ಕುಡಿಯುವ ನೀರಿಗೆ ತೀವ್ರ ಬವಣೆ

7

ಕುಡಿಯುವ ನೀರಿಗೆ ತೀವ್ರ ಬವಣೆ

Published:
Updated:
ಕುಡಿಯುವ ನೀರಿಗೆ ತೀವ್ರ ಬವಣೆ

ದೇವನಹಳ್ಳಿ: ಸದಾ ಬಾಗಿಲು ಹಾಕಿರುವ ಶುದ್ಧ ನೀರಿನ ಘಟಕ, ಹತ್ತಾರು ದಿನಕ್ಕೆ ಹತ್ತು ಬಿಂದಿಗೆ ನೀರು, ಒಂದೇ ಗ್ರಾಮದಲ್ಲಿ ಆರು ಕೊಳವೆಬಾವಿ ವಿಫಲ– ಇದು ತಾಲ್ಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಹೆಚ್ಚುತ್ತಿರುವ ಕುಡಿಯುವ ನೀರಿನ ಬವಣೆಯ ಸದ್ಯದ ಸ್ಥಿತಿ.

ಗ್ರಾಮದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ಕೇಂದ್ರ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘ, ಬ್ಯಾಂಕ್‌ ಶಾಖೆ, ವ್ಯವಸಾಯ ಸೇವಾ ಸಹಕಾರ ಸಂಘ, ಸರ್ಕಾರಿ ಫ್ರೌಡಶಾಲೆ ಮತ್ತು ಸರ್ಕಾರಿ ಕಿರಿಯ ಕಾಲೇಜು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆರೋಗ್ಯ ಕೇಂದ್ರಗಳೂ ಇಲ್ಲಿವೆ.  ಆದರೆ, ನೀರಿಗೆ ಹಾಹಾಕಾರ ಉಂಟಾಗುತ್ತಿರುವುದು ಜನರ ಆತಂಕ ಹೆಚ್ಚಿಸಿದೆ.

ಶಾಸಕರ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಲ್ಲಿ ಕಳೆದ ಮೂರು ತಿಂಗಳಲ್ಲಿ ಆರು ಕೊಳವೆ ಬಾವಿ ಕೊರೆಯಿಸಲಾಗಿದೆ. ಒಂದು ಹನಿ ನೀರು ಸಿಕ್ಕಿಲ್ಲ. ಖಾಸಗಿ ಕೊಳವೆಬಾವಿಯನ್ನು ರೈತರಿಂದ ಒಂದು ತಿಂಗಳಿಗೆ ₹15,000 ಬಾಡಿಗೆಗೆ ಪಡೆಯಲಾಗಿದೆ.

ಆದರೆ, ಅಲ್ಲೂ ಅಂತರ್ಜಲ ಕಡಿಮೆಯಾಗಿದೆ. ಮತ್ತೊಂದು ಕೊಳವೆ ಬಾವಿ ಕೊರೆಯಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಗುರುತು ಮಾಡಲಾಗಿದೆ. ಅದು ಸಹ ನೀರು ಸಿಗುತ್ತದೆ ಎನ್ನುವ ಖಾತರಿ ಇಲ್ಲ ಎನ್ನುತ್ತಾರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಶಿವರಾಮಯ್ಯ.

ರೈತರು ಗುರುತು ಮಾಡಿದ ಜಾಗದಲ್ಲಿ ಕೊಳವೆ ಬಾವಿ ಕೊರೆಯಿಸಿದರೆ ಅಂತರ್ಜಲ ಸಿಗುತ್ತದೆ. ಭೂವಿಜ್ಞಾನ  ಇಲಾಖೆ ಅಧಿಕಾರಿಗಳು ಸೂಚಿಸಿದಲ್ಲಿ ಕೊರೆದರೆ ಅಲ್ಲಿ ನೀರು ಸಿಗುತ್ತಿಲ್ಲ ಎನ್ನುತ್ತಾರೆ. 1,400 ಅಡಿ ಕೊರೆದರೂ ನೀರು ಸಿಕ್ಕಿಲ್ಲ. ಕುಡಿಯುವ ನೀರಿಗೆ, ಪಶು  ಸಾಕಾಣಿಕೆಗೆ, ದಿನನಿತ್ಯದ ಬಳಕೆಗೆ ಗ್ರಾಮದಿಂದ ದೂರವಿರುವ ಖಾಸಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಲಾಗಿದೆ ಎನ್ನುತ್ತಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆ ಅಕ್ಕಪಕ್ಕ ಕೊಳವೆ ಬಾವಿ ಕೊರೆಯಿಸಿದರೆ ಅಂತರ್ಜಲ ಸಿಗುತ್ತದೆ, ಎಲ್ಲೆಲ್ಲೋ ಕೊಳವೆ ಬಾವಿ ಕೊರೆಯಿಸಿದರೆ ನೀರು ಹೇಗೆ ಸಿಗುತ್ತದೆ. ಗ್ರಾಮ ಪಂಚಾಯಿತಿ ವತಿಯಿಂದ ದಿನಕ್ಕೆ ಮೂರು ಟ್ಯಾಂಕರ್ ನೀರು. ಒಂದು ಕುಟುಂಬಕ್ಕೆ ಹತ್ತು ಬಿಂದಿಗೆ ಹದಿನೈದು ದಿನಗಳಿಗೊಮ್ಮೆ ಸಿಗುತ್ತದೆ ಎಂದು ಸ್ಥಳೀಯರು ದೂರುತ್ತಾರೆ.

ಪ್ರಸ್ತುತ ದಿನಕ್ಕೆ ಹತ್ತು ಟ್ಯಾಂಕರ್ ನೀರು ಪೂರೈಕೆ ಮಾಡಿದರೂ ಸಾಕಾಗುವುದಿಲ್ಲ. ಸರ್ಕಾರ ಒಂದು ಟ್ಯಾಂಕರ್‌ಗೆ ₹250ರಿಂದ 300 ಕೊಡುತ್ತದೆ. ಅದನ್ನೂ ತಿಂಗಳಾನುಗಟ್ಟಲೆ ಅಲೆದ ಬಳಿಕ ಕೊಡುತ್ತಾರೆ ಎಂದು ಅವರು ಹೇಳಿದ್ದಾರೆ. ಬೇರೆಡೆಗೆ ಒಂದು ಟ್ಯಾಂಕರ್‌ಗೆ ₹400ರಿಂದ 450 ಸಿಗುತ್ತದೆ. ಇದರಿಂದಾಗಿ ಹಿಂದೇಟು ಹಾಕುವುದಾಗಿ ಟ್ಯಾಂಕರ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ವರ್ಷಗಳೇ ಉರುಳಿದೆ. ಕೊರೆಯಿಸಿದ ಯಾವುದೇ ಕೊಳವೆ ಬಾವಿಯಲ್ಲಿ ನೀರಿಲ್ಲ. ಗ್ರಾಮದಲ್ಲಿ ದಿನಕ್ಕೆ ಮೂರು ಟ್ಯಾಂಕರ್‌ನಷ್ಟೇ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯೆ ನಿವಾರಣೆ ಹೇಗೆ ಎಂಬುದು ಅರ್ಥವಾಗುತ್ತಿಲ್ಲ. ಎಂಬುದಾಗಿ ಪಿಡಿಒ ಕೃಷ್ಣಪ್ಪ ಅವರು ಪ್ರತಿಕ್ರಿಯಿಸಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಿಸ್ಥಿತಿ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸಮಸ್ಯೆ ಪರಿಹರಿಸಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ  ಅಧ್ಯಕ್ಷ ರಾಮಮೂರ್ತಿ.

* * 

ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಲೇ ಇದೆ. ತುರ್ತಾಗಿ ನಿವಾರಣೆಗೆ ಪ್ರತಿನಿತ್ಯ ಕನಿಷ್ಠ 15 ಟ್ಯಾಂಕರ್‌ಗೆ ಜಿಲ್ಲಾ ಪಂಚಾಯಿತಿ ಅವಕಾಶ ಮಾಡಿ ಕೊಡಬೇಕು

ರಾಮಮೂರ್ತಿ,

ಗ್ರಾಮ ಪಂಚಾಯಿತಿ  ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry