ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಖಾತೆ ತೆರೆಯಲು ಮತ್ತು ₹50,000ಕ್ಕಿಂತ ಹೆಚ್ಚಿನ ಹಣಕಾಸು ವಹಿವಾಟಿಗೆ ಆಧಾರ್ ಕಡ್ಡಾಯ

Last Updated 16 ಜೂನ್ 2017, 12:14 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, 2017 ಡಿಸೆಂಬರ್ 31ರೊಳಗೆ ಎಲ್ಲ ಬ್ಯಾಂಕ್ ಖಾತೆಗಳು ಆಧಾರ್‍‍ನೊಂದಿಗೆ ಲಿಂಕ್ ಹೊಂದಿರಬೇಕು. ಆಧಾರ್ ಲಿಂಕ್ ಇಲ್ಲದೇ ಇರುವ ಬ್ಯಾಂಕ್ ಖಾತೆಗಳು ಅಸಿಂಧುವಾಗಲಿವೆ.

ಪ್ಯಾನ್‌ ಕಾರ್ಡ್‌ಗೆ ಅರ್ಜಿ ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸುವಾಗ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಿರುವ ಬೆನ್ನಲ್ಲೇ ಇದೀಗ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಮಾಡಲಾಗಿದೆ. ಅದೇ ವೇಳೆ  ₹50,000ಕ್ಕಿಂತ ಹೆಚ್ಚಿನ ಹಣಕಾಸು ವಹಿವಾಟಿಗೆ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
ಬ್ಯಾಂಕ್‍ ಖಾತೆಗೆ ನಿಮ್ಮ ಆಧಾರ್ ವಿವರಗಳನ್ನು ಲಿಂಕ್  ಮಾಡಲು ಎರಡು ವಿಧಾನಗಳಿವೆ

ವಿಧಾನ1 : ನೆಟ್ ಬ್ಯಾಂಕಿಂಗ್ ಮೂಲಕ ಆನ್‍ಲೈನ್‍ನಲ್ಲಿ ಆಧಾರ್ ವಿವರಗಳನ್ನು ಅಪ್‍ಡೇಟ್ ಮಾಡುವುದು
ವಿಧಾನ2:  ಅರ್ಜಿ ತುಂಬಿಸಿ ಬ್ಯಾಂಕ್‌ಗೆ ಸಲ್ಲಿಸುವುದು

ನೆಟ್ ಬ್ಯಾಂಕಿಂಗ್ ಮೂಲಕ ಆಧಾರ್ ವಿವರಗಳನ್ನು ಅಪ್‍ಡೇಟ್ ಮಾಡುವುದು ಹೇಗೆ?

* ಇಂಟರ್‍‍ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವ ಬ್ಯಾಂಕ್ ಖಾತೆದಾರರು ಲಾಗಿನ್ ಆಗಬೇಕು.

*ಲಾಗಿನ್ ಆದ ನಂತರ  Update Aadhaar Card Details ಅಥವಾ Aadhaar Card Seeding ಎಂಬ ಲಿಂಕ್ ಕ್ಲಿಕ್ ಮಾಡಿದಾಗ ಪೇಜ್ ತೆರೆಯುತ್ತದೆ.

*ಆ ಪುಟದಲ್ಲಿ ಆಧಾರ್ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ಕಿಸಿ.

*ಈಗ ನಿಮ್ಮ ಆನ್‍ಲೈನ್ ಅರ್ಜಿ ಬ್ಯಾಂಕ್ ಡೇಟಾಬೇಸ್‍ನಲ್ಲಿರುತ್ತದೆ. ಬ್ಯಾಂಕ್ ಅಧಿಕಾರಿಗಳು ಈ ವಿವರಗಳೆಲ್ಲವೂ  ಸರಿಯಾಗಿದೆ ಎಂದು ದೃಢೀಕರಿಸಿದ ನಂತರವೇ ಅದನ್ನು ಸ್ವೀಕರಿಸುತ್ತಾರೆ.

*ಆಧಾರ್ ವಿವರಗಳನ್ನು ಸಲ್ಲಿಸಿದ ನಂತರ ಮುಂದಿನ ಪ್ರಕ್ರಿಯೆಗಳ ಬಗ್ಗೆ ಇಮೇಲ್ ಅಥವಾ ಎಸ್‍ಎಂಎಸ್ ಮೂಲಕ ನಿಮಗೆ ಸಂದೇಶ ಲಭಿಸುವುದು.

ಇಂಟರ್‍‍ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೇ ಇದ್ದರೆ ಅರ್ಜಿ ತುಂಬಿಸಿ ಬ್ಯಾಂಕ್‍ಗೆ ಸಲ್ಲಿಸಬೇಕು

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
* ಇಲ್ಲಿ ಕ್ಲಿಕ್ ಮಾಡುವ ಮೂಲಕ ಅರ್ಜಿ ಡೌನ್‍ಲೋಡ್ ಮಾಡಿ.
* ಡೌನ್‍ಲೋಡ್ ಮಾಡಿದ ಪ್ರತಿಯ ಪ್ರಿಂಟ್ ಔಟ್  ತೆಗೆದುಕೊಳ್ಳಿ
* ನಿರ್ದಿಷ್ಟ ಜಾಗದಲ್ಲಿ ನಿಮ್ಮ ಬ್ಯಾಂಕ್ ಖಾತೆ  ಸಂಖ್ಯೆ, ವಿಳಾಸ, ಐಎಫ್‍ಎಸ್‍ಸಿ ಕೋಡ್ ನಮೂದಿಸಿ
* ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ
* ನಿಮ್ಮ ಅರ್ಜಿಯನ್ನು ತುಂಬಿದ ನಂತರ ನಿಮ್ಮ ಆಧಾರ್ ಕಾರ್ಡ್  ಜೆರಾಕ್ಸ್ ಪ್ರತಿಯೊಂದನ್ನು ಅರ್ಜಿ ಜತೆಗೆ ಲಗತ್ತಿಸಿ ನಿಮ್ಮ ಬ್ಯಾಂಕ್‍ಗೆ ಸಲ್ಲಿಸಿ
ಮಾಹಿತಿ ದೃಢೀಕರಣಕ್ಕಾಗಿ ಬ್ಯಾಂಕ್‍ ಅಧಿಕೃತರು ಆಧಾರ್ ಕಾರ್ಡ್‍ನ ಮೂಲ ಪ್ರತಿಯನ್ನು ತೋರಿಸುವಂತೆ ಹೇಳುತ್ತಾರೆ. ದೃಢೀಕರಣ ಆದ ನಂತರ ನಿಮಗೆ ಆ ಬಗ್ಗೆ ಸಂದೇಶ ತಿಳಿಸುತ್ತಾರೆ.

ಆಧಾರ್‌–ಪ್ಯಾನ್‌ ಜೋಡಣೆ ಹೇಗೆ?
*ಆದಾಯ ತೆರಿಗೆ ಇಲಾಖೆಯ ಇ–ಫೈಲಿಂಗ್‌ ವೆಬ್‌ಸೈಟ್‌ಗೆ ಭೇಟಿ ನೀಡಿ, ‘ಲಿಂಕ್‌–ಆಧಾರ್‌’ ಆಯ್ಕೆ ಒತ್ತಿ
*ಪ್ಯಾನ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆ ನೀಡಿ
*ಹೆಸರು ಬದಲಾವಣೆ ಅಥವಾ ಅಕ್ಷರ ದೋಷ ಇದ್ದರೆ, ಆಧಾರ್‌ ವೆಬ್‌ಸೈಟ್‌ಗೆ ಲಾಗ್‌ ಇನ್‌ ಆಗಿ. ಪ್ಯಾನ್‌ ಕಾರ್ಡ್‌ನ ಸ್ಕ್ಯಾನ್‌  ಮಾಡಿದ ಪ್ರತಿಯನ್ನು ಅಪ್‌ಲೋಡ್‌ ಮಾಡಿ, ಹೆಸರು ಬದಲಾವಣೆಗೆ ಮನವಿ ಮಾಡಿ
*ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಹಾಕುವಾಗ ಅರ್ಜಿಯಲ್ಲಿ ಆಧಾರ್‌ ಸಂಖ್ಯೆ ನಮೂದಿಸಿಯೂ ಜೋಡಣೆ ಮಾಡಬಹುದು
*ಎಸ್‌ಎಂಎಸ್‌ ಮೂಲಕವೂ ಜೋಡಣೆ ಮಾಡಬಹುದು (UIDPAN<ಆಧಾರ್‌ಸಂಖ್ಯೆ><ಪ್ಯಾನ್‌ ಸಂಖ್ಯೆ>ಬರೆದು 567678 ಅಥವಾ 56161 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಬೇಕು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT