ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೊದಲು ಮಗಳು ಆಮೇಲೆ ಕೆಲಸ’

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ನನ್ನ ಹೆಸರು ಮಂಜು. ನಾನು ಎಂಟು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಪ್ರಸಾಧನ ಕಲಾವಿದನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಏಳು ವರ್ಷದ ಮಗಳಿದ್ದಾಳೆ.  ಅವಳ ಹೆಸರು ಇಂಚರಾ. ಬೆಂಗಳೂರು ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ.

ಆಕೆಗಾಗಿ ಹಣ ಸಂಪಾದಿಸುವುದಕ್ಕಿಂತ ಅವಳ ಸಂತೋಷದ ಕ್ಷಣಗಳಿಗೆ ನಾನು ಸಾಕ್ಷಿಯಾಗಬೇಕು ಎಂಬುದು ನನ್ನ ಬಯಕೆ.

ನನ್ನ ಪತ್ನಿ ಫಿಟ್‌ನೆಸ್‌ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಾರೆ. ಮಗುವಿಗೆ ಮೂರು ತಿಂಗಳಿರಬೇಕಾದರೆ ಅವರು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಬಂತು. ನನಗೆ ಅವರು ಕೆಲಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಈ ಬಗ್ಗೆ ನಮ್ಮಿಬ್ಬರೊಂದಿಗೆ ಸಾಕಷ್ಟು ಚರ್ಚೆಯಾಯಿತು. ಮಗುವಿನ ಭವಿಷ್ಯಕ್ಕೆ ಹಣ ಸಂಪಾದಿಸಬೇಕು ಎಂಬುದು ಅವರ ಯೋಚನೆ. ವಿರೋಧಿಸಲಾಗಲಿಲ್ಲ.

ಆದರೆ ನಾನಂತೂ ಮಗುವನ್ನು ಯಾರದೋ ಮಡಿಲಿಗೆ ಹಾಕಲು ಬಿಡಲಿಲ್ಲ. ನನ್ನ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡೆ. ನನಗೆ ಬರುವ ಆರ್ಡರ್‌ಗಳನ್ನೆಲ್ಲ ಸಹಾಯಕರಿಗೆ ವಹಿಸಿದೆ. ಬಂದ ಹಣದಲ್ಲಿ ಅವರಿಗೆ ಅರ್ಧದಷ್ಟು ಕೊಟ್ಟು ಉಳಿದ ಹಣವನ್ನು ನಾನು ಇರಿಸಿಕೊಂಡೆ. ಹಣಕ್ಕಿಂತ ಮಗುವಿನ ಸಂತೋಷವೇ ನನಗೆ ಮುಖ್ಯವಾಗಿತ್ತು.

ನನ್ನ ಅಜ್ಜಿ, ಅಮ್ಮ ಮಗುವಿಗೆ ಸ್ನಾನ ಮಾಡಿಸುವುದನ್ನು ಕಂಡಿದ್ದೆ. ಹೀಗಾಗಿ ಅಷ್ಟು ಚಿಕ್ಕ ಮಗುವಿನಿಂದಲೂ ನಾನೇ ಅವಳಿಗೆ ಸ್ನಾನ ಮಾಡಿಸುತ್ತೇನೆ. ಅವಳು ಬೆಳೆದಂತೆ ನಮ್ಮಿಬ್ಬರ ಸಂಬಂಧ ಇನ್ನಷ್ಟು ಗಾಢವಾಗುತ್ತಲೇ ಇದೆ. ಶಾಲೆಯ ವ್ಯಾನ್‌ ಇದ್ದರೂ, ಅವಳು ‘ಶಾಲೆಗೆ ನೀನೇ ಬಿಟ್ಟು ಬಾ’ ಎನ್ನುತ್ತಾಳೆ. ಇದಕ್ಕಿಂತ ಭಾಗ್ಯ ಇನ್ನೇನು ಬೇಕು. ಇನ್ನೊಂದು ನಾಲ್ಕು ವರ್ಷ ಕಳೆದರೆ ಅವಳು ಹೀಗೆ ಹೇಳದೆ ಹೋಗಬಹುದು. ಆಯಾ ವಯಸ್ಸಿಗೆ ಅನುಗುಣವಾದ ಕಾಳಜಿ ನೀಡುವುದು ಅಗತ್ಯ. ಹಾಗಾಗಿ ವ್ಯಾನ್‌ ಅವರಿಗೆ ಏನಾದರೊಂದು ಕಾರಣ ನೀಡಿ ನಾನೇ ಅವಳನ್ನು ಶಾಲೆಗೆ ಬಿಟ್ಟು ಬರುತ್ತೇನೆ.

ಪತ್ನಿ ಬೆಳಿಗ್ಗೆ ಬೇಗ ಕಚೇರಿಗೆ ಹೋಗಬೇಕು. ಹಾಗಾಗಿ ಅವಳಿಗೆ ಎದ್ದು ತಿಂಡಿ ಮಾಡುವುದು ಕಷ್ಟವಾಗುತ್ತದೆ. ನಾನು ಚೆನ್ನಾಗಿ ಅಡುಗೆ ಮಾಡುತ್ತೇನೆ. ಮಗಳಿಗೆ ಮತ್ತು ಪತ್ನಿಗೆ ರುಚಿಯಾದ ಅಡುಗೆ ತಯಾರಿಸುವುದು ನನ್ನ ಕೆಲಸ. ನಾನು ಮಾಡುವ ಚಿತ್ರಾನ್ನ, ಪೊಂಗಲ್‌ ಮಗಳಿಗೆ ತುಂಬಾ ಇಷ್ಟ.

ಎಲ್ಲದಕ್ಕೂ ಅಪ್ಪಾಜಿ, ಅಪ್ಪಾಜಿ ಎಂದು ಕರೆಯುತ್ತಿರುತ್ತಾಳೆ. ಯಾರೇ ಏನೇ ಹೇಳಿದರೂ, ಅಪ್ಪ ಹೀಗೆ ಹೇಳಿದ್ದಾರೆ ಅದುವೇ ಸರಿ ಎನ್ನುತ್ತಿರುತ್ತಾಳೆ. ಅದನ್ನು ಕೇಳುವಾಗ ಮನಸ್ಸಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ.

ಮಗಳನ್ನು ಪತ್ನಿ ಡೇ ಕೇರ್‌ಗೆ ಸೇರಿಸಿದ್ದಳು. ಆದರೆ ನನ್ನ ಮಗಳಿಗೆ ಅದು ಇಷ್ಟವಿರಲಿಲ್ಲ. ‘ಅಪ್ಪ ನನಗೆ ಡೇ ಕೇರ್‌ ಹೋಗಲು ಇಷ್ಟವಿಲ್ಲ. ಶಾಲೆಗೆ ಮಾತ್ರ ಹೋಗುತ್ತೇನೆ’ ಎನ್ನುತ್ತಿದ್ದಳು. ಈಗ ಡೇ ಕೇರ್‌ ಬಿಡಿಸಿದ್ದೇನೆ. ಅವಳು ಶಾಲೆಗೆ ಹೋಗುವ ಸಮಯದಲ್ಲಿ ನಾನು ಕೆಲಸದ ಸ್ಥಳಕ್ಕೆ ಹೋಗಿ ಅಲ್ಲಿಯ ಪರಿಸ್ಥಿತಿಯನ್ನು ನೋಡಿಕೊಂಡು ಬರುತ್ತೇನೆ. ಉಳಿದ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತೇನೆ. ಆಕೆಯ  ತುಂಟಾಟ, ಹಟ, ನಗು, ಅಳು ಎಲ್ಲವೂ ನನಗೆ ನವೀನ ಅನುಭೂತಿ ನೀಡುತ್ತದೆ. ಹಣ ಸಂಪಾದನೆಯಿಂದ ಈ ಎಲ್ಲಾ ಖುಷಿ ಪಡೆಯಲು ಸಾಧ್ಯ ಎಂದು ನನಗೆ ಅನಿಸುವುದಿಲ್ಲ.

ಮಗುವನ್ನು ನೋಡಿಕೊಳ್ಳುವುದು ಕಷ್ಟ ಆಗುವುದಿಲ್ಲವೇ ಎಂದು ಸಾಕಷ್ಟು ಮಂದಿ ನನ್ನನ್ನು ಕೇಳುತ್ತಾರೆ. ಆದರೆ ನನಗ್ಯಾವತ್ತೂ ಹಾಗೆ ಅನಿಸಿಯೇ ಇಲ್ಲ. ಮಾಡುವ ಮನಸ್ಸಿದ್ದರೆ ನೋಡಿಕೊಳ್ಳುವುದು ಕಷ್ಟ ಎನಿಸುವುದಿಲ್ಲ. ಮಗುವನ್ನು ಸಾಕಲು ತಾಯಿಯೇ ಆಗಬೇಕು ಎಂಬುದು ಸುಳ್ಳು  ಮಾತೃ ಹೃದಯವಿರುವ ಅಪ್ಪನಿಂದಲೂ ಮಗುವಿನ ಆರೈಕೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT