ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2009–15ರ ಅವಧಿ: ಪೊಲೀಸರ ಗುಂಡಿನ ದಾಳಿಗೆ ವಾರದಲ್ಲಿ ಸರಾಸರಿ ಇಬ್ಬರು ನಾಗರಿಕರ ಸಾವು

Last Updated 16 ಜೂನ್ 2017, 15:01 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2009–2015ರ ಅವಧಿಯಲ್ಲಿ ಪ್ರತಿ ವಾರ ಕನಿಷ್ಠ ಇಬ್ಬರು ನಾಗರಿಕರು ಪೊಲೀಸರ ಗುಂಡಿನ ದಾಳಿಯ ವೇಳೆ ಸಾವಿಗೀಡಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ–ಅಂಶದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರದೇಶದ ಮಂಡ್‌ಸೌರ್‌ನಲ್ಲಿ ಜೂನ್‌ 6 ರಂದು ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಗೋಲಿಬಾರ್‌ ನಡೆಸಲಾಗಿತ್ತು. ಈ ವೇಳೆ 6 ಜನ ರೈತರು ಮೃತಪಟ್ಟಿದ್ದರು. ಈ ವೇಳೆ ಅಂಕಿ–ಅಂಶದ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಅಂಕಿ ಅಂಶದ ಪ್ರಕಾರ 2009–2015ರ ಅವಧಿಯಲ್ಲಿ 796 ನಾಗರಿಕರು ಮೃತಪಟ್ಟಿದ್ದಾರೆ. ಜತೆಗೆ 4,747 ಪೊಲೀಸ್‌ ಗುಂಡಿನ ದಾಳಿ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ. 2008–2010ರ ಅವಧಿಯಲ್ಲಿ ಜಮ್ಮುಕಾಶ್ಮೀರದ್ಲಲಿ ನಿರಂತರ ಗಲಭೆಗಳು ನಡೆದಿದ್ದವು. ಈ ವೇಳೆ ಪೊಲೀಸ್‌ ದಾಳಿ ಪ್ರಮಾಣವೂ ಹೆಚ್ಚಾಗಿತ್ತು. ಆದರೆ, ನಂತರದ ಅವಧಿಯಲ್ಲಿ(2015ರ ವರೆಗೆ) ಕಾಶ್ಮೀರದ ಸ್ಥಿತಿ ಸುಧಾರಿಸಿದ್ದ ಕಾರಣ ಗುಂಡಿನ ದಾಳಿ ಪ್ರಕರಣಗಳು ಸಹ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2010ರಲ್ಲಿ 662 ಪ್ರಕರಣಗಳು ಜಮ್ಮ ಮತ್ತು ಕಾಶ್ಮೀರದಲ್ಲೇ ದಾಖಲಾಗಿದ್ದವು. ಈ ವೇಳೆ 91ನಾಗರಿಕರು ಮತ್ತು 17 ಪೊಲೀಸರು ಸಾವಿಗೀಡಾಗಿದ್ದರು. ಜತೆಗೆ ಕ್ರಮವಾಗಿ 494 ನಾಗರಿಕರು, 2,952 ಪೊಲೀಸರು ಗಾಯಗೊಂಡಿದ್ದರು.

2015ರಲ್ಲಿ ಒಟ್ಟು 156 ಪ್ರಕರಣಗಳು ದಾಖಲಾಗಿದ್ದವು. ಅವರುಗಳನ್ನು ಗಲಭೆ ಸಂದರ್ಭಗಳಲ್ಲಿ(21), ಅಪರಾಧಿಗಳನ್ನು ಬಂಧಿಸುವ ವೇಳೆ(30) ಹಾಗೂ ಇತರೆ ಸಂದರ್ಭಗಳಲ್ಲಿ(86) ಎಂದು ವಿಭಾಗಿಸಲಾಗಿದ್ದು ಈ ವೇಳೆ 32 ನಾಗರಿಕರು ಮೃತಪಟ್ಟಿದ್ದರು. ಇದಲ್ಲದೆ ಇದೇ ವರ್ಷ ಪೊಲೀಸರು ತಮ್ಮ ಆತ್ಮರಕ್ಷಣೆಯ ಕಾರಣಕ್ಕಾಗಿ ಗುಂಡು ಹಾರಿಸಿದ್ದ 19 ಪ್ರಕರಣಗಳು ಸಹ ಬೆಳಕಿಗೆ ಬಂದಿದ್ದವು. ಈ ವೇಳೆಯೂ 10 ಮಂದಿ ನಾಗರಿಕರು ಸಾವನ್ನಪ್ಪಿದ್ದರು.

ಯಾವ ರಾಜ್ಯದಲ್ಲಿ ಹೆಚ್ಚು ದಾಳಿ: 2015ರಲ್ಲಿ ರಾಜಸ್ಥಾನದಲ್ಲಿ ಅತಿಹೆಚ್ಚು(35) ಪ್ರಕರಣಗಳು ದಾಖಲಾಗಿದ್ದವು. ನಂತರದ ಸ್ಥಾನದಲ್ಲಿ ಮಹರಾಷ್ಟ್ರ(33) ಹಾಗೂ ಉತ್ತರಪ್ರದೇಶ(29) ಇದೆ.

2014ರ ಹಿಂದೆ ನಡೆದ ಗುಂಡಿನ ದಾಳಿ ಪ್ರಕರಣಗಳನ್ನು ಕ್ರಮವಾಗಿ ಗಲಭೆ ಸಂದರ್ಭದ ದಾಳಿಗಳು, ಡಕಾಯಿತಿ ಕಾರ್ಯಾಚರಣೆ ಪ್ರಕರಣಗಳು, ಭಯೋತ್ಪಾದನೆ ವಿರುದ್ಧದ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳು ಎಂದು ವಿಭಾಗಿಸಲಾಗಿದ್ದು, 2009ರಿಂದ 2013 ರ ಅವಧಿಯಲ್ಲಿ ಈ ವಿಭಾಗಗಳಲ್ಲಿ ಕ್ರಮವಾಗಿ 1,371,174, 815, ಮತ್ತು 775 ಪ್ರಕರಣಗಳು ನಡೆದಿವೆ. ಈ ವೇಳೆ 471 ಮಂದಿ ಪೊಲೀಸ್‌ ಅಧಿಕಾರಿಗಳು ಸಹ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT