ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಪೆಲ್ ವಾರ್‌ಷಿಪ್ ಮ್ಯೂಸಿಯಂ’ನಲ್ಲಿ ಸೋರಿಕೆ

Last Updated 16 ಜೂನ್ 2017, 8:34 IST
ಅಕ್ಷರ ಗಾತ್ರ

ಕಾರವಾರ:ಪ್ರವಾಸಿಗರ ಆಕರ್ಷಣೀಯ, ದೇಶದ 2ನೇ ಅತಿದೊಡ್ಡ ಯುದ್ಧನೌಕೆ ಸಂಗ್ರಹಾಲಯ ‘ಚಾಪೆಲ್ ವಾರ್‌ಷಿಪ್‌ ಮ್ಯೂಸಿಯಂ’ ನಲ್ಲಿ ಮಳೆ ನೀರಿನ ಸೋರಿಕೆ ಉಂಟಾಗುತ್ತಿದ್ದು, ಯಂತ್ರಗಳು ತುಕ್ಕು ಹಿಡಿದು ದುಃಸ್ಥಿತಿಯ ಹಾದಿ ತಲುಪುತ್ತಿದೆ.

ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದ ಅಂಚಿನಲ್ಲಿ ನೆಲೆಯೂರಿರುವ ಈ ಮ್ಯೂಸಿಯಂಗೆ ಪ್ರತಿವರ್ಷ ಮಳೆಗಾಲದ್ದೇ ಭೀತಿ. ಮಳೆಯಿಂದಾಗಿ ಇದರಲ್ಲಿ ನೀರು ಸೋರಿಕೆಯಾಗುತ್ತಿದ್ದು, ಇದರೊಳಗಿನ ಯಂತ್ರಗಳು ತುಕ್ಕು ಹಿಡಿದು, ಬೊಂಬೆಗಳು ಹಾಳಾಗಿ ದಿನದಿಂದ ದಿನಕ್ಕೆ ತನ್ನ ವೈಶಿಷ್ಟ್ಯ ಕಳೆದುಕೊಳ್ಳುತ್ತಿದೆ.

ಅಂಟಿಕೊಳ್ಳದ ಡಾಂಬರ್‌ಶೀಟ್: ‘ಮಳೆಗಾಲದಲ್ಲಿ ಮ್ಯೂಸಿಯಂನ ರಕ್ಷಣೆಗಾಗಿ ಜಿಲ್ಲಾಡಳಿತ ಡಾಂಬರ್‌ಶೀಟ್‌ನ್ನು ವಿತರಿ ಸಿದೆ. ಒಂಡೆರಡು ಕಡೆ ಅದನ್ನು ಅಂಟಿಸಲಾಗಿದೆ. ಆದರೂ ಸಹ ಅದು ಕಿತ್ತು ನೀರು ಸೋರಿಕೆಯಾಗುತ್ತಿದೆ.

ಹೀಗಾಗಿ ಉಳಿದಿ ರುವ ಶೀಟ್‌ನ್ನು ವಾಪಸ್ಸು ಮಾಡಿ ಅದರ ಹಣದಲ್ಲಿ ಪ್ಲಾಸ್ಟಿಕ್ ತಾಡಪಲ್‌ಗಳನ್ನು ತರಲು ನಿರ್ಧರಿಸಿದ್ದೇವೆ. ಈ ಬಗ್ಗೆ ಹೆಚ್ಚು ವರಿ ಜಿಲ್ಲಾಧಿಕಾರಿ ಅವರಿಗೂ ಸಹ ತಿಳಿಸಿ ದ್ದೇವೆ’ ಎಂದು ಮ್ಯೂಸಿಯಂನ ಸಿಬ್ಬಂದಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಷ್ಟಕ್ಕೂ ಜಿಲ್ಲಾಡಳಿತ ವಿತರಿಸಿರುವ ಈ ಡಾಂಬರ್‌ಶೀಟ್‌ಗಳು ಬೇಸಿಗೆಯ ಬಿಸಿಲಿನಲ್ಲಿ ಅಂಟಿಸಿದರೆ ಮಾತ್ರ ಭದ್ರವಾಗಿ ಅಂಟಿಕೊಳ್ಳುತ್ತವೆ. ಆದರೆ ಅದನ್ನು ಮಳೆಗಾಲ ಆರಂಭದ ಬಳಿಕ ಜಿಲ್ಲಾಡಳಿತ ವಿತರಣೆ ಮಾಡಿದ್ದು, ಅದೀಗ ಅಂಟಿಕೊಳ್ಳದೆ  ಕಿತ್ತು ಹೋಗುತ್ತಿದೆ.

ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರನ್ನು ಮಾತನಾಡಿಸಿ ದಾಗ, ‘ವಾರ್ಷಿಪ್ ಮ್ಯೂಸಿಯಂ ಜಿಲ್ಲೆಯ ಹೆಮ್ಮೆ. ಮಳೆಗಾಲದಲ್ಲಿ ಅದರೊಳಗೆ ಉಂಟಾಗುವ ನೀರು ಸೋರಿಕೆಯನ್ನು ಶಾಶ್ವತವಾಗಿ ತಡೆಯಲು ಈ ಬಾರಿ ಬೇಸಿಗೆಯಲ್ಲಿ ಶಿಪ್‌ ರಿಪೇರಿ ಯಾರ್ಡ್‌ನ ವರನ್ನು ಸಂಪರ್ಕಿಸಿದ್ದೆವು. ಆದರೆ ರಿಪೇ ರಿಗೆ ಆಗಮಿಸಬೇಕಿದ್ದ ಸಿಬ್ಬಂದಿಗೆ ಕೊನೆ ಗಳಿಗೆಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದ್ದರಿಂದ ದುರಸ್ತಿ ಕಾರ್ಯ ಕೈಗೊಂಡಿಲ್ಲ. ತಾತ್ಕಾಲಿಕವಾಗಿ ಮಳೆ ಯಿಂದ ರಕ್ಷಣೆಗೆ ಡಾಂಬರ್‌ಶೀಟ್ ಒದಗಿ ಸಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದರು.

ನಗರಸಭೆ ಅಧೀನದ ಈ ಮ್ಯೂಸಿ ಯಂನ ಪ್ರಮುಖ ನಿರ್ವಹಣೆಯನ್ನು ನೌಕಾಸೇನೆ ಮಾಡುತ್ತಿದ್ದು, ರವೀಂದ್ರ ನಾಥ್ ಕಡಲತಿರಗಳ ಅಭಿವೃದ್ಧಿ ಮತ್ತು ನಿರ್ವಹಣೆ ಸಮಿತಿಯು ಅದರ ಸಣ್ಣಪುಟ್ಟ ದುರಸ್ತಿ ಕಾರ್ಯ ನೋಡಿಕೊಳ್ಳುತ್ತಿದೆ. ಇಲ್ಲಿ ಸಂಗ್ರಹವಾಗುವ ಶುಲ್ಕವನ್ನು ಸಮಿತಿ ಪಡೆದು, ಅದರಿಂದ ದುರಸ್ತಿ ಕಾರ್ಯ ಗಳನ್ನು ಮಾಡಲಾಗುತ್ತಿದೆ. 

ಸಂಗ್ರಹಾಲಯದ ಪ್ರವೇಶಕ್ಕೆ ದೊಡ್ಡ ವರಿಗೆ ₹ 15, ಮಕ್ಕಳು ಹಾಗೂ ಶಾಲಾ ಮಕ್ಕಳಿಗೆ ₹ 5 ಇದೆ. ರಜಾ ದಿನಗಳಲ್ಲಿ ಪ್ರತಿದಿನ ಸುಮಾರು ₹ 3 ಸಾವಿರದಿಂದ ₹ 5 ಸಾವಿರದವರೆಗೆ ಆದಾಯ ಬರು ತ್ತದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲ ದ ಮಳೆಗಾಲದಲ್ಲಿ ₹ 1,000 ದಿಂದ ₹ 1,500ದವರೆಗೆ ಶುಲ್ಕ ಸಂಗ್ರಹ ಆಗುತ್ತಿದೆ.

ನೌಕಾಸೇನೆಯಲ್ಲಿ ‘ಚಾಪೆಲ್’....
1976 ರಿಂದ 2005ರವರೆಗೆ ಭಾರತೀಯ ನೌಕಾಸೇನೆಯಲ್ಲಿ ಕಾರ್ಯ ನಿರ್ವಹಿಸಿದ ಈ ಚಾಪೆಲ್ ನೌಕೆಯನ್ನು 2006ರ ಏಪ್ರಿಲ್ ತಿಂಗಳಿನಲ್ಲಿ ಸೇನೆಯು ಸಂಗ್ರಹಾಲಯವನ್ನು ನಿರ್ಮಿಸಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿತು. ಸುಮಾರು ₹ 1.73 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗ್ರಹಾಲಯವು 2006ರ ನವೆಂಬರ್ 7ರಂದು ಲೋಕಾರ್ಪಣೆಗೊಂಡಿದೆ.

ಈ ಯುದ್ಧನೌಕೆಯ ಹೆಸರು ಐಎನ್ಎಸ್ ಚಾಪೆಲ್. ಇದು ಸುಮಾರು 245 ಟನ್‌ ತೂಕ ಹೊಂದಿದ್ದು, 38.6 ಮೀ ಉದ್ದ ಹಾಗೂ 7.6ಮೀ ಎತ್ತರ ಹೊಂದಿದೆ. 24 ಕಿ.ಮೀ. ಸುತ್ತಳತೆಯಲ್ಲಿ ಕ್ಷಿಪಣಿಗಳನ್ನು ಹಾರಿಬಿಡುವ ಸಾಮರ್ಥ್ಯ ಹೊಂದಿದ್ದ ಈ ನೌಕೆಯು ಶತ್ರು ಯುದ್ಧ ವಿಮಾನಗಳನ್ನು ಹೊಡೆದುರುಳಿಸುವಲ್ಲಿ ಬಳಕೆಯಾಗಿತ್ತು.

* * 

ವಾರ್‌ಷಿಪ್‌ ಮ್ಯೂಸಿಯಂಗೆ ಈ ಬಾರಿಯ ಮಳೆಗಾಲದಿಂದ ರಕ್ಷಣೆ ಒದಗಿಸಲು ತಾತ್ಕಾಲಿಕ ಮುನ್ನೆಚ್ಚ ರಿಕೆ ವಹಿಸಲಾಗಿದೆ. ಮಳೆಗಾಲ ಮುಗಿದ ಬಳಿಕ ಮಳೆ ನೀರಿನ ಸೋರಿಕೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು
ಎಚ್.ಪ್ರಸನ್ನ
ಹೆಚ್ಚುವರಿ ಜಿಲ್ಲಾಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT