ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಕ್ಕೆ ಮುಕ್ತವಾದ ಮುಡಬೂಳ ಸೇತುವೆ

Last Updated 16 ಜೂನ್ 2017, 9:30 IST
ಅಕ್ಷರ ಗಾತ್ರ

ಚಿತ್ತಾಪುರ: 2015–16ನೇ ಸಾಲಿನ ನಬಾರ್ಡ್‌ ಯೋಜನೆಯಡಿ ₹1.35 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಮುಡಬೂಳ ಸಮೀಪ ಹರಿಯುವ ನಾಗಾವಿ ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸಾರಿಗೆ ಸಂಚಾರಕ್ಕೆ ಮುಕ್ತವಾಗಿದೆ.

ಈ ಹಿಂದೆ ನಾಗಾವಿ ಹಳ್ಳಕ್ಕೆ ಕಿರುಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ, ಪ್ರತಿ ವರ್ಷ ಮಳೆಗಾಲದಲ್ಲಿ ಅಧಿಕ ಮಳೆ ಬಂದಾಗ ನಾಗಾವಿ ಹಳ್ಳದ ಪ್ರವಾಹ ಮತ್ತು ಮರಗೋಳ ನಾಲಾದ ಪ್ರವಾಹದ ಮತ್ತು ಕಾಗಿಣಾ ನದಿಯ ಹಿನ್ನೀರಿನಿಂದ ಸೇತುವೆ ಮುಳುಗಡೆಯಾಗುತ್ತಿತ್ತು.

ಮೂರ್ನಾಲ್ಕು ದಿನಗಳವರೆಗೆ ಈ ಮಾರ್ಗದ ಸಂಚಾರ ಸಂಪೂರ್ಣ ಸ್ತಬ್ಧವಾಗುತ್ತಿತ್ತು. ಈಗ ಈ ಸಮಸ್ಯೆಗೆ ಶಾಸ್ವತ ಪರಿಹಾರ ದೊರಕಿದಂತಾಗಿದೆ ಎಂದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ.ತಾಲ್ಲೂಕಿನ ಯರಗಲ್‌ ಸೀಮೆ, ಚಿತ್ತಾಪುರ, ದಿಗ್ಗಾಂವ್‌ ಮತ್ತು ಡೋಣಗಾಂವ್‌, ಸಾತನೂರು ಸೀಮೆಯಿಂದ ಮಳೆ ಪ್ರವಾಹ ನೀರು ನಾಗಾವಿ ಹಳ್ಳಕ್ಕೆ ಹರಿದು ಬಂದು ಪ್ರವಾಹ ಹೆಚ್ಚಾಗಿ ಹಳೆಯ ಕಿರು ಸೇತುವೆಯು ಮುಳುಗಡೆಯಾಗುತ್ತಿತ್ತು.

ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದರು.ಮಳೆಗಾಲದಲ್ಲಿ ದಿಗ್ಗಾಂವ್‌, ಇಟಗಾ, ಮೊಗಲಾ, ಮರಗೋಳ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಿಯುವ ಮಳೆ ನೀರು ಪ್ರವಾಹವಾಗಿ ಮರಗೋಳ ನಾಲಾಕ್ಕೆ ಹರಿದುಬರುತ್ತದೆ. ಈ ನಾಲಾಕ್ಕೆ ಬರುವ ಪ್ರವಾಹದ ಹಿನ್ನೀರು ಮತ್ತು ಕಾಗಿಣಾ ನದಿಯ ಪ್ರವಾಹದ ಹಿನ್ನೀರಿನಿಂದ ನಾಗಾವಿ ಹಳ್ಳದ ಸಣ್ಣ ಸೇತುವೆ ಮುಳುಗಡೆಯಾಗಿ ಚಿತ್ತಾಪುರ ಪಟ್ಟಣವು ಭಾಗೋಡಿ ಮತ್ತು ಮುಡಬೂಳ ಗ್ರಾಮದಿಂದ ಸಂಪರ್ಕ ಕಡಿದುಕೊಳ್ಳುತ್ತಿತ್ತು. ಜನರು ತೀವ್ರ ಸಮಸ್ಯೆಗೆ ಸಿಲುಕುತ್ತಿದ್ದರು.

ಕೆಲವೊಮ್ಮೆ ಮೂರ್ನಾಲ್ಕು ದಿನಗಳವರೆಗೆ ಸೇತುವೆ ಹಿನ್ನೀರಿನಲ್ಲಿ ಮುಳುಗಿ ಭಾಗೋಡಿ ಮತ್ತು ಮುಡಬೂಳ ಗ್ರಾಮಗಳ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲಾಗದೆ ಚಡ
ಪಡಿಸುತ್ತಿದ್ದರು. ಸೇತುವೆ ದಾಟಿ ರೈತರು ತಮ್ಮ ಹೊಲಗಳಿಗೆ ಹೋಗಲಾಗದೆ ಪರದಾಡುತ್ತಿದ್ದರು. ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸಿ ತಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎಂದು ಗೊಣಗಾಡುತ್ತಿದ್ದರು.

ಎಲ್ಲಾ ಸಮಸ್ಯೆಗಳು ಪ್ರಸ್ತುತ ದೊಡ್ಡ ಸೇತುವೆಯ ನಿರ್ಮಾಣದಿಂದ ಪರಿಹಾರ ಕಂಡಂತಾಗಿದೆ. ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಬಂದು ದಂಡೋತಿಯ ಸೇತುವೆ ಮುಳುಗಡೆಯಾದರೆ ಚಿತ್ತಾಪುರದಿಂದ ಮುಡಬೂಳ ಮಾರ್ಗವಾಗಿ ಭಾಗೋಡಿ ಬಾಂದಾರು ಸೇತುವೆ ಮೂಲಕ ಕಲಬುರ್ಗಿಗೆ ಪ್ರಯಾಣ ಮಾಡಲು ಅನುಕೂಲವಾಗಿದೆ. ಚಿತ್ತಾಪುರ, ಮುಡ ಬೂಳ, ಭಾಗೋಡಿ ಜನರು ಸಚಿವ ಪ್ರಿಯಾಂಕ್‌ ಖರ್ಗೆ ಅವರ ದೂರದೃಷ್ಟಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT