ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸಂಪರ್ಕ ಸುರಂಗ ನಿಲ್ದಾಣ: ‘ಧರ್ಮಾಂಬುಧಿ’ ರೂಪಾಂತರ

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಸದಾ ಹರಿಯುವ ನದಿ ನಾಲೆಗಳಿಲ್ಲದ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಮುಖ್ಯ ಕಾರಣ ಇಲ್ಲಿದ್ದ ಸಾವಿರಾರು ಕೆರೆ, ಕುಂಟೆ, ಕಲ್ಯಾಣಿಗಳು. 480 ವರ್ಷಗಳ ಹಿಂದೆ (1537) ಕೆಂಪೇಗೌಡರು ಹಾಕಿದ್ದ ನಾಲ್ಕು ಎಲ್ಲೆಗಳನ್ನು ಎಂದೋ ಮೀರಿ ಬೆಳೆದಿದೆ ಈ ನಗರ. ಅದು ನುಂಗಿ ಹಾಕಿರುವ ಲೆಕ್ಕವಿಲ್ಲದಷ್ಟು ಕೆರೆಗಳಲ್ಲಿ ಧರ್ಮಾಂಬುಧಿ ಕೆರೆಯೂ ಒಂದು.

ಹಿಂದೊಮ್ಮೆ ಬೆಂಗಳೂರಿಗೆ ಕುಡಿಯುವ ನೀರುಣಿಸುತ್ತಿದ್ದ ದೊಡ್ಡ ಕೆರೆಗಳಲ್ಲಿ ಒಂದಾಗಿದ್ದ ಧರ್ಮಾಂಬುಧಿ ಕೆರೆ ಹಳೆಯ ದಾಖಲಾತಿಗಳ ಪ್ರಕಾರ ಹರಡಿದ್ದು 21 ಎಕರೆಗಳಷ್ಟು ಪ್ರದೇಶದಲ್ಲಿ. ವರ್ಷದ ಎಲ್ಲಾ ಕಾಲದಲ್ಲಿ ನೀರು ಇರುತ್ತಿದ್ದ ಕೆರೆಗೆ ಆಗ ವ್ಯವಸ್ಥಿತವಾಗಿದ್ದ ಕೆರೆ ಜಾಲ ನೆರವಾಗುತ್ತಿತ್ತು. ಮಳೆಗಾಲದಲ್ಲಿ ಕೆರೆ ತುಂಬಿದಾಗ ‘ತೆಪ್ಪೋತ್ಸವ’ ನಡೆದ ಮಾಹಿತಿಯನ್ನು ಒಂದೆರಡು ಆಂಗ್ಲ ಕೃತಿಗಳು ಉಲ್ಲೇಖಿಸಿವೆ.

1880ರ ಸುಮಾರಿಗೆ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಬೆಂಗಳೂರಿಗೆ ಬಂದಿಳಿಯುತ್ತಿದ್ದ ನಿಲ್ದಾಣಗಳಲ್ಲಿ ಧರ್ಮಾಂಬುಧಿ ಕೆರೆ ದಂಡೆಯಲ್ಲಿದ್ದ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣವೂ ಒಂದಾಗಿತ್ತು. 20ನೇ ಶತಮಾನದ ಆರಂಭದವರೆಗೆ ನೀರಿನಿಂದ ತುಂಬಿದ್ದ ಧರ್ಮಾಂಬುಧಿ ಕೆರೆಯಲ್ಲಿ ನಂತರ ನೀರು ಬರಿದಾಗುತ್ತಾ ಬಂದಿದ್ದಕ್ಕೆ ಕಾರಣ ಇಂದಿಗೂ ನಿಗೂಢ.

ಇದ್ದ ಬಹುತೇಕ ಬೆಂಗಳೂರು ವಾಸಿಗಳಿಗೆಲ್ಲಾ ಕುಡಿಯುವ ನೀರು ಒದಗಿಸುತ್ತ ಜೀವನಾಡಿ ಎನಿಸಿಕೊಂಡಿದ್ದ ಧರ್ಮಾಂಬುಧಿ ಕೆರೆ ಮುಂದಿನ ವರ್ಷಗಳಲ್ಲಿ ಒಣಗುತ್ತಾ ಹೋಯಿತು. ಆಗ ಅಸ್ತಿತ್ವದಲ್ಲಿದ್ದ ನಗರ ಸಭೆ ಇದರ ಪುನರುಜ್ಜೀವನಕ್ಕೆ ಯತ್ನಿಸಿತಾದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ. ಈ ಕೆರೆಯಂಗಳದ ಬದಿಗೆ ಇದ್ದ ತುಳಸಿ ತೋಟಕ್ಕೆ  ಆಗ ಚಿಕ್ಕಲಾಲ್‌ಬಾಗ್ ಎಂಬ ಹೆಸರೂ ಇತ್ತು. ಇಲ್ಲಿಯೇ ಸ್ವಾತಂತ್ರ್ಯ ಹೋರಾಟದ ಬಹಿರಂಗ ಸಭೆಗಳು ನಡೆಯುತ್ತಿದ್ದವು.

ವಿಶಾಲವಾಗಿದ್ದ ನೀರು ಒಣಗಿ ಸಮತಟ್ಟಾಗಿದ್ದ ಈ ಕೆರೆ ಅಂಗಳದಲ್ಲಿ ಸಾರ್ವಜನಿಕ ಸಭೆಗಳು ನಡೆಯಲಾರಂಭಿಸಿ ರಾಷ್ಟ್ರ ನೇತಾರರೆಲ್ಲ ಇಲ್ಲಿಯ ಸಭೆಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಇದು ಕೆರೆ ರೂಪಾಂತರದ ಮೊದಲ ಘಟ್ಟ.

ಅಪರೂಪಕ್ಕೆ ನಡೆದಿದ್ದ ಸ್ವಾತಂತ್ರ್ಯ ಸಂಗ್ರಾಮದ ಸಭೆಗಳನ್ನು ಹೊರತುಪಡಿಸಿದರೆ ಕೆರೆಯಂಗಳ ಖಾಲಿಯಾಗಿ ಬಿದ್ದಿತ್ತು. ಸ್ವಾತಂತ್ರ್ಯ ಬಂದ ಮೊದಲ ವರ್ಷಗಳಲ್ಲೂ ಇಲ್ಲೇನು ಹೆಚ್ಚಿನ ಚಟುವಟಿಕೆಗಳಿರಲಿಲ್ಲ. ದೇಶ ವಿಮುಕ್ತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್ ನೆನಪಿನಲ್ಲಿ ಈ ಕೆರೆಯ ಒಂದು ಭಾಗವನ್ನು ಸುಭಾಷ್‌ನಗರವೆಂದೂ ಇನ್ನೊಂದು ಭಾಗವನ್ನು ಗಾಂಧಿನಗರವೆಂದು ಕರೆಯುವುದು ಶುರುವಾಯಿತು.

ಅಷ್ಟೊತ್ತಿಗಾಗಲೆ ಕಲಾಸಿಪಾಳ್ಯದಲ್ಲಿ ಬಸ್ ನಿಲ್ದಾಣವಿದ್ದು ನಗರ ಸಾರಿಗೆಯೂ ಆರಂಭವಾಗಿತ್ತು. ರೈಲು ನಿಲ್ದಾಣದಿಂದ ಈಗಿನ ಗಾಂಧಿನಗರ (ಕೆಂಪೇಗೌಡ ಚೌಕ) ರಸ್ತೆಯೊಂದು ಧರ್ಮಾಂಬುಧಿ ಕೆರೆ ಏರಿಯ ಮೇಲೆ ನಿರ್ಮಾಣವಾಯಿತು. ಅದು ಆಗಿನ ಮೆಜೆಸ್ಟಿಕ್ ಟಾಕೀಸ್ ಮುಂಭಾಗದಲ್ಲಿ ಹಾದು ಹೋಗುತ್ತಿದ್ದು ಆ ಪ್ರದೇಶಕ್ಕೆ ಮೆಜೆಸ್ಟಿಕ್ ಎಂಬ ಹೆಸರೂ ಇತ್ತು. ಒಂದೋ ಎರಡೋ ನಗರ ಸಾರಿಗೆ ಬಸ್‌ಗಳು ಬಂದು ನಿಂತು ಹೋಗುತ್ತಿದ್ದ ಕೆರೆ ಅಂಗಳವನ್ನು ಸುಭಾಷ್‌ನಗರ ಬಸ್ ನಿಲ್ದಾಣವೆಂದು ಕರೆಯುವ ರೂಢಿಯೂ ಶುರುವಾಯಿತು.

ಕೃಷಿ ಪ್ರಧಾನವಾದ ಭಾರತದಲ್ಲಿ ದನ–ಕರುಗಳ ಜಾತ್ರೆ ಆಗ ಮಾಮೂಲಾಗಿತ್ತು. ಕೇಂದ್ರ ಸರ್ಕಾರದ ಕೃಷಿ ಉಪಸಚಿವರಾಗಿದ್ದ ಎಂ.ವಿ. ಕೃಷ್ಣಪ್ಪ ರಾಜ್ಯದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಆಸಕ್ತಿಯಿಂದ ಮೊಟ್ಟ ಮೊದಲ ಬಾರಿಗೆ ಅಖಿಲ ಭಾರತ ದನಕರುಗಳ ದೊಡ್ಡ ಪ್ರದರ್ಶನವೊಂದು 1960ರ ದಶಕದ ಮೊದಲ ಭಾಗದಲ್ಲಿ ಧರ್ಮಾಂಬುಧಿ ಕೆರೆ ಅಂಗಳ (ಸುಭಾಷ್‌ನಗರ ಮೈದಾನ)ದಲ್ಲಿ ವ್ಯವಸ್ಥೆಯಾಯಿತು.

ದೇಶದ ಹಲವು ಭಾಗಗಳಿಂದ ಹತ್ತಾರು ತಳಿ ಹಸು, ಎಮ್ಮೆ, ಕುರಿಗಳೊಂದಿಗೆ ಪಶುಸಂಗೋಪಕರು ಪ್ರದರ್ಶನಕ್ಕೆ ಬಂದರು. ಇದನ್ನು ನೋಡಲು ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಂದ ರೈತರೂ ಆಗಮಿಸಿದ್ದರು. ಇದು ನಂತರದ ಕೆಲವು ವರ್ಷ ಯಶಸ್ವಿಯಾಗಿ ಜರುಗಿತು. ಜನರ ಆಕರ್ಷಣೆಯ ಜಾಗವಾದ ಇದೇ ಮೈದಾನದಲ್ಲಿ ಕಾಂಗ್ರೆಸ್ ವಸ್ತು ಪ್ರದರ್ಶನ ಕೂಡ ಪ್ರಾರಂಭವಾಗಿ ತಿಂಗಳುಗಟ್ಟಲೆ ನಡೆದಿದ್ದೂ ಉಂಟು.

ವರ್ಷಕ್ಕೊಮ್ಮೆ ಕಾಂಗ್ರೆಸ್ ವಸ್ತು ಪ್ರದರ್ಶನಕ್ಕೆ ಅನೇಕ ಇಲಾಖೆಗಳು ತಮ್ಮ ಪ್ರಗತಿಯನ್ನು ಪ್ರತಿಬಿಂಬಿಸುವ ಮಳಿಗೆಗಳನ್ನು ಸ್ಥಾಪಿಸುತ್ತಿದ್ದವು. ವಾರ್ತಾ ಇಲಾಖೆ ವಸ್ತು ಪ್ರದರ್ಶನದ ವಿನ್ಯಾಸ, ಕಮಾನುಗಳನ್ನು ರೂಪಿಸುತ್ತಿತ್ತು. ನಗರ ಮಧ್ಯೆ ಭಾಗದ ಧರ್ಮಾಂಬುಧಿ ಕೆರೆಯಲ್ಲಿ ನೀರು ಕಾಣದಾಯಿತು. ದಿನೇ ದಿನೇ ಜನಪ್ರವಾಹ ಹೆಚ್ಚುತ್ತಲೇ ಹೋಯಿತು.

1960ರ ಕೊನೆ ಭಾಗದಲ್ಲಿ ಕೆರೆಯಂಗಳ ಪ್ರತಿಭಟನೆ, ಜಾಥಾ, ಮೆರವಣಿಗೆಗಳಿಗೂ ಜಾಗ ನೀಡಿತು. ಇದರೊಂದಿಗೆ ದೊಡ್ಡ ದೊಡ್ಡ ಸರ್ಕಸ್ ಕಂಪೆನಿಗಳು ತಿಂಗಳುಗಟ್ಟಲೆ ಇಲ್ಲಿ ಬೀಡು ಬಿಡತೊಡಗಿದವು.

ಧರ್ಮಾಂಬುಧಿ ಕೆರೆಯ ಸುತ್ತ ರಸ್ತೆ ನಿರ್ಮಾಣವಾಗುತ್ತಿದ್ದ ಏರಿ ಅಂಚಿನಲ್ಲಿ ದೊಡ್ಡ ಕಟ್ಟಡಗಳು, ಹೋಟೆಲ್, ವ್ಯಾಪಾರ ಮುಂಗಟ್ಟು ನಿರ್ಮಾಣಗೊಂಡವು. ರೈಲು ನಿಲ್ದಾಣ ಹೊಸ ರೂಪ ಪಡೆಯಿತು. ತೋಟದಪ್ಪನವರ ಛತ್ರ, ವಿದ್ಯಾರ್ಥಿನಿಲಯದ ಮುಂದೆ ಅಂಗಡಿಗಳು ಬಂದವು. ಸರ್ಕಸ್‌ಗಳಿಗೆ ನೆಲೆಕೊಟ್ಟ ಈ ಕೆರೆ ಮೈದಾನದಲ್ಲಿ ಕೆ.ಹಿರಣ್ಣಯ್ಯ ಮಿತ್ರಮಂಡಲಿ ನಾಟಕ ಕಂಪೆನಿಯನ್ನು ತಾತ್ಕಾಲಿಕವಾಗಿ ನಿರ್ಮಿಸಿ ಪ್ರೇಕ್ಷಕರನ್ನು ಆಕರ್ಷಿಸಿತು. ಒಂದೆರಡು ಚಿತ್ರಮಂದಿರಗಳೂ ಕೆರೆ ಏರಿಯಲ್ಲಿ ತಲೆ ಎತ್ತಿದವು. ಆ ವೇಳೆಗಾಗಲೇ ರಾಜ್ಯ ರಸ್ತೆ ಸಾರಿಗೆ ಬಸ್‌ನಿಲ್ದಾಣ ಒಂದೆಡೆ ಕಾರ್ಯ ನಿರ್ವಹಿಸುತ್ತಿತ್ತು. 1980ರ ಶುರುವಿನಲ್ಲಿ ಬೆಂಗಳೂರು ನಗರ ಸಾರಿಗೆಗಾಗಿ ಅರ್ಧ ಚಕ್ರಾಕಾರದ ವ್ಯವಸ್ಥಿತ ಬಸ್‌ನಿಲ್ದಾಣ ನಿರ್ಮಾಣವಾಯಿತು. ಒಟ್ಟಾರೆ ಧರ್ಮಾಂಬುಧಿ ಕೆರೆ ಮಾಯವಾಗಿ ಅದನ್ನೆಲ್ಲಾ ಬಸ್‌ನಿಲ್ದಾಣವೇ ಆವರಿಸಿಕೊಂಡಿದ್ದು ಮುಂದಿನ ಕಥೆ.

ಬೆಂಗಳೂರಿನಲ್ಲಿ ಮೆಟ್ರೊ ರೈಲು ಆರಂಭಿಸುವ ಯೋಜನೆ ಸಿದ್ಧಗೊಂಡಾಗ ಇಂಟರ್‌ ಎಕ್‌್ಸಚೇಂಜ್‌ ನಿಲ್ದಾಣಕ್ಕಾಗಿ ಆಯ್ಕೆ ಮಾಡಿದ್ದು ಇದೇ ಧರ್ಮಾಂಬುಧಿ ಕೆರೆ ಅಂಗಳವನ್ನು.  ನಗರ ಸಾರಿಗೆ ಅರ್ಧ ಚಕ್ರಾಕಾರದ ನಿಲ್ದಾಣದಲ್ಲಿಯೇ ನಡೆದಿದ್ದರೂ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲಿ ಕೆಲವು ಬದಲಾವಣೆಗಳಾದವು. ತುಳಸೀತೋಟದ ಕಡೆಗೆ ಇನ್ನೊಂದು ಟರ್ಮಿನಲ್‌ ಸ್ಥಾಪನೆಗೊಂಡಿತು. ಅಂತರ ರಾಜ್ಯ ಸಾರಿಗೆಗೂ ಇನ್ನೊಂದು ಸ್ಥಳ ಗುರುತು ಮಾಡಲಾಯಿತು. ಇವೆಲ್ಲ ತಾತ್ಕಾಲಿಕ ವ್ಯವಸ್ಥೆ ಭೂಮಿಯ ಮೇಲೆ ನಡೆದಿದ್ದಾಗ ನೆಲದಾಳದಲ್ಲಿ ಮೆಟ್ರೊ ರೈಲು ನಿಲ್ದಾಣ ಹಾಗೂ ನಾಲ್ಕು ದಿಕ್ಕುಗಳ ಮೆಟ್ರೊ ಹಳಿಗಳಿಗಾಗಿ ಸುರಂಗ ಮಾರ್ಗ ಸಿದ್ಧವಾಗತೊಡಗಿತು.

ಈಗ ಮೆಜೆಸ್ಟಿಕ್‌ ಟಾಕೀಸ್‌ ಇಲ್ಲ. ಇಡೀ ಪ್ರವೇಶಕ್ಕೆ ಗಾಂಧಿನಗರ, ಮೆಜಿಸ್ಟಿಕ್‌ ಎಂಬ ಹೆಸರು ಬಂದಿದೆ. ಬಸ್‌ ನಿಲ್ದಾಣಕ್ಕೆ ಕೆಂಪೇಗೌಡರ ನಾಮಕರಣವಾಗಿದೆ. ಧರ್ಮಾಂಬುಧಿಯ ಕೆರೆ ಅಂಗಳದ ಭೂಮಿಯೊಳಗೆ ಕೆಂಪೇಗೌಡ–ಸಂಗೊಳ್ಳಿ ರಾಯಣ್ಣ ಎಂಬ ಎರಡು ಮೆಟ್ರೊ ನಿಲ್ದಾಣಗಳು ಈಗ ಚಾಲ್ತಿಯಲ್ಲಿವೆ.

ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು ಪ್ರಯಾಣಿಕರಿಗೆ ಬಹುಬಗೆಯ ಸೌಲಭ್ಯಗಳನ್ನು ಒದಗಿಸಲಿರುವ ಬೆಂಗಳೂರು ಮೆಟ್ರೊ ಯೋಜನೆಯ ಬಹುಮುಖ್ಯ ಭಾಗವಾದ ನಾಲ್ಕು ದಿಕ್ಕುಗಳ ನಡುವೆ ಸಂಪರ್ಕ ಕಲ್ಪಿಸುವ ವಿಶಾಲವಾದ ಮೆಟ್ರೊ ನಿಲ್ದಾಣ ದೇಶದ ಅತಿದೊಡ್ಡ ಮೆಟ್ರೊ ನಿಲ್ದಾಣವೆಂಬ ಅಗ್ಗಳಿಕೆಯನ್ನು ಪಡೆದಿದೆ.
ನಗರವಾಸಿಗಳಿಗೆ ನೀರು ಪೂರೈಸುತ್ತಿದ್ದ ಧರ್ಮಾಂಬುಧಿ ಕೆರೆ ಪ್ರದೇಶ ಕಾಲ ಕಾಲಕ್ಕೆ ಅನೇಕ ರೂಪಾಂತರಗಳ ಪಡೆದುಕೊಂಡು  ಈಗ ಮೆಟ್ರೊ ಹಳಿಗಳಿಗೆ ತೆರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT