‘ದೇವರ ವರ ನನ್ನ ಮಗ’

7

‘ದೇವರ ವರ ನನ್ನ ಮಗ’

Published:
Updated:
‘ದೇವರ ವರ ನನ್ನ ಮಗ’

ನಾನು ಹಾಗೂ ಮಾಳವಿಕಾ ಸಿನಿಮಾ  ಇಂಡಸ್ಟ್ರಿಯಲ್ಲಿ ಇರುವುದರಿಂದ ಮಗ ಗಾಲವನನ್ನು ನೋಡಿಕೊಳ್ಳುವುದು ಕಷ್ಟ. ಸಮಸ್ಯೆಯಾಗುತ್ತದೆ ಅಂದ್ಕೊಂಡ್ರೆ ಸಮಸ್ಯೆಯಾಗುತ್ತದೆ. ಬೇರೆ ಊರುಗಳಲ್ಲಿ ಚಿತ್ರೀಕರಣವಿದ್ದಾಗ ಮಗನನ್ನು ಬಿಟ್ಟು ಹೋಗಲೇಬೇಕಾದ ಸಂದರ್ಭ ಎದುರಾಗುತ್ತದೆ. ಆಗ ಅವನು (ಗಾಲವ) ಸಿಟ್ಟು ಮಾಡಿಕೊಳ್ಳುತ್ತಾನೆ. ಕೆಲಸದಿಂದ ಬಂದ ಮೇಲೆ ಸಮಾಧಾನಪಡಿಸಬೇಕು.

ಗಾಲವ ಹುಟ್ಟಿ ಎರಡು ವರ್ಷಕ್ಕೆ ಆತ  ವಿಶೇಷ ಮಗು ಎಂಬುದು ಗೊತ್ತಾಯಿತು. ಅವನಿಗೆ ಬೆಳವಣಿಗೆ ಸಮಸ್ಯೆಯಿದೆ. ಈಗೀಗ ಸ್ವಲ್ಪ ಮಾತುಗಳನ್ನಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಸರಿ ಹೋಗುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ವನೊಂದಿಗೆ ನಾವು ಸದಾ ಇದ್ದರೆ ಸಂತೋಷವಾಗಿರುತ್ತಾನೆ. ನಾಲ್ಕೈದು ವರ್ಷಗಳಿಂದ ಅವನಿಗಾಗಿ  ನಾನು ಯಾವುದೇ ಸಭೆ, ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ. ಆದಷ್ಟು ಸಮಯವನ್ನು ಅವನೊಂದಿಗೆ ಕಳೆಯುತ್ತೇನೆ. ಕೆಲವೊಮ್ಮೆ ನಮ್ಮ ಮನೆಯ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದಿಲ್ಲ. ಅಲ್ಲದೆ ಸಿನಿಮಾ ಸಮಾರಂಭಗಳಿಗೂ ಹೋಗುವುದಿಲ್ಲ.

ದೇವರು ನಮಗೆ ಎಲ್ಲವನ್ನೂ ಕೊಡುವುದಿಲ್ಲ. ಕೊಟ್ಟದ್ದನ್ನು ಸರಿಯಾಗಿ ನೋಡಿಕೊಂಡು ಹೋಗಬೇಕು ಎಂಬುದು ನನ್ನ ಪಾಲಿಸಿ. ನಾವು ದುಡಿಯುವುದು ಯಾರಿಗಾಗಿ ಹೇಳಿ? ಅವನು ಚೆನ್ನಾಗಿದ್ದರೆ ಸಾಕು. ಗಾಲವ ಹುಟ್ಟಿದಾಗಿನಿಂದ ನೋಡಿಕೊಳ್ಳುತ್ತಿರುವ ಕಾಳಿಕಾದೇವಿ ಅವರು ಅವನಿಗೆ ತಾಯಿಯಂತೆ ಇದ್ದಾರೆ. ನಮಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾರೆ. ಜೊತೆಗೆ ಅತ್ತೆ, ಮಾವ ಕೂಡ ಇರುವುದರಿಂದ  ಹೆಚ್ಚು ಸಮಸ್ಯೆಯಾಗಿಲ್ಲ.

ಮಾಳವಿಕಾ ಬಿಗ್‌ಬಾಸ್‌ ರಿಯಾಲಿಟಿ ಶೋಗಾಗಿ ತಿಂಗಳುಗಟ್ಟಲೆ ಹೋದಾಗ ಮಗನ ಜವಾಬ್ದಾರಿ ಸಂಪೂರ್ಣವಾಗಿ ನನ್ನ ಮೇಲಿತ್ತು. ಅದೃಷ್ಟಕ್ಕೆ ಅದೇ ಸಮಯದಲ್ಲಿ ನೋಟು ಅಮಾನ್ಯೀಕರಣ ಆಗಿದ್ದರಿಂದ ಚಿತ್ರೀಕರಣ ನಡೆಯುತ್ತಿರಲಿಲ್ಲ. ಆಗ ಸಿಕ್ಕ ಪೂರ್ತಿ ಸಮಯವನ್ನು ಗಾಲವನಿಗೆ ಮೀಸಲಿಟ್ಟಿದ್ದೆ.

ಬಿಗ್‌ಬಾಸ್‌ ಮನೆಯಲ್ಲಿ ಮಾಳವಿಕಾ ಹೇಗೆ ಖುಷಿಯಾಗಿದ್ದಳೊ, ಹಾಗೆ ನಾನು ಮಗನೊಂದಿಗೆ ಸಮಯ ಕಳೆಯುತ್ತಿದ್ದೆ, ಆನಂದಪಡುತ್ತಿದ್ದೆ.

ತಂದೆ ಆದವರು ಮಕ್ಕಳೊಂದಿಗೆ ಕಾಲ ಕಳೆಯುವುದರಿಂದ ಹೆಣ್ಣುಮಕ್ಕಳು ಪಡುವ ಕಷ್ಟ ತಿಳಿಯುತ್ತದೆ. ಜೊತೆಗೆ ಮಕ್ಕಳ ಬೇಕುಬೇಡಗಳನ್ನು ಅರಿತುಕೊಳ್ಳಬಹುದು.

ವಿಶೇಷ ಮಕ್ಕಳಿರುವ ಪೋಷಕರಿಗೆ ಒಂದು ಅನುಭವದ ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಿ, ಅವರಿಗಾಗಿ ಹೆಚ್ಚು ಸಮಯ ಮೀಸಲಿಡಿ. ನಮ್ಮ ಮಕ್ಕಳಲ್ಲವಾ? ಮಕ್ಕಳಿಗೆ ಸಮಸ್ಯೆ ಇದ್ದರೆ ಯಾರನ್ನೂ ದೂಷಿಸಲು ಆಗುವುದಿಲ್ಲ. ಅವರಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳಬೇಕು. ಸಾಮಾನ್ಯ ಮಕ್ಕಳಿಗಿಂತ ಹತ್ತು ಪಟ್ಟು ಜಾಸ್ತಿ ಪ್ರೀತಿ ತೋರಿಸಬೇಕು. ಆಗ ಒಬ್ಬ ಮಾದರಿ, ಒಳ್ಳೆಯ ತಂದೆಯಾಗಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry