ಜಂಟಿಯಾಗಿ ಇಡುವ ಮೊದಲ ಹೆಜ್ಜೆ

7

ಜಂಟಿಯಾಗಿ ಇಡುವ ಮೊದಲ ಹೆಜ್ಜೆ

Published:
Updated:
ಜಂಟಿಯಾಗಿ ಇಡುವ ಮೊದಲ ಹೆಜ್ಜೆ

-ಶ್ರೀರಂಜನಿ

**

‘ಅಣ್ಣನೂ ಕೆಲಸಕ್ಕೆಂದು ಮನೆ ಬಿಟ್ಟಾಯಿತು. ಸಣ್ಣವನೂ ಈಗ ಅದೇ ದಾರಿಯಲ್ಲಿದ್ದಾನೆ. ಈಗ ನೀನೂ ಓದಬೇಕೆಂದು  ಹೊರಗೆ ಹೋದ್ರೆ ನಾವಿಬ್ರೇ ಇಲ್ಲಿ ಏನು ಮಾಡುವುದು? ಮದುವೆ ಆಗುವವರೆಗಾದ್ರೂ ನಮ್ ಜೊತೆಯೇ ಇರು. ಇಲ್ಲೇ ಸಣ್ಣ ಕೆಲ್ಸಕ್ಕೋ, ಕಂಪ್ಯೂಟರ್ ಕ್ಲಾಸಿಗೋ ಸೇರ್ಕೋ.’ ಡಿಗ್ರಿ ಮುಗಿದು ಎಂ.ಎಸ್ಸಿ.ಗೆ ಸೀಟು ಸಿಕ್ಕಿ ಕೊಣಾಜೆಗೆ ಹೋಗಬೇಕೆಂದವಳಿಗೆ ಏರುತ್ತಿದ್ದ ವಸಂತ, 22ರ ಹತ್ತಿರ ಬಂದಂತೆ ಅಮ್ಮನ ತಳಮಳವೂ ಹೆಚ್ಚಿ, ಉದುರಿದ ನುಡಿಮುತ್ತುಗಳು ಇವು. ಎದುರು ಮಾತನಾಡದೆ ಗೋಣು ಅಲ್ಲಾಡಿಸಿದ್ದೆ.

‘ಹುಡುಗನ ಮುಖದಲ್ಲಿ ಮೊಡವೆ ಕಲೆ’, ’ನನಗಿಂತ ಕುಳ್ಳು’- ನನಗೆ ಇವರು ಯಾರೂ ಸರಿಯಾಗಲಾರರು. (‘ಶ್ಯಾನುಭೋಗರ ಮಗಳು’ ಪ್ರಭಾವ(?)) ‘ಹುಡುಗನಿಗೆ ಸೈನ್ಯದಲ್ಲಿ ಕೆಲಸವೇ? ಬೇಡವೇ ಬೇಡ’, ಅಮ್ಮನಿಗೆ ದಿಗಿಲು. ‘ಶಾಸ್ತ್ರ ಸಂಪ್ರದಾಯದ ಮನೆಯೇ? ಮಗಳು ಹೊಂದಿಕೊಳ್ಳುವಳೋ ಇಲ್ಲವೋ?’- ಅಪ್ಪನ ಕಳಕಳಿ. ಅಂತೂ ಜಾತಕ ‘ಹೊರಹಾಕಿದ’ ವರ್ಷದೊಳಗೆ ಈ ಹುಡುಗ ನನಗೆ ‘ಲಗ್ತಾಗಬಹುದು’ ಎಂಬ ನಿರೀಕ್ಷೆಯೊಂದಿಗೆ ಮದುವೆ ನಿಶ್ಚಯವಾಯಿತು. ಗೆಳತಿಯರೆಲ್ಲರೂ ಬಿ.ಎಡ್., ಎಂ.ಎಸ್ಸಿ. ಎಂದು ಊರು ಬಿಟ್ಟಿದ್ದರೆ ನಾನು ‘ಶ್ರೀಮತಿ’ಯಾಗಿ ಊರು ಬಿಟ್ಟಿದ್ದೆ.

ಮದುವೆಯ ಮೊದಲ ವರ್ಷ, ಮದುಮಕ್ಕಳೆಂಬ ಉಪಚಾರ, ಔತಣಕೂಟಗಳು, ಉಡುಗೊರೆಗಳು, ತಿರುಗಾಟಗಳು. ಬದುಕಲ್ಲಿ ಬಣ್ಣಬಣ್ಣದ ಕನಸುಗಳು, ಕಾಮನಬಿಲ್ಲು. ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ’ ಎಂದ ಸರ್ವಜ್ಞ ನೆನಪಾದ. ಹಾಗೇ ವರ್ಷಗಳ ಕಾಲಚಕ್ರ ಎರಡು ಸುತ್ತು ಬರುತ್ತಲೇ ಕರೆಂಟು ಬಿಲ್ಲಿನಿಂದ ಹಿಡಿದು ಮನೆಯ ಸಾಮಾನು ತರುವವರೆಗೂ - ಮನೆ ನಿರ್ಮಾಣದವರೆಗೂ ‘ನಮ್ಮದೇ ಕೈ, ನಮ್ಮದೇ ತಲೆ’ ಎಂಬ ಪರಿಸ್ಥಿತಿಯ ಅರಿವಾಗಿತ್ತು. ಮೇಲಾಗಿ ಹಿರಿಯ ಮಗನ ಸ್ಥಾನದಲ್ಲಿ ನಿಂತವನಿಗೆ ಊರಿನ ಜವಾಬ್ದಾರಿಯೂ ಅಷ್ಟೇ ಉಂಟಲ್ಲ? ಹಾಗಾಗಿ ಉಳಿತಾಯದ ಕನಸೂ ಜೊತೆಗೂಡಿತು. ಈ ಮಧ್ಯೆ ಬದುಕಿನಲ್ಲಿ ತಂಪೆರೆಯುವ, ಹೆಗಲೇರಿ ಖುಷಿ ಕೊಡುವ ಮಕ್ಕಳೂ ಸೇರಿದರು. ಮತ್ತೆ ಹೊಸ ಹೊಸ ಜವಾಬ್ದಾರಿಗಳು: ಅವರ ಆರೋಗ್ಯ, ಅವರಿಗೆ ಹಿತವೆನಿಸುವ ಆಹಾರದ ತಯಾರಿಕೆ, ಉತ್ತಮ ಇರಬಹುದು ಎಂದೆಣಿಸಿಕೊಂಡ ಶಾಲೆಗಳ ಆಯ್ಕೆ, ಓದು, ಇತರ ಚಟುವಟಿಕೆಗಳು... ಇಷ್ಟಾಗುವಾಗ ಇವನೇ ನೆನಪಿಸಿದ: ‘ಓದಬೇಕು ಅಂದಿದೆಯಲ್ಲ? ಕರೆಸ್ಪಾಂಡೆನ್ಸ್ ಮಾಡ್ತೀಯಾ?’. ನಾನೇ ಮರೆತಿದ್ದೆ! ಸ್ನಾತಕೋತ್ತರ ಪದವೀಧರೆಯಾದೆ. ಮದುವೆಯ ಮುಂಚಿನ ಕನಸು ಅಂತೂ ನನಸಾಯಿತು.

‘ಎಣ್ಣೆ ಕಮ್ಮಿ ಹಾಕಿ ದೋಸೆ ಮಾಡು’ ಎಂಬ ಗಂಡ, ‘ನಾಳೆ ಬಾಕ್ಸ್‌ಗೆ ಪಲಾವ್ ಮಾಡಮ್ಮಾ’ ಎಂದು ರಾಗ ಎಳೆಯುವ ಮಕ್ಕಳ ಬೇಡಿಕೆಯನ್ನು ಪೂರೈಸುತ್ತಾ, ಒಮ್ಮೊಮ್ಮೆ ಏಕತಾನತೆಯಾಗಿ ಇದೇ ಕಾಡಿ, ಕೊನೆಗೆ ಮುನಿಸು, ಜಗಳಗಳಿಗೂ ಕಾರಣವಾಗಿಲ್ಲ ಅಂತೇನಿಲ್ಲ. ಆದರೆ ಇದಕ್ಕಾಗಿ ಅಹಂನ್ನು ಎಂದೂ ಪ್ರದರ್ಶಿಸದೆ, ಸಂತೃಪ್ತ ಗೃಹಿಣಿಯಾಗಿ ನನ್ನ ಅಸ್ಮಿತೆಯನ್ನೂ ಕಳೆದುಕೊಳ್ಳದೆ, ಸಾರ್ಥಕತೆ ಎಂದರೆ ಇದೇ ಎಂದು ಅನಿಸುವಂತೆ ಮಾಡಿದೆ, ಈ ಸಂಸಾರ.

ಈ ಮದುವೆ ಎಂಬೋ 13 ವರ್ಷಗಳ ಪ್ರಯಾಣದಲ್ಲಿ, ‘ಮದುವೆಯೆಂದರೆ ಸಿನಿಮಾದಲ್ಲಿ ಹೀರೋ-ಹೀರೋಯಿನ್‌ಗಳು ಹಾಸಿಗೆಯಲ್ಲಿ ಮಲಗಿದಂತೆ ಲೈಟ್ ಆಫ್ ಆಗುವುದೂ ಅಲ್ಲ, ಬಾಲ್ಯದಲ್ಲಿ ಕೇಳಿದ ಕತೆಯಂತೆ -‘‘ಮದುವೆಯಾಗಿ ಅವರು ಸುಖದಿಂದ ಬಾಳಿದರು’’ ಎಂಬುದೂ ಅಲ್ಲ. ಹಾಗೆ ಅದು ಅಡ್ಜಸ್ಟ್‌ಮೆಂಟೂ ಅಲ್ಲ, ಕಮಿಟ್‌ಮೆಂಟೂ ಅಲ್ಲ, ಸ್ವಪ್ರತಿಷ್ಠೆಯ ಅಂಕಣವೂ ಅಲ್ಲ. ತಾಳ್ಮೆ, ಜವಾಬ್ದಾರಿಗಳನ್ನು ಸದ್ದಿಲ್ಲದೆ ಮೈಗೂಡಿಸುವ, ಆಕಸ್ಮಿಕ ಆಘಾತಗಳಿಗೆ, ಏಳುಬೀಳುಗಳಿಗೆ ಜಗ್ಗದಂತೆ, ಬಿದ್ದಾಗ ತಾವಾಗಿಯೇ ಏಳುವಂಥ ವಿದ್ಯೆ ಕಲಿಸುವ ಲೋಕಕ್ಕೆ ಎರಡು ಜೀವಗಳು ಜಂಟಿಯಾಗಿ ಇಡುವ ಮೊದಲ ಹೆಜ್ಜೆ’ ಎಂದೇ ಕಂಡುಕೊಂಡಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry