ಡೆಂಗಿ ಶಂಕೆ ಪ್ರಕರಣ ಏರಿಕೆ: ಬೇಕಿದೆ ಎಚ್ಚರಿಕೆ

7

ಡೆಂಗಿ ಶಂಕೆ ಪ್ರಕರಣ ಏರಿಕೆ: ಬೇಕಿದೆ ಎಚ್ಚರಿಕೆ

Published:
Updated:
ಡೆಂಗಿ ಶಂಕೆ ಪ್ರಕರಣ ಏರಿಕೆ: ಬೇಕಿದೆ ಎಚ್ಚರಿಕೆ

ದಾವಣಗೆರೆ: ಎಲ್ಲೆಡೆ ಮೋಡಕವಿದ ವಾತಾವರಣ. ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಸೂರ್ಯ, ಜೊತೆಗೆ ಆಗಾಗ ಬೀಳುವ ತುಂತುರು ಮಳೆ. ಜೂನ್‌ ಆರಂಭವಾಗುತ್ತಿದ್ದಂತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ವಾತಾವರಣವು ಸಹಜವಾಗಿ ಕೆಲವರಿಗೆ ಜ್ವರ, ಮೈಕೈನೋವು ಎಂಬ ಸಾಮಾನ್ಯ ಕಾಯಿಲೆಗಳನ್ನು ತಂದೊಡ್ಡುತ್ತದೆ.

ಜಿಲ್ಲೆಯಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಡೆಂಗಿ ಶಂಕೆಯ ಜ್ವರದ  ಪ್ರಕರಣಗಳು ಪತ್ತೆಯಾಗಿರುವುದು ಆತಂಕದ ವಿಷಯವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮುಂಜಾಗ್ರತಾ ಕ್ರಮವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಡೆಂಗಿ, ಮಲೇರಿಯಾ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ.

536 ಡೆಂಗಿ ಶಂಕೆ ಪ್ರಕರಣ ಪತ್ತೆ: ‘ಈ ವರ್ಷದ ಜನವರಿಯಿಂದ ಜೂನ್‌ 14 ರವರೆಗೆ 536 ಡೆಂಗಿ ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 92 ಪ್ರಕರಣಗಳು ಡೆಂಗಿ ಎಂದು ದೃಢಪಟ್ಟಿವೆ. ದಾವಣಗೆರೆ, ಜಗಳೂರು ಹಾಗೂ ಹರಿಹರ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಡೆಂಗಿ ಶಂಕೆ ಪ್ರಕರಣಗಳು ಪತ್ತೆಯಾಗಿವೆ.

ಹರಿಹರ ತಾಲ್ಲೂಕಿನ ಜಿಗಳಿ ಗ್ರಾಮದಲ್ಲಿ ಕಳೆದ ತಿಂಗಳು14 ವರ್ಷದ ಬಾಲಕನೊಬ್ಬ ಡೆಂಗಿ ಜ್ವರದಿಂದ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಎಂ.ಎಸ್‌.ತ್ರಿಪುಲಾಂಭ ಮಾಹಿತಿ ನೀಡಿದರು.

ನಗರದಲ್ಲೇ ಸಮಸ್ಯೆ: ಗ್ರಾಮೀಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಗರ ಪ್ರದೇಶಗಳಲ್ಲಿಯೇ ಡೆಂಗಿ ಜ್ವರಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ನೀರು ಸಂಗ್ರಹಿಸಲು ಮುಂದಾಗುವುದಿಲ್ಲ. ಆದರೆ, ನಗರ ಪ್ರದೇಶದ ಜನರು ನೀರು ಸಂಗ್ರಹಕ್ಕಾಗಿಯೇ ಹತ್ತಾರು ವ್ಯವಸ್ಥಿತ ಮಾರ್ಗಗಳನ್ನು ಮಾಡಿಕೊಂಡಿರುತ್ತಾರೆ.

ಬೃಹತ್‌ ಸಿಮೆಂಟ್‌ ತೊಟ್ಟಿ, ಡ್ರಮ್‌ ಸಾಲದು ಎನ್ನುವಂತೆ ಮನೆಯ ತಾರಸಿ ಮೇಲೆ ವಿಶಾಲವಾದ ನೀರಿನ ಟ್ಯಾಂಕ್‌ನ್ನೂ ನಿರ್ಮಿಸಿಕೊಂಡಿರುತ್ತಾರೆ. ಇದರಿಂದಾಗಿ ತೊಟ್ಟಿಗಳಲ್ಲಿ ಲಾರ್ವಾ ಹೆಚ್ಚಾಗಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ. ದಾವಣಗೆರೆ ನಗರದಲ್ಲಿ ಇದುವರೆಗೆ 172  ಡೆಂಗಿ ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ 14 ಪ್ರಕರಣ ದೃಢಪಟ್ಟಿವೆ’ ಎಂದು ವಿವರ ನೀಡಿದರು.

ಡೆಂಗಿ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಸೋಂಕು ಇರುವ ಈಡಿಸ್‌ ಇಜಿಪ್ಟಾ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಅದರಲ್ಲೂ ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿಯೇ ಕಚ್ಚುತ್ತವೆ.

ಸೊಳ್ಳೆಗಳು ಮನೆಯಲ್ಲಿ ಸಂಗ್ರಹಿಸುವ ಸ್ವಚ್ಛ ನೀರಿನಲ್ಲಿಯೇ ಸಂತಾನಾಭಿವೃದ್ಧಿ ಮಾಡುತ್ತವೆ. ಮನೆಯಲ್ಲಿ ಹೆಚ್ಚು ನೀರು ಸಂಗ್ರಹಿಸಿಡಬಾರದು. ಅವುಗಳನ್ನು ಆಗಾಗ ಶುಚಿ ಮಾಡುತ್ತಲೇ ಇರಬೇಕು. ಜತೆಗೆ ಮನೆಯ ಸುತ್ತಮುತ್ತಲಿನ ವಾತಾವರಣವನ್ನೂ ಶುಚಿಯಾಗಿಟ್ಟುಕೊಳ್ಳಬೇಕು. ಇದರಿಂದಾಗಿ ಸೊಳ್ಳೆಗಳ ನಿಯಂತ್ರಣ  ಮಾಡಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶ್‌ ಸಲಹೆ ನೀಡುತ್ತಾರೆ.

ನಿರ್ಲಕ್ಷ್ಯ ಬೇಡ: ‘ವಿಪರೀತ ಜ್ವರ, ಮೈಕೈ ಹಾಗೂ ತಲೆ ನೋವು, ಮಾಂಸಖಂಡ ಹಾಗೂ ಕೀಲುಗಳಲ್ಲಿ ನೋವು, ಕಣ್ಣುಗಳ ಹಿಂಭಾಗ ನೋವು, ವಾಂತಿ– ಭೇದಿ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ರೋಗದ ಲಕ್ಷಣ ತೀವ್ರವಾಗಿದ್ದಲ್ಲಿ ಆಸ್ಪತ್ರೆಗೆ ದಾಖಲು ಆಗಬೇಕು’ ಎಂಬುದು ಅವರ ಕಿವಿಮಾತು.

ನಿತ್ಯ 200 ಮನೆ ಸರ್ವೆ

ಪ್ರತಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ 200 ಮನೆಗಳನ್ನು ಸರ್ವೆ ಮಾಡಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರಿಗೆ ತೋರಿಸಬೇಕು. ದ್ರವರೂಪದ ಆಹಾರಗಳಾದ ಎಳನೀರು, ಹಣ್ಣಿನ ರಸ ಹಾಗೂ ಕುದಿಸಿ ಆರಿಸಿದ ಶುದ್ಧ ನೀರನ್ನು ಹೆಚ್ಚು ಕುಡಿಯಲು ರೋಗಿಗಳಿಗೆ ನೀಡಬೇಕು. ಜ್ವರ ನಿರ್ಲಕ್ಷಿಸಬಾರದು’ ಎನ್ನುತ್ತಾರೆ ಡಿಎಚ್‌ಒ ಡಾ.ತ್ರಿಪುಲಾಂಭ.

ಸೊಳ್ಳೆ ನಿಯಂತ್ರಣಕ್ಕೆ ಹೀಗೆ ಮಾಡಿ...

* ಕುಡಿಯುವ ಹಾಗೂ ಬಳಕೆ ನೀರನ್ನು ವಾರಕ್ಕೊಮ್ಮೆ ಬದಲಾಯಿಸಬೇಕು.

* ಮನೆಯ ಸುತ್ತಮುತ್ತಲಿನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

* ಏರ್‌ ಕೂಲರ್‌ಗಳಲ್ಲಿ ನೀರನ್ನು ಆಗಾಗ ಬದಲಾಯಿಸುತ್ತಿರಬೇಕು.

* ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಳ್ಳಬೇಕು.

* *

ಜಿಲ್ಲಾ ಆಸ್ಪತ್ರೆಯಲ್ಲಿ 20 ದಿನಗಳಿಂದ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಬಹುತೇಕರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಡಾ.ನೀಲಾಂಬಿಕೆ 

ಅಧೀಕ್ಷಕಿ, ಜಿಲ್ಲಾ ಆಸ್ಪತ್ರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry