ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

1. ನಾನು 38 ವರ್ಷದ ಗೃಹಿಣಿ. ನನಗೊಂದು ವಿಚಿತ್ರ ಸಮಸ್ಯೆ ಇದೆ. ಅದೇನೆಂದರೆ ಸಾವಿನ ಮನೆಗೆ ಹೋಗಿ ಬಂದವರು ನನ್ನನ್ನು ಮುಟ್ಟುತ್ತಾರೆ ಎಂಬ ಭಯ. ಆ ಕಾರಣಕ್ಕೆ ನಾನು ಹೊರಗಡೆ ಹೋಗಲು ಹಿಂಜರಿಯುತ್ತೇನೆ. ಮಾರುಕಟ್ಟೆ, ದೇವಸ್ಥಾನ, ಪಕ್ಕದ ಮನೆ – ಹೀಗೆ ಎಲ್ಲೇ ಹೋದರೂ ಮನೆಗೆ ಬಂದು ಸ್ನಾನ ಮಾಡುತ್ತೇನೆ. ನನ್ನ ಇನ್ನೊಂದು ಸಮಸ್ಯೆ ಎಂದರೆ ಬಟ್ಟೆಗಳನ್ನು ಮಡಿ ಮಾಡುವುದು, ಒದ್ದೆ ಬಟ್ಟೆ ಹಾಕಿಕೊಂಡು ಬಟ್ಟೆಗಳನ್ನು ಮಡಿಸಿಡುವುದು – ಹೀಗೆಲ್ಲಾ ಮಾಡುತ್ತೇನೆ. ನಾನು ಯಾಕೆ ಹೀಗೆಲ್ಲಾ ಮಾಡುತ್ತೇನೆ ಎನ್ನುವುದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ಸಲಹೆ ತಿಳಿಸಿ.

ನನಗೆ ನಿಮ್ಮ ಸ್ಥಿತಿಯ ಅರಿವಾಗಿದೆ. ‘ನನ್ನ ವರ್ತನೆ ಸರಿಯಿಲ್ಲ, ವರ್ತನೆಯಲ್ಲಿ ಏನೋ ಬದಲಾವಣೆ’ಯಾಗಿದೆ ಎಂಬುದನ್ನು ನೀವು ಅರಿತಿದ್ದಿರಲ್ಲ ಅದು ಪ್ರಶಂಸನೀಯ.  ಅದು ನಿಮಗೆ  ನೀವೇ ಸಹಾಯ ಮಾಡಿಕೊಳ್ಳಲು ಇರುವ ಮೊದಲ ಹೆಜ್ಜೆ. ಇದೊಂದು ರೀತಿಯ ಮಾನಸಿಕ  ಸಮಸ್ಯೆ.  ಈ ಸಮಸ್ಯೆಯ ಮೂಲವನ್ನು ತಿಳಿಯಲು ನೀವು  ಮನೋವೈದ್ಯರನ್ನು ಕಾಣುವುದು ಉತ್ತಮ. ಅದರೊಂದಿಗೆ ಆಪ್ತಸಮಾಲೋಚಕರನ್ನು ಕಂಡು ಕೆಲವು ವಾರಗಳ ಕಾಲ ಅವರಿಂದ ಸಮಾಲೋಚನೆ ಪಡೆದುಕೊಳ್ಳಿ. ಇದರಿಂದ ನೀವು ಆತಂಕ, ಒತ್ತಡ ಹಾಗೂ ಭಯಗಳಿಂದ ದೂರವಾಗುತ್ತವೆ;  ಇದರಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲೂ ಸಾಧ್ಯವಾಗುತ್ತದೆ. ಈ ಎಲ್ಲಾ ಅಭ್ಯಾಸಗಳಿಂದ ಬಿಡುಗಡೆಯನ್ನು ಪಡೆದು ನೀವು ಮತ್ತೆ ಮೊದಲಿನಂತಾಗಬಹುದು. ನೀವು ಎಲ್ಲರಂತೆ ಸಹಜವಾಗಿರಲೂ ಸಾಧ್ಯ.

***

2. ನಾನು ನಿವೃತ್ತ ಪ್ರಾಧ್ಯಾಪಕ. ನನಗೆ 62 ವರ್ಷ. ಸುಮಾರು 20 ವರ್ಷಗಳಿಂದ ನನಗೆ ನಿದ್ರೆಯ ಸಮಸ್ಯೆ ಇದೆ. ಮನೋವೈದ್ಯರಿಗೆ ತೋರಿಸಿದರೂ ಸಂಪೂರ್ಣ ಗುಣವಾಗುತ್ತಿಲ್ಲ.  ಒಂದೆರಡು ತಿಂಗಳಿನಿಂದ ಕತ್ತುನೋವು ಶುರುವಾಗಿದೆ. ಈ ಎರಡೂ ಸಮಸ್ಯೆಗಳಿಗೆ ನಾನು ಮತ್ತೆ ಮನೋವೈದ್ಯರ ಬಳಿ ಹೋಗಲೋ ಅಥವಾ ನರತಜ್ಞರ ಸಲಹೆಯನ್ನು ಪಡೆಯಲೋ ದಯವಿಟ್ಟು ಮಾರ್ಗದರ್ಶನ ನೀಡಿ.

ನೀವು ನಿಮ್ಮ ಸಮಸ್ಯೆಯನ್ನು ಡಾಕ್ಟರ್ ಬಳಿ ಈಗಾಗಲೇ ತೋರಿಸಿದ್ದೀರಿ. ನಿದ್ರಾಹೀನತೆಯ ಸಮಸ್ಯೆಗಿರುವ ಕಾರಣವನ್ನು ವೈದ್ಯರು ನಿಮಗೆ ತಿಳಿಸಿರಬೇಕು.  ಮಾನಸಿಕ ಒತ್ತಡ, ಗುರುತಿಸಲಾಗದ ತೊಳಲಾಟ ಮತ್ತು ಭಯ – ಇವೆಲ್ಲವೂ ನಿದ್ರಾಹೀನತೆಗೆ ಕಾರಣವಾಗಿರಬಹುದು. ಔಷಧಗಳ ಜೊತೆ ಜೊತೆಗೆ ಯೋಗ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಚಿಕಿತ್ಸೆಗೆ ಉತ್ತಮ ಫಲಿತಾಂಶ ಸಿಗುತ್ತದೆ. ಮಲಗುವ ಮೊದಲು ಸ್ವಲ್ಪ ಸಮಯ ನಿದ್ರಾಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮಾನಸಿಕ ವಿಶ್ರಾಂತಿ ಸಿಗುವ ಜೊತೆಗೆ ನಿದ್ರೆಯು ಹೆಚ್ಚುತ್ತದೆ. ಈ ಸಮಸ್ಯೆಯಿಂದಲೇ ನಿಮಗೆ ಕತ್ತುನೋವು ಕಾಣಿಸಿಕೊಂಡಿರಬಹುದು. ಆದರೂ ನೀವು ಒಳ್ಳೆಯ ಡಾಕ್ಟರ್‌ ಬಳಿ ತೋರಿಸಿ. ನಿಮ್ಮ ಸಮಸ್ಯೆಗೆ ಅವರೇ ನಿಮಗೆ ಸರಿಯಾದ ಸಲಹೆ ನೀಡಿ, ಔಷಧ ಕೊಡಲು ಸಾಧ್ಯ.

***

3. ನನ್ನ ಹೆಸರು ಸರಿತಾ. ನಾನು ಚಿಕ್ಕನಿಂದನಿಂದಲೂ ಅಜ್ಜಿಮನೆಯಲ್ಲೇ ಬೆಳೆದಿದ್ದು. ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ನಮ್ಮ ಅಣ್ಣನಿಗೆ ಮದುವೆ ಮಾಡಿದರು. ಮೊದಲೆರಡು ವರ್ಷ ನನ್ನ ಜೊತೆ ಚೆನ್ನಾಗಿದ್ದ ಅತ್ತಿಗೆ ಆಮೇಲೆ ನನ್ನ ಮೇಲೆ ಕೋಪ ಮಾಡಿಕೊಳ್ಳಲು ಪ್ರಾರಂಭಿಸಿದರು. ನನ್ನನ್ನು ಸಾಕುವುದು ನನ್ನ ಅಜ್ಜಿ. ನನಗೆ ಎಲ್ಲಾ ಆಸ್ತಿ ಕೊಡುತ್ತಾರೆ – ಎಂದು ಅವರಿಗೆ ನನ್ನ ಮೇಲೆ ದ್ವೇಷ. ನಾನು ಅಜ್ಜಿಗಾಗಿ ಎಲ್ಲವನ್ನು ತಡೆದುಕೊಂಡು ಮದುವೆ ಆಗುವವರೆಗೂ ಅಜ್ಜಿಮನೆಯಲ್ಲೇ ಇದ್ದೆ.   ಮದುವೆ ಆಗಿ ಗಂಡನ ಮನೆಗೆ ಹೋದ ಮೇಲೂ ನನ್ನ ಗಂಡನ ಬಳಿ ‘ಅವಳನ್ನು ಮನೆಗೆ ಕಳುಹಿಸಬೇಡಿ, ಜಗಳ ಆಗುತ್ತದೆ, ಅಲ್ಲಿಯೇ ಇರಿಸಿಕೊಳ್ಳಿ’ ಎಂದು ಹೇಳಿದ್ದರು. ಆದರೆ ಅಜ್ಜಿ–ತಾತನ ಮೇಲಿನ ಪ್ರೀತಿಯಿಂದ ಆಗಾಗ ಮನೆಗೆ ಹೋಗಿ ಬರುತ್ತಿದ್ದೆ. ಆದರೆ ಹೋದಾಗೆಲ್ಲ ಜಗಳ ಮಾಡುತ್ತಿದ್ದರು. ನಾನು ಅಲ್ಲಿಗೆ ಹೋದರೆ ಜಗಳ ಆಗಿ ಯಾರಿಗೂ ಮಾನಸಿಕ ನೆಮ್ಮದಿ ಇರುವುದಿಲ್ಲ. ನನಗೆ ಆಸ್ತಿ ಬೇಕಿಲ್ಲ ಅಂದರೂ ಕೂಡ ಜಗಳ ಮಾಡುತ್ತಾರೆ. ದಯವಿಟ್ಟು ಈ ಸಮಸ್ಯೆಯಿಂದ ಹೊರಬರಲು ನನಗೆ ಪರಿಹಾರ ತಿಳಿಸಿ.

ಆಸ್ತಿಯ ವಿಷಯ ಯಾವಾಗಲೂ ಅಪಾರ್ಥ ಹಾಗೂ ಜಗಳಗಳಿಗೆ ಎಡೆ ಮಾಡಿಕೊಡುತ್ತದೆ. ನಿಮ್ಮ ಉದ್ದೇಶದ ಬಗ್ಗೆ ಸ್ವಷ್ಟತೆ ಇರಲಿ. ಅಜ್ಜ–ಅಜ್ಜಿ, ಅಣ್ಣ–ಅತ್ತಿಗೆ, ಗಂಡ – ಎಲ್ಲರನ್ನೂ ಒಟ್ಟಿಗೆ ಕೂರಿಸಿಕೊಂಡು ನಿಮಗೆ ಆಸ್ತಿ ಬೇಡ ಎಂಬುದನ್ನು ಅವರಿಗೆ ಅರ್ಥವಾಗುವ ರೀತಿ ಹೇಳಿ.  ಆಗಲೂ ನಿಮ್ಮ ಅತ್ತಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಜ್ಜಿ ಮನೆಗೆ ಹೋಗುವುದನ್ನು ನಿಲ್ಲಿಸಿ. ಬದಲಾಗಿ ನಿಮ್ಮ ಅಜ್ಜ–ಅಜ್ಜಿಯನ್ನು ನಿಮ್ಮೊಂದಿಗೆ ಸ್ವಲ್ಪ ಕಾಲ ಇರಿಸಿಕೊಳ್ಳಿ. ಇದರಿಂದ ನೀವು ಅವರೊಂದಿಗೆ ಒಳ್ಳೆಯ ಸಮಯ ಕಳೆಯಲು ಸಾಧ್ಯ.

***

4. ನಾನು 19 ವರ್ಷದ ಹುಡುಗಿ. ಎಂಜಿನಿಯರಿಂಗ್  ಓದುತ್ತಿದ್ದೇನೆ. ನನ್ನ ತಂದೆ–ತಾಯಿಗೆ ನಾನು ಎಂಜಿನಿಯರ್ ಆಗಬೇಕೆಂಬ ಬಯಕೆ. ಆದರೆ ನನಗೆ ಬಾಲ್ಯದಿಂದಲೂ ಮಾಡೆಲ್ ಆಗಬೇಕು ಎಂಬುದು ಕನಸಾಗಿತ್ತು. ನನ್ನ ತಂದೆ ತಾಯಿಯನ್ನು ಹೇಗೆ ಒಪ್ಪಿಸಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಓದನ್ನು ನಿಲ್ಲಿಸಲೇ ಅಥವಾ ಓದು ಮುಗಿಸಿ ನನ್ನ ಆಸೆಯ ಬಗ್ಗೆ ತಂದೆ ತಾಯಿಗೆ ತಿಳಿಸಲೇ?

ಯಾವ ತಂದೆತಾಯಿಯೇ ಆಗಲಿ ಅವರ ಮಕ್ಕಳು ಉತ್ತಮ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳಲಿ ಎಂದು ಬಯಸುತ್ತಾರೆ; ಅದು ತಪ್ಪಲ್ಲ. ಮಾಡೆಲಿಂಗ್‌ ಕೂಡ ಉತ್ತಮ ವೃತ್ತಿಯೇ. ಆದರೆ ಈ ಕ್ಷೇತ್ರದಲ್ಲಿ ಮುಂದುವರಿಯಲು  ಮನೆಯವರ ಸಹಕಾರ ಹಾಗೂ ಸಂಬಂಧಿತ ಹಿನ್ನೆಲೆ ಮುಖ್ಯ. ಹಾಗಾಗಿ ಎಂಜಿನಿಯರಿಂಗ್ ಓದುತ್ತಲೇ ಮಾಡೆಲಿಂಗ್ ಅನ್ನು ಹವ್ಯಾಸವನ್ನಾಗಿಸಿಕೊಳ್ಳಿ. ಎಂಜಿನಿಯರಿಂಗ್  ಮುಗಿಸುವುದರ ಕಡೆ ಗಮನ ನೀಡಿ. ಜೊತೆಯಲ್ಲಿ ನಿಮ್ಮ ಆಸಕ್ತಿ ಹಾಗೂ ಇಷ್ಟದ ಬಗ್ಗೆ ನಿಮ್ಮ ತಂದೆ–ತಾಯಿಗೆ ತಿಳಿಸಿ.  ಮಾಡೆಲಿಂಗ್ ಅನ್ನು ಹವ್ಯಾಸವಾರಿಸಿಕೊಂಡೇ ಎಂಜಿನಿಯರಿಂಗ್ ಮುಗಿಸುತ್ತೇನೆ ಎಂದು ತಂದೆ–ತಾಯಿಗೆ ಭರವಸೆ ನೀಡಿ. ಅಲ್ಲದೇ ಎಂಜಿನಿಯರಿಂಗ್, ಮಾಡೆಲಿಂಗ್ – ಎರಡನ್ನೂ ಮುಂದುವರೆಸಿಕೊಂಡು ಹೋದಾಗ ಭವಿಷ್ಯದಲ್ಲಿ ವೃತ್ತಿಯಾಗಿ ಯಾವುದನ್ನು ಸ್ವೀಕರಿಸಬೇಕು ಎಂಬುದು ನಿಮಗೆ ಅರಿವಾಗುತ್ತದೆ. ಆಗ ವೃತ್ತಿ ಬದುಕನ್ನು ನೀವೇ ನಿರ್ಧರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT