುಖಂಡ ಕೆಂಬೋರಯ್ಯ ಅವರ ಮನೆಯಲ್ಲಿ ಉಪಾಹಾರ ಸೇವಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೇಂದ್ರ ಸರ್ಕಾರ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ರೈತರ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿಸಲು ವಿಫಲವಾಗಿರುವ ಕಾರಣ ರೈತರ ಖಾತೆಗಳಿಗೆ ಹಣ ಬಂದಿಲ್ಲ. ಜಿಲ್ಲೆಯಲ್ಲಿ ಮೂರು ವರ್ಷಗಳಿಂದ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ, ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಲು ಮೀನಮೇಷ ಎಣಿಸುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿಯಿಂದ ಜಿಲ್ಲೆಯಲ್ಲಿ ಯಾವುದೇ ಚುನಾಯಿತ ಪ್ರತಿನಿಧಿ ಇಲ್ಲದಿದ್ದರೂ ಮಂಡ್ಯದಲ್ಲಿ ಮಿನಿ ವಿಧಾನಸೌಧ, ವಿ.ಸಿ.ಫಾರಂಗೆ ₹ 5 ಕೋಟಿ, ಅಂಬೇಡ್ಕರ್‌ ಭನವ ನಿರ್ಮಾಣಕ್ಕೆ ₹ 5 ಕೋಟಿ, ಪಾಂಡವಪುರ ಮತ್ತು ಮಂಡ್ಯ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ₹ 35 ಕೋಟಿ, ಶ್ರೀರಂಗಪಟ್ಟಣ್ಣ ಅಭಿವೃದ್ಧಿಗೆ ₹ 10 ಕೋಟಿ, ಮದ್ದೂರು ಪುರಸಭೆಗೆ ₹ 8 ಕೋಟಿ ಹಣವನ್ನು ನಮ್ಮ ಅಧಿಕಾರವಧಿಯಲ್ಲಿ ನೀಡಿದ್ದೇವೆ’ ಎಂದು ಹೇಳಿದರು.

ಮಾಜಿ ಸಂಸದೆ ತೇಜಸ್ವಿನಿ ರಮೇಶ್‌, ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಂ, ಮಾಜಿ ಸಚಿವ ಬಿ.ಸೋಮಶೇಖರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಯಮದೂರು ಸಿದ್ದರಾಜು, ಲಕ್ಷ್ಮಣ್‌ಕುಮಾರ್‌ ಇದ್ದರು. 

ಜ್ಞಾನಬಂಧು ಶಾಲೆಗೆ ಭೇಟಿ 

ಪಾಂಡವಪುರ:  ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದ ಬಳಿ ಇರುವ ಜ್ಞಾನಬಂಧು ಶಾಲೆಗೆ ಭೇಟಿ ನೀಡಿದ ಯಡಿಯೂರಪ್ಪ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಜ್ಞಾನ ಬಂಧು ಶಾಲೆಯ ಸಂಸ್ಥಾಪಕ ಎಂ.ಆರ್.ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.

ತಾಳಶಾಸನ ಗ್ರಾಮದಲ್ಲಿ ಊಟ:  ಈ ಮೊದಲು ತಾಳಶಾಸನ ಗ್ರಾಮಕ್ಕೆ ತೆರಳಿದ ಯಡಿಯೂರಪ್ಪ ಕುರುಬ ಸಮುದಾಯದ ವೀರಭದ್ರಸ್ವಾಮಿ ಅವರ ಮನೆಯಲ್ಲಿ ಭೋಜನ ಸವಿದರು.

ಬಿಎಸ್‌ವೈ ಭೇಟಿಗೆ ಪರದಾಡಿದ ವೃದ್ಧೆ

ಯಡಿಯೂರಪ್ಪ ಅವರ ತವರು ಬೂಕನಕೆರೆ ಗ್ರಾಮದ ವೃದ್ಧೆ ಲಕ್ಷ್ಮಮ್ಮ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದರು.

ಆದರೆ, ಬಿಜೆಪಿ ಕಾರ್ಯಕರ್ತರು ಲಕ್ಷ್ಮಮ್ಮ ವೇದಿಕೆ ಏರಲು ಅವಕಾಶ ನೀಡಲಿಲ್ಲ. ವೇದಿಕೆಯಿಂದ ಕೆಳಗೆ ಇಳಿಯುವಾಗ ಲಕ್ಷ್ಮಮ್ಮ ಅವರಿಗೆ ಯಡಿಯೂರಪ್ಪ ₹ 500 ನೋಟು ಕೊಟ್ಟು ಮುನ್ನಡೆದರು.

‘ನಾನು ಬೂಕನಕೆರೆಯಿಂದ ಕೆಆರ್‌ಎಸ್‌ಗೆ ಮದುವೆಯಾಗಿದ್ದೇನೆ. ನಮ್ಮೂರಿನ ಮಗ ಯಡಿಯೂರಪ್ಪ ಅವರ ಬಳಿ ನನ್ನ ಕಷ್ಟ ಹೇಳಿಕೊಳ್ಳಬೇಕು ಎಂದು ಬಂದಿದ್ದೆ. ಆದರೆ, ಅವರ ಬಳಿ ಹೋಗಲು ನನ್ನನ್ನು ಬಿಡಲಿಲ್ಲ’ ಎಂದು ಲಕ್ಷ್ಮಮ್ಮ ನೋವು ತೋಡಿಕೊಂಡರು.

ಚಪ್ಪಲಿ ಧರಿಸಿ ಪುಷ್ಪಾರ್ಚನೆ: ಆಕ್ರೋಶ

ಕೊಪ್ಪ: ಕೊತ್ತನಹಳ್ಳಿ ಗ್ರಾಮದಲ್ಲಿ  ಬಿ.ಎಸ್‌. ಯಡಿಯೂರಪ್ಪ ಚಪ್ಪಲಿ ಧರಿಸಿ ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಂ  ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.

ಕೆಂಬೋರಯ್ಯ ಅವರ ಮನೆಯಲ್ಲಿ ಉಪಾಹಾರ ಸೇವಿಸಿ ತರಾತುರಿಯಲ್ಲಿ ವೇದಿಕೆಗೆ ಬಂದ ಯಡಿಯೂರಪ್ಪ ಚಪ್ಪಲಿ ಧರಿಸಿಯೇ ಭಾವಚಿತ್ರಗಳಿಗೆ ಹೂವು ಹಾಕಿದರು. ಇದನ್ನು ಗಮನಿಸಿದ ದಲಿತ ಮುಖಂಡರು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry