ಭೂಮಿಕೊಟ್ಟ ರೈತ ಕುಟುಂಬಗಳಿಗಿಲ್ಲ ನೌಕರಿ

7

ಭೂಮಿಕೊಟ್ಟ ರೈತ ಕುಟುಂಬಗಳಿಗಿಲ್ಲ ನೌಕರಿ

Published:
Updated:
ಭೂಮಿಕೊಟ್ಟ ರೈತ ಕುಟುಂಬಗಳಿಗಿಲ್ಲ ನೌಕರಿ

ಯಾದಗಿರಿ: ಮೂಲಸೌಕರ್ಯ ಕೊರತೆ ಕಾರಣ ಜಿಲ್ಲೆಯ ಕಡೆಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲು ಕಂಪೆನಿಗಳು ಹಿಂದೇಟು ಹಾಕಿದ್ದು, ಕಂಪೆನಿಯ ನೌಕರಿಯ ಕನಸು ಕಾಣುತ್ತಿರುವ ಇಲ್ಲಿಯ ನೂರಾರು ರೈತ ಕುಟುಂಬಗಳು ನಿರಾಸೆ ಅನುಭವಿಸುವಂತಾಗಿದೆ. ನೌಕರಿ ಆಮಿಷಕ್ಕೆ ಬಲಿಯಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಭೂಮಿ ನೀಡಿರುವ ರೈತರು ಅತ್ತ ಹೊಲವೂ ಇಲ್ಲ; ಇತ್ತ ನೌಕರಿಯೂ ಇಲ್ಲದಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ತೆಲೆ ಎತ್ತುವ ಕಂಪೆನಿಗಳಲ್ಲಿ ರೈತರ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ಕೊಡಿಸುವ ಆಮಿಷವೊಡ್ಡಿದ್ದರಿಂದಲೇ ಇಲ್ಲಿನ ನೂರಾರು ರೈತರು ತಮ್ಮ ಭೂಮಿ ನೀಡಿದ್ದರು.

2009ರಲ್ಲಿ 3,284 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡ ಸರ್ಕಾರ ₹112.75 ಕೋಟಿ ಯೋಜನಾ ವೆಚ್ಚದಲ್ಲಿ ಮೂರು ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 2010ರಲ್ಲಿ ಚಾಲನೆ ನೀಡಿತ್ತು. ಏಳುವರ್ಷಗಳೇ ಗತಿಸಿದರೂ ವಿದ್ಯುತ್, ರಸ್ತೆ, ನೀರಿನಂತಹ ಅಗತ್ಯ ಸೌಕರ್ಯಗಳನ್ನೇ ಸರ್ಕಾರ ಕಲ್ಪಿಸಿಲ್ಲ. ಇದರಿಂದಾಗಿಯೇ ಬಂಡವಾಳ ಹೂಡುವ ಕಂಪೆನಿಗಳು ಕೈಗಾರಿಕಾ ಪ್ರದೇಶದಿಂದ ದೂರ ಉಳಿದಿವೆ ಎಂದು ರೈತರು ಹೇಳುತ್ತಾರೆ.

ಮೊದಲ ಹಂತದಲ್ಲಿ 1,580 ಎಕರೆ ಅಭಿವೃದ್ಧಿಪಡಿಸಿದ ಸರ್ಕಾರ ಸಣ್ಣ, ಅತಿಸಣ್ಣ ಕೈಗಾರಿಕೆಗಳಿಗೆ ಭೂ ಹಂಚಿಕೆ ಮಾಡಿತು. ಹಿಂದೂಸ್ತಾನ ಕೋಕಾಕೋಲಾ ಬೆವರೇಜ್ ಕಂಪೆನಿಗೆ 250 ಎಕರೆ, ಎಂಫೈನೆಟ್‌ ಸಲ್ಯೂಷನ್ ಕಂಪೆನಿಗೆ 125 ಎಕರೆ, 45 ಫಾರ್ಮಾ ಕಂಪೆನಿಗಳಿಗೆ ಒಟ್ಟು 390 ಎಕರೆ, ಹೈದರಾಬಾದ್‌ನ ಸನ್‌ಲೈಟ್ ಎಕ್ಟೀವ್ ಡ್ರಗ್‌ ಕಂಪೆನಿಗೆ 8 ಎಕರೆ ಒಟ್ಟು 773 ಎಕರೆಯನ್ನು ಖಾಸಗಿ ಕಂಪೆನಿಗಳಿಗೆ ಭೂ ಹಂಚಿಕೆ ಮಾಡಿದೆ.

ಈ ಕಂಪೆನಿಗಳಿಂದ ಒಟ್ಟು ₹ 2,535. 88 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿತ್ತು. ಒಟ್ಟು ಸ್ಥಳೀಯ ಹಾಗೂ ರೈತ ಕುಟುಂಬಗಳ ಒಟ್ಟು 10,989 ಮಂದಿಗೆ ಕಂಪೆನಿಗಳಲ್ಲಿ ನೌಕರಿ ಸಿಗುವ ಭರವಸೆ ಇತ್ತು. ಆದರೆ, ಸರ್ಕಾರ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸದೇ ಇರುವುದರಿಂದ ಬೃಹತ್‌ ಯೋಜನೆಗೆ ಹಿನ್ನಡೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ನನೆಗುದಿಗೆ ಬಿದ್ದ ಕಾಮಗಾರಿಗಳು: ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಸಲುವಾಗಿ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ ₹ 24.87 ಕೋಟಿ ವೆಚ್ಚದ ಜೋಲದಡಗಿ–ಗುಡೂರು ಬ್ಯಾರೇಜ್ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ. ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಕೆ ಮಾಡಲು ನಿರ್ಮಿಸಬೇಕಿದ್ದ 220/110ಕೆವಿ ಸ್ಟೇಷನ್‌ ನಿರ್ಮಾಣ ಕಾರ್ಯ ಕೂಡ ನನೆಗುದಿಗೆ ಬಿದ್ದಿದೆ. ಆದರೆ, ರೈಲ್ವೆ ಬೋಗಿ ಉತ್ಪಾದನಾ ಘಟಕ ಮಾತ್ರ ಕೈಗಾರಿಕಾ ಪ್ರದೇಶದಲ್ಲಿ ತಲೆಯೆತ್ತಿದ್ದು, ಕಾರ್ಯಾರಂಭ ಮಾಡಿದೆ.

ಸರ್ಕಾರ ನಂಬಿ ಕೆಟ್ಟ ರೈತರು

ಯಾದಗಿರಿ:‘ತಮ್ಮ ಮಕ್ಕಳಿಗೆ ಕಂಪೆನಿಯ ನೌಕರಿ ಸಿಗುತ್ತದೆ ಎಂಬ ಕಾರಣಕ್ಕಾಗಿಯೇ ರೈತರು ಅತ್ಯಂತ ಕಡಿಮೆ ಬೆಲೆ ಎಕರೆ ₹ 6 ಲಕ್ಷ ಪರಿಹಾರ ಪಡೆದಿದ್ದಾರೆ. ಅದೇ ಕಲಬುರ್ಗಿ ವಿಮಾನ ನಿಲ್ದಾಣ ಭೂಸ್ವಾಧೀನ ಮಾಡಿಕೊಂಡಾಗ ಸರ್ಕಾರ ಪ್ರತಿ ಎಕರೆಗೆ ₹14 ಲಕ್ಷ ಪರಿಹಾರ ನೀಡಿದೆ. ತಾವು ಮೋಸ ಹೊಗಿರುವುದು ರೈತರಿಗೆ ಈಗ ಮನವರಿಕೆ ಆಗಿದೆ’ ಎನ್ನುತ್ತಾರೆ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ.

* * 

ಕೈಗಾರಿಕಾ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಏಳು ವರ್ಷಗಳಿಂದ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ತೆವಳುತ್ತಲೇ ಇದೆ

ಸಾಯಿಬಣ್ಣ ಬೋರಬಂಡಾ, ಅಧ್ಯಕ್ಷ

ಶಾಶ್ವತ ನೀರಾವರಿ ಹೋರಾಟ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry