ಕೃಷಿ ವಿ.ವಿ ಕ್ಯಾಂಪಸ್‌ಗೆ ನಾಳೆ ಶಿಲಾನ್ಯಾಸ

7

ಕೃಷಿ ವಿ.ವಿ ಕ್ಯಾಂಪಸ್‌ಗೆ ನಾಳೆ ಶಿಲಾನ್ಯಾಸ

Published:
Updated:
ಕೃಷಿ ವಿ.ವಿ ಕ್ಯಾಂಪಸ್‌ಗೆ ನಾಳೆ ಶಿಲಾನ್ಯಾಸ

ಶಿವಮೊಗ್ಗ: ಸಾಗರ ತಾಲ್ಲೂಕು ಆನಂದಪುರ ಇರುವಕ್ಕಿ ಬಳಿಯ 777 ಎಕರೆ ವಿಸ್ತಾರ ಪ್ರದೇಶದಲ್ಲಿ ತಲೆ ಎತ್ತಲಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ನಿರ್ಮಾಣಕ್ಕೆ ಜೂನ್‌ 17ರಂದು ಕೃಷಿ ಸಚಿವ ಕೃಷ್ಣ  ಬೈರೇಗೌಡ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಸುಮಾರು ₹ 155.33 ಕೋಟಿ ಅಂದಾಜು ವೆಚ್ಚದಲ್ಲಿ 4.95 ಲಕ್ಷ ಚದರ ಅಡಿ ಪ್ರದೇಶದಲ್ಲಿ ಶಾಶ್ವತ ಕಟ್ಟಡಗಳು ನಿರ್ಮಾಣವಾಗಲಿವೆ. ಇಲ್ಲಿನ ವಾತಾವರಣ, ಹವಾಗುಣಕ್ಕೆ ಪೂರಕವಾದ ಸುಂದರ ಕ್ಯಾಂಪಸ್‌ ನಿರ್ಮಿಸಲು ರೂಪುರೇಷೆ ಸಿದ್ಧಪಡಿಸ ಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ವಾಸುದೇವಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಆಡಳಿತ ಭವನ, ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣಾ ವಿಭಾಗ, ತೋಟಗಾರಿಕೆ ಮತ್ತು ಅರಣ್ಯ ವಿಭಾಗ, ಗ್ರಂಥಾಲಯ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿನಿಲಯ ನಿರ್ಮಿಸಲಾಗುವುದು.

ಆವರಣದ ಒಳಗೆ ಏನೇನು?: ಕ್ಯಾಂಪಸ್‌ ಒಳಗೆ ಕೊಳಚೆ ನೀರು ಶುದ್ಧೀಕರಿಸಿ, ಪುನರ್‌ಬಳಕೆ ಮಾಡುಲು ಆಧುನಿಕ ಘಟಕ ಅಳವಡಿಸಲಾಗುವುದು. 50 ಎಕರೆ ಪ್ರದೇಶದಲ್ಲಿ ಹೊಂಗೆ, ಸೀಮರೂಬ ಬೆಳೆದು ಜೈವಿಕ ಇಂಧನ ಉತ್ಪಾದನೆ ಮಾಡಲಾಗುವುದು. ಅರಣ್ಯ ವಿಭಾಗದ ಸಹಕಾರದಲ್ಲಿ ಅಪರೂಪದ ಗಿಡಗಳನ್ನು ನೆಡಲಾಗುವುದು. ವಿಶಾಲ ಪ್ರದೇಶದಲ್ಲಿ ಈಗಿರುವ ಗಿಡಮರಗಳನ್ನು ಉಳಿಸಿಕೊಳ್ಳುವ ಜತೆಗೆ, ಇನ್ನಷ್ಟು ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಜಗುಲಿ, ಪ್ರಾಂಗಣ, ಇಳಿಜಾರು ಸೂರು  ಪರಿಕಲ್ಪನೆಗಳಲ್ಲಿ ಸ್ಥಳೀಯವಾಗಿ ದೊರೆಯುವ ಜಂಬಿಟ್ಟಿಗೆ ಬಳಸಿ ಕಟ್ಟಡ ನಿರ್ಮಿಸಲಾಗುವುದು. ಸೌರಶಕ್ತಿ ಘಟಕಗಳು, ಮಳೆ ನೀರು ಸಂಗ್ರಹ, ಸೈಕಲ್‌ಗಳಿಗೂ ಪ್ರತ್ಯೇಕ ರಸ್ತೆ ನಿರ್ಮಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಗಣ್ಯರ ಉಪಸ್ಥಿತಿ: ಅಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ,  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಯುವಜನ ಸೇವೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್, ವಸತಿ ಸಚಿವ ಎಂ.ಕೃಷ್ಣಪ್ಪ, ಮಾಹಿತಿ ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ಉಪಸ್ಥಿತರಿರುವರು.

ಸಂಸದರಾದ  ಬಿ.ಎಸ್. ಯಡಿಯೂರಪ್ಪ, ಜಿ.ಎಂ.ಸಿದ್ದೇಶ್ವರ, ಬಿ.ಎನ್.ಚಂದ್ರಪ್ಪ, ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್. ಭಾಸ್ಕರ್, ಡಾ.ಎಂ.ಮಂಜುನಾಥ್, ಆಸ್ತಿ ಅಧಿಕಾರಿ ಗೋಪಿಕೃಷ್ಣ, ಕುಲಸಚಿವ ಡಾ.ಪಿ. ನಾರಾಯಣಸ್ವಾಮಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ನಾರಾಯಣಸ್ವಾಮಿ, ಡೀನ್‌ ಮಂಜುನಾಥ್, ಗೋಪಿಕೃಷ್ಣ, ವಾಗೀಶ್, ಎಂ.ಕೆ.ನಾಯಕ್‌, ಡಾ.ವಿಶ್ವನಾಥ್ ಉಪಸ್ಥಿತರಿದ್ದರು.

ಕೆಎಚ್‌ಬಿಗೆ ಹೊಣೆ

ಬೆಂಗಳೂರಿನ ಆರ್‌ಸಿ ಕಂಪೆನಿ ಕಟ್ಟಡ ನಿರ್ಮಾಣದ ನೀಲ ನಕ್ಷೆ ಸಿದ್ಧಪಡಿಸಿದೆ. ಎನ್‌ಸಿಸಿ ಕಂಪೆನಿ ನಿರ್ಮಾಣದ ಗುತ್ತಿಗೆ ಪಡೆದಿದೆ. ಕರ್ನಾಟಕ ಗೃಹ ಮಂಡಳಿಗೆ ಕ್ಯಾಂಪಸ್‌ನ ಶಾಶ್ವತ ಕಟ್ಟಡಗಳ ನಿರ್ಮಾಣದ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಅದಕ್ಕಾಗಿ ಅವರಿಗೆ ಶೇ 7ರಷ್ಟು ಸೇವಾ ಶುಲ್ಕ ನೀಡಲಾಗುತ್ತಿದೆ ಎಂದು ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry