ಮದ್ಯ ಮಾರಾಟಕ್ಕೆ ತೊಡಕಾಗದ ಬರ

7

ಮದ್ಯ ಮಾರಾಟಕ್ಕೆ ತೊಡಕಾಗದ ಬರ

Published:
Updated:
ಮದ್ಯ ಮಾರಾಟಕ್ಕೆ ತೊಡಕಾಗದ ಬರ

ಬೆಳಗಾವಿ: ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಬರಗಾಲವಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆಯಿಂದ ಕೆಲವು ತಿಂಗಳುಗಳಲ್ಲಿ ನಗದು ಹಾಗೂ ಚಿಲ್ಲರೆಗೆ ಕೊರತೆ ಎದುರಾಗಿತ್ತು. ಈ ವಿದ್ಯಮಾನಗಳಿಂದ ಹೋದ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟ ಮತ್ತು ವರಮಾನದ ಮೇಲೆ ಹೆಚ್ಚಿನ ಪರಿಣಾಮವೇನೂ ಉಂಟಾಗಿಲ್ಲ.

ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದ ಒಟ್ಟು 615 ಮದ್ಯದಂಗಡಿಗಳಿವೆ. ಇವುಗಳಲ್ಲಿ ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇರುವ ಅಂಗಡಿಗಳೇ ಹೆಚ್ಚು. ₹ 500 ಹಾಗೂ ₹ 1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದರಿಂದ, ಕೆಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ಹೋಟೆಲ್‌ಗಳ ವಹಿವಾಟು ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದೆ. ಆರ್‌ಟಿಒ, ನೋಂದಣಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರಮಾನದ ಮೇಲೆ ಪರಿಣಾಮ ಉಂಟಾಗಿದೆ. ಆದರೆ, ಅಬಕಾರಿ ಇಲಾಖೆಯು ಆಶಾದಾಯಕ ಪ್ರಗತಿಯಲ್ಲಿಯೇ ಇರುವುದು ಗಮನಾರ್ಹ. ಇಲಾಖೆಯಿಂದ ನೀಡಿದ ಸಂಚಿತ ಗುರಿ ಸಾಧನೆಯಲ್ಲಿ ಕೇವಲ ಶೇ 3.92ರಷ್ಟು ಮಾತ್ರ ಕಡಿಮೆಯಾಗಿದೆ.

2015–16ನೇ ಸಾಲಿನಲ್ಲಿ 33,57,772 ಬಾಕ್ಸ್‌ಗಳ ಸಂಚಿತ ಗುರಿ ನೀಡಲಾಗಿತ್ತು. ಇದರಲ್ಲಿ 29,75,128 ಮಾರಾಟವಾಗಿತ್ತು. ಮದ್ಯಮಾರಾಟದ ಪ್ರಮಾಣ ಆಧರಿಸಿ ಮುಂದಿನ ವರ್ಷದ ಸಂಚಿತ ಗುರಿ ನಿಗದಿಪಡಿಸಲಾಗುತ್ತದೆ. ಹೋದ ಸಾಲಿನಲ್ಲಿ 33,18,123 ಬಾಕ್ಸ್‌ ಸಂಚಿತ ಗುರಿ ಕೊಡಲಾಗಿತ್ತು. 28,58,616 ಬಾಕ್ಸ್‌ ಮಾರಾಟವಾಗಿವೆ.

ತೊಂದರೆ ಏನಾಗಿಲ್ಲ: ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ ಮದ್ಯದಂಗಡಿಗಳವರು ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ (ಕೆಎಸ್‌ಡಿಸಿಎಲ್‌) ಮದ್ಯ ಖರೀದಿಸುತ್ತಾರೆ. ನಿಗಮದ ಮೂರು ಡಿಪೊಗಳಿವೆ (ಬೆಳಗಾವಿಯ ಎಪಿಎಂಸಿ ಯಾರ್ಡ್‌ನಲ್ಲಿ 2 ಹಾಗೂ ಗೋಕಾಕದಲ್ಲಿ ಒಂದು) ಇವೆ.

ಇಲ್ಲಿ, ನಗದುರಹಿತ ವಹಿವಾಟು ನಡೆಯುತ್ತಿದೆ. ಸ್ವೈಪಿಂಗ್‌ ಯಂತ್ರಗಳನ್ನು ಕೂಡ ಬಳಸಲಾಗುತ್ತಿದೆ. ಹೀಗಾಗಿ, ಇಲ್ಲಿ ಮದ್ಯದ ಬಾಕ್ಸ್‌ಗಳನ್ನು ಖರೀದಿಸಲು ಮದ್ಯದಂಗಡಿಗಳವರಿಗೆ ಕಷ್ಟವಾಗಿಲ್ಲ. ನೋಟು ರದ್ದು ಮಾಡಿದ ಕೆಲ ದಿನಗಳಷ್ಟೇ ತೊಂದರೆ ಇತ್ತು. ನಂತರ, ವ್ಯಾಪಾರದಲ್ಲಿ ಇಳಿಕೆ ಏನೂ ಕಂಡುಬಂದಿಲ್ಲ ಎನ್ನುವುದು ಅಂಕಿ–ಅಂಶಗಳಿಂದ ಸ್ಪಷ್ಟವಾಗಿದೆ.

ಹೋದ ಡಿಸೆಂಬರ್‌ ತಿಂಗಳೊಂದರಲ್ಲಿಯೇ ಜಿಲ್ಲೆಯ ಗುರಿಯಲ್ಲಿ ಶೇ 89.16 ರಷ್ಟು ಸಾಧನೆಯಾಗಿತ್ತು. ನಿಗಮದಿಂದ  ಒಟ್ಟು 2,61,126 ಬಾಕ್ಸ್‌ಗಳು (ಒಂದು ಬಾಕ್ಸ್‌ನಲ್ಲಿ 8.64ರಿಂದ 9 ಲೀಟರ್‌ ಮದ್ಯವಿರುತ್ತದೆ) ಮಾರಾಟವಾಗಿತ್ತು. ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಉತ್ತರ ವಲಯದಲ್ಲಿ ಗಮನಾರ್ಹ ಪ್ರಗತಿಯಾಗಿತ್ತು.

ದಕ್ಷಿಣದಲ್ಲಿ ಶೇ 97.56 ಹಾಗೂ ಉತ್ತರ ವಲಯದಲ್ಲಿ ಶೇ 90.47ರಷ್ಟು ಸಾಧನೆಯಾಗಿದೆ. ಅಥಣಿ ವಲಯದಲ್ಲಿ ನೀಡಿದ ಗುರಿಯಲ್ಲಿ ಶೇ 92.83ರಷ್ಟು ಸಾಧನೆಯಾಗಿದೆ.

2.86 ಲಕ್ಷ ಬಾಕ್ಸ್‌ಗಳ ಗುರಿಯನ್ನು ಇಲಾಖೆ ನೀಡಿತ್ತು. ಇದರಲ್ಲಿ 2,61,126 ಬಾಕ್ಸ್‌ ಮಾರಾಟವಾಗಿದ್ದು, ಶೇ 89.16 ರಷ್ಟು ಸಾಧನೆಯಾಗಿದೆ. 2015ರ ಡಿಸೆಂಬರ್‌ನಲ್ಲಿ 2,54,500 ಬಾಕ್ಸ್‌ ಮಾರಾಟವಾಗಿತ್ತು.

ದೊಡ್ಡ ಪರಿಣಾಮವಾಗಿಲ್ಲ: ‘ಹಿಂದಿನ ವರ್ಷಕ್ಕೆ ಹೋಲಿಸಿದರೆ 2016–17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ, ಮದ್ಯಮಾರಾಟದಲ್ಲಿ ಆಶಾದಾಯಕ ಪ್ರಗತಿಯಾಗಿದೆ. ಬೆಂಗಳೂರು ನಂತರ ಬೆಳಗಾವಿಯು 2ನೇ ಸ್ಥಾನದಲ್ಲಿದೆ.

ಬರಗಾಲ ಹಾಗೂ ನೋಟು ರದ್ದತಿಯಿಂದ ಪ್ರಮಾಣ ಕುಸಿತ ಕಾಣಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕುಸಿದಿಲ್ಲ. ಅಬಕಾರಿ ದಾಳಿ ಹಾಗೂ ಮದ್ಯ ವಶಪಡಿಸಿಕೊಂಡ ಪ್ರಕರಣಗಳು ಜಾಸ್ತಿಯಾಗಿವೆ. 1984, 1995ರ ಬಾಕಿಯಲ್ಲಿ ₹ 1 ಕೋಟಿಯಷ್ಟು ಹಣ ಸಂಗ್ರಹಿಸಿರುವುದು ದೊಡ್ಡ ಸಾಧನೆಯಾಗಿದೆ’ ಎಂದು ಇಲಾಖೆಯ ಉಪ ಆಯುಕ್ತ ಕೆ. ಅರುಣಕುಮಾರ್‌ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 43 ಕಳ್ಳಭಟ್ಟಿ ತಯಾರಿಕೆ ಕೇಂದ್ರಗಳನ್ನು ಗುರುತಿಸಲಾಗಿತ್ತು. ಇವುಗಳಲ್ಲಿ 16 ಕೇಂದ್ರಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಿಸಿದ್ದೇವೆ. 10 ಗ್ರಾಮಗಳಲ್ಲಿ ಕಳ್ಳಭಟ್ಟಿ ಮಾರಾಟವನ್ನು ಸಂಪೂರ್ಣ ನಿಲ್ಲಿಸಲಾಗಿದೆ.

ಕಳ್ಳಭಟ್ಟಿ ತಯಾರಿಕೆ ಹಾಗೂ ಅಕ್ರಮ ಮದ್ಯ ಮಾರಾಟದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. 2017–18ನೇ ಸಾಲಿನಲ್ಲಿ 30,78,980 ಬಾಕ್ಸ್‌ಗಳಷ್ಟು ಮದ್ಯಮಾರಾಟದ ಗುರಿಯನ್ನು ನೀಡಲಾಗಿದೆ’ ಎಂದು ತಿಳಿಸಿದರು.

2016–17ನೇ ಸಾಲಿನಲ್ಲಿ ಅಥಣಿ ಹಾಗೂ ಬೆಳಗಾವಿ ದಕ್ಷಿಣ ವಲಯದಲ್ಲಿ ಸಾಧನೆಯ ಗುರಿ ಶೇ 90 ದಾಟಿದೆ. ಜಿಲ್ಲೆಯಲ್ಲಿ ದಂಡದಿಂದ ₹ 63,69, 100, ಮುಟ್ಟುಗೋಲು ಮಾಡಿದ್ದರಿಂದ ₹ 32,52,131, ಅಬಕಾರಿ ಬಾಕಿ ವಿಭಾಗದಿಂದ ₹ 88,60,243, ಇತರೆ ₹ 25,91,014 ಹಾಗೂ ಸುಂಕ, ಸನ್ನದು ಶುಲ್ಕ ಎಲ್ಲವೂ ಸೇರಿ ₹ 131.99 ಕೋಟಿ ರಾಜಸ್ವ ಸಂಗ್ರಹವಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದಂತೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸಮೀಪದ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುತ್ತಿದೆ. ಎಷ್ಟು ಮದ್ಯದಂಗಡಿ ಸ್ಥಳಾಂತರಿಸಲಾಗುತ್ತದೆ, ಉಳಿಯುವವು ಎಷ್ಟು ಎನ್ನುವುದರ ಮೇಲೆ 2017–18ನೇ ಸಾಲಿನಲ್ಲಿನ ಮದ್ಯದ ಮಾರಾಟದ  ಪ್ರಗತಿ ಅವಲಂಬನೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry