‘ಅಪ್ಪನ ಜವಾಬ್ದಾರಿ ಕಲಿತದ್ದೇ ಮಗನಿಂದ!’

7

‘ಅಪ್ಪನ ಜವಾಬ್ದಾರಿ ಕಲಿತದ್ದೇ ಮಗನಿಂದ!’

Published:
Updated:
‘ಅಪ್ಪನ ಜವಾಬ್ದಾರಿ ಕಲಿತದ್ದೇ ಮಗನಿಂದ!’

ನಾನು ವಿಜೇತ್‌ ರೈ ಕೆ. ಬಾಣಸವಾಡಿ ನಿವಾಸಿ. ನಮ್ಮ ಮಗ ವಿಹಾನ್‌ಗೆ ಈಗ ಎರಡು ವರ್ಷ, ಒಂದು ತಿಂಗಳು ಪ್ರಾಯ. ನಾನು ಎಚ್‌ಪಿ ಇಂಕ್‌ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿ. ಪತ್ನಿ ಪ್ರಶಸ್ತಿ, ಕ್ವಿಂಟೆಲ್ಸ್‌ ಐಎಂಎಸ್‌ ಕಂಪೆನಿಯಲ್ಲಿ ಆಪರೇಷನ್ಸ್‌ ಸ್ಪೆಷಲಿಸ್ಟ್‌. ಹೀಗಾಗಿ ಮಗುವನ್ನು  ದಿನಕ್ಕೆ ಆರು ಗಂಟೆ ಮನೆ ಪಕ್ಕದಲ್ಲಿರುವ ಡೇ ಕೇರ್‌ ಸೆಂಟರ್‌ನಲ್ಲಿ ಬಿಡುತ್ತೇವೆ.

ನನ್ನ ಮಗ ಹುಟ್ಟಿದಾಗಿನಿಂದ ಅವನ ಪ್ರತಿ ಬೆಳವಣಿಗೆಯಲ್ಲೂ ನಾನು ಭಾಗಿಯಾಗಿದ್ದೀನಿ ಮತ್ತು ಅದರಿಂದ ತುಂಬಾ ಕಲಿಯುತ್ತಿದ್ದೇನೆ.

ನನ್ನ ಪತ್ನಿಗೆ ಡಾಕ್ಟರ್‌ ನೀಡಿದ ದಿನಕ್ಕಿಂತ ಒಂದು ತಿಂಗಳು ಮೊದಲೇ ಹೆರಿಗೆಯಾಯಿತು. ನಮ್ಮೂರಿನಲ್ಲಿ ಹೆರಿಗೆ  ಮಾಡಿಸುವ ಯೋಚನೆಯಿತ್ತು. ಆದರೆ ತುರ್ತಾಗಿ ಬೆಂಗಳೂರಿನಲ್ಲೇ ಹೆರಿಗೆಯಾಯಿತು. 20 ದಿನ ಅವರನ್ನು ಇಲ್ಲಿಯೇ ಇಟ್ಟುಕೊಂಡು ನಾನು ರಜೆ ಹಾಕಿ ಪತ್ನಿ–ಮಗುವಿನ ಎಲ್ಲಾ ಕೆಲಸಗಳನ್ನು ನೋಡಿಕೊಂಡೆ.

ಬಳಿಕ ಅವರು ಊರಿಗೆ ಹೋದರು. ಮಗುವಿಗೆ ಮೂರು ತಿಂಗಳು ಆದ ನಂತರ ಅವರು ಇಲ್ಲಿಗೆ ಬಂದರು. ಪತ್ನಿಗೆ ಒಟ್ಟು ಒಂಬತ್ತು ತಿಂಗಳು ರಜೆ ಇತ್ತು. ನಂತರ ಮಗು ನೋಡಿಕೊಳ್ಳಲು ಕೆಲಸದಾಕೆ ಸಿಕ್ಕರು. ಗಂಡ–ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದ ಮೇಲೆ ಅಸುರಕ್ಷಿತ ಭಾವ ಕಾಡುತ್ತಿತ್ತು. ಮಗು ಸಮಯಕ್ಕೆ ಸರಿಯಾಗಿ ತಿನ್ನುತ್ತಾ? ಮಗು ಅಳುತ್ತಾ? ಮಗು ನಿದ್ದೆ ಮಾಡಿತಾ? ಈ ಯೋಚನೆಗಳು ಬರುತ್ತಿದ್ದವು. ನಾವು ನಮ್ಮ ಅಪಾರ್ಟ್‌ಮೆಂಟ್‌ ನೆರೆಹೊರೆಯವರಲ್ಲಿ ಮನೆ ಕಡೆ ಸ್ವಲ್ಪ ಗಮನ ಹರಿಸುವಂತೆ ಹೇಳುತ್ತಿದ್ದೆವು.

ಎರಡು ತಿಂಗಳಲ್ಲಿ ಕೆಲಸದಾಕೆ ಕೆಲಸ ಬಿಟ್ಟು ಹೋದಾಗ ಮಗುವನ್ನು ಮನೆ ಪಕ್ಕದಲ್ಲಿನ ಡೇ ಕೇರ್‌ ಸೆಂಟರ್‌ಗೆ ಸೇರಿಸಿದೆವು. ಆಗ ಮಗುವಿಗೆ ಒಂದು ವರ್ಷ ಒಂದು ತಿಂಗಳಾಗಿತ್ತಷ್ಟೇ.

ನನಗೆ ಅಪ್ಪನ ಜವಾಬ್ದಾರಿ ಏನು ಎಂಬುದು ಅನುಭವಕ್ಕೆ ಬರತೊಡಗಿದ್ದು ಆಗಲೇ. ಪತ್ನಿಗೆ ಬೆಳಿಗ್ಗೆ 5.30ರಿಂದ ಮಧ್ಯಾಹ್ನ 3ರವರೆಗೆ ಕಚೇರಿ. ನನಗೆ ಬೆಳಿಗ್ಗೆ 10 ರಿಂದ 5 ಗಂಟೆ ತನಕ. ಹೀಗಾಗಿ ನಾವಿಬ್ಬರೂ ಮಗುವಿನ ಕೆಲಸಗಳನ್ನು ಹಂಚಿಕೊಂಡೆವು. 

ಮಗುವಿನ ಬೆಳಗ್ಗಿನ ಎಲ್ಲಾ ಕೆಲಸಗಳನ್ನೂ ನಾನೇ ಮಾಡುತ್ತೇನೆ. ಮಗು ಎದ್ದ ಮೇಲೆ ಹಲ್ಲುಜ್ಜಿಸುವುದು, ಸ್ನಾನ, ತಿಂಡಿ, ಡೇ ಕೇರ್‌ ಸಜ್ಜುಗೊಳಿಸುವುದು ಹೀಗೆ ಎಲ್ಲಾ ಕೆಲಸವೂ ನನ್ನ ಜವಾಬ್ದಾರಿ. ಎಲ್ಲ ಕೆಲಸದಲ್ಲೂ ಸ್ವಚ್ಛತೆ ಬೇಕಿತ್ತು. ಮಗುವಿನ ಆರೋಗ್ಯದ ಕಡೆಗೆ ಗಮನ ನೀಡಬೇಕಿತ್ತು. ಹೀಗೆ ಮಗುವಿನ ಮೂಲಕ ನಾನು ತುಂಬಾ ಕಲಿತುಕೊಂಡಿದ್ದೀನಿ. ಪುಟ್ಟ ಮಗುವಿಗೆ ಹೆಚ್ಚು ಪ್ರೀತಿ ತೋರಿಸಲಾಗುತ್ತಿಲ್ಲ ಎಂದು ಪಾಪಪ್ರಜ್ಞೆಯೂ ಕಾಡುತ್ತಿತ್ತು.

ಮಗುವನ್ನು ಡೇ ಕೇರ್‌ ಬಿಟ್ಟ ಮೇಲೂ ಸಮಾಧಾನ ಇರಲಿಲ್ಲ. ಮಗುವಿಗೆ ನಿದ್ದೆ, ತಿಂಡಿ ಹೀಗೆ.. ತಲೆಯಲ್ಲಿ ಅಲಾರಂ ಬಾರಿಸಿಕೊಳ್ಳುತ್ತಿರುತ್ತದೆ. ಪತ್ನಿ 3 ಗಂಟೆಗೆ ಹೋಗಿ ಕರೆದುಕೊಂಡು ಬಂದ ಮೇಲೆ ನನ್ನ ಮನಸ್ಸು ನಿರಾಳ.

ಆರಂಭದಲ್ಲಿ ಡೇ ಕೇರ್‌ಗೆ ಬೇರೆ ಬೇರೆ ಸಮಯಕ್ಕೆ ಅಲ್ಲಿಗೆ ಹೋಗಿ ಮಗುವನ್ನು ಹೇಗೆ ಆರೈಕೆ ಮಾಡುತ್ತಾರೆ ಎಂದು ಚೆಕ್ ಮಾಡಿದ್ದೂ ಇದೆ. ಆಮೇಲೆ ಮಗು ಅಲ್ಲಿನ ವಾತಾವರಣವನ್ನು ಎಂಜಾಯ್‌ ಮಾಡೋಕೆ ಆರಂಭಿಸಿತು. ಈಗ ತುಂಬಾ ಚೆನ್ನಾಗಿ ಹೊಂದಿಕೊಂಡಿದೆ. ಮಗು ಬೇರೆಯವರ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಚೆನ್ನಾಗಿ ಮಾತನಾಡುತ್ತದೆ. ಈಗ ಡೇ ಕೇರ್‌ಗೆ ಹಾಕಿದ್ದಕ್ಕೂ ಸಮಾಧಾನ ಇದೆ.

ಪತ್ನಿ ಆಫೀಸಿಗೆ ಹೋದ ಮೇಲೆ ಎಷ್ಟೋ ಬಾರಿ ಮಗುವಿಗೆ ಜ್ವರ ಬಂದಿದ್ದಿದೆ. ಅದೆಲ್ಲಾ ನನಗೆ ಹೊಸ ಅನುಭವಗಳು. ಆ ಸಂದರ್ಭದಲ್ಲಿ ಮಗುವಿಗೆ ನಾವು ಜೊತೆಗಿದ್ದೇವೆ ಎಂಬ ಸುರಕ್ಷಿತ ಭಾವವನ್ನು ಮುಟ್ಟಿಸಬೇಕು. ಅದರ ಜೊತೆಯೇ ಇದ್ದು ಮಗುವಿನ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು. ನನ್ನ ಮನಸ್ಸಲ್ಲಿ ಕೊಂಚ ಅಧೈರ್ಯ ಕಾಣಿಸಿದರೂ ಮಗುವಿನ ಮುಂದೆತೋರಿಸಿಕೊಳ್ಳುತ್ತಿರಲಿಲ್ಲ.

ಮಗುವಿಗೆ ರಜೆ ಇದ್ದಾಗ ನಾನು ಅಥವಾ ಪತ್ನಿ ಇಬ್ಬರೂ ವರ್ಕ್‌ ಫ್ರಂ ಹೋಮ್‌ ಮಾಡುತ್ತೇವೆ. ಆಗ ಆಫೀಸ್‌ ಕೆಲಸದೊಂದಿಗೆ ಮಗುವಿನ ಜೊತೆಗಿದ್ದ ಸಮಾಧಾನ ಸಿಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry