ತಾಲ್ಲೂಕಿನಲ್ಲಿ ಬಿರುಸು ಪಡೆದ ಬಿತ್ತನೆ

7

ತಾಲ್ಲೂಕಿನಲ್ಲಿ ಬಿರುಸು ಪಡೆದ ಬಿತ್ತನೆ

Published:
Updated:
ತಾಲ್ಲೂಕಿನಲ್ಲಿ ಬಿರುಸು ಪಡೆದ ಬಿತ್ತನೆ

ಹಿರೇಕೆರೂರ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬುಧವಾರ, ಗುರುವಾರ ಬಿತ್ತನೆ ಕಾರ್ಯ ಬಿರುಸು ಪಡೆದಿದ್ದು, ರೈತರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಎರಡು ವಾರಗಳ ಹಿಂದೆ ಹದ ಮಳೆಯಾಗಿದ್ದ ವೇಳೆ ಅಲ್ಪ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.

ಕೆಲವು ರೈತರು ಬಿ.ಟಿ.ಹತ್ತಿ ಬಿತ್ತನೆ ಮಾಡಿದ್ದರು. ನಂತರದಲ್ಲಿ ಸಾಕಷ್ಟು ಮಳೆ ಬೀಳದೇ ಇರುವುದರಿಂದ ಹಾಕಿದ ಬೀಜಗಳು ಮೊಳಕೆಯೊಡೆದು ಹೊರಗೆ ಬರಲಿಲ್ಲ, ಇದರಿಂದ ಬೀಜಕ್ಕೆ ಹಾಕಿದ ಹಣ ವ್ಯರ್ಥವಾಗಿತ್ತು. ಸದ್ಯ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಬಿತ್ತನೆಗೆ ಒಳ್ಳೆಯ ಹದ ಎನಿಸಿದೆ. ಹಾಕಿದ ಬೀಜಗಳು ಹುಟ್ಟುವ ಭರವಸೆ ಮೂಡಿಸಿವೆ.

ಕೃಷಿ ಇಲಾಖೆ ಮೂಲಗಳ ಪ್ರಕಾರ ಒಟ್ಟು ಬಿತ್ತನೆ ಕ್ಷೇತ್ರ 57,874 ಹೆಕ್ಟೇರ್‌ ಇದೆ. ಇದರಲ್ಲಿ ಗೋವಿನ ಜೋಳ ಹಾಗೂ ವಾಣಿಜ್ಯ ಬೆಳೆಯಾದ ಬಿ.ಟಿ. ಹತ್ತಿ ಶೇ 90ರಷ್ಟು ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಗೋವಿನ ಜೋಳ ಸುಮಾರು 38 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಕಳೆದ ಹತ್ತಾರು ವರ್ಷಗಳಿಂದ ಗೋವಿನ ಜೋಳವೇ ತಾಲ್ಲೂಕಿನ ಪ್ರಮುಖ ಬೆಳೆಯಾಗಿದೆ.

‘ಗೋವಿನ ಜೋಳ ಬಿತ್ತನೆಗೆ ಉತ್ತಮ ಹದವಾಗಿದೆ. ಗೋವಿನ ಜೋಳದ ಬೆಳೆಗೆ ರೋಗಗಳು ಕಡಿಮೆ, ಇದಕ್ಕೆ ಮಾಡುವ ಖರ್ಚು ಸಹ ಕಡಿಮೆ, ಹಾಗಾಗಿ ಗೋವಿನ ಜೋಳವನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತೇವೆ’ ಎಂದು ಕೋಡ ಗ್ರಾಮದ ಹೊರವಲಯದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ಕೋಟೆಪ್ಪ ಸಣ್ಣಿಂಗಣ್ಣನವರ ಹೇಳಿದರು.

ಟ್ರ್ಯಾಕ್ಟರ್ ಮೂಲಕ ಸಾಲು ಹೊಡೆದು ಸಾಲಿನಲ್ಲಿ ಡಿಎಪಿ ಮತ್ತು ಪೊಟ್ಯಾಷ್ ಮಿಶ್ರಣ ಮಾಡಿದ ಗೊಬ್ಬರ ಅಥವಾ ಕಾಂಪ್ಲೆಕ್ಸ್‌ ಗೊಬ್ಬರ ಹಾಕಿ, ಹಿಂದೆ 6–9 ಇಂಚುಗಳ ಅಂತರದಲ್ಲಿ ಗೋವಿನ ಜೋಳದ ಕಾಳು ಹಾಕುತ್ತಾ ಸಾಗುತ್ತಾರೆ.

ಅದರ ಹಿಂದೆ ಕಾಳುಗಳ ಮೇಲೆ ಮಣ್ಣು ಮುಚ್ಚುವಂತೆ ಎತ್ತಿನ ಬೇಸಾಯದಲ್ಲಿ ಕುಂಟೆ ಹೊಡೆಯುತ್ತಾರೆ. ಕೊನೆಗೆ ಕೊರಡು (ಕೊಲ್ಡು) ಹೊಡೆದು ಬಿತ್ತನೆ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಕೊರಡು ಕೊರಡು ಹೊಡೆಯುವುದರಿಂದ ಜಮೀನು ಸಮತಟ್ಟಾಗುತ್ತದೆ. ಜತೆಗೆ ಮಣ್ಣು ಹುಡಿಯಾಗಿ ಭೂಮಿಯಲ್ಲಿ ತೇವಾಂಶ ಬಹಳ ಕಾಲ ಉಳಿಯುತ್ತದೆ.

ಈ ವರ್ಷ ಬಿತ್ತನೆ ಗುರಿ

57,874 ಒಟ್ಟು ಬಿತ್ತನೆ ಕ್ಷೇತ್ರ

38,000 ಗೋವಿನ ಜೋಳ

14,250 ಬಿ.ಟಿ.ಹತ್ತಿ

5,624 ಭತ್ತ, ಜೋಳ ಇತರೆ

* * 

ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಬಿರುಸುಗೊಂಡಿದೆ. ಸುಮಾರು 52,250 ಹೆಕ್ಟೇರ್‌ನಲ್ಲಿ ಗೋವಿನ ಜೋಳ, ಬಿ.ಟಿ. ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ.

ಮಾರುತಿ ಅಂಗರಗಟ್ಟಿ

ಕೃಷಿ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry