ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದಿ ವೇದಾವತಿ ಒಡಲು ಬರಿದು

Last Updated 16 ಜೂನ್ 2017, 10:33 IST
ಅಕ್ಷರ ಗಾತ್ರ

ಹೊಸದುರ್ಗ: ಎಗ್ಗಿಲ್ಲದಂತೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಿಂದ ತಾಲ್ಲೂಕಿನ ಜೀವನದಿ ವೇದಾವತಿ ಒಡಲು ಬರಿದಾಗುತ್ತಿದೆ. ಮೆಣಸಿನೋಡು, ಕಾರೇಹಳ್ಳಿ, ಹಾಗಲಕೆರೆ, ಕೆಲ್ಲೋಡು, ಮುತ್ತಾ ಗೊಂದಿ, ಮೆಟ್ಟಿನಹೊಳೆ ಸೇರಿದಂತೆ ವೇದಾವತಿ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ಹಾಡಹಗಲೇ ಅವ್ಯಾಹತವಾಗಿ ಅಕ್ರಮ ದಂಧೆ ನಡೆಯುತ್ತಿದ್ದರೂ ತಾಲ್ಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಮರಳು ಮಾಫಿಯಾ ನಿಯಂತ್ರಿಸಲಾಗುತ್ತಿದೆ ಎಂಬುದನ್ನು ತೋರ್ಪಡಿಸಲು ಆಗಾಗ ಅಮಾಯಕ ವ್ಯಕ್ತಿಗಳ ಮರಳಿನ ಟ್ರ್ಯಾಕ್ಟರ್‌ ಹಾಗೂ ಲಾರಿ ಹಿಡಿದು, ಒಂದಷ್ಟು ದಂಡ ವಿಧಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಕಂದಾಯ ಹಾಗೂ ಪೊಲೀಸ್‌ ಇಲಾಖೆಯವರು ಕಾಟಾಚಾರಕ್ಕೆ ದಾಳಿ ನಡೆಸುತ್ತಾರೆ.

ಹಲವು ಗ್ರಾಮಗಳಲ್ಲಿ ಟ್ರ್ಯಾಕ್ಟರ್‌ ಮಾಲೀಕರು ಯಾರ ಭಯವಿಲ್ಲದೆ ಸ್ಥಳೀಯವಾಗಿಯೇ ಒಂದು ಟ್ರ್ಯಾಕ್ಟರ್‌ ಮರಳಿಗೆ ₹ 2ರಿಂದ 3 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ.
₹ 9 ಕೋಟಿ ವೆಚ್ಚದಲ್ಲಿ ವೇದಾವತಿ ನದಿ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನದಿ ಒಳಗಿನ ನೂರಾರು ಲಾರಿ ಲೋಡ್‌ ಮರಳನ್ನು ಹೊರಗೆ ತೆಗೆದು ರಾಶಿ ಹಾಕಿದ್ದಾರೆ. 

ಗುಣಮಟ್ಟದ ಮರಳು ಇದಾಗಿದ್ದು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ಆದರೆ ರಾಜಕೀಯ ಬಲಾಢ್ಯರು ಮರಳನ್ನು ಅಹೋರಾತ್ರಿ ಟಿಪ್ಪರ್‌, ಲಾರಿಗಳ ಮೂಲಕ ಅಕ್ರಮ ವಾಗಿ ನೆರೆಯ ಜಿಲ್ಲೆಗಳಿಗೆ ಸಾಗಿಸುತ್ತಿದ್ದಾರೆ. ಒಂದು ಲಾರಿ ಲೋಡ್‌ ಮರಳನ್ನು ₹ 35 –40 ಸಾವಿರಕ್ಕೆ  ಮಾರಾಟ ಮಾಡುವ ಮೂಲಕ ಸುಲಭವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ದಂಧೆಯಲ್ಲಿ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸ್ಥಳೀಯರಾದ ಕುಮಾರ್‌, ಬಸವರಾಜು ದೂರುತ್ತಾರೆ.

ವೇದಾವತಿ ನದಿಪಾತ್ರದಲ್ಲಿ ನಡೆಯುತ್ತಿರುವ ಮರಳು ದಂಧೆಯಿಂದ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ. ಮಳೆಗಾಲ ಆರಂಭವಾಗಿದ್ದರೂ ಮಳೆ ಬರುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಇನ್ನಾದರೂ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಕಾಳಜಿ ವಹಿಸಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಬೇಕು ಎಂಬುದು ನಾಗರಿಕರ ಮನವಿ.

ಮರಳಿನ ಟ್ರ್ಯಾಕ್ಟರ್‌ ಮನೆಗೆ ಡಿಕ್ಕಿ: ಮೂವರು ಪಾರು
ಅಕ್ರಮವಾಗಿ ಮರಳು ತುಂಬಿಕೊಂಡು ಬಂದ ಟ್ರ್ಯಾಕ್ಟರ್‌ ಪಟ್ಟಣದ 16ನೇ ವಾರ್ಡ್‌ನ ನಿವಾಸಿ ಚಂದ್ರಪ್ಪ ಎಂಬವರ ಮನೆಗೆ ಬುಧವಾರ ಸಂಜೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಮನೆಯ ಗೋಡೆ ಕಳಚಿ ಬಿದ್ದಿದ್ದು ಒಳಗಿದ್ದ ಮೂವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುತ್ತಾರೆ ಕಲ್ಲೇಶ್ವರ ಬಡಾವಣೆ ನಿವಾಸಿಗಳು.

* * 

ವೇದಾವತಿ ನದಿ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತೆಗೆದಿರುವ ಮರಳು ಬೊಗಸೆಯಷ್ಟೂ ಹೊರಗೆ ಹೋಗದಂತೆ ಸೂಚಿಸಲಾಗಿದೆ.
ಮಲ್ಲಿಕಾರ್ಜುನ್‌,
ತಹಶೀಲ್ದಾರ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT